Upcomig EV Cars: 2023ರಲ್ಲಿ ಬಿಡುಗಡೆಯಾಗಲಿರುವ ಹೊಸ ಇವಿ ಕಾರುಗಳಿವು!
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟವು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಕಾರುಗಳು ಬಿಡುಗಡೆಗೆ ಸಿದ್ದವಾಗುತ್ತಿವೆ.
ದೇಶಾದ್ಯಂತ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಇವಿ ಕಾರುಗಳ(Electric Cars) ಮಾರಾಟ ಪ್ರಮಾಣವು ನಿರಂತರವಾಗಿ ಹೆಚ್ಚಳವಾಗುತ್ತಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ದಗೊಳ್ಳುತ್ತಿವೆ. ಗ್ರಾಹಕರ ಬೇಡಿಕೆ ಆಧರಿಸಿ ಟಾಟಾ ಮೋಟಾರ್ಸ್, ಮಹೀಂದ್ರಾ, ಎಂಜಿ ಮೋಟಾರ್ ಸೇರಿದಂತೆ ವಿವಿಧ ಕಾರು ಕಂಪನಿಗಳು ವಿವಿಧ ಸೆಗ್ಮೆಂಟ್ ಗಳಲ್ಲಿ ಹಲವು ಇವಿ ಕಾರು ಮಾದರಿಗಳನ್ನ ಬಿಡುಗಡೆಗೊಳಿಸುತ್ತಿವೆ. ಹೊಸ ಇವಿ ಕಾರುಗಳಲ್ಲಿ ಈ ಬಾರಿ ಬಜೆಟ್ ಬೆಲೆಯ ಪ್ರಮುಖ ಇವಿ ಕಾರುಗಳು ಬಿಡುಗಡೆಯಾಗಲಿದ್ದು, ಮೈಲೇಜ್ ನಲ್ಲಿ ಗಮನಸೆಳೆಯಲಿವೆ.
ಮಹೀಂದ್ರಾ ಎಕ್ಸ್ ಯುವಿ400 ಎಲೆಕ್ಟ್ರಿಕ್
ಬಿಡುಗಡೆಯಾಗಲಿರುವ ಹೊಸ ಎಲೆಕ್ಟ್ರಿಕ್ ಕಾರುಗಳ ಪಟ್ಟಿಯಲ್ಲಿ ಮಹೀಂದ್ರಾ ಎಕ್ಸ್ ಯುವಿ 400 ಇವಿ ಸದ್ಯ ಮೊದಲ ಸ್ಥಾನದಲ್ಲಿದೆ. ಹೊಸ ಇವಿ ಮಾದರಿಯನ್ನ ಮಹೀಂದ್ರಾ ಕಂಪನಿಯು ಈಗಾಗಲೇ ಅನಾವರಣಗೊಳಿಸಿದ್ದು, ಜನವರಿ ಮಧ್ಯಂತರದಲ್ಲಿ ಹೊಸ ಇವಿ ಕಾರಿನ ಬೆಲೆ ಮಾಹಿತಿ ಘೋಷಿಸಲಿದೆ. ಹೊಸ ಇವಿ ಕಾರಿನಲ್ಲಿ ಮಹೀಂದ್ರಾ ಕಂಪನಿಯು 39.4 ಕೆವಿಹೆಚ್ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 100 ಕೆವಿ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದೆ. ಈ ಮೂಲಕ ಹೊಸ ಎಕ್ಸ್ ಯುವಿ 400 ಕಾರು ಅತ್ಯುತ್ತಮ ಪರ್ಫಾಮೆನ್ಸ್ ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 456 ಕಿ.ಮೀ ಮೈಲೇಜ್ ನೀಡಲಿದೆ.
ಟಾಟಾ ಪಂಚ್ ಎಲೆಕ್ಟ್ರಿಕ್
2023ರಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಕಾರುಗಳಲ್ಲಿ ಟಾಟಾ ಪಂಚ್ ಎಲೆಕ್ಟ್ರಿಕ್ ಕೂಡಾ ಒಂದಾಗಿದೆ. ಹೊಸ ಪಂಚ್ ಇವಿ ಕಾರು ಟಿಯಾಗೋ ಇವಿ ಕಾರಿನಲ್ಲಿರುವಂತೆ ಎರಡು ಮಾದರಿಯ ಬ್ಯಾಟರಿ ಆಯ್ಕೆ ಹೊಂದಿರಲಿದ್ದು, ಇದರ ಆರಂಭಿಕ ಮಾದರಿಯು 19.2 ಕೆವಿಹೆಚ್ ಮತ್ತು ಟಾಪ್ ಎಂಡ್ ಮಾದರಿಯು 24 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರಲಿದೆ. ಈ ಮೂಲಕ ಇದು ಪ್ರತಿ ಚಾರ್ಜ್ ಗೆ ಇದು 280 ರಿಂದ 350 ಕಿ.ಮೀ ಮೈಲೇಜ್ ನೀಡಬಹುದಾಗಿದೆ. ಜೊತೆಗೆ ಹೊಸ ಕಾರು ಬೆಲೆಯಲ್ಲೂ ಗಮನಸೆಳೆಯಲಿದ್ದು, ಟಾಟಾ ಕಂಪನಿಗೆ ಇದು ಭರ್ಜರಿ ಬೇಡಿಕೆ ತಂದುಕೊಡುವ ನೀರಿಕ್ಷೆಯಿದೆ.
ಎಂಜಿ ಮೈಕ್ರೊ ಇವಿ
ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಮುಂಚೂಣಿಯಲ್ಲಿರುವ ಎಂಜಿ ಮೋಟಾರ್ ಕಂಪನಿಯು ಶೀಘ್ರದಲ್ಲಿ ಮತ್ತಷ್ಟು ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗ್ತಿದೆ. ಜೆಡ್ಎಸ್ ಇವಿ ಕಾರಿನ ನಂತರ ಈ ಬಾರಿ ಮೈಕ್ರೊ ಇವಿ ಬಿಡುಗಡೆಯ ಯೋಜನೆಯಲ್ಲಿದೆ. ಪರ್ಸನಲ್ ಮೊಲಿಬಿಟಿ ಉದ್ದೇಶಕ್ಕಾಗಿ ಹೊಸ ಇವಿ ಕಾರು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ನಗರಪ್ರದೇಶದಲ್ಲಿನ ಸಂಚಾರಕ್ಕೆ ಅನುಕೂಲಕರವಾಗುವಂತೆ ಪ್ರತಿ ಚಾರ್ಜ್ ಗೆ 150 ಕಿ.ಮೀ ಮೈಲೇಜ್ ನೀಡಬಹುದಾಗಿದೆ. ಹೀಗಾಗಿ ಇದು ರೂ. 7 ಲಕ್ಷದಿಂದ ರೂ.10 ಲಕ್ಷದೊಳಗೆ ಬಿಡುಗಡೆಯಾಗಬಹುದಾಗಿದೆ.
ಸಿಟ್ರನ್ ಇ ಸಿ3
ಬಹುನೀರಿಕ್ಷಿತ ಹೊಸ ಇವಿ ಕಾರು ಮಾದರಿಗಳಲ್ಲಿ ಸಿಟ್ರನ್ ಇ ಸಿ3 ಕೂಡಾ ಒಂದಾಗಿದೆ. ಬಜೆಟ್ ಇವಿ ಕಾರುಗಳ ಪಟ್ಟಿಯಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಹೊಸ ಇ ಸಿ3 ಕಾರು ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಹೊಸ ಇ ಸಿ3 ಕಾರು ಮಾದರಿಯು ಸಾಮಾನ್ಯ ಸಿ3 ಕಾರು ಮಾದರಿಯನ್ನು ಆಧರಿಸಿದ್ದು, ಹೊಸ ಕಾರು ಬಜೆಟ್ ಬೆಲೆಯೊಂದಿಗೆ ಪ್ರತಿ ಚಾರ್ಜ್ ಗೆ 300 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಹೊಸ ಇವಿ ಕಾರು ಮಾದರಿಯನ್ನು ಸಿಟ್ರನ್ ಕಂಪನಿಯು ಸಂಪೂರ್ಣವಾಗಿ ಭಾರತದಲ್ಲಿಯೇ ನಿರ್ಮಾಣ ಮಾಡಲಿದ್ದು, ಹೊಸ ಕಾರು ಭಾರತದಿಂದ ಪ್ರಮುಖ ಅಂತರ್ ರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತುಗೊಳಿಸುವ ಯೋಜನೆಯಲ್ಲಿದೆ.
Published On - 5:02 pm, Thu, 29 December 22