ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ (Mahindra) ಕಂಪನಿಯು ಇತ್ತೀಚೆಗೆ 5 ಡೋರ್ ಸೌಲಭ್ಯದ ಥಾರ್ ರಾಕ್ಸ್ ಬಿಡುಗಡೆ ಮಾಡಿದ್ದು, ಹೊಸ ಕಾರು ಬಿಡುಗಡೆಯ ಬೆನ್ನಲ್ಲೇ 3 ಡೋರ್ ಸೌಲಭ್ಯದ ಥಾರ್ ಕಾರು ಖರೀದಿಯ ಮೇಲೆ ಭರ್ಜರಿ ಆಫರ್ ನೀಡಲಾಗುತ್ತಿದೆ. ಹೊಸ ಸೌಲಭ್ಯಗಳೊಂದಿಗೆ ಥಾರ್ ರಾಕ್ಸ್ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವುದರಿಂದ ಥಾರ್ ಬೇಡಿಕೆಯಲ್ಲಿ ತುಸು ಇಳಿಕೆಯಾಗಿದ್ದು, ಇದಕ್ಕಾಗಿ ಗ್ರಾಹಕರನ್ನು ಸೆಳೆಯಲು ಹೊಸ ಆಫರ್ ಗಳನ್ನು ನೀಡಲಾಗುತ್ತಿದೆ.
ಹೊಸ ಆಫರ್ ಗಳಲ್ಲಿ ಮಹೀಂದ್ರಾ ಕಂಪನಿಯು ಥಾರ್ ಕಾರಿನ ಮೇಲೆ ರೂ. 1.50 ಲಕ್ಷದಷ್ಟು ಆಫರ್ ನೀಡುತ್ತಿದ್ದು, ಹೊಸ ಆಫರ್ ಗಳಲ್ಲಿ ಎಕ್ಸ್ ಚೆಂಜ್, ಕ್ಯಾಶ್ ಬ್ಯಾಕ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಗಳು ಒಳಗೊಂಡಿವೆ. ಹೊಸ ಆಫರ್ ಗಳನ್ನು ಥಾರ್ ಕಾರಿನ ಎಂಟ್ರಿ ಲೆವಲ್ ಪೆಟ್ರೋಲ್ ಮ್ಯಾನುವಲ್ ಮತ್ತು ಡೀಸೆಲ್ ಮ್ಯಾನುವಲ್ ಮಾದರಿಗಳ ಮೇಲೆ ಹೆಚ್ಚಿನ ಆಫರ್ ನೀಡಲಾಗುತ್ತಿದ್ದು, ಮುಂಬರುವ ಹಬ್ಬದ ಋತುಗಳಲ್ಲಿ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಸಹಕಾರಿಯಾಗಲಿದೆ.
ಥಾರ್ 3 ಡೋರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ 1.5 ಲೀಟರ್ ಡೀಸೆಲ್, 2.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಇವು ಎಕ್ಸ್ ಶೋರೂಂ ಪ್ರಕಾರ ರೂ. 11.35 ಲಕ್ಷದಿಂದ ರೂ. 17.60 ಲಕ್ಷದ ತನಕ ಬೆಲೆ ಹೊಂದಿವೆ. ಥಾರ್ ಕಾರಿಗೆ ಸದ್ಯ ಮಾರುಕಟ್ಟೆಯಲ್ಲಿ ಫೋರ್ಸ್ ಗೂರ್ಖಾ ಪ್ರಬಲ ಪೈಪೋಟಿಯಾಗಿದ್ದು, ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಇದನ್ನೂ ಓದಿ: ಗುಜರಿ ಪಾಲಿಸಿ ಅಡಿ ಹೊಸ ಕಾರು ಖರೀದಿದಾರರಿಗೆ ಭರ್ಜರಿ ಆಫರ್
ಲೈಫ್ ಸ್ಟೈಲ್ ಮತ್ತು ಆಫ್ ರೋಡ್ ಗೂ ಸೈ ಎನ್ನಿಸಿಕೊಂಡಿರುವ ಥಾರ್ ಕಾರು ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದ್ದು, ಯುವ ಗ್ರಾಹಕರ ನೆಚ್ಚಿನ ಎಸ್ ಯುವಿ ಮಾದರಿಯಾಗಿದೆ. ಆದರೆ 3 ಡೋರ್ ಸೌಲಭ್ಯದಿಂದಾಗಿ ಕುಟುಂಬ ಸಮೇತರಾಗಿ ಪ್ರಯಾಣಿಸುವ ಗ್ರಾಹಕರನ್ನು ಸೆಳೆಯಲು ವಿಫಲವಾಗುತ್ತಿದ್ದು, ಇದೇ ಕಾರಣಕ್ಕೆ 5 ಡೋರ್ ಸೌಲಭ್ಯದೊಂದಿಗೆ ಥಾರ್ ರಾಕ್ಸ್ ಹೊಸ ಮಾದರಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಮೂಲಕ ಗ್ರಾಹಕರಿಗೆ ಇದೀಗ ಲೈಫ್ ಸ್ಟೈಲ್ ಮತ್ತು ಆಫ್ ರೋಡ್ ಕೌಶಲ್ಯಕ್ಕಾಗಿ 3 ಡೋರ್ ಸೌಲಭ್ಯದ ಥಾರ್ ಖರೀದಿಗೆ ಲಭ್ಯವಿದ್ದರೆ, ಕುಟುಂಬ ಸಮೇತ ಪ್ರಯಾಣಿಸುವುದರ ಜೊತೆ ಆಫ್ ರೋಡ್ ಕೌಶಲ್ಯಕ್ಕೂ ಅನುಕೂಲಕವಾಗಿರುವ ಥಾರ್ ರಾಕ್ಸ್ ಲಭ್ಯವಿದೆ.
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಹೇಗೆಲ್ಲಾ ಮೋಸ ಮಾಡ್ತಾರೆ ನೋಡಿ..
ಜೊತೆಗೆ ಹೊಸ ಥಾರ್ ರಾಕ್ಸ್ ಕಾರಿನಲ್ಲಿ ಥಾರ್ ಮಾದರಿಯಲ್ಲಿ ಇಲ್ಲದೆ ಇರುವ ಎಡಿಎಎಸ್ ಸೇಫ್ಟಿ ಸಿಸ್ಟಂ, ದೊಡ್ಡದಾದ ಇನ್ಪೋಟೈನ್ ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ಟುಮೆಂಟ್ ಕ್ಲಸ್ಟರ್, ಸನ್ ರೂಫ್, ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಂ, ಪ್ರೀಮಿಯಂ ಆಡಿಯೋ ಸಿಸ್ಟಂ ಮತ್ತು ಕೀ ಲೆಸ್ ಸ್ಟಾರ್ಟ್/ಸ್ಟಾಪ್ ಸೌಲಭ್ಯಗಳಿವೆ. ಇದರೊಂದಿಗೆ ಥಾರ್ ಮಾದರಿಯಲ್ಲೂ ಹಲವಾರು ಫೀಚರ್ಸ್ ಗಳಿದ್ದು, ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ಇದೀಗ ಥಾರ್ ಅಥವಾ ಥಾರ್ ರಾಕ್ಸ್ ಆಯ್ಕೆ ಮಾಡಬಹುದಾಗಿದೆ.