ನವದೆಹಲಿ, ಆಗಸ್ಟ್ 29: ಎಲೆಕ್ಟ್ರಿಕ್ ಮತ್ತು ಪರ್ಯಾಯ ಇಂಧನದಿಂದ ಚಾಲಿತವಾಗುವ ವಾಹನಗಳ (Vehicles Run by Alternative Fuel) ಅಭಿವೃದ್ಧಿಗೆ ಕೇಂದ್ರ ಸರ್ಕಾರ ಆದ್ಯತೆ ಕೊಟ್ಟಿರುವ ಹೊತ್ತಿನಲ್ಲೇ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಸಂಸ್ಥೆಯ ಜನಪ್ರಿಯ ಇನ್ನೋವಾ ಕಾರಿನ ಹೊಸ ಆವೃತ್ತಿ ಬಿಡುಗಡೆ ಆಗಿದೆ. ಎಥನಾಲ್ ಇಂಧನದಿಂದ ಕಾರ್ಯನಿರ್ವಹಿಸುವ ವಿಶ್ವದ ಮೊದಲ ಕಾರು ಇದಾಗಿದೆ. ಟೊಯೊಟಾ ಇನ್ನೊವಾದ ಈ ಹೊಸ ಆವೃತ್ತಿಯ ಕಾರನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಆಗಸ್ಟ್ 29ರಂದು ಬಿಡುಗಡೆ ಮಾಡಿದರು. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಟೊಯೋಟಾ ಇನ್ನೋವಾದ ಈ ಹೊಸ ಆವೃತ್ತಿಯು ಬಿಎಸ್-6 (ಸ್ಟೇಜ್ 2) ಹಂತದ ಕಾರಾಗಿದ್ದು, ಅದರ ಪ್ರೋಟೋಟೈಪ್ ಅನ್ನು ಸಿದ್ಧಪಡಿಸಲಾಗಿದೆ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ ಇದು ವಿಶ್ವದ ಮೊದಲ ಬಿಎಸ್-6 ಶ್ರೇಣಿಯ ವಿದ್ಯುದೀಕೃತ ಫ್ಲೆಕ್ಸ್ ಫುಯೆಲ್ ವಾಹನವಾಗಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪರಿಸರಸ್ನೇಹಿಯಾಗಿರುವ ಮತ್ತು ಕಡಿಮೆ ಇಂಗಾಲ ಹೊರಸೂಸುವ ಪರ್ಯಾಯ ಇಂಧನ ಬಳಸುವ ವಾಹನಗಳನ್ನು ಅಭಿವೃದ್ಧಿಪಡಿಸುವಂತೆ ಕಾರುತಯಾರಕ ಸಂಸ್ಥೆಗಳಿಗೆ ಉತ್ತೇಜನ ನೀಡುತ್ತಾ ಬಂದಿದ್ದಾರೆ. ಕಳೆದ ವರ್ಷ ಇದೇ ಟೊಯೊಟಾ ಕಂಪನಿಯ ಮಿರಾಯ್ ಎವಿ ಕಾರನ್ನು ನಿತಿನ್ ಗಡ್ಕರಿ ಅನಾವರಣಗೊಳಿಸಿದ್ದರು. ಟೊಯೋಟಾ ಮಿರಾಯ್ ಇವಿ ಕಾರು ಹೈಡ್ರೋಜನ್ ಸಹಾಯದಿಂದ ಉತ್ಪತ್ತಿಯಾಗುವ ವಿದ್ಯುತ್ನಿಂದ ಓಡುತ್ತದೆ.
ಇದನ್ನೂ ಓದಿ: Toyota Rumion: ಭರ್ಜರಿ ಮೈಲೇಜ್ ನೀಡುವ ಟೊಯೊಟಾ ರೂಮಿಯಾನ್ ಬಿಡುಗಡೆ
ಭಾರತದಲ್ಲಿ ಸದ್ಯ ಪೆಟ್ರೋಲಿಯಂ ಉತ್ಪನ್ನಗಳ ಆಮದು ವೆಚ್ಚ 16 ಲಕ್ಷಕೋಟಿ ರೂ ಇದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಕಾರ ಇದು ಭಾರತಕ್ಕೆ ಅತೀವ ಆರ್ಥಿಕ ನಷ್ಟ ಉಂಟು ಮಾಡುತ್ತಿದೆ. ಇದನ್ನು ತಪ್ಪಿಸಲು ಇರುವ ಮಾರ್ಗವೆಂದರೆ ಪರ್ಯಾಯ ಇಂಧನ ಬಳಕೆ. ಇದೇ ಕಾರಣಕ್ಕೆ ಪೆಟ್ರೋಲ್ಗೆ ಪರ್ಯಾಯವಾಗಿರುವ ಇಂಧನ ಬಳಸುವ ಕಾರುಗಳನ್ನು ತಯಾರಿಸುವಂತೆ ವಾಹನ ಕಂಪನಿಗಳಿಗೆ ಸರ್ಕಾರ ಒತ್ತಾಯಿಸುತ್ತಾ ಬಂದಿದೆ. ಪರ್ಯಾಯ ಇಂಧನಗಳಲ್ಲಿ ಜೈವಿಕ ಅನಿಲ ಪ್ರಮುಖ ಎನಿಸಿದೆ.
ಇನ್ನಷ್ಟು ಆಟೊಮೊಬೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ