- Kannada News Photo gallery Cricket photos Renshaw, Wildermuth Creates New World Record in T20 Cricket
ಆಸ್ಟ್ರೇಲಿಯಾ ದಾಂಡಿಗರ ಸಿಡಿಲಬ್ಬರ… ಟಿ20 ದಾಖಲೆಗಳು ಧೂಳೀಪಟ
BBL 2025: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನ ಆರನೇ ಪಂದ್ಯವು ಬ್ಯಾಟರ್ಗಳ ಸಿಡಿಲಬ್ಬರಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ತ್ ಸ್ಕಾಚರ್ಸ್ ತಂಡವು 257 ರನ್ ಕಲೆಹಾಕಿದರೆ. ಈ ಗುರಿಯನ್ನು ಬೆನ್ನತ್ತಿ ಬ್ರಿಸ್ಬೇನ್ ಹೀಟ್ ತಂಡವು 8 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ.
Updated on: Dec 20, 2025 | 8:54 AM

BBL 2025: ಬಿಗ್ ಬ್ಯಾಷ್ ಲೀಗ್ನ 6ನೇ ಪಂದ್ಯವು ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಅದು ಕೂಡ ಟಿ20 ಇತಿಹಾಸದಲ್ಲೇ ಚೇಸಿಂಗ್ ವೇಳೆ ಇಬ್ಬರು ಬ್ಯಾಟರ್ಗಳು ಶತಕ ಸಿಡಿಸುವ ಮೂಲಕ. ಇದರೊಂದಿಗೆ ಬಿಗ್ ಬ್ಯಾಷ್ ಲೀಗ್ನ ಹಲವು ದಾಖಲೆಗಳು ಕೂಡ ಧೂಳೀಪಟವಾಗಿದೆ.

ಬ್ರಿಸ್ಬೇನ್ನ ದಿ ಗಬ್ಬಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪರ್ತ್ ಸ್ಕಾಚರ್ಸ್ ಹಾಗೂ ಬ್ರಿಸ್ಬೇನ್ ಹೀಟ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಪರ್ತ್ ಸ್ಕಾಚರ್ಸ್ ಪರ ಫಿನ್ ಅಲೆನ್ (79) ಹಾಗೂ ಕೂಪರ್ ಕೊನೊಲಿ (77) ಸ್ಫೋಟಕ ಅರ್ಧಶತಕಗಳನ್ನು ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಪರ್ತ್ ಸ್ಕಾಚರ್ಸ್ ತಂಡವು 20 ಓವರ್ಗಳಲ್ಲಿ 257 ರನ್ ಕಲೆಹಾಕಿತು.

258 ರನ್ಗಳ ಗುರಿ ಬೆನ್ನತ್ತಿದ ಬ್ರಿಸ್ಬೇನ್ ಹೀಟ್ ತಂಡವು ಮೊದಲ ಎಸೆತದಲ್ಲೇ ಕಾಲಿನ್ ಮನ್ರೊ (0) ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿ ಜ್ಯಾಕ್ ವೈಲ್ಡರ್ಮತ್ (110) ಹಾಗೂ ಮ್ಯಾಟ್ ರೆನ್ಶಾ (102) ಸ್ಫೋಟಕ ಸೆಂಚುರಿಗಳನ್ನು ಸಿಡಿಸಿದರು. ಈ ಶತಕಗಳ ನೆರವಿನೊಂದಿಗೆ ಬ್ರಿಸ್ಬೇನ್ ಹೀಟ್ 19.5 ಓವರ್ಗಳಲ್ಲಿ 258 ರನ್ಗಳಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

ವಿಶೇಷ ಎಂದರೆ ಈ ಪಂದ್ಯದಲ್ಲಿ ಜ್ಯಾಕ್ ವೈಲ್ಡರ್ಮತ್ ಹಾಗೂ ಮ್ಯಾಟ್ ರೆನ್ಶಾ ಬಾರಿಸಿದ ಶತಕವು ಟಿ20 ಕ್ರಿಕೆಟ್ನ ಚೇಸಿಂಗ್ ವೇಳೆ ಮೊದಲ ಜೋಡಿ ಶತಕಗಳಾಗಿವೆ. ಅಂದರೆ ಇದೇ ಮೊದಲ ಬಾರಿಗೆ ಪಂದ್ಯವೊಂದರ ಚೇಸಿಂಗ್ ವೇಳೆ ಇಬ್ಬರು ಬ್ಯಾಟರ್ಗಳು ಸೆಂಚುರಿ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇನ್ನು 258 ರನ್ಗಳ ಚೇಸಿಂಗ್ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಮೂಡಿಬಂದ ಮೂರನೇ ಯಶಸ್ವಿ ಚೇಸಿಂಗ್ ಎಂಬುದು ವಿಶೇಷ. ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ 262 ರನ್ಗಳನ್ನು ಚೇಸ್ ಮಾಡಿ ಗೆದ್ದಿದ್ದರು. ಹಾಗೆಯೇ ಸೌತ್ ಆಫ್ರಿಕಾ ತಂಡ 259 ರನ್ಗಳನ್ನು ಬೆನ್ನತ್ತಿ ಗೆಲುವು ದಾಖಲಿಸಿದ್ದಾರೆ. ಇದೀಗ ಬ್ರಿಸ್ಬೇನ್ ಹೀಟ್ ತಂಡವು 258 ರನ್ಗಳನ್ನು ಚೇಸ್ ಮಾಡಿ ಈ ದಾಖಲೆ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಹಾಗೆಯೇ ಈ ಪಂದ್ಯದಲ್ಲಿ ಮ್ಯಾಟ್ ರೆನ್ಶಾ ಹಾಗೂ ಜ್ಯಾಕ್ ವೈಲ್ಡರ್ಮತ್ ನಡುವೆ 212 ರನ್ಗಳ ಜೊತೆಯಾಟ ಮೂಡಿಬಂದಿತ್ತು. ಇದು ಬಿಗ್ ಬ್ಯಾಷ್ ಲೀಗ್ ಟೂರ್ನಿಯ ಇತಿಹಾಸದಲ್ಲೇ ಮೂಡಿಬಂದ ಗರಿಷ್ಠ ರನ್ಗಳ ಜೊತೆಯಾಟ ಎಂಬುದು ವಿಶೇಷ.

ಇನ್ನು ಈ ಪಂದ್ಯದಲ್ಲಿ ಒಟ್ಟಿಉ 36 ಸಿಕ್ಸರ್ಗಳು ಮೂಡಿಬಂದಿದ್ದವು. ಇದು ಸಹ ದಾಖಲೆಯಾಗಿದೆ. ಅಂದರೆ ಬಿಗ್ ಬ್ಯಾಷ್ ಲೀಗ್ನಲ್ಲಿ ಇದೇ ಮೊದಲ ಬಾರಿಗೆ ಪಂದ್ಯವೊಂದರಲ್ಲಿ 30 ಕ್ಕಿಂತ ಹೆಚ್ಚಿನ ಸಿಕ್ಸ್ಗಳನ್ನು ಬಾರಿಸಲಾಗಿದೆ. ಹಾಗೆಯೇ ಈ ಪಂದ್ಯದಲ್ಲಿ ಮೂಡಿಬಂದ ಒಟ್ಟು ಸ್ಕೋರ್ 515 ರನ್ಗಳು. ಇದು ಬಿಗ್ ಬ್ಯಾಷ್ ಲೀಗ್ನಲ್ಲಿ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಎಂಬುದು ವಿಶೇಷ. ಒಟ್ಟಿನಲ್ಲಿ ಬಿಗ್ ಬ್ಯಾಷ್ ಲೀಗ್ನ 6ನೇ ಪಂದ್ಯವು ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಈ ದಾಖಲೆಯೊಂದಿಗೆ ಬ್ರಿಸ್ಬೇನ್ ಹೀಟ್ ಅಮೋಘ ಗೆಲುವು ದಾಖಲಿಸಿ ಹೊಸ ಇತಿಹಾಸವನ್ನು ಸಹ ನಿರ್ಮಿಸಿದ್ದಾರೆ.
