ದೀಪಾವಳಿಗೆ ಬಿಡುಗಡೆಯಾಗಲಿವೆ ಭರ್ಜರಿ ಫೀಚರ್ಸ್ ಹೊಂದಿರುವ ಟಾಪ್ 5 ಹೊಸ ಕಾರುಗಳು!

|

Updated on: Aug 26, 2024 | 5:43 PM

ಭಾರತದಲ್ಲಿ ಹೊಸ ಕಾರುಗಳ ಖರೀದಿಗೆ ಭರ್ಜರಿ ಬೇಡಿಕೆ ಹರಿದುಬರುತ್ತಿದ್ದು, ಮುಂಬರುವ ದೀಪಾವಳಿ ಹಬ್ಬದ ಹೊತ್ತಿಗೆ ವಿವಿಧ ಕಾರು ಕಂಪನಿಗಳು ತಮ್ಮ ಬಹುನೀರಿಕ್ಷಿತ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ.

ದೀಪಾವಳಿಗೆ ಬಿಡುಗಡೆಯಾಗಲಿವೆ ಭರ್ಜರಿ ಫೀಚರ್ಸ್ ಹೊಂದಿರುವ ಟಾಪ್ 5 ಹೊಸ ಕಾರುಗಳು!
ಬಿಡುಗಡೆಯಾಗಲಿವೆ ಭರ್ಜರಿ ಫೀಚರ್ಸ್ ಹೊಂದಿರುವ ಹೊಸ ಕಾರುಗಳು!
Follow us on

ಭಾರತೀಯ ಗ್ರಾಹಕರು ಹೆಚ್ಚಾಗಿ ಹಬ್ಬದ ದಿನಗಳಲ್ಲಿ ಹೊಸ ವಾಹನಗಳ (New Vehicles) ಖರೀದಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇದೇ ಕಾರಣಕ್ಕೆ ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಯುಗಾದಿ, ದಸರಾ, ದೀಪಾವಳಿ ಸಂದರ್ಭದಲ್ಲಿಯೇ ಹೆಚ್ಚಾಗಿ ಹೊಸ ಕಾರುಗಳು, ಬೈಕ್ ಗಳು ಮತ್ತು ಇತರೆ ವಾಣಿಜ್ಯ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ಇದೀಗ ಮುಂಬರುವ ದೀಪಾವಳಿ ಹೊತ್ತಿಗೆ ವಿವಿಧ ಕಾರು ಉತ್ಪಾದನಾ ಕಂಪನಿಗಳು ತಮ್ಮ ಬಹುನೀರಿಕ್ಷಿತ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಟಾಟಾ ಕರ್ವ್

ಟಾಟಾ ಮೋಟಾರ್ಸ್ ಕಂಪನಿಯು ಕರ್ವ್ ಕೂಪೆ ಎಸ್ ಯುವಿ ಮಾದರಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದು, ಹೊಸ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ. ಹೊಸ ಕಾರು ಮುಂದಿನ ತಿಂಗಳು ಸೆಪ್ಟೆಂಬರ್ 2ರಂದು ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಇದು 1.5 ಲೀಟರ್ ಡೀಸೆಲ್ ಎಂಜಿನ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 125 ಹಾರ್ಸ್ ಪವರ್ ಪ್ರೇರಿತ 1.2 ಲೀಟರ್ ಡೈರೆಕ್ಟ್ ಇಂಜೆಕ್ಷನ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರಲಿದೆ. ಕರ್ವ್ ನಲ್ಲಿ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ನೀಡಲಾಗಿದ್ದು, ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 10 ಲಕ್ಷದಿಂದ ರೂ. 18 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿವೆ.

ಎಂಜಿ ವಿಂಡ್ಸರ್ ಎಲೆಕ್ಟ್ರಿಕ್

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಜೆಡ್ಎಸ್ ಇವಿ ಮತ್ತು ಕಾಮೆಟ್ ಇವಿ ನಡುವಿನ ಸ್ಥಾನದಲ್ಲಿ ಬಿಡುಗಡೆಯಾಗಲಿರುವ ಎಂಜಿ ಹೊಸ ವಿಂಡ್ಸರ್ ಇವಿ ಕಾರು ಸೆಪ್ಟೆಂಬರ್ 11ರಂದು ಅಧಿಕೃತವಾಗಿ ಬಿಡುಗಡೆಯಾಗುವ ಸುಳಿವು ನೀಡಿದೆ. ವಿವಿಧ ಗಾತ್ರದ ಬ್ಯಾಟರಿ ಆಯ್ಕೆಗಳನ್ನು ಪಡೆದುಕೊಳ್ಳಲಿರುವ ಹೊಸ ಕಾರು ಪ್ರತಿ ಚಾರ್ಜ್ ಗೆ ಗರಿಷ್ಠ 460 ಕಿ.ಮೀ ಮೈಲೇಜ್ ನೀಡಬಹುದಾಗಿದ್ದು, ಗರಿಷ್ಠ ಸುರಕ್ಷತೆಗಾಗಿ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್ ನೀಡಲಾಗಿದೆ. ಈ ಮೂಲಕ ಇದು ರೂ. 16 ಲಕ್ಷದಿಂದ ರೂ. 20 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದು, ಬೆಲೆ ವಿಚಾರವಾಗಿ ಇದು ಬಿವೈಡಿ ಇ6 ಎಂಪಿವಿ ಮತ್ತು ಟಾಟಾ ಕರ್ವ್ ಇವಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!

ಹ್ಯುಂಡೈ ಅಲ್ಕಾಜರ್ ಫೇಸ್ ಲಿಫ್ಟ್

ಹ್ಯುಂಡೈ ಕಂಪನಿಯು ಕ್ರೆಟಾ ಫೇಸ್ ಲಿಫ್ಟ್ ನಲ್ಲಿ ಪರಿಚಯಿಸಲಾದ ಹೊಸ ಬದಲಾವಣೆಗಳನ್ನು ಇದೀಗ ಅಲ್ಕಾಜರ್ ಫೇಸ್ ಲಿಫ್ಟ್ ಪರಿಚಯಿಸುವುದಕ್ಕೆ ಮುಂದಾಗಿದೆ. ಅಲ್ಕಾಜರ್ ಫೇಸ್ ಲಿಫ್ಟ್ ಮಾದರಿಯು ಮುಂದಿನ ತಿಂಗಳು 5ರಂದು ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಇದು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ ಹೊಂದಿರಲಿದೆ. ಇದು 7 ಸೀಟರ್ ಎಸ್ ಯುವಿ ಇಷ್ಟಪಡುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದ್ದು, ಹೊಸ ಕಾರು ಖರೀದಿಗಾಗಿ ಈಗಾಗಲೇ ಅಧಿಕೃತ ಬುಕಿಂಗ್ ಸಹ ಆರಂಭವಾಗಿದೆ.

ಟಾಟಾ ನೆಕ್ಸಾನ್ ಸಿಎನ್​ಜಿ

ನೆಕ್ಸಾನ್ ಕಾರು ಮಾದರಿಯನ್ನು ಸದ್ಯ ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಮಾರಾಟ ಮಾಡುತ್ತಿರುವ ಟಾಟಾ ಕಂಪನಿಯು ಇದೀಗ ಸಿಎನ್​ಜಿ ಮಾದರಿಯಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಮಾದರಿಯು ಮುಂಬರುವ ದೀಪಾವಳಿ ಹೊತ್ತಿಗೆ ಅಧಿಕೃತವಾಗಿ ಬಿಡುಗಡೆಯಾಗಬಹುದಾಗಿದೆ. ಹೊಸ ನೆಕ್ಸಾನ್ ಸಿಎನ್​ಜಿ ಮಾದರಿಯು 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ ಐ ಸಿಎನ್​ಜಿ ತಂತ್ರಜ್ಞಾನ ಹೊಂದಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಗೆ ಆಟೋಮ್ಯಾಟಿಕ್ ಮಾದರಿಯಲ್ಲೂ ಸಹ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಈ ಮೂಲಕ ಇದು ಪ್ರತಿ ಕೆಜಿ ಸಿಎನ್ ಜಿಗೆ ಗರಿಷ್ಠ 25 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಧ್ಯತೆಗಳಿದ್ದು, ಪೆಟ್ರೋಲ್ ಮಾದರಿಗಿಂತಲೂ ರೂ. 90 ಸಾವಿರದಿಂದ ರೂ. 1.10 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಬಹುದಾಗಿದೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಹೇಗೆಲ್ಲಾ ಮೋಸ ಮಾಡ್ತಾರೆ ನೋಡಿ..

2024ರ ಕಿಯಾ ಕಾರ್ನಿವಾಲ್

ಕಿಯಾ ಕಂಪನಿಯು ಭಾರತದಲ್ಲಿ ಸುಧಾರಿತ ತಂತ್ರಜ್ಞಾನ ಮತ್ತು ಹೊಸ ಎಂಜಿನ್ ಆಯ್ಕೆಯ 2024ರ ಕಾರ್ನಿವಾಲ್ ಎಂಪಿವಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ. ಇದು ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಇದು ಐಷಾರಾಮಿ ಫೀಚರ್ಸ್ ಗಳೊಂದಿಗೆ 7 ಸೀಟರ್ ಮತ್ತು 9 ಸೀಟರ್ ಆಯ್ಕೆಯಲ್ಲಿ ಬಿಡುಗಡೆಯಾಗಬಹುದಾಗಿದೆ. ಹೊಸ ಬದಲಾವಣೆಗಳ ನಂತರ ಕಾರ್ನಿವಾಲ್ ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗಲಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 40 ಲಕ್ಷದಿಂದ ರೂ. 50 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.