Prices Cut: ಸ್ಕೋಡಾ ಫೇಮಸ್ ಕಾರುಗಳ ಬೆಲೆಯಲ್ಲಿ ರೂ. 1 ಲಕ್ಷ ಇಳಿಕೆ
ಸ್ಕೋಡಾ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಸ್ಲಾವಿಯಾ ಮತ್ತು ಕುಶಾಕ್ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ ಘೋಷಿಸಿದೆ.
ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರು ಉತ್ಪಾದನಾ ಕಂಪನಿಯಾಗಿರುವ ಸ್ಕೋಡಾ ಇಂಡಿಯಾ (Skoda India) ತನ್ನ ಪ್ರಮುಖ ಕಾರು ಮಾದರಿಗಳಾದ ಕುಶಾಕ್ ಕಂಪ್ಯಾಕ್ಟ್ ಎಸ್ ಯುವಿ ಮತ್ತು ಸ್ಲಾವಿಯಾ ಸೆಡಾನ್ ಮಾದರಿಗಳ ಬೆಲೆಯಲ್ಲಿ ಇಳಿಕೆ ಮಾಡಿದೆ. ಎರಡೂ ಕಾರು ಮಾದರಿಗಳ ಎಕ್ಸ್ ಶೋರೂಂ ದರದಲ್ಲಿ ರೂ. 1 ಲಕ್ಷದ ತನಕ ಇಳಿಕೆ ಮಾಡಿದ್ದು, ಇವು ಇದೀಗ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಆಕರ್ಷಕ ಬೆಲೆ ಹೊಂದಿದಂತಾಗಿವೆ.
ಹೊಸ ದರಪಟ್ಟಿಯಲ್ಲಿ ಸ್ಲಾವಿಯಾ ಸೆಡಾನ್ ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 10. 69 ಲಕ್ಷದಿಂದ ರೂ. 18.69 ಲಕ್ಷ ಬೆಲೆ ಹೊಂದಿದ್ದರೆ ಕುಶಾಕ್ ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 11.89 ಲಕ್ಷದಿಂದ ರೂ. 18.79 ಲಕ್ಷ ಬೆಲೆ ಹೊಂದಿದೆ. ಈ ಮೂಲಕ ಸ್ಲಾವಿಯಾ ಕಾರಿನಲ್ಲಿ ಬೆಲೆಯಲ್ಲಿ ರೂ. 94 ಸಾವಿರದಷ್ಟು ಮತ್ತು ಕುಶಾಕ್ ಕಾರಿನ ಬೆಲೆಯಲ್ಲಿ ರೂ. 1.10 ಲಕ್ಷದಷ್ಟು ಬೆಲೆ ಇಳಿಕೆಯಾಗಿದ್ದು, ಇಂದಿನಿಂದಲೇ ಹೊಸ ದರಗಳು ಅನ್ವಯಿಸಲಿವೆ.
ಇದನ್ನೂ ಓದಿ: 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಫೇಮಸ್ ಎಸ್‌ಯುವಿ ಕಾರುಗಳಿವು!
ಇನ್ನು ಗ್ರಾಹಕರ ಬೇಡಿಕೆಯೆಂತೆ ಸ್ಕೋಡಾ ಕಂಪನಿಯು ತನ್ನ ಹೊಸ ಕಾರುಗಳಲ್ಲಿ ಸೇಫ್ಟಿ ಫೀಚರ್ಸ್ ಗಳನ್ನು ಉನ್ನತೀಕರಿಸುತ್ತಿದ್ದು, ಕುಶಾಕ್ ಮತ್ತು ಸ್ಲಾವಿಯಾ ಕಾರುಗಳನ್ನು ಹೆಚ್ಚುವರಿ ಏರ್ ಬ್ಯಾಗ್ ಗಳ ಸೌಲಭ್ಯಗಳೊಂದಿಗೆ ಉನ್ನತೀಕರಿಸಿದೆ. ಇನ್ಮುಂದೆ ಹೊಸ ಕಾರುಗಳಲ್ಲಿ 6 ಏರ್ ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಿದ್ದು, ಇವು ಅಪಘಾತಗಳ ಸಂದರ್ಭದಲ್ಲಿ ಸಂಭಾವ್ಯ ಪ್ರಾಣಿಹಾನಿ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸುತ್ತವೆ.
ಈ ಮೊದಲ ಮೂಲ ಮಾದರಿಗೂ ಅನ್ವಯಿಸುವಂತೆ 4 ಏರ್ ಬ್ಯಾಗ್ ಗಳನ್ನು ಮತ್ತು ಟಾಪ್ ಎಂಡ್ ಮಾದರಿಗಳಲ್ಲಿ 6 ಏರ್ ಬ್ಯಾಗ್ ಗಳನ್ನು ನೀಡುತ್ತಿದ್ದ ಸ್ಕೋಡಾ ಕಂಪನಿಯು ಇದೀಗ ಎಲ್ಲಾ ಮಾದರಿಗಳೂ ಒಂದೇ ಮಾದರಿಯಲ್ಲಿ ಏರ್ ಬ್ಯಾಗ್ಸ್ ಜೋಡಣೆ ಮಾಡಿದ್ದು, ಈಗಾಗಲೇ ಇವು ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿವೆ.
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!
ಹೊಸ ಕಾರುಗಳಲ್ಲಿ ಶೀಘ್ರದಲ್ಲಿಯೇ 360 ಡಿಗ್ರಿ ಕ್ಯಾಮೆರಾ ಸೌಲಭ್ಯವನ್ನು ಒಳಗೊಂಡ ಲೆವಲ್ 2 ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಸಂಭಾವ್ಯ ಅಪಘಾತಗಳನ್ನು ತಗ್ಗಿಸುವಲ್ಲಿ ಅಡ್ವಾನ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಸಾಕಷ್ಟು ಸಹಕಾರಿಯಾಗಲಿದೆ. ಇದರೊಂಗದಿಗೆ ಕುಶಾಕ್ ಮತ್ತು ಸ್ಲಾವಿಯಾ ಸದ್ಯಕ್ಕೆ 1.0 ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಇದರಲ್ಲಿ ಎಲೆಗೆನ್ಸ್ ಮತ್ತು ಮಾಂಟೆ ಕಾರ್ಲೊ ಎಡಿಷನ್ ಗಳನ್ನು ಸಹ ಹೊಂದಿವೆ.
Published On - 6:09 pm, Thu, 20 June 24