New Car Launched: ನವೆಂಬರ್ ನಲ್ಲಿ ಬಿಡುಗಡೆಯಾದ ಟಾಪ್ 5 ಕಾರುಗಳಿವು!

Praveen Sannamani

Updated on: Nov 30, 2022 | 8:02 PM

ಭಾರತದಲ್ಲಿ ಹೊಸ ಕಾರುಗಳ ಅಬ್ಬರ ಹೆಚ್ಚುತ್ತಿದ್ದು, ನವೆಂಬರ್ ಅವಧಿಯಲ್ಲಿ ಹಲವು ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸಿವೆ. ಹೊಸ ಕಾರುಗಳಲ್ಲಿ ಸಾಮಾನ್ಯ ಕಾರುಗಳ ಜೊತೆಗೆ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳು ಕೂಡಾ ಗಮನಸೆಳೆದಿದ್ದು, ಹೊಸ ಕಾರುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

New Car Launched: ನವೆಂಬರ್ ನಲ್ಲಿ ಬಿಡುಗಡೆಯಾದ ಟಾಪ್ 5 ಕಾರುಗಳಿವು!
ನವೆಂಬರ್ ನಲ್ಲಿ ಬಿಡುಗಡೆಯಾದ ಟಾಪ್ 5 ಕಾರುಗಳಿವು!

ಟೊಯೊಟಾ ಇನೋವಾ ಹೈಕ್ರಾಸ್ ಟೊಯೊಟಾ ಕಂಪನಿಯು ತನ್ನ ಹೊಸ ಇನೋವಾ ಹೈಕ್ರಾಸ್ ಎಂಪಿವಿ ಕಾರು ಮಾದರಿಯನ್ನು ಭಾರತದಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದ್ದು, ಹೊಸ ಕಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಟಿಎನ್ ಜಿಸಿ-ಎ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗಿರುವ ಹೊಸ ಕಾರು ಮೂರನೇ ತಲೆಮಾರಿನ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ವಿನೂತನ ವಿನ್ಯಾಸದ ಜೊತೆಗೆ ಹಲವಾರು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ. ಹೊಸ ಕಾರಿನಲ್ಲಿ 2.0 ಲೀಟರ್ ಸಾಮಾನ್ಯ ಪೆಟ್ರೋಲ್ ಜೊತೆಗೆ 2.0 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹೈಬ್ರಿಡ್ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 21 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಹೊಸ ಕಾರನ್ನ ಸದ್ಯಕ್ಕೆ ಅನಾವರಣಗೊಳಿಸಿರುವ ಟೊಯೊಟಾ ಕಂಪನಿಯು ಮುಂಬರುವ 2023ರ ಜನವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅಧಿಕೃತ ಬೆಲೆ ಮಾಹಿತಿ ಹಂಚಿಕೊಳ್ಳಲಿದ್ದು, ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 20 ಲಕ್ಷದಿಂದ ಹೈ ಎಂಡ್ ಮಾದರಿಯು ರೂ. 30 ಲಕ್ಷ ಬೆಲೆ ಹೊಂದಿರಬಹುದೆಂದು ನೀರಿಕ್ಷೆ ಮಾಡಲಾಗಿದೆ.

ಬಿವೈಡಿ ಅಟ್ಟೊ 3 ಎಲೆಕ್ಟ್ರಿಕ್ ಕಾರು

ಚೀನಾ ಮೂಲದ ಬಿವೈಡಿ(ಬಿಲ್ಡ್ ಯುವರ್ ಡ್ರೀಮ್ಸ್) ಕಂಪನಿಯು ಭಾರತದಲ್ಲಿ ತನ್ನ ಎರಡನೇ ಎಲೆಕ್ಟ್ರಿಕ್ ಕಾರು ಉತ್ಪನ್ನವಾದ ಅಟ್ಟೊ 3 ಎಲೆಕ್ಟ್ರಿಕ್ ಎಸ್ ಯುವಿ ಬಿಡುಗಡೆ ಮಾಡಿದೆ. ಹೊಸ ಎಲೆಕ್ಟ್ರಿಕ್ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 33.99 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ಹಲವಾರು ಹೊಸ ತಂತ್ರಜ್ಞಾನಗಳ ಪ್ರೇರಣೆ ಹೊಂದಿದ್ದು, 60.48kWh ಬ್ಲೇಡ್ ಬ್ಯಾಟರಿ ಪ್ಯಾಕ್ ಜೋಡಣೆಯೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 521 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಬಿವೈಡಿ ಕಂಪನಿಯು ಹೊಸ ಅಟ್ಟೊ 3 ಕಾರಿನಲ್ಲಿ ಸುರುಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿದ್ದು, ಹೊಸ ಕಾರಿನಲ್ಲಿ ಹಲವಾರು ಫೀಚರ್ಸ್ ಹೊಂದಿರುವ ಎಡಿಎಎಸ್( ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ) ಸೌಲಭ್ಯ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ನೀಡಿದೆ.

ಪ್ರವೇಗ್ ಡಿಫೈ ಎಲೆಕ್ಟ್ರಿಕ್ ಕಾರು

ಸ್ಟಾರ್ಟ್ಅಪ್ ಕಂಪನಿಯಾಗಿರುವ ನಮ್ಮ ಬೆಂಗಳೂರಿನ ಪ್ರವೇಗ್ ಡೈನಾಮಿಕ್ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಂಪನಿಯು ಇದೀಗ ವಿನೂತನ ತಂತ್ರಜ್ಞಾನ ಪ್ರೇರಿತ ಡಿಫೈ(Defy) ಎಲೆಕ್ಟ್ರಿಕ್ ಎಸ್ ಯುವಿ ಕಾರು ಮಾದರಿಯನ್ನು ಬಿಡುಗಡೆ ಮಾಡಿದೆ. ಹೊಸ ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 39.50 ಲಕ್ಷ ಬೆಲೆ ಹೊಂದಿದ್ದು, 90.9kWh ಬ್ಯಾಟರಿ ಪ್ಯಾಕ್ ಪಡೆದುಕೊಂಡಿದೆ. ಇದು ಪ್ರತಿ ಚಾರ್ಜ್ ಗೆ 500 ಕಿ.ಮೀ ಅಧಿಕ ಮೈಲೇಜ್ ನೀಡಲಿದೆ. ಹೊಸ ಕಾರಿನಲ್ಲಿ ಕಂಪನಿಯು 7.2kW ಹೋಂ ಚಾರ್ಜರ್ ಸ್ಟ್ಯಾಂಡರ್ಡ್ ಆಗಿ ನೀಡಲಿದ್ದು, ಇದು 150kW ಡಿಸಿ ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಹೊಂದಿದೆ.

ಜೀಪ್ ಗ್ರ್ಯಾಂಡ್ ಚರೋಕಿ

ಮಧ್ಯಮ ಕ್ರಮಾಂಕದ ಐಷಾರಾಮಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಜೀಪ್ ಇಂಡಿಯಾ(Jeep India) ಕಂಪನಿಯು ತನ್ನ ಹೊಸ ಗ್ರ್ಯಾಂಡ್ ಚರೋಕಿ(Grand Cherokee) ಎಸ್ ಯುವಿಯನ್ನು ಬಿಡುಗಡೆ ಮಾಡಿದೆ. ಹೊಸ ಕಾರು ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 77.50 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ಮಾದರಿಯು ಮೊದಲ ಬಾರಿಗೆ ಭಾರತದಲ್ಲಿ ಸಿಕೆಡಿ ಆಮದು ನೀತಿ ಅಡಿಯಲ್ಲಿ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಆಫ್ ರೋಡ್ ಐಷಾರಾಮಿ ಕಾರುಗಳನ್ನು ಖರೀದಿಸುವ ಗ್ರಾಹಕರನ್ನು ಸೆಳೆಯಲಿದೆ. ಹೊಸ ಕಾರಿನಲ್ಲಿ 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದೆ. ಇದರಲ್ಲಿ ಕಂಪನಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಣೆ ಮಾಡಲಾಗಿದ್ದು, ಇದು 268 ಹಾರ್ಸ್ ಪವರ್ ಮತ್ತು 400 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಲ್ಯಾಂಬೋರ್ಗಿನಿ ಉರುಸ್ ಪರ್ಫಾರ್ಮಂಟೆ

ಲ್ಯಾಂಬೋರ್ಗಿನಿ ತನ್ನ ಜನಪ್ರಿಯ ಕಾರು ಮಾದರಿಯಾದ ಉರುಸ್ ಎಸ್ ಯುವಿಯಲ್ಲಿ ಹೊಸದಾಗಿ ಪರ್ಫಾರ್ಮಂಟೆ ಎಡಿಷನ್ ಬಿಡುಗಡೆ ಮಾಡಿದೆ. ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 4.22 ಕೋಟಿ ಬೆಲೆ ಹೊಂದಿದೆ. ಹೊಸ ಕಾರುಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಹೊಂದಿದ್ದು, ಭಾರತದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹೊಸ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿನ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್‌ ಬಳಕೆ ಮಾಡಿದ್ದು, 8-ಸ್ಪೀಡ್ ಆಟೋ ಗೇರ್‌ಬಾಕ್ಸ್‌ ನೊಂದಿಗೆ 657 ಹಾರ್ಸ್ ಪವರ್, 850 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದು ಸಾಮಾನ್ಯ ಮಾದರಿಗಿಂತ ಹೆಚ್ಚುವರಿಯಾಗಿ 16 ಹಾರ್ಸ್ ಪವರ್ ಉತ್ಪಾದಿಸಲಿದ್ದು, ಜೊತೆಗೆ ಮೂರು ಹೊಸ ಡ್ರೈವ್ ಮೋಡ್ ಪಡೆದುಕೊಂಡಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada