ಸಿಎನ್ಜಿ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ತನ್ನ ಹೊಸ ನೆಕ್ಸಾನ್ ಸಿಎನ್ಜಿ (Nexon CNG) ಆವೃತ್ತಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಕಾರು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಹೊಸ ಸಿಎನ್ಜಿ ಮಾದರಿಯು ಸಾಮಾನ್ಯ ಪೆಟ್ರೋಲ್ ಮಾದರಿಯನ್ನು ಆಧರಿಸಿ ಅಭಿವೃದ್ದಿಗೊಂಡಿದ್ದು, ಪೆಟ್ರೋಲ್ ಆವೃತ್ತಿಯ ಮಧ್ಯಂತರ ವೆರಿಯೆಂಟ್ ಗಳಲ್ಲಿ ಸಿಎನ್ಜಿ ಆಯ್ಕೆ ಪರಿಚಯಿಸಬಹುದಾಗಿದೆ.
ಸಿಎನ್ಜಿ ಆವೃತ್ತಿಯೊಂದಿಗೆ ನೆಕ್ಸಾನ್ ಕಾರು ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್ ಮತ್ತು ಸಿಎನ್ ಜಿ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಾಗುವ ಮೊದಲ ಕಾರು ಮಾದರಿಯಾಗಲಿದ್ದು, ಇದು ಕಂಪ್ಯಾಕ್ಟ್ ಎಸ್ ಯುವಿ ಖರೀದಿದಾರರಿಗೆ ಆಯ್ಕೆ ಹೆಚ್ಚಿಸಲಿದೆ. ಇದರೊಂದಿಗೆ ಹೊಸ ನೆಕ್ಸಾನ್ ಸಿಎನ್ಜಿ ಮಾದರಿಯು ಮೈಲೇಜ್ ವಿಚಾರವಾಗಿ ಮಾರುತಿ ಸುಜುಕಿ ಬ್ರೆಝಾ ಮಾದರಿಗೆ ಉತ್ತಮ ಪೈಪೋಟಿಯಾಗಲಿದ್ದು, ಬೆಲೆಯಲ್ಲೂ ಗಮನ ಸೆಳೆಯಲಿದೆ.
ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ಸುಧಾರಿತ ಐ ಸಿಎನ್ಜಿ ತಂತ್ರಜ್ಞಾನದೊಂದಿಗೆ ತನ್ನ ಪ್ರಮುಖ ಕಾರುಗಳಲ್ಲಿ ಅತ್ಯುತ್ತಮ ಇಂಧನ ದಕ್ಷತೆ ಜೊತೆಗೆ ಪರ್ಫಾಮೆನ್ಸ್ ನಲ್ಲಿ ಗಮನಸೆಳೆಯುತ್ತಿದ್ದು, ನೆಕ್ಸಾನ್ ಕೂಡಾ 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಐ ಸಿಎನ್ಜಿ ಮೂಲಕ ಪ್ರತಿ ಕೆಜಿಗೆ ಗರಿಷ್ಠ 25 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಹೊಸ ಸಿಟ್ರನ್ ಸಿ3 ಏರ್‌ಕ್ರಾಸ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ
ಇದರಲ್ಲದೆ ಟಾಟಾ ಹೊಸ ಸಿಎನ್ ಜಿ ಕಾರುಗಳಲ್ಲಿ ಪರಿಚಯಿಸಲಾಗಿರುವ ಟ್ವಿನ್ ಸಿಲಿಂಡರ್ ಸಿಎನ್ ಜಿ ಟ್ಯಾಂಕ್ ವೈಶಿಷ್ಟ್ಯತೆಯು ಗ್ರಾಹಕರನ್ನು ಸೆಳೆಯುತ್ತಿದ್ದು, ನೆಕ್ಸಾನ್ ಸಿಎನ್ಜಿಯಲ್ಲೂ ಟ್ವಿನ್ ಸಿಲಿಂಡರ್ ನೀಡಲಾಗಿದೆ. ಹೊಸ ವಿನ್ಯಾಸ ವೈಶಿಷ್ಟ್ಯತೆಯಿಂದಾಗಿ ಬೂಟ್ ಸ್ಪೆಸ್ ಹೆಚ್ಚಳವಾಗಿದ್ದು, ಸಾಮಾನ್ಯ ಕಾರುಗಳಂತೆ ಇದರಲ್ಲೂ ಕೂಡಾ ಹೆಚ್ಚಿನ ಮಟ್ಟದ ಲಗೇಜ್ ಕೊಂಡಯ್ಯಬಹುದಾಗಿದೆ.
ಸಾಮಾನ್ಯವಾಗಿ ಸಿಎನ್ ಜಿ ಕಾರುಗಳಲ್ಲಿ ಬೂಟ್ ಸ್ಪೆಸ್ ಸ್ಥಾನದಲ್ಲಿ ಸಿಎನ್ಜಿ ಟ್ಯಾಂಕ್ ನೀಡುವುದರಿಂದ ಹೆಚ್ಚಿನ ಲಗೇಜ್ ಇದ್ದಲ್ಲಿ ಸಾಧ್ಯವಾಗುವುದಿಲ್ಲ. ಈ ಕುರಿತಾಗಿ ಹಲವಾರು ಗ್ರಾಹಕರು ಅಸಮಾಧಾನ ಹೊಂದಿದ್ದು, ಗ್ರಾಹಕರ ಅಭಿಪ್ರಾಯಗಳನ್ನು ಆಧರಿಸಿ ಟಾಟಾ ಕಂಪನಿಯು ಸಿಂಗಲ್ ಸಿಲಿಂಡರ್ ಬದಲಾಗಿ ಟ್ವಿನ್ ಸಿಲಿಂಡರ್ ಟ್ಯಾಂಕ್ ನೀಡಿದೆ. ಇದು ಲಗೇಜ್ ಸ್ಥಳದಲ್ಲಿ ಸಾಮಾನ್ಯ ಕಾರುಗಳಂತೆಯೇ ಹೆಚ್ಚಿನ ಸ್ಥಳಾವಕಾಶ ನೀಡಲು ಸಾಧ್ಯವಾಗಿದ್ದು, ಇದಕ್ಕೆ ಗ್ರಾಹಕರು ಕೂಡಾ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಜೆಟ್ ಬೆಲೆಗೆ ಎಡಿಎಎಸ್ ಸೌಲಭ್ಯ ಹೊಂದಿರುವ ಕಾರುಗಳಿವು!
ಟ್ವಿನ್ ಸಿಲಿಂಡರ್ ಟ್ಯಾಂಕ್ ವಿನ್ಯಾಸ ವೈಶಿಷ್ಟ್ಯತೆಯನ್ನು ಈಗಾಗಲೇ ಟಿಗೋರ್, ಟಿಯಾಗೋ, ಪಂಚ್ ಮತ್ತು ಆಲ್ಟ್ರೊಜ್ ಸಿಎನ್ ಜಿ ಪರಿಚಯಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ನೆಕ್ಸಾನ್ ನಲ್ಲೂ ಹೊಸ ವೈಶಿಷ್ಟ್ಯತೆ ನೀಡಿದ್ದು, ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಇದರೊಂದಿಗೆ ಹೊಸ ಕಾರು ಪೆಟ್ರೋಲ್ ಮಾದರಿಗಿಂತಲೂ ರೂ. 90 ಸಾವಿರದಿಂದ ರೂ. 1.10 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಬಹುದಾಗಿದ್ದು, ಇದು ಈ ವರ್ಷದ ಮಧ್ಯಂತರದಲ್ಲಿ ಇಲ್ಲವೆ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಹೊಸ ಕಾರು ಭಾರತ್ ಮೊಬಿಲಿಟಿ ಎಕ್ಸ್ ಪೋದಲ್ಲಿ ಅನಾವರಣಗೊಳ್ಳುತ್ತಿದ್ದು, ಇದು ಮಾರುತಿ ಸುಜುಕಿ ಬ್ರೆಝಾ ಮತ್ತು ಫ್ರಾಂಕ್ಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ.
Published On - 10:20 pm, Wed, 31 January 24