ಹೊಸ ಕಾರುಗಳಲ್ಲಿ ಮತ್ತೊಂದು ಕಡ್ಡಾಯ ಸೇಫ್ಟಿ ಫೀಚರ್ಸ್ ಜಾರಿಗೆ ಮುಂದಾದ ಕೇಂದ್ರ ಸರ್ಕಾರ

|

Updated on: Mar 17, 2024 | 7:39 PM

ಹೊಸ ಕಾರುಗಳ ಉತ್ಪಾದನೆಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವ ಭಾರತದಲ್ಲಿ ಇದೀಗ ಪ್ರಯಾಣಿಕರ ಸುರಕ್ಷತೆಗಾಗಿ ಹಲವಾರು ಬದಲಾವಣೆಗಳನ್ನು ತರಲಾಗುತ್ತಿದ್ದು, ಪ್ರಯಾಣಿಕರ ಕಾರು ಮಾದರಿಗಾಗಿ ಮತ್ತೊಂದು ಸುರಕ್ಷಾ ಸಾಧನದ ಅಳವಡಿಕೆಯನ್ನು ಕಡ್ಡಾಯ ಮಾಡಲಾಗುತ್ತಿದೆ.

ಹೊಸ ಕಾರುಗಳಲ್ಲಿ ಮತ್ತೊಂದು ಕಡ್ಡಾಯ ಸೇಫ್ಟಿ ಫೀಚರ್ಸ್ ಜಾರಿಗೆ ಮುಂದಾದ ಕೇಂದ್ರ ಸರ್ಕಾರ
ಹೊಸ ಕಾರುಗಳಲ್ಲಿ ಮತ್ತೊಂದು ಕಡ್ಡಾಯ ಸೇಫ್ಟಿ ಫೀಚರ್ಸ್ ಜಾರಿಗೆ ಮುಂದಾದ ಕೇಂದ್ರ ಸರ್ಕಾರ
Follow us on

ಪ್ರಯಾಣಿಕರ ಕಾರುಗಳ (Passenger Cars) ಉತ್ಪಾದನೆಯಲ್ಲಿ ಜಪಾನ್ ಹಿಂದಿಕ್ಕುವ ಮೂಲಕ ಸದ್ಯ 3ನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿರುವ ಭಾರತದಲ್ಲಿ ಗುಣಮಟ್ಟ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ತಗ್ಗಿಸಲು ಮತ್ತು ಅಪಘಾತದ ತೀವ್ರತೆಯನ್ನು ತಡೆದು ಪ್ರಾಣಹಾನಿ ಕಡಿಮೆಗೊಳಿಸುವ ನಿಟ್ಟಿನಲ್ಲಿ ವಾಹನಗಳ ಸುರಕ್ಷತೆಯನ್ನು ಹಂತ-ಹಂತವಾಗಿ ಉನ್ನತೀಕರಿಸಲಾಗುತ್ತಿದೆ.

ಭಾರತದಲ್ಲಿ ಕಳೆದ ಐದಾರು ವರ್ಷಗಳಿಂದ ಹೊಸ ಕಾರುಗಳಲ್ಲಿನ ಸುರಕ್ಷಾ ಸೌಲಭ್ಯಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಹಿಂದೆಂದೂ ಕಾಣದ ಹಲವಾರು ಬದಲಾವಣೆಗಳಾಗಿವೆ. 2017ರಲ್ಲಿ ಪರಿಚಯಿಸಲಾದ ಬಿಎಸ್ 3 ಮಾಲಿನ್ಯ ನಿಯಂತ್ರಣ ಮಾನದಂಡಗಳ ಜಾರಿ ನಂತರ ಕಾರುಗಳ ಸುರಕ್ಷತೆಯಲ್ಲಿ ಹೊಸ ಪರ್ವವೇ ಆರಂಭವಾಗಿದ್ದು, ಇದೀಗ ಬಿಎಸ್ 6 2ನೇ ಹಂತದವರೆಗೆ ಹೊಸ ಕಾರುಗಳಲ್ಲಿ ಹಲವಾರು ಕಡ್ಡಾಯ ಸುರಕ್ಷಾ ಫೀಚರ್ಸ್ ಗಳನ್ನು ನೀಡಲಾಗುತ್ತಿದೆ.

ರಸ್ತೆ ಅಪಘಾತಗಳಲ್ಲಿನ ಪ್ರಾಣಹಾನಿ ಸಂಖ್ಯೆ ಮತ್ತು ಕಾರಣಗಳನ್ನು ಆಧರಿಸಿ ಇದೀಗ ಮತ್ತೊಂದು ಕಡ್ಡಾಯ ಸುರಕ್ಷಾ ಸೌಲಭ್ಯವನ್ನು ಜಾರಿಗೆ ತರಲಾಗುತ್ತಿದ್ದು, ಮುಂಬರುವ 2025ರ ಏಪ್ರಿಲ್ 1ರಿಂದ ಪ್ರತಿಯೊಂದು ಕಾರಿನಲ್ಲೂ ಹಿಂಬದಿನ ಆಸನಗಳಲ್ಲಿ ಸೀಟ್ ಬೆಲ್ಟ್ ಅಲಾರಾಂ ಜೋಡಣೆಯಾಗಲಿದೆ. ಹಿಂಬದಿಯ ಆಸನದಲ್ಲಿನ ಸೀಟ್ ಬೆಲ್ಟ್ ಅಲಾರಂ ಸೌಲಭ್ಯವು ಈಗಾಗಲೇ ಹಲವಾರು ಹೈ ಎಂಡ್ ಕಾರುಗಳಲ್ಲಿ ಜೋಡಣೆ ಮಾಡಲಾಗುತ್ತಿದ್ದು, ಇನ್ಮುಂದೆ ಅದು ಎಲ್ಲಾ ಮಾದರಿಯ ಕಾರುಗಳಲ್ಲೂ ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ.

ಇದನ್ನೂ ಓದಿ: ಮೊದಲ ಬಾರಿ ಹೊಸ ಕಾರು ಖರೀದಿಸುತ್ತಿದ್ದೀರಾ? ಈ ವಿಚಾರಗಳು ತಪ್ಪದೇ ತಿಳಿದಿರಲಿ..

ಹಿಂಬದಿಯ ಸೀಟ್ ಬೆಲ್ಟ್ ಅಲಾರಂ ಸೌಲಭ್ಯವು ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಧರಿಸಿರುವುದನ್ನು ಖಚಿತಪಡಿಸಲಿದ್ದು, ಸೀಟ್ ಬೆಲ್ಟ್ ಧರಿಸದೇ ಇದ್ದಲ್ಲಿ ಅಲಾರಂ ಮೂಲಕ ಎಚ್ಚರಿಸುತ್ತದೆ. ಹೀಗಾಗಿ ಹೊಸ ಸುರಕ್ಷಾ ಸೌಲಭ್ಯವು ಅಪಘಾತಗಳ ತೀವ್ರತೆಯನ್ನು ತಗ್ಗಿಸುವ ಮೂಲಕ ಸಾವು ನೋವಿನ ಪ್ರಮಾಣವನ್ನು ತಗ್ಗಿಸಲು ನೇರವಾಗಲಿದೆ ಎಂದು ನೀರಿಕ್ಷಸಲಾಗಿದೆ.

ಹೊಸ ಸುರಕ್ಷಾ ಸೌಲಭ್ಯವನ್ನು ಜಾರಿಗೊಳಿಸಿದ ನಂತರ ಪ್ರಯಾಣಿಕರು ಕಡ್ಡಾಯವಾಗಿ ಪಾಲನೆ ಮಾಡಬೇಕಿದ್ದು, ಸೀಟ್ ಬೆಲ್ಟ್ ಧರಿಸದ ಪ್ರಯಾಣಿಕರಿಗೆ ರೂ. 1 ಸಾವಿರ ತನಕ ದಂಡ ವಿಧಿಸುವ ಬಗ್ಗೆ ಸುಳಿವು ನೀಡಲಾಗಿದೆ. ಇದಕ್ಕಾಗಿ ಮೋಟಾರ್ ವಾಹನ ಕಾಯ್ದೆಯಲ್ಲಿ ತಿದ್ದುಪಡಿ ಸಹ ತರಲಾಗಿದ್ದು, ಈ ಮೂಲಕ ಇದು ಅಪಘಾತಗಳ ತೀವ್ರತೆ ತಡೆಯವಲ್ಲಿ ಸಾಕಷ್ಟು ಸಹಕಾರಿಯಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಕಡಿಮೆ ಬೆಲೆಗೆ 6 ಏರ್‌ಬ್ಯಾಗ್‌ ಗಳ ಸುರಕ್ಷತೆ ಹೊಂದಿರುವ ಕಾರುಗಳು!

ಇನ್ನು ಭಾರತದಲ್ಲಿ ಪ್ರತಿ ಗಂಟೆಗೆ ದೇಶಾದ್ಯಂತ ಬರೋಬ್ಬರಿ 19 ಮಂದಿ ಅಪಘಾತದಲ್ಲಿ ಪ್ರಾಣಕಳೆದುಕೊಳ್ಳುತ್ತಿದ್ದು, ಕಳೆದ ವರ್ಷ ಬರೋಬ್ಬರಿ 1,68,491 ಜನ ಪ್ರಾಣಕಳೆದುಕೊಂಡಿದ್ದಾರೆ. ಹೀಗಾಗಿ ರಸ್ತೆ ಸುರಕ್ಷತೆಯಲ್ಲಿ ಸಮಗ್ರ ಸುಧಾರಣೆ ತರಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಸುರಕ್ಷಾ ಫೀಚರ್ಸ್ ಗಳನ್ನು ಎಂಟ್ರಿ ಲೆವಲ್ ಕಾರುಗಳಿಗೂ ಅನ್ವಯಿಸುವಂತೆ ಜಾರಿಗೆ ತರಲಾಗುತ್ತಿದೆ.

Published On - 7:37 pm, Sun, 17 March 24