ಅವರ ತಾಯಿಯ ಬಗ್ಗೆ ಹೇಗೆ ಮಾತನಾಡಿದಿರಿ: ಅಶ್ವಿನಿ ವಿರುದ್ಧ ಕಿಚ್ಚ ಗರಂ
Bigg Boss Kannada 12: ಅಶ್ವಿನಿ ಅವರು ಬಿಗ್ಬಾಸ್ ಮನೆಯ ಗಟ್ಟಿ ಸ್ಪರ್ಧಿ, ಆದರೆ ಪದೇ ಪದೇ ತಮ್ಮ ಕೋಪದ ಕಾರಣಕ್ಕೆ ಸುದೀಪ್ ಅವರಿಗೆ ಟೀಕೆಗೆ ಒಳಗಾಗುತ್ತಿದ್ದಾರೆ. ರಕ್ಷಿತಾರ ಸ್ಟೇಟಸ್ ಬಗ್ಗೆ ಆಡಿದ ಮಾತು, ಗೆಜ್ಜೆ ವಿಷಯದಲ್ಲಿ ರಕ್ಷಿತಾರನ್ನು ಸಿಕ್ಕಿ ಹಾಕಿಸಿ ಮಜಾ ತೆಗೆದುಕೊಂಡಿದ್ದು, ಕೆಲವರನ್ನು ವೈಯಕ್ತಿಕವಾಗಿ ನಿಂದನೆ ಮಾಡಿದ್ದು, ಹೀಗೆ ಹಲವು ವಿಷಯಗಳಿಗೆ ಸುದೀಪ್ ಅವರಿಂದ ಟೀಕೆಗೆ ಒಳಪಟ್ಟ ಬಳಿಕ ಅಶ್ವಿನಿ ತುಸು ಮೆತ್ತಗಾಗಿದ್ದರು. ಆದರೆ ಕಳೆದ ವಾರ ಮತ್ತೊಮ್ಮೆ ಅವರು ತಮ್ಮ ಹಳೆಯ ವರಸೆ ತೋರಿಸಿದ್ದಾರೆ.

ಬಿಗ್ಬಾಸ್ (Bigg Boss) ಮನೆಯಲ್ಲಿ ಅಶ್ವಿನಿ ಅವರ ಅಬ್ಬರ ಜೋರಾಗಿದೆ. ಅದರಲ್ಲೂ ಬಿಗ್ಬಾಸ್ ಪ್ರಾರಂಭವಾದ ಮೊದಲ ಕೆಲ ವಾರಗಳಲ್ಲಿ ಅಶ್ವಿನಿ ಅವರು ಇಡೀ ಮನೆಯನ್ನು ನಿಯಂತ್ರಣದಲ್ಲಿ ಇಟ್ಟಿದ್ದರು. ಆದರೆ ತಮ್ಮ ಧಮನಕಾರಿ ಮಾತುಗಳಿಂದಾಗಿ ಸುದೀಪ್ ಅವರಿಂದ ಟೀಕೆಗೆ ಸಹ ಗುರಿಯಾದರು. ರಕ್ಷಿತಾರ ಸ್ಟೇಟಸ್ ಬಗ್ಗೆ ಆಡಿದ ಮಾತು, ಗೆಜ್ಜೆ ವಿಷಯದಲ್ಲಿ ರಕ್ಷಿತಾರನ್ನು ಸಿಕ್ಕಿ ಹಾಕಿಸಿ ಮಜಾ ತೆಗೆದುಕೊಂಡಿದ್ದು, ಕೆಲವರನ್ನು ವೈಯಕ್ತಿಕವಾಗಿ ನಿಂದನೆ ಮಾಡಿದ್ದು, ಹೀಗೆ ಹಲವು ವಿಷಯಗಳಿಗೆ ಸುದೀಪ್ ಅವರಿಂದ ಟೀಕೆಗೆ ಒಳಪಟ್ಟ ಬಳಿಕ ಅಶ್ವಿನಿ ತುಸು ಮೆತ್ತಗಾಗಿದ್ದರು. ಆದರೆ ಕಳೆದ ವಾರ ಮತ್ತೊಮ್ಮೆ ಅವರು ತಮ್ಮ ಹಳೆಯ ವರಸೆ ತೋರಿಸಿದ್ದಾರೆ.
ಕಳೆದ ವಾರ ನೀರಿನ ಟಬ್ನ ಟಾಸ್ಕ್ ಒಂದು ನಡೆದಿತ್ತು. ಈ ವೇಳೆ ಅಶ್ವಿನಿ ಹಾಗೂ ಕಾವ್ಯಾ ಅವರುಗಳು ಪರಸ್ಪರ ಎದುರಾಳಿ ತಂಡಗಳಲ್ಲಿ ಇದ್ದರು. ಇಬ್ಬರೂ ಸಹ ಗೆಲ್ಲಲೇ ಬೇಕೆಂದು ಆಟ ಆಡುತ್ತಿದ್ದರು. ಈ ವೇಳೆ ಅಶ್ವಿನಿ ಅವರು ತಮ್ಮ ತೋಲ್ಬಳ ಬಳಸಿ ಕಾವ್ಯಾ ಅವರನ್ನು ಸೋಲಿಸಿದರು. ಆಗ ಸಿಟ್ಟಾದ ಕಾವ್ಯಾ ಚರ್ಚೆಯ ವೇಳೆ, ‘ಆಯ್ತು ಹೋಗಮ್ಮ’ ಎಂದೇನೋ ಹೇಳಿದರು. ಅದನ್ನು ತುಸು ಅಫೆನ್ಸಿವ್ ಆಗಿ ತೆಗೆದುಕೊಂಡ ಅಶ್ವಿನಿ, ‘ಅದನ್ನೆಲ್ಲ ನಿನ್ನ ಅಮ್ಮನ ಬಳಿ ಹೇಳಿಕೊ’ ಎಂದರು. ಇದು ಕಾವ್ಯಾರನ್ನು ಕೆರಳಿಸಿತು, ‘ನನ್ನ ಅಮ್ಮನ ಬಗ್ಗೆ ಮಾತನಾಡಬೇಡಿ, ಅವರ 10% ಸಹ ನೀವಿಲ್ಲ’ ಎಂದು ಕಿರುಚಾಡಲು ಆರಂಭಿಸಿದರು. ಆದರೆ ಅಶ್ವಿನಿ ‘ನಿನ್ನ ಅಮ್ಮನ ಬಳಿ ಹೇಳು ಹೋಗು’ ಎಂದು ಕೆಲ ಬಾರಿ ಹೇಳಿದರು.
ಇದನ್ನೂ ಓದಿ:ಸುದೀಪ್ ಎದುರೇ ಧ್ರುವಂತ್ಗೆ ಬೆದರಿಕೆ ಹಾಕಿದ ರಕ್ಷಿತಾ ಶೆಟ್ಟಿ
ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಅವರು ಈ ವಿಷಯ ಚರ್ಚೆ ಮಾಡಿದರು. ಮೊದಲಿಗೆ ಟಾಸ್ಕ್ ವಿಚಾರವಾಗಿ ಚರ್ಚೆ ಮಾಡಿ, ರಾಶಿಕಾ ಅವರು ಕೆಟ್ಟದಾಗಿ ಉಸ್ತುವಾರಿ ಮಾಡಿದ ರೀತಿಯನ್ನು ಟೀಕೆ ಮಾಡಿದರು. ಆ ನಂತರ ರಘು, ಚೈತ್ರಾ ಇನ್ನಿತರರು ಟಾಸ್ಕ್ ಅನ್ನು ತಪ್ಪಾಗಿ ಅರ್ಥೈಸಿಕೊಂಡು, ತಪ್ಪಾಗಿ ಆಡಿದ್ದರ ಬಗ್ಗೆ ಟೀಕೆ ಮಾಡಿದರು. ‘ನೀವೆಲ್ಲ 10-12 ವರ್ಷ ಮಕ್ಕಳಿಗಿಂತಲೂ ಕಡೆಯಾಗಿ ವರ್ತಿಸಿದಿರಿ. ಪರಸ್ಪರ ಬೈಯ್ಯುವುದು, ಗಿಲ್ಲುವುದು, ಕೂದಲೆಳೆಯುವುದು, ಉಗಿಯುವುದು ಇದೆಲ್ಲ ಆಡುವ ರೀತಿಯೇ?’ ಎಂದು ಸುದೀಪ್ ಪ್ರಶ್ನೆ ಮಾಡಿದರು.
ಅಂತಿಮವಾಗಿ ಅಶ್ವಿನಿ ವಿಷಯಕ್ಕೆ ಬಂದ ಸುದೀಪ್, ‘ಮನೆಯಲ್ಲಿ ಇರುವವರನ್ನು ಬಿಗ್ಬಾಸ್ ಮನೆಗೆ ಏಕೆ ತರುತ್ತೀರಿ, ಕಾವ್ಯಾ ಅವರ ತಾಯಿಯ ವಿಷಯ ನಿಮಗೆ ಯಾಕೆ? ನಿಮ್ಮ ಜಗಳ ಕಾವ್ಯಾ ಜೊತೆಗೆ, ಅವರೊಟ್ಟಿಗೆ ಜಗಳ ಮಾಡಿ, ಅವರ ಮನೆಯವರ ವಿಷಯ ನಿಮಗೆ ಯಾಕೆ? ಅವರ ತಾಯಿಯೂ ಸಹ ಶೋ ನೋಡುತ್ತಿರುತ್ತಾರೆ. ಬಹುಷಃ ಕಾವ್ಯಾರ ತಾಯಿ, ನಿಮ್ಮ ಅಭಿಮಾನಿಯೇ ಆಗಿರಬಹುದು? ಆದರೆ ನೀವು ಆಡಿದ ಮಾತಿನಿಂದ ಅವರ ಮನಸ್ಸಿಗೆ ಎಷ್ಟು ಬೇಸರ ಆಗಿರಬಹುದು’ ಎಂದರು. ಅಶ್ವಿನಿ, ಸ್ಪಷ್ಟನೆ ನೀಡುವ ಪ್ರತಯ್ನ ಮಾಡಿದರಾದರೂ ಸುದೀಪ್ ಅದನ್ನು ಒಪ್ಪಲಿಲ್ಲ, ‘ನೀವು ಏನೇ ಹೇಳಿದರೂ ಸಹ ನಾನು ಒಪ್ಪುವುದಿಲ್ಲ’ ಎಂದರು. ಬಳಿಕ ಅಶ್ವಿನಿ, ಕ್ಷಮೆ ಕೇಳಿದರು. ನಾನು ತಪ್ಪು ಮಾಡಿದೆ, ಅವರ ತಾಯಿಯ ವಿಷಯ ಎತ್ತಬಾರದಿತ್ತು ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:57 pm, Sat, 20 December 25




