ಇವಿ ದ್ವಿಚಕ್ರ ವಾಹನಗಳ ಉತ್ಪಾದನೆಗಾಗಿ ಓಲಾ ಎಲೆಕ್ಟ್ರಿಕ್ ನಿಂದ ಮಹತ್ವದ ಘೋಷಣೆ
ಓಲಾ ಎಲೆಕ್ಟ್ರಿಕ್ ಕಂಪನಿಯು ಇವಿ ದ್ವಿಚಕ್ರ ವಾಹನಗಳ ಉತ್ಪಾದನೆಗಾಗಿ ಹೊಸ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಘೋಷಣೆ ಮಾಡಿದೆ.
ಇವಿ ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಓಲಾ ಎಲೆಕ್ಟ್ರಿಕ್ (Ola Electric) ಕಂಪನಿಯು ಮೂರನೇ ತಲೆಮಾರಿನ ಇವಿ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಬಹಿರಂಗಪಡಿಸಿದ್ದು, ಹೊಸ ಇವಿ ವಾಹನ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ನೊಂದಿಗೆ ಮತ್ತೊಂದು ಹಂತದ ಬೆಳವಣಿಗೆಯ ನೀರಿಕ್ಷೆಯಲ್ಲಿದೆ. 3ನೇ ತಲೆಮಾರಿನ ಹೊಸ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಕಡಿಮೆ ಬೆಲೆಯೊಂದಿಗೆ ಸುಧಾರಿತ ತಂತ್ರಜ್ಞಾನ ಪ್ರೇರಿತ ಇವಿ ಉತ್ಪನ್ನಗಳನ್ನು ಸಿದ್ದಪಡಿಸಲು ನೆರವಾಗಲಿದ್ದು, ಇದು ಪೆಟ್ರೋಲ್ ಆಧರಿತ ದ್ವಿಚಕ್ರವಾಹನಗಳಿಗೆ ಹೊಸ ಪೈಪೋಟಿ ಆರಂಭಿಸಲಿದೆ.
ಮೊದಲ ಮತ್ತು ಎರಡನೇ ತಲೆಮಾರಿನ ಪ್ಲ್ಯಾಟ್ ಫಾರ್ಮ್ ಮೂಲಕ ಈಗಾಗಲೇ ಹಲವಾರು ಬದಲಾವಣೆಗಳನ್ನು ಕಂಡುಕೊಂಡಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಇದೀಗ 3ನೇ ತಲೆಮಾರಿನ ಹೊಸ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಮೂಲಕ ಪ್ರಸ್ತುತ ಉತ್ಪಾದನಾ ವೆಚ್ಚವನ್ನು ಶೇ.23 ರಷ್ಟು ಕಡಿಮೆ ಮಾಡುವುದೊಂದಿಗೆ ಶೇ.26 ರಷ್ಟು ಹೆಚ್ಚಿನ ಪರ್ಫಾಮೆನ್ಸ್ ಸುಧಾರಣೆಗೊಳಿಸಲಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಎರಡನೇ ತಲೆಮಾರಿನ ಇವಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿರುವ ಓಲಾ ಇವಿ ಕಂಪನಿಯು ಭರ್ಜರಿ ಬೇಡಿಕೆಯೊಂದಿಗೆ ಭಾರೀ ಪ್ರಮಾಣದಲ್ಲಿ ಆದಾಯಕಂಡುಕೊಳ್ಳುತ್ತಿದ್ದು, ಇದೀಗ ಹೊಸ ತಲೆಮಾರಿನ ಇವಿ ಮಾದರಿಗಳು ಇನ್ನಷ್ಟು ಲಾಭಾಂಶ ತಂದುಕೊಡುವ ನೀರಿಕ್ಷೆಯಲ್ಲಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಓಲಾ ಕಂಪನಿಯು ಹೊಸ ಇವಿ ದ್ವಿಚಕ್ರ ವಾಹನಗಳಿಗಾಗಿ ಈ ಬಾರಿ ಸಂಪೂರ್ಣವಾಗಿ ಸ್ಥಳೀಯವಾಗಿ ಉತ್ಪಾದಿಸಲಾದ 4680 ಸೆಲ್‌ಗಳನ್ನು ಒಳಗೊಂಡ ಬ್ಯಾಟರಿ ಪ್ಯಾಕ್ ಜೋಡಣೆ ಮಾಡುತ್ತಿದೆ.
ಇದರೊಂದಿಗೆ ಓಲಾ ಎಲೆಕ್ಟ್ರಿಕ್ ಹೊಸ ದ್ವಿಚಕ್ರ ವಾಹನಗಳಲ್ಲಿ ಸುಧಾರಿತ ಸೆಂಟ್ರಲ್ ಕಂಪ್ಯೂಟ್ ಬೋರ್ಡ್ ನೊಂದಿಗೆ ಇಸಿಯು ಹೊಂದಿದ್ದು, ಇದು ಪ್ರಸ್ತುತ ಲಭ್ಯವಿರುವ ಇತರೆ ದ್ವಿಚಕ್ರ ವಾಹನಗಳಲ್ಲಿನ ಎಲೆಕ್ಟ್ರಾನಿಕ್ಸ್ ಬೋರ್ಡ್‌ಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ. ಈ ಮೂಲಕ ಹೊಸ ಬದಲಾವಣೆಯು ಪ್ರಸ್ತುತ ಕಾರ್ಯವನ್ನು ಸುಧಾರಿಸುವುದಲ್ಲದೆ ಡ್ರೈವರ್ ಅಸಿಸ್ಟ್ ಸಿಸ್ಟಂ ಅನ್ನು ಸಕ್ರಿಯಗೊಳಿಸಲಿದ್ದು, ಭವಿಷ್ಯದ ಪ್ರಗತಿಗಳಿಗೆ ಇದು ಹೊಸ ವೇದಿಕೆ ಸಿದ್ದಪಡಿಸುತ್ತಿದೆ.
ಇನ್ನು ಓಲಾ ಎಲೆಕ್ಟ್ರಿಕ್ ಕಂಪನಿಯು ಇತ್ತೀಚೆಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬ್ಯಾಟರಿ ರೇಂಜ್ ಆಧರಿಸಿ ರೋಡ್‌ಸ್ಟರ್ ಎಕ್ಸ್, ರೋಡ್‌ಸ್ಟರ್ ಮತ್ತು ರೋಡ್‌ಸ್ಟರ್ ಪ್ರೋ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಇವು ಅತ್ಯಾಧುನಿಕ ತಂತ್ರಜ್ಞಾನ ಮತ್ತು ನವನವೀನ ವಿನ್ಯಾಸ ಹೊಂದಿವೆ. ರೋಡ್‌ಸ್ಟರ್ ಎಕ್ಸ್ ಮತ್ತು ರೋಡ್‌ಸ್ಟರ್ ರೂಪಾಂತರಗಳು 2025ರ ಜನವರಿಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದ್ದು, ಹೈಎಂಡ್ ಮಾದರಿಯಾದ ರೋಡ್‌ಸ್ಟರ್ ಪ್ರೊ ರೂಪಾಂತರವು ಮುಂದಿನ ವರ್ಷದ ದೀಪಾವಳಿಗೆ ವಿತರಣೆ ಆರಂಭವಾಗಲಿದೆ. ಹೊಸ ಇವಿ ಮಾದರಿಗಳು ರೂ. 75 ಸಾವಿರದಿಂದ ರೂ. 2.50 ಲಕ್ಷ ಬೆಲೆ ಪಡೆದುಕೊಂಡಿದ್ದು, ಪ್ರತಿ ಚಾರ್ಜ್ ಗೆ ಇವು 200 ಕಿ.ಮೀ ಮೈಲೇಜ್ ನಿಂದ ಗರಿಷ್ಠ 579 ಕಿ.ಮೀ ಮೈಲೇಜ್ ನೀಡಲಿದೆ.
Published On - 9:20 pm, Mon, 19 August 24