ಭಾರತದಲ್ಲಿ ಸುರಕ್ಷಿತ ಕಾರುಗಳ ಬಳಕೆಯನ್ನು ಉತ್ತೇಜಿಸಲು ಆರಂಭವಾಗಿರುವ ಗ್ಲೊಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (Global NCAP’s) ಅಭಿಯಾನವು ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಹೊಸ ಅಭಿಯಾನದಡಿ ಕಾರುಗಳ ಸುರಕ್ಷತೆ ಮೌಲ್ಯಮಾಪನ ಮಾಡುತ್ತಿದೆ. ಇದರಲ್ಲಿ ಇತ್ತೀಚೆಗೆ ಪರೀಕ್ಷೆಗೆ ಒಳಪಡಿಸಲಾಗಿದ್ದ ಮಹೀಂದ್ರಾ ಬೊಲೆರೊ ನಿಯೋ ಮತ್ತು ಹೋಂಡಾ ಅಮೇಜ್ ಕಳಪೆ ಪ್ರದರ್ಶನ ತೋರಿದ್ದು, ಇವು ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಮಟ್ಟದ ಜೀವಹಾನಿ ಉಂಟುಮಾಡಬಹುದಾಗಿದೆ.
ಹೊಸ ಕಾರುಗಳ ಖರೀದಿ ಇತ್ತೀಚೆಗೆ ಗ್ರಾಹಕರು ಕಾರಿನ ಬೆಲೆ ಮತ್ತು ಮೈಲೇಜ್ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇದಕ್ಕೆ ಪೂರಕವಾಗಿ ಕ್ರ್ಯಾಶ್ ಟೆಸ್ಟ್ ಫಲಿತಾಂಶವು ಕಾರು ಖರೀದಿದಾರರಿಗೆ ಸಾಕಷ್ಟು ಸಹಕಾರಿಯಾಗುತ್ತಿದೆ. ಹೀಗಾಗಿ ಕಾರು ತಯಾರಕರು ಕೂಡಾ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಜೋಡಣೆ ಮಾಡುತ್ತಿದ್ದು, ಗರಿಷ್ಠ ಮಟ್ಟದ ಸೇಫ್ಟಿ ರೇಟಿಂಗ್ಸ್ ಮೂಲಕ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿವೆ.
ಸುರಕ್ಷಿತ ಕಾರುಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಈಗಾಗಲೇ ಹಲವು ಕಾರು ಕಂಪನಿಗಳು ಮಹತ್ವದ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಿದ್ದರೆ ಇನ್ನು ಕೆಲವು ಕಾರು ಕಂಪನಿಗಳು ಸುರಕ್ಷತೆಯ ಬಗ್ಗೆ ಹೆಚ್ಚು ಗಮನಹರಿಸದೆ ಕಡಿಮೆ ಬೆಲೆಯಲ್ಲಿ ಕಳಪೆ ಕಾರುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿವೆ. ಇತ್ತೀಚೆಗೆ ಪ್ರಕಟವಾದ ಹೊಸ ವರದಿಯಲ್ಲಿ ಮಹೀಂದ್ರಾ ಬೊಲೆರೊ ನಿಯೋ ಮತ್ತು ಹೋಂಡಾ ಅಮೇಜ್ ಕಾರುಗಳು ಕೂಡಾ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಮುಗ್ಗರಿಸಿವೆ. ಹೀಗಾಗಿ ಈ ಕಾರುಗಳ ಗುಣಮಟ್ಟ ಸಾಕಷ್ಟು ಸುಧಾರಿಸಬೇಕಿದ್ದು, ಗ್ರಾಹಕರಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.
ಇದನ್ನೂ ಓದಿ: ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಭರ್ಜರಿ ರೇಟಿಂಗ್ಸ್ ಪಡೆದುಕೊಂಡ ಹೊಸ ಮಾರುತಿ ಸುಜುಕಿ ಸ್ವಿಫ್ಟ್
ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಮಹೀಂದ್ರಾ ಬೊಲೆರೊ ನಿಯೋ ಎಸ್ ಯುವಿ ಮಾದರಿಯು ಕೇವಲ 1 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದ್ದು, ಹೋಂಡಾ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಮಾದರಿಯು 2 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದೆ. ಎರಡು ಮಾದರಿಗಳನ್ನು ಗ್ಲೊಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ ನ ಹೊಸ ಸುರಕ್ಷಾ ಮಾನದಂಡಗಳೊಂದಿಗೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವು ಕಾರು ಪ್ರಯಾಣಿಕರಿಗೆ ಅಪಘಾತದ ಸಂದರ್ಭದಲ್ಲಿ ಹೆಚ್ಚಿನ ಹಾನಿ ಉಂಟು ಮಾಡುವ ಸಾಧ್ಯತೆಗಳಿವೆ.
ಹೊಸ ಕಾರುಗಳಲ್ಲಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಜೋಡಣೆ ಹೊರತಾಗಿಯೂ ಉತ್ಪಾದನಾ ಗುಣಮಟ್ಟವು ಕಳಪೆಯಾಗಿದ್ದು, ಹೊಸ ಸುರಕ್ಷಾ ಮಾನದಂಡಗಳಿಗೆ ಅನುಗುಣವಾಗಿ ಸಾಕಷ್ಟು ಸುಧಾರಿಸಬೇಕಿದೆ. ಹೊಸ ಸುರಕ್ಷಾ ಮಾನದಂಡಗಳಲ್ಲಿ ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಮತ್ತು ಸೈಡ್ ಕರ್ಟನ್ ಏರ್ ಬ್ಯಾಗ್ ಗಳ ಜೋಡಣೆ ಪ್ರಮುಖವಾಗಿದ್ದು, ಇವು ಪ್ರಯಾಣಿಕರ ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ.
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!
ಕ್ರ್ಯಾಶ್ ಟೆಸ್ಟಿಂಗ್ ರೇಟಿಂಗ್ಸ್ ಕುರಿತಾಗಿ ಈಗಾಗಲೇ ಪ್ರತಿಕ್ರಿಯೆಸಿರುವ ಹೋಂಡಾ ಕಾರ್ಸ್ ಕಂಪನಿಯು ಮುಂಬರುವ ದಿನಗಳಲ್ಲಿ ಹೊಸ ಸುರಕ್ಷಾ ಮಾನದಂಡಗಳೊಂದಿಗೆ ಹೊಸ ಅಮೇಜ್ ಪರಿಚಯಿಸುವ ಸುಳಿವು ನೀಡಿದ್ದು, ಮಹೀಂದ್ರಾ ಕಂಪನಿಯು ಕೂಡಾ ಮುಂಬರುವ ಕೆಲವೇ ದಿನಗಳಲ್ಲಿ ಗರಿಷ್ಠ ಸೇಫ್ಟಿ ರೇಟಿಂಗ್ಸ್ ಕಾರುಗಳನ್ನು ಮಾತ್ರ ಉತ್ಪಾದನೆ ಮಾಡುವ ಭರವಸೆ ನೀಡಿದೆ.