ವಿವಿಧ ಕಾರು ಮಾದರಿಗಳ ಮೂಲಕ ಹೊಸ ತಲೆಮಾರಿನ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ಮುಂಬರುವ ಕೆಲವೇ ದಿನಗಳಲ್ಲಿ ತನ್ನ ಹೊಸ ಕರ್ವ್ ಇವಿ ಕಾನ್ಸೆಪ್ಟ್ ಬಿಡುಗಡೆ ಮಾಡುವ ಸಿದ್ದತೆ ನಡೆಸಿದೆ. ಹೊಸ ಕರ್ವ್ ಕಾನ್ಸೆಪ್ಟ್ ಮಾದರಿಯನ್ನು ಮೊದಲ ಬಾರಿಗೆ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದ್ದ ಟಾಟಾ ಕಂಪನಿಯು ಇದೀಗ ಅಂತಿಮವಾಗಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಮೊದಲ ಹಂತದಲ್ಲಿ ಇವಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ.
ನೆಕ್ಸಾನ್ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಆಧರಿಸಿರುವ ಹೊಸ ಕರ್ವ್ ಕಾರು ಕೂಪೆ ಎಸ್ ಯುವಿ ವೈಶಿಷ್ಟ್ಯತೆ ಹೊಂದಿದ್ದು, ಇದು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಮಾತ್ರವಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲೂ ಮಾರುಕಟ್ಟೆ ಪ್ರವೇಶಿಸಲಿದೆ. ಇದರಲ್ಲಿ ಎಲೆಕ್ಟ್ರಿಕ್ ಮಾದರಿಯು ಮಾತ್ರ ಈ ವರ್ಷಾಂತ್ಯಕ್ಕೆ ಬಿಡುಗಡೆಯಾಗುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳು 2025ರ ಮಧ್ಯಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.
ಎಸ್ ಯುವಿ ಕಾರುಗಳ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿರುವ ಟಾಟಾ ಮೋಟಾರ್ಸ್ ಕಂಪನಿ ಮುಂಬರುವ ಕೆಲವೇ ತಿಂಗಳುಗಳ ಅಂತರದಲ್ಲಿ ಒಟ್ಟು ನಾಲ್ಕು ವಿನೂತನ ಕಾರುಗಳನ್ನು ರಸ್ತೆಗಿಳಿಸುವ ಯೋಜನೆಯಲ್ಲಿದ್ದು, ಇದರಲ್ಲಿ ಕರ್ವ್ ಕಾನ್ಸೆಪ್ಟ್ ಭಾರೀ ನೀರಿಕ್ಷೆ ಹುಟ್ಟುಹಾಕಿದೆ. ಹೊಸ ಇವಿ ಆವೃತ್ತಿಯು ಪ್ರತಿಚಾರ್ಜ್ ಗೆ 500 ಕಿ.ಮೀ ಗೂ ಅಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಆಯ್ಕೆ ಪಡೆದುಕೊಳ್ಳಲಿದ್ದು, ಇದು ಟಾಟಾ ಕಂಪನಿಯ ಎರಡನೇ ತಲೆಮಾರಿನ ಇವಿ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣವಾಗುತ್ತಿದೆ.
ಹೊಸ ಕರ್ವ್ ಇವಿಯಲ್ಲಿ ಟಾಟಾ ಮೋಟಾರ್ಸ್ ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಣೆ ಮಾಡುತ್ತಿದ್ದು, ಇದು ನೆಕ್ಸಾನ್ ಇವಿಗಿಂತಲೂ ಹೆಚ್ಚು ಐಷಾರಾಮಿ ಸೌಲಭ್ಯಗಳೊಂದಿಗೆ ತುಸು ದುಬಾರಿಯಾಗಿರಲಿದೆ. ಆದರೆ ವಿನೂತನ ಸೌಲಭ್ಯಗಳೊಂದಿಗೆ ಇದು ಎಂಜಿ ಜೆಡ್ಎಸ್ ಇವಿ ಮತ್ತು ಹ್ಯುಂಡೈ ಕೊನಾ ಇವಿ ಕಾರುಗಳಿಗೆ ಉತ್ತಮ ಪೈಪೋಟಿಯಾಗಲಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವಾರು ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.
ಇದರ ಜೊತೆಗೆ ಕರ್ವ್ ಸಾಮಾನ್ಯ ಮಾದರಿಯು ನೆಕ್ಸಾನ್ ಮಾದರಿಯಲ್ಲಿರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದ್ದು, ನೆಕ್ಸಾನ್ ಗಿಂತಲೂ ಇದರಲ್ಲಿ ಟ್ಯೂನ್ ಮಾಡಲಾದ ಎಂಜಿನ್ ಜೋಡಣೆ ಮಾಡಲಾಗುತ್ತಿದೆ. ಹೀಗಾಗಿ ಹೊಸ ಕಾರಿನ ಮೇಲೆ ಭಾರೀ ನೀರಿಕ್ಷೆಯಿಟ್ಟುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿ ವಾರ್ಷಿಕವಾಗಿ 50 ಸಾವಿರ ಯುನಿಟ್ ಮಾರಾಟ ಗುರಿಹೊಂದಿದೆ. ಈ ಮೂಲಕ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11 ಲಕ್ಷದಿಂದ ರೂ. 17 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.
Published On - 10:14 pm, Tue, 14 May 24