3ನೇ ಬಾರಿಗೆ ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕಾರ: ಭಾರತದತ್ತ ಕಣ್ಣೀಟ್ಟ ಟೆಸ್ಲಾ ಅಧ್ಯಕ್ಷ
ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ಅಧಿಕಾರ ಸ್ವೀಕರಿಸಿದ್ದಾರೆ. ನರೇಂದ್ರ ಮೋದಿ ಪುನಾರಾಯ್ಕೆಗೆ ದೇಶ-ವಿದೇಶಗಳ ಗಣ್ಯರು ಶುಭ ಹಾರೈಸಿದ್ದು, ಅಮೆರಿಕದ ಎಲೆಕ್ಟ್ರಿಕ್ ವಾಹನ ದಿಗ್ಗಜ ಕಂಪನಿಯಾಗಿರುವ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಕೂಡಾ ವಿಶೇಷ ಅಭಿನಂದನೆ ಸಲ್ಲಿಸುವ ಮೂಲಕ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸುವ ಸುಳಿವು ನೀಡಿದ್ದಾರೆ.
ಭಾರತದಲ್ಲಿ ಕಳೆದ ಕೆಲ ವರ್ಷಗಳಿಂದ ಎಲೆಕ್ಟ್ರಿಕ್ ವಾಹನಗಳ (Electric Vehicles) ಬಿಡುಗಡೆಯ ಕುರಿತಾಗಿ ಹಲವಾರು ಬಾರಿ ಸುದ್ದಿಯಾಗಿದ್ದ ಅಮೆರಿಕದ ದೈತ್ಯ ಕಂಪನಿ ಟೆಸ್ಲಾ (Tesla) ಇದೀಗ ಅಧಿಕೃತವಾಗಿ ಉದ್ಯಮ ವ್ಯವಹಾರ ಆರಂಭಿಸುವ ಸುಳಿವು ನೀಡಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿದ್ದಂತೆ ವಿಶೇಷ ಅಭಿನಂದನೆ ಸಲ್ಲಿಸುವ ಮೂಲಕ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸುವ ಕುರಿತಾಗಿ ಟೆಸ್ಲಾ ಸಿಇಓ ಎಲಾನ್ ಮಸ್ಕ್ ಸುಳಿವು ಕೊಟ್ಟಿದ್ದಾರೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಚುನಾವಣೆಯಲ್ಲಿ ವಿಜಯ ಸಾಧಿಸಿದಕ್ಕೆ ನಿಮಗೆ ಅಭಿನಂದನೆ ಎಂದಿರುವ ಎಲಾನ್ ಮಸ್ಕ್ ಅವರು ಭಾರತದಲ್ಲಿ ಟೆಸ್ಲಾ ಕಂಪನಿಯು ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ ಅಂತಾ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಕೂಡಾ ಧನ್ಯವಾದಗಳನ್ನು ತಿಳಿಸಿದ್ದಾರೆ. ಹೀಗಾಗಿ ಮುಂಬರುವ ಕೆಲವೇ ದಿನಗಳಲ್ಲಿ ಟೆಸ್ಲಾ ಕಂಪನಿಯು ಹೊಸ ಬದಲಾವಣೆಗಳೊಂದಿಗೆ ಭಾರತ ಪ್ರವೇಶಿಸುವುದು ಬಹುತೇಕ ಖಚಿತವಾಗಿದ್ದು, ಈ ಮೂಲಕ ಹೊಸ ಅಧ್ಯಾಯ ಆರಂಭಿಸಲಿದೆ.
ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆಗಾಗಿ ಈಗಾಗಲೇ ಹಲವು ಬಾರಿ ಪ್ರಯತ್ನಿಸಿ ಹಿಂದೆ ಸರಿದಿದ್ದ ಟೆಸ್ಲಾ ಕಂಪನಿಯು ಈ ಬಾರಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜೊತೆಗೆ ಇವಿ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದೆ. ಹೊಸ ಯೋಜನೆಗಾಗಿ ಕಂಪನಿಯು ಆರಂಭಿಕ ಬಂಡವಾಳವಾಗಿ ಬರೋಬ್ಬರಿ 2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುತ್ತಿದ್ದು, ಶೀಘ್ರದಲ್ಲಿಯೇ ಹೊಸ ಹೂಡಿಕೆ ಕುರಿತಾಗಿ ಅಧಿಕೃತ ಮಾಹಿತಿ ಹೊರಬಿಳಲಿದೆ.
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!
ಹೊಸ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕ ಸ್ಥಾಪನೆಗಾಗಿ ಈಗಾಗಲೇ ಟೆಸ್ಲಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು ಸೂಕ್ತವಾದ ಸೌಲಭ್ಯಗಳನ್ನು ಒಳಗೊಂಡ ಸ್ಥಳ ಹುಡುಕಾಟ ನಡೆಸುತ್ತಿದ್ದು, ಇದಕ್ಕಾಗಿ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯ ಸರ್ಕಾರಗಳೊಂದಿಗೆ ವಿವಿಧ ಹಂತದ ಮಾತುಕತೆಗಳು ಕೂಡಾ ನಡೆದಿವೆ ಎನ್ನಲಾಗಿದೆ.
ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಮಾರುಕಟ್ಟೆ ಹೊಂದಿರುವ ಭಾರತದಲ್ಲಿ ಇವಿ ಪರಿಚಯಿಸುವ ಯೋಜನೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿರುವ ಟೆಸ್ಲಾದ ಸಿಇಒ ಎಲಾನ್ ಮಸ್ಕ್ ಹೊಸ ಬದಲಾವಣೆಯ ಸುಳಿವು ನೀಡಿದ್ದಾರೆ. ಹೀಗಾಗಿ ಮುಂದಿನ ಕೆಲವೇ ದಿನಗಳಲ್ಲಿ ಟೆಸ್ಲಾ ಇವಿ ಕಾರುಗಳು ಭಾರತದಲ್ಲಿ ಉತ್ಪಾದನೆಯಾಗುವ ಎಲ್ಲಾ ಸಾಧ್ಯತೆಗಳಿದ್ದು, ಇದು ಚೈನಾ ಮೂಲದ ಹಲವು ಇವಿ ಕಾರು ಕಂಪನಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.
ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!
ಇನ್ನು ಭಾರತವನ್ನು ಇವಿ ವಾಹನಗಳ ಉತ್ಪಾದನೆಯ ಪ್ರಮುಖ ತಾಣವಾಗಿಸುವ ಉದ್ದೇಶದಿಂದ ಹೊಸ ಇವಿ ನೀತಿ ಘೋಷಿಸಿರುವ ಕೇಂದ್ರ ಸರ್ಕಾರವು ಆಮದು ಸುಂಕದಲ್ಲಿ ವಿನಾಯ್ತಿ ನೀಡುತ್ತಿದೆ. ಇದರ ಬೆನ್ನಲ್ಲೇ ಟೆಸ್ಲಾ ಕಂಪನಿ ಭಾರತದಲ್ಲಿ ಹೂಡಿಕೆಗೆ ಸಜ್ಜಾಗುತ್ತಿದ್ದು, ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
Published On - 5:44 pm, Mon, 10 June 24