Tata Motors: ಟಾಟಾ ಹೊಸ ಎಲೆಕ್ಟ್ರಿಕ್ ಕಾರುಗಳ ವಿಶೇಷತೆಗಳೇನು?

|

Updated on: Jan 04, 2023 | 8:01 PM

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಕಾರುಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದೆ.

Tata Motors: ಟಾಟಾ ಹೊಸ ಎಲೆಕ್ಟ್ರಿಕ್ ಕಾರುಗಳ ವಿಶೇಷತೆಗಳೇನು?
ಟಾಟಾ ಹೊಸ ಎಲೆಕ್ಟ್ರಿಕ್ ಕಾರುಗಳು
Follow us on

ಎಲೆಕ್ಟ್ರಿಕ್ ಕಾರುಗಳ(Electric Cars) ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಕಾರುಗಳನ್ನು ಬಿಡುಗಡೆ ಮಾಡುವ ಬೃಹತ್ ಯೋಜನೆ ರೂಪಿಸುತ್ತಿದೆ. ಸದ್ಯ ಸಾಮಾನ್ಯ ಕಾರುಗಳ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಅಡಿಯಲ್ಲಿ ಇವಿ ಕಾರುಗಳನ್ನು ನಿರ್ಮಾಣ ಮಾಡುತ್ತಿರುವ ಟಾಟಾ ಕಂಪನಿ ಮುಂದಿನ ಕೆಲವೇ ದಿನಗಳಲ್ಲಿ ಬಾರ್ನ್ ಇವಿ ಪ್ಲ್ಯಾಟ್ ಫಾರ್ಮ್ ಆರಂಭಿಸುತ್ತಿದೆ. ಹೊಸ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗುತ್ತಿರುವ ಹೊಸ ಇವಿ ಕಾರುಗಳು 3ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿವೆ.

ವಿವಿಧ ಎಲೆಕ್ಟ್ರಿಕ್ ಕಾರು ಮಾದರಿಗಳೊಂದಿಗೆ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಕಂಪನಿಯು 3ನೇ ತಲೆಮಾರಿನ ಇವಿ ಕಾರು ಮಾದರಿಗಳ ಬಿಡುಗಡೆಗೆ ಸಿದ್ದವಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದನೇ ತಲೆಮಾರಿನ ಇವಿ ಕಾರುಗಳನ್ನು ಮಾರಾಟ ಮಾಡುತ್ತಿರುವ ಟಾಟಾ ಕಂಪನಿಯು 2024ರಿಂದ 2ನೇ ತಲೆಮಾರು ಮತ್ತು 2026ರಿಂದ 3ನೇ ತಲೆಮಾರಿನ ಕಾರುಗಳ ಬಿಡುಗಡೆಗಾಗಿ ಬಾರ್ನ್ ಇವಿ ಪ್ಲ್ಯಾಟ್ ಫಾರ್ಮ್ ಸಿದ್ದಪಡಿಸಿದೆ. ಹೊಸ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗುತ್ತಿರುವ ಕರ್ವ್(Curvv)  ಮತ್ತು ಅವಿನ್ಯಾ(Avinya) ಕಾರುಗಳು ಫ್ಯೂಚರಿಸ್ಟಿಕ್ ವಿನ್ಯಾಸದೊಂದಿಗೆ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರಲಿವೆ.

ಇದನ್ನೂ ಓದಿ: 2023ರಲ್ಲಿ ಬಿಡುಗಡೆಯಾಗಲಿರುವ ಹೊಸ ಇವಿ ಕಾರುಗಳಿವು!

ಹೊಸ ಕರ್ವ್ ಮತ್ತು ಅವಿನ್ಯಾ ಕಾರುಗಳನ್ನು ಕಂಪನಿಯು 2024ರಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಬಿಡುಗಡೆಗೂ ಮುನ್ನ ಹೊಸ ಕಾರುಗಳ ಉತ್ಪಾದನಾ ಆವೃತ್ತಿಯನ್ನ ಕಂಪನಿಯು ಇದೇ ತಿಂಗಳು 12ರಿಂದ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಿದೆ. ಬಿಡುಗಡೆಯಾಗಲಿರುವ ಹೊಸ ಕಾರುಗಳಲ್ಲಿ ಕರ್ವ್ ಕಾರು ಮಾದರಿಯು ಕೂಪೆ ಎಸ್ ಯುವಿ ವಿನ್ಯಾಸ ಹೊಂದಿದ್ದು, ಇದು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಮಾತ್ರವಲ್ಲದೇ ಪೆಟ್ರೋಲ್ ಮಾದರಿಯಲ್ಲೂ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಹಾಗೆಯೇ ಅವಿನ್ಯಾ ಕಾರು ಮಾದರಿಯು ಸಂಪೂರ್ಣವಾಗಿ ಇವಿ ಮಾದರಿಯೊಂದಿಗೆ ಮಾತ್ರ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಬ್ಯಾಟರಿ ಆಯ್ಕೆಯಲ್ಲೂ ಗಮನಸೆಳೆಯಲಿವೆ.

ಹೊಸ ಬಾರ್ನ್ ಇವಿ ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಇವಿ ಕಾರುಗಳು ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿನ ಇವಿ ಕಾರುಗಳಿಂತಲೂ ಹೆಚ್ಚು ಹಗುರ ಮತ್ತು ಹೆಚ್ಚಿನ ಕಾರ್ಯಕ್ಷಮತೆ ಪಡೆದುಕೊಂಡಿರಲಿವೆ. ಹಾಗೆಯೇ ಕಂಪನಿಯ ಮತ್ತೊಂದು ಸ್ಕೇಟ್‌ಬೋರ್ಡ್ ಪ್ಲ್ಯಾಟ್‌ಫಾರ್ಮ್ ಅಡಿ ಅಭಿವೃದ್ದಿಗೊಳ್ಳಲಿರುವ ಇವಿ ಕಾರುಗಳು ಇನ್ನು ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆ ಹೊಂದಿರಲಿದ್ದು, ಅವಿನ್ಯಾ ಇವಿ ಕಾನ್ಸೆಪ್ಟ್ ಮಾದರಿಯು ಸಂಪೂರ್ಣವಾಗಿ ಡಿಜಿಟಲ್ ಡಿಸೈನ್ ಲಾಂಗ್ವೆಜ್ ಆಧರಿಸಿ ಅಭಿವೃದ್ದಿಗೊಳಿಸುತ್ತಿದೆ.

ಇದನ್ನೂ ಓದಿ: 2022ರಲ್ಲಿ ಅತ್ಯುತ್ತಮ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿರುವ ಟಾಪ್ 5 ಕಾರು!

ಹಾಗೆಯೇ ಹೊಸ ಕರ್ವ್ ಕಾನ್ಸೆಪ್ಟ್ ಮಾದರಿಯನ್ನು ಟಾಟಾ ಕಂಪನಿಯು ತನ್ನ ಹೊಸ ಇವಿ ಪ್ಲ್ಯಾಟ್ ಫಾರ್ಮ್ ನಲ್ಲಿ ಅಭಿವೃದ್ದಿಪಡಿಸಿದ ಮೊದಲ ಇವಿ ಕಾರು ಮಾದರಿಯಾಗಿ ಬಿಡುಗಡೆ ಮಾಡಲಿದೆ. ಕರ್ವ್ ಕಾನ್ಸೆಪ್ಟ್ ಮಾದರಿಯು ಇವಿ ಮಾದರಿಯೊಂದಿಗೆ ಸಾಮಾನ್ಯ ಕಾರು ವಿಭಾಗದಲ್ಲೂ ಸದ್ದು ಮಾಡಲಿದ್ದು, ಇದು ಸಾಮಾನ್ಯ ಮಾದರಿಯೊಂದಿಗೆ ಹ್ಯುಂಡೈ ಕ್ರೆಟಾ ಮತ್ತು ಸೆಲ್ಟೊಸ್ ಕಾರುಗಳಿಗೆ ಪೈಪೋಟಿ ನೀಡಲಿದೆ. ಇವಿ ಆವೃತ್ತಿಯು ಎಂಜಿ ಜೆಡ್ ಎಸ್ ಇವಿ ಮತ್ತು ಹ್ಯುಂಡೈ ಕೊನಾ ಕಾರುಗಳಿಗೆ ಪೈಪೋಟಿ ನೀಡಲಿದ್ದು, ದೆಹಲಿ ಆಟೋ ಎಕ್ಸ್ ಪೋದಲ್ಲಿ ಮತ್ತಷ್ಟು ಮಾಹಿತಿ ಬಹಿರಂಗವಾಗಲಿದೆ.

Published On - 8:01 pm, Wed, 4 January 23