AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Toyota Innova Crysta: ಹೊಸ ಕಾರು ಮಾದರಿಗಾಗಿ ಇನೋವಾ ಕ್ರಿಸ್ಟಾ ಮಾರಾಟ ಸ್ಥಗಿತಗೊಳಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಹೊಸ ಇನೋವಾ ಕ್ರಿಸ್ಟಾ ಎಂಪಿವಿ ಮಾದರಿಯನ್ನು ತನ್ನ ಅಧಿಕೃತ ವೆಬ್ ತಾಣದಿಂದ ತೆಗೆದುಹಾಕಿದ್ದು, ಹೊಸ ಕಾರು ಖರೀದಿಯ ಯೋಜನೆಯಲ್ಲಿದ್ದ ಗ್ರಾಹಕರಿಗೆ ನಿರಾಶೆ ಉಂಟುಮಾಡಿದೆ.

Toyota Innova Crysta: ಹೊಸ ಕಾರು ಮಾದರಿಗಾಗಿ ಇನೋವಾ ಕ್ರಿಸ್ಟಾ ಮಾರಾಟ ಸ್ಥಗಿತಗೊಳಿಸಿದ ಟೊಯೊಟಾ
ಹೊಸ ಕಾರು ಮಾದರಿಗಾಗಿ ಇನೋವಾ ಕ್ರಿಸ್ಟಾ ಮಾರಾಟ ಸ್ಥಗಿತಗೊಳಿಸಿದ ಟೊಯೊಟಾ
Praveen Sannamani
|

Updated on:Nov 29, 2022 | 9:23 PM

Share

ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ(Toyota) ಕಂಪನಿಯು ಭಾರತದಲ್ಲಿ ಹೊಸ ಇನೋವಾ ಹೈಕ್ರಾಸ್(Innova Hycross) ಅನಾವರಣಗೊಳಿಸಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಹೊಸ ಇನ್ನು ಅಧಿಕೃತವಾಗಿ ಬಿಡುಗಡೆಯಾಗಿಲ್ಲವಾದರೂ ಹೊಸ ಕಾರಿಗಾಗಿ ಕಂಪನಿಯು ಇನೋವಾ ಕ್ರಿಸ್ಟಾ(Innova Crysta) ಪ್ರಿಯರಿಗೆ ನಿರಾಸೆ ಉಂಟುಮಾಡಿದೆ. ಇನೋವಾ ಹೈಕ್ರಾಸ್ ಬಿಡುಗಡೆಗೂ ಮುನ್ನ ಇನೋವಾ ಕ್ರಿಸ್ಟಾ ಕಾರಿನ ಖರೀದಿಗೆ ಬ್ರೇಕ್ ಹಾಕಲಾಗಿದ್ದು, ಇನೋವಾ ಕ್ರಿಸ್ಟಾ ಕಾರು ಮಾದರಿಯನ್ನು ಅಧಿಕೃತ ವೆಬ್ ಸೈಟ್ ನಿಂದ ತೆಗೆದುಹಾಕಲಾಗಿದೆ.

ಭಾರತದಲ್ಲಿ ಹೊಸ ತಲೆಮಾರಿನ ಕಾರುಗಳ ಅಬ್ಬರ ಹೆಚ್ಚುತ್ತಿದ್ದು, ಪ್ರೀಮಿಯಂ ಕಾರು ಉತ್ಪಾದನಾ ಕಂಪನಿ ಟೊಯೊಟಾ ಕೂಡಾ ಹೊಸ ಬದಲಾವಣೆಯೊಂದಿಗೆ ತನ್ನ ಪ್ರಮುಖ ಕಾರುಗಳಲ್ಲಿ ಭಾರೀ ಬದಲಾವಣೆ ಪರಿಚಯಿಸುತ್ತಿದೆ. ಹೊಸ ತಲೆಮಾರಿನ ಕಾರುಗಳ ಮಾರಾಟಕ್ಕಾಗಿ ಟೊಯೊಟೊ ಕಂಪನಿ ಇತ್ತೀಚೆಗೆ ಟಿಎನ್ ಜಿಎ-ಸಿ ಪ್ಲ್ಯಾಟ್ ಫಾರ್ಮ್ ಆರಂಭಿದ್ದು, ಹೊಸ ಕಾರು ಮಾದರಿಗಳಿಗಾಗಿ ಹಳೆಯ ಆವೃತ್ತಿಗಳ ಮಾರಾಟಕ್ಕೆ ಗುಡ್ ಬೈ ಹೇಳುತ್ತಿದೆ. ಕಂಪನಿಯು ಶೀಘ್ರದಲ್ಲಿಯೇ ತನ್ನ ಹೊಸ ಇನೋವಾ ಹೈಕ್ರಾಸ್ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಮಾದರಿಗಾಗಿ ಇನೋವಾ ಕ್ರಿಸ್ಟಾ ಮಾರಾಟವನ್ನು ಸ್ಥಗಿತಗೊಳಿಸಿದೆ.

ಹೌದು, ಟೊಯೊಟಾ ಕಂಪನಿಯು ಭಾರತದಲ್ಲಿ ತನ್ನ ಹೊಸ ಇನೋವಾ ಹೈಕ್ರಾಸ್ ಕಾರು ಬಿಡುಗಡೆಗಾಗಿ ಭರ್ಜರಿ ಸಿದ್ದತೆ ನಡೆಸಿದ್ದು, ಹೊಸ ಕಾರು ಬಿಡುಗಡೆ ಮುನ್ನ ಪ್ರಸ್ತುತ ಮಾರುಕಟ್ಟೆಯಲ್ಲಿನ ಇನೋವಾ ಕ್ರಿಸ್ಟಾ ಕಾರು ಮಾರಾಟವನ್ನು ಸ್ಥಗಿತಗೊಳಿಸಿದೆ. ಹೊಸ ಇನೋವಾ ಹೈಕ್ರಾಸ್ ಕಾರು ಖರೀದಿಗಾಗಿ ಬುಕಿಂಗ್ ಆರಂಭವಾಗಿರುವುದರಿಂದ ಇನೋವಾ ಕ್ರಿಸ್ಟಾ ಸ್ಥಗಿತಗೊಳಿಸಲಾಗಿದ್ದು, ಇನ್ಮುಂದೆ ಇನೋವಾ ಕ್ರಿಸ್ಟಾ ಲಭ್ಯವಿರುವುದಿಲ್ಲ ಎನ್ನಲಾಗಿದೆ. ಈಗಾಗಲೇ ಬುಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಮಾತ್ರ ಇನೋವಾ ಕ್ರಿಸ್ಟಾ ವಿತರಣೆಗೊಳ್ಳಲಿದ್ದು, ಹೊಸದಾಗಿ ಖರೀದಿಸುವ ಯೋಜನೆಯಲ್ಲಿದ್ದ ಗ್ರಾಹಕರಿಗೆ ಕಂಪನಿಯು ಏಕಾಏಕಿ ಬುಕಿಂಗ್ ನಿಲ್ಲಿಸಿ ನಿರಾಶೆ ಉಂಟು ಮಾಡಿದೆ.

ಭಾರತದಲ್ಲಿ ಹೊಸ ತಲೆಮಾರಿನ ಇನೋವಾ ಹೈಕ್ರಾಸ್ ಮಾದರಿಗಾಗಿ ಇನೋವಾ ಕ್ರಿಸ್ಟಾ ಮಾರಾಟಕ್ಕೆ ಸ್ಥಗಿತಗೊಳಿಸಿರುವ ಟೊಯೊಟಾ ಕಂಪನಿಯು ಹೊಸ ಕಾರಿನ ಮೇಲೆ ಭಾರೀ ನೀರಿಕ್ಷೆಯಿಟ್ಟುಕೊಂಡಿದೆ. ಹೊಸ ಇನೋವಾ ಹೈಕ್ರಾಸ್ ಕಾರು ಕ್ರಿಸ್ಟಾ ಮಾದರಿಗಿಂತಲೂ ಹೆಚ್ಚು ಸುಧಾರಿತ ಮತ್ತು ಪ್ರೀಮಿಯಂ ಫೀಚರ್ಸ್ ಹೊಂದಿದ್ದು, ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಹಿಂದಿನ ಇನೋವಾ ಕ್ರಿಸ್ಟಾದಲ್ಲಿ 2.7 ಲೀಟರ್ ಪೆಟ್ರೋಲ್ ಮಾದರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದು, ಹೊಸ ಇನೋವಾ ಹೈಕ್ರಾಸ್ ಕಾರಿನಲ್ಲಿ 2.0 ಲೀಟರ್ ಎನ್ಎ ಪೆಟ್ರೋಲ್ ಮತ್ತು 2.0 ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಹೊಸ ಫಾರ್ಮ್ ಅಡಿ ನಿರ್ಮಾಣವಾಗಿರುವ ಇನೋವಾ ಹೈಕ್ರಾಸ್ ಹೊಸ ಕಾರು ಮೂರನೇ ತಲೆಮಾರಿನ ವೈಶಿಷ್ಟ್ಯತೆಗಳನ್ನು ಹೊಂದಿದೆ. ವಿನೂತನ ವಿನ್ಯಾಸದ ಜೊತೆಗೆ ಹಲವಾರು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿರುವ ಹೊಸ ಕಾರು ಇನೋವಾ ಕ್ರಿಸ್ಟಾ ಕಾರಿಗಿಂತಲೂ ಹೆಚ್ಚು ಸುಧಾರಿತ ವಿನ್ಯಾಸ ಅಂಶಗಳನ್ನು ಹೊಂದಿದೆ. ಎಸ್ ಯುವಿ ಲುಕ್ ನೊಂದಿಗೆ ಹಲವು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದ್ದು, 2.0 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಮಾದರಿಯು ಫ್ರಂಟ್ ವ್ಹೀಲ್ ಡ್ರೈವ್ ಸಿಸ್ಟಂ ಜೊತೆ ಸೆಲ್ಪ್ ಡ್ರೈವ್ ಚಾರ್ಜಿಂಗ್ ವೈಶಿಷ್ಟ್ಯತೆ ಹೊಂದಿದೆ. ಇದು ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 21 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಒಟ್ಟಾರೆ ಹೊಸ ಕಾರಿನ ಹೈಬ್ರಿಡ್ ಮಾದರಿಯು ಒಂದು ಬಾರಿ ಪೂರ್ಣ ಪೆಟ್ರೋಲ್ ಟ್ಯಾಂಕ್ ಜೊತೆಗೆ ಎಲೆಕ್ಟ್ರಿಕ್ ಎಂಜಿನ್ ಮೂಲಕ 1,097 ಕಿ.ಮೀ ಚಾಲನೆ ಮಾಡಬಹುದಾಗಿದೆ.

ಇನ್ನು ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಮಾದರಿಗಿಂತಲೂ ಹೆಚ್ಚಿನ ಉದ್ದಳತೆಯೊಂದಿಗೆ ಉತ್ತಮ ಕ್ಯಾಬಿನ್ ಹೊಂದಿದೆ. ಹೊಸ ಇನೋವಾ ಹೈಕ್ರಾಸ್ ಕಾರಿನಲ್ಲಿ ಹೈಬ್ರಿಡ್ ಎಂಜಿನ್ ಜೊತೆಗೆ ಮೊದಲ ಬಾರಿಗೆ ಎಡಿಎಎಸ್, ಪನೊರಮಿಕ್ ಸನ್ ರೂಫ್ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳನ್ನು ನೀಡಿದ್ದು, ಸದ್ಯಕ್ಕೆ ಅನಾವರಣಗೊಂಡಿರುವ ಹೊಸ ಕಾರು 2023ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಜನವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಹೊಸ ಕಾರಿನ ಅಧಿಕೃತ ಬೆಲೆ ಮಾಹಿತಿ ಬಹಿರಂಗವಾಗಲಿದ್ದು, ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 20 ಲಕ್ಷದಿಂದ ಹೈ ಎಂಡ್ ಮಾದರಿಯು ರೂ. 30 ಲಕ್ಷ ತನಕ ಬೆಲೆ ಹೊಂದಬಹುದೆಂದು ನೀರಿಕ್ಷಿಸಲಾಗಿದೆ.

Published On - 9:20 pm, Tue, 29 November 22