Porsche Panamera: ಐಷಾರಾಮಿ ರ್ಪೊರ್ಷೆ ಪನಾಮೆರಾ ಸ್ಪೋರ್ಟ್ ಸೆಡಾನ್ ಬಿಡುಗಡೆ
ಪೋರ್ಷೆ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಹೊಸ ಪನಾಮೆರಾ ಸ್ಪೋರ್ಟ್ ಸೆಡಾನ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ಜರ್ಮನ್ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಪೋರ್ಷೆ (Porsche) ತನ್ನ ನವೀಕೃತ ಪನಾಮೆರಾ ಸ್ಪೋರ್ಟ್ ಸೆಡಾನ್ ಮಾದರಿಯನ್ನು ಜಾಗತಿಕ ಮಾರುಕಟ್ಟೆಗಾಗಿ ಪರಿಚಯಿಸಿದ್ದು, ಹೊಸ ಕಾರು ಮಾದರಿಯು ಭಾರತದಲ್ಲಿ ಪ್ರಮುಖ ಎರಡು ವೆರಿಯೆಂಟ್ ಗಳನ್ನು ಹೊಂದಿರಲಿದೆ. ಸದ್ಯಕ್ಕೆ ಹೊಸ ಕಾರಿನ ವಿ6 ರಿಯರ್ ವ್ಹೀಲ್ ಡ್ರೈವ್ ಸಿಸ್ಟಂ ವೆರಿಯೆಂಟ್ ಬೆಲೆಯನ್ನು ಮಾತ್ರ ಬಹಿರಂಗಪಡಿಸಲಾಗಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 1.68 ಲಕ್ಷ ಬೆಲೆ ಪಡೆದುಕೊಂಡಿದೆ.
ಹೊಸ ಕಾರಿನ ಬೆಲೆ ಮಾಹಿತಿ ಬಹಿರಂಗದೊಂದಿಗೆ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿರುವ ಪೋರ್ಷೆ ಇಂಡಿಯಾ ಕಂಪನಿಯು ಶೀಘ್ರದಲ್ಲಿಯೇ ವಿತರಣೆ ಆರಂಭಿಸಲಿದ್ದು, ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಮಾದರಿಯು ಸಹ ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಹೊಸ ಆವೃತ್ತಿಯು ಹಳೆಯ ಮಾದರಿಗಿಂತ ರೂ. 11 ಲಕ್ಷದಷ್ಟು ದುಬಾರಿಯಾಗಿದ್ದು, ಇದು ಮರ್ಸಿಡಿಸ್-ಎಎಂಜಿ ಜಿಟಿ63 ಎಸ್ ಇ-ಪರ್ಫಾಮೆನ್ಸ್ 4-ಡೋರ್ ಕೂಪೆ ಮಾದರಿಗೆ ಉತ್ತಮ ಪೈಪೋಟಿಯಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಸುರಕ್ಷಿತ ಕಾರುಗಳಿವು!
ವೈಶಿಷ್ಟ್ಯತೆಗಳು
ಪನಾಮೆರಾ ಸ್ಪೋರ್ಟ್ ಸೆಡಾನ್ ಮಾದರಿಯಲ್ಲಿ ಈ ಬಾರಿ ಡ್ರೈವಿಂಗ್ ಅನುಭವ ಹೆಚ್ಚಿಸುವುದಕ್ಕಾಗಿ ಎಲೆಕ್ಟ್ರಿಕ್ ಮೂಲಕ 8 ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಆಸನಗಳು, ಮ್ಯಾಟ್ರಿಕ್ಸ್ ಹೆಡ್ ಲೈಟ್ಸ್, 12.3 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ ಜೊತೆಗೆ ಪೋರ್ಷೆ ಕಮ್ಯುನಿಕೇಶನ್ ಮ್ಯಾನೆಜ್ಮೆಂಟ್ ಸಿಸ್ಟಂ, ಆಟೋ ಇಂಟರ್ಫೇಸ್, ವಾಯ್ಸ್ ಕಂಟ್ರೋಲ್ ಮತ್ತು ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು ಸೇರಿದಂತೆ ಹಲವಾರು ಫೀಚರ್ಸ್ ಗಳಿವೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಹೊಸ ಪನಾಮೆರಾ ಕಾರಿನಲ್ಲಿ ಪೋರ್ಷೆ ಕಂಪನಿಯು 2.9 ಲೀಟರ್ ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು 8-ಸ್ಪೀಡ್ ಪಿಡಿಕೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ರಿಯರ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿದೆ. ಈ ಮೂಲಕ ಇದು 349 ಹಾರ್ಸ್ ಪವರ್ ಮತ್ತು 500 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಇದು ಕೇವಲ 5.1 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗಪಡೆದುಕೊಳ್ಳುವ ಮೂಲಕ ಪ್ರತಿ ಗಂಟೆಗೆ 272 ಕಿ.ಮೀ ಟಾಪ್ ಸ್ಪೀಡ್ ಹೊಂದಿರಲಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ಕಾರು ಉತ್ಪಾದನಾ ಘಟಕ ಘೋಷಣೆ ಮಾಡಿದ ಟೊಯೊಟಾ
ಭಾರತದಲ್ಲಿ ಸದ್ಯಕ್ಕೆ ವಿ6 ಹೊಂದಿರುವ ರಿಯರ್ ವ್ಹೀಲ್ ಡ್ರೈವ್ ಮಾದರಿಯನ್ನು ಮಾತ್ರ ಬಿಡುಗಡೆ ಮಾಡಿರುವ ಪೋರ್ಷೆ ಕಂಪನಿಯು ಮುಂಬರುವ 2024ಕ್ಕೆ ವಿ8 ಎಂಜಿನ್ ಪ್ರೇರಿತ ಇ-ಹೈಬ್ರಿಡ್ ಮಾದರಿಯನ್ನು ಬಿಡುಗಡೆ ಮಾಡಲಿದ್ದು, ಹೈಬ್ರಿಡ್ ಮಾದರಿಯ ಬಿಡುಗಡೆಯ ನಂತರ ಸಾಮಾನ್ಯ ಮಾದರಿಯ ಮಾರಾಟವನ್ನು ಸ್ಥಗಿತಗೊಳಿಸಲಿದೆ ಎನ್ನಲಾಗಿದೆ.