ಹೊಸ ಕಾರುಗಳ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ದಾಖಲಿಸುತ್ತಿರುವ ನಿಸ್ಸಾನ್ ಇಂಡಿಯಾ (Nissan India) ಕಂಪನಿಯು ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ ಎಕ್ಸ್-ಟ್ರಯಲ್ (X-Trail) ಪ್ರೀಮಿಯಂ ಅರ್ಬನ್ ಎಸ್ ಯುವಿಯನ್ನು ಬಿಡುಗಡೆ ಮಾಡುತ್ತಿದೆ. ಹೊಸ ಕಾರು ಖರೀದಿಗಾಗಿ ಜುಲೈ 26ರಿಂದಲೇ ರೂ. 1 ಲಕ್ಷ ಮುಂಗಡದೊಂದಿಗೆ ಬುಕಿಂಗ್ ಆರಂಭವಾಗಲಿದ್ದು, ಅಗಸ್ಟ್ 1ರಂದು ಹೊಸ ಕಾರಿನ ಅಧಿಕೃತ ಬೆಲೆ ಮಾಹಿತಿ ದೊರೆಯಲಿದೆ.
ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿರುವ ಎಕ್ಸ್-ಟ್ರಯಲ್ ಕಾರು ಜಾಗತಿಕ ಮಾರುಕಟ್ಟೆಗಾಗಿ ನಾಲ್ಕನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗುತ್ತಿದ್ದು, ಇದು ಈಗಾಗಲೇ 150ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಿದೆ. 2023ನೇ ವರ್ಷದಲ್ಲಿ ಜಾಗತಿಕವಾಗಿ ಮಾರಾಟವಾಗಿರುವ ಟಾಪ್ 5 ಎಸ್‌ಯುವಿಗಳಲ್ಲಿ ಇದೂ ಕೂಡಾ ಒಂದಾಗಿದ್ದು, ಇದೀಗ ನಿಸ್ಸಾನ್ ಕಂಪನಿ ತನ್ನ ಜಾಗತಿಕ ಉತ್ಪನ್ನಗಳನ್ನು ಮತ್ತು ತಂತ್ರಜ್ಞಾನವನ್ನು ಭಾರತದಲ್ಲೂ ಪರಿಚಯಿಸುವ ಉದ್ದೇಶದೊಂದಿಗೆ ಎಕ್ಸ್ ಟ್ರಯಲ್ ಪರಿಚಯಿಸುತ್ತಿದೆ.
ಎಕ್ಸ್-ಟ್ರಯಲ್ ಕಾರು ಭಾರತದಲ್ಲಿ ಸದ್ಯಕ್ಕೆ ಸಂಪೂರ್ಣವಾಗಿ ಆಮದು (ಸಿಬಿಯು) ಮಾಡಲಾದ ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಇದು ವಾರ್ಷಿಕವಾಗಿ ಸೀಮಿತ ಸಂಖ್ಯೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿರುತ್ತದೆ. ಸಿಬಿಯು ಆಮದು ನೀತಿ ಅಡಿಯಲ್ಲಿ ಸದ್ಯ ಭಾರತದಲ್ಲಿರುವ ವಿದೇಶಿ ಕಾರು ಉತ್ಪಾದನಾ ಕಂಪನಿಗಳು ಯಾವುದೇ ಹೆಚ್ಚುವರಿ ತೆರಿಗೆಗಳಲ್ಲಿದೆ ವಾರ್ಷಿಕವಾಗಿ 2500 ಕಾರುಗಳನ್ನು ಆಮದು ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಈ ಹಿನ್ನಲೆಯಲ್ಲಿ ನಿಸ್ಸಾನ್ ಕೂಡಾ ವಿದೇಶಿ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿರುವ ತನ್ನ ಬಹುಬೇಡಿಕೆಯ ಎಕ್ಸ್-ಟ್ರಯಲ್ ಮಾದರಿಯನ್ನು ಭಾರತಕ್ಕೂ ಪರಿಚಯಿಸಲು ಮುಂದಾಗಿದೆ.
ಎಕ್ಸ್-ಟ್ರಯಲ್ ಕಾರು ವಿಶ್ವದ ಮೊತ್ತ ಮೊದಲ ಪ್ರೊಡಕ್ಷನ್ ವೇರಿಯೇಬಲ್ ಕಂಪ್ರೆಷನ್ ಟರ್ಬೊ ಎಂಜಿನ್ ಅನ್ನು ಹೊಂದಿದ್ದು, ಇದರ ಅತ್ಯಾಧುನಿಕ ಡಿಎನ್ಎ ಪ್ರೇರಿತ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಇದರೊಂದಿಗೆ ಟಾರ್ಕ್ ಅಸಿಸ್ಟ್, ಹೆಚ್ಚುವರಿ ಐಡಲ್-ಸ್ಟಾಪ್, ಕ್ವಿಕ್ ರೀಸ್ಟಾರ್ಟ್ ಮತ್ತು ಸುಧಾರಿತ ಇಂಧನ ದಕ್ಷತೆ ಇತ್ಯಾದಿ ಸೌಕರ್ಯಗಳು ದೊರೆಯಲಿವೆ.
ಹೊಸ ಕಾರಿನಲ್ಲಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 12ವಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಪ್ಯಾಡಲ್ ಶಿಫ್ಟರ್ ಜೊತೆಗೆ ಶಿಫ್ಟ್ ಬೈ ವೈರ್ ಪ್ರೇರಿತ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳ ಆಯ್ಕೆ ಹೊಂದಿದೆ. ಇದು ಗರಿಷ್ಠ 163 ಹಾರ್ಸ್ ಪವರ್ ಮತ್ತು 300 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ. ಇದರೊಂದಿಗೆ ಹೊಸ ಕಾರು ಟು ವ್ಹೀಲ್ ಡ್ರೈವ್ ತಂತ್ರಜ್ಞಾನ ಆಯ್ಕೆಯೊಂದಿಗೆ ಐಶಾರಾಮಿ ಕಾರು ಚಾಲನಾ ಅನುಭವ ನೀಡಲಿದೆ. ಇದು 7 ಸೀಟರ್ ಆಯ್ಕೆಗಳೊಂದಿಗೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರಲಿದ್ದು, ಹೊಸ ಕಾರಿನ ಒಳ ಮತ್ತು ಹೊರ ವಿನ್ಯಾಸಗಳು ಗಮನಸೆಳೆಯುತ್ತಿವೆ.
ಜೊತೆಗೆ ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಕಾರು ತನ್ನ ಬಲಿಷ್ಠ ವಿನ್ಯಾಸದೊಂದಿಗೆ ಡ್ಯುಯಲ್ ಪೇನ್ ಸನ್ ರೂಫ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, 12.3 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, 8 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, 15 ವೊಲ್ಟ್ ಸಾಮಾರ್ಥ್ಯದ ವೈರ್ ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್ ಪಾಡ್, ಕೀ ಲೆಸ್ ಎಂಟ್ರಿ ಫುಶ್ ಬಟನ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, 7 ಏರ್ ಬ್ಯಾಗ್ ಗಳು, ಎಬಿಡಿ ಜೊತೆಗೆ ಎಬಿಎಸ್, ಫ್ರಂಟ್ ಅಂಡ್ ರೇರ್ ಪಾರ್ಕಿಂಗ್ ಸೆನ್ಸಾರ್ ಗಳು, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಗಳು, ಆಟೋ ವೈಪ್ಸ್, ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹಲವಾರು ಸುರಕ್ಷಾ ಸೌಲಭ್ಯಗಳಿವೆ.
ಈ ಮೂಲಕ ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 40 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ನೀರಿಕ್ಷೆಯಿದ್ದು, ಇದು ಹ್ಯುಂಡೈ ಟುಸಾನ್, ಜೀಪ್ ಮೆರೆಡಿಯನ್, ಸಿಟ್ರನ್ ಸಿ5 ಏರ್ ಕ್ರಾಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ. ಇದರೊಂದಿಗೆ ಹೊಸ ಕಾರು ದುಬಾರಿ ಬೆಲೆ ಹೊಂದಿರುವ ಟೊಯೊಟಾ ಫಾರ್ಚೂನ್ ಕಾರಿಗೂ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಬೆಲೆ ನಿಗದಿ ಮೇಲೆ ಹೊಸ ಕಾರಿನ ಯಶಸ್ವಿ ಅವಲಂಭಿಸಿದೆ.