ಭಾರತದಲ್ಲಿ ಪ್ರೀಮಿಯಂ ಕಾರುಗಳ ಮೂಲಕ ತನ್ನದೇ ಆದ ಗ್ರಾಹಕ ವರ್ಗವನ್ನು ಹೊಂದಿರುವ ಟೊಯೊಟಾ (Toyota) ಕಂಪನಿಯು ಬಜೆಟ್ ಕಾರುಗಳ ಮಾರಾಟಕ್ಕಾಗಿ ಮಾರುತಿ ಸುಜುಕಿ ಜೊತೆಗೂಡಿ ಪ್ರಮುಖ ಕಾರು ಮಾದರಿಗಳ ರೀಬ್ಯಾಡ್ಜ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದೆ. ರೀಬ್ಯಾಡ್ಜ್ ಕಾರುಗಳ ಮಾರಾಟದಲ್ಲಿ ಹೆಚ್ಚಿನ ಬೇಡಿಕೆಯಿಂದಾಗಿ ಇದೀಗ ಮತ್ತೊಂದು ಬಹುನೀರಿಕ್ಷಿತ ಕಾರನ್ನು ಪರಿಚಯಿಸಲು ಸಜ್ಜಾಗಿದ್ದು, ಇದು ಮಾರುತಿ ಸುಜುಕಿಯ ಫ್ರಾಂಕ್ಸ್ ಕಾರು ಆಧರಿಸಿ ಬಿಡುಗಡೆಯಾಗಲಿದೆ. ಹೊಸ ಕಾರು ಮುಂದಿನ ತಿಂಗಳು 11ರಂದು ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಹೊಸ ಕಾರು ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಯುತ್ತಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಪ್ರಮುಖ ಕಾರುಗಳನ್ನು ಆಧರಿಸಿ ಗ್ಲಾಂಝಾ, ಅರ್ಬನ್ ಕ್ರೂಸರ್, ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ರೂಮಿಯಾನ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಕಂಪ್ಯಾಕ್ಟ್ ಎಸ್ ಯುವಿ ವಿಭಾಗಕ್ಕಾಗಿ ಟೈಸರ್ ಕಾರನ್ನು ಪರಿಚಯಿಸುತ್ತಿದೆ.
ಟೊಯೊಟಾ ಹೊಸ ಟೈಸರ್ ಕಾರು ತಾಂತ್ರಿಕವಾಗಿ ಫ್ರಾಂಕ್ಸ್ ಕಾರು ಮಾದರಿಯನ್ನೇ ಆಧರಿಸಿದ್ದು, ಎರಡು ಕಾರುಗಳನ್ನು ಪ್ರತ್ಯೇಕಿಸಲು ವಿನ್ಯಾಸ ಕೆಲವು ಬದಲಾವಣೆಗಳನ್ನು ತರಲಾಗಿದೆ. ಹೀಗಾಗಿ ಹೊಸ ಕಾರಿನಲ್ಲಿ ಫ್ರಾಂಕ್ಸ್ ಕಾರಿನಲ್ಲಿರುಂತೆ 1.0 ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.2 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಆಯ್ಕೆ ಮುಂದುವರೆಸಲಿದೆ. ಜೊತೆಗೆ ಇದು ಫ್ರಾಂಕ್ಸ್ ನಲ್ಲಿರುವಂತೆಯೇ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳನ್ನು ಪಡೆದುಕೊಳ್ಳಲಿದ್ದು, ಕೆಲವು ಹೆಚ್ಚುವರಿ ಪ್ರೀಮಿಯಂ ಫೀಚರ್ಸ್ ಹೊಂದಿರಬಹುದಾಗಿದೆ.
ಇನ್ನು ಗ್ರ್ಯಾಂಡ್ ವಿಟಾರಾ ಮತ್ತು ಬಲೆನೊ ಕಾರಿನ ವಿನ್ಯಾಸ ಆಧರಿಸಿ ಅಭಿವೃದ್ದಿಗೊಂಡಿದೆ ಹೊಸ ಫ್ರಾಂಕ್ಸ್ ಕಾರು ಸದ್ಯ ಕಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಈ ಮೂಲಕ ಇದು ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ನಿಸ್ಸಾನ್ ಮ್ಯಾಗ್ನೈಟ್ ಕಾರುಗಳಿಗೆ ಉತ್ತಮ ಪ್ರತಿಸ್ಪರ್ಧಿಯಾಗಿ ಮಾರಾಟಗೊಳ್ಳುತ್ತಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 7.51 ಲಕ್ಷದಿಂದ ರೂ. 13.03 ಲಕ್ಷ ಎಕ್ಸ್ ಶೋರೂಂ ಬೆಲೆ ಹೊಂದಿರಲಿದೆ.
ಇದೀಗ ಫ್ರಾಂಕ್ಸ್ ಆಧರಿಸಿ ನಿರ್ಮಾಣವಾಗುತ್ತಿರುವ ಟೈಸರ್ ಕಾರು ಕೆಲವು ಹೊಸ ಫೀಚರ್ಸ್ ಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಇದು ಫ್ರಾಂಕ್ಸ್ ಕಾರಿಗಿಂತಲೂ ರೂ. 30 ಸಾವಿರದಿಂದ ರೂ. 50 ಸಾವಿರದಷ್ಟು ಹೆಚ್ಚುವರಿ ಬೆಲೆಯೊಂದಿಗೆ ಮಾರಾಟಗೊಳ್ಳಬಹುದಾಗಿದೆ.