ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನಲ್ಲಿ ಭಾರತ ಸ್ವಸಾಮರ್ಥ್ಯ ಬೆಳೆಸಿಕೊಳ್ಳಬೇಕು, ರಾಷ್ಟ್ರೀಯ ಎಐ ಲ್ಯಾಬ್ ಸ್ಥಾಪಿಸಬೇಕು: ಐಬಿಎಂ ಸಿಇಒ ಅರವಿಂದ್ ಕೃಷ್ಣ ಸಲಹೆ
Sovereign AI for India: ಅಮೆರಿಕ, ಚೀನಾ ಮೊದಲಾದ ದೇಶಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಲ್ಲಿ ದೊಡ್ಡ ಬಂಡವಾಳ ಹಾಕುತ್ತಿವೆ. ಭಾರತ ತನ್ನದೇ ಪ್ರತ್ಯೇಕವಾದ ಎಐ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ರಾಷ್ಟ್ರೀಯ ಎಐ ಕಂಪ್ಯೂಟಿಂಗ್ ಸೆಂಟರ್ ಸ್ಥಾಪಿಸಬೇಕು. ಯಾವುದೇ ಹೊಸ ತಂತ್ರಜ್ಞಾನ ಅಭಿವೃದ್ಧಿಯ ಆರಂಭದಲ್ಲಿ ಸರ್ಕಾರ ಮೊದಲ ಹೆಜ್ಜೆ ಇರಿಸುತ್ತದೆ, ಇತರರು ಅನುಸರಿಸುತ್ತಾರೆ ಎಂದು ಐಬಿಎಂನ ಛೇರ್ಮನ್ ಮತ್ತು ಸಿಇಒ ಅರವಿಂದ್ ಕೃಷ್ಣ ಹೇಳಿದ್ದಾರೆ.
ನವದೆಹಲಿ, ಆಗಸ್ಟ್ 28: ಬಹಳ ವೇಗದಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದು ಜಾಗತಿಕವಾಗಿ ಕಂಪ್ಯೂಟಿಂಗ್ ಇನ್ಫ್ರಾಸ್ಟ್ರಕ್ಚರ್ನಲ್ಲಿ ಹೂಡಿಕೆಗಳು ಹೆಚ್ಚುತ್ತಿವೆ. ಈ ಟ್ರೆಂಡ್ಗೆ ಭಾರತವೂ ಸೇರಿಕೊಳ್ಳಬೇಕು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಲ್ಲಿ ಭಾರತ ಸಾರ್ವಭೌಮ (Sovereign AI) ಸಾಮರ್ಥ್ಯ ಹೊಂದಬೇಕು. ರಾಷ್ಟ್ರೀಯ ಎಐ ಕಂಪ್ಯೂಟಿಂಗ್ ಸೆಂಟರ್ವೊಂದನ್ನು (National AI Lab) ಸ್ಥಾಪಿಸುವತ್ತ ಗಮನ ಕೊಡಬೇಕು ಎಂದು ಐಬಿಎಂ ಸಂಸ್ಥೆಯ ಛೇರ್ಮನ್ ಮತ್ತು ಸಿಇಒ ಅರವಿಂದ್ ಕೃಷ್ಣ ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರ ಆಯೋಜಿಸಿದ್ದ ಬಿ20 ಸಮಿಟ್ನಲ್ಲಿ ಪಾಲ್ಗೊಂಡಿದ್ದ ಅರವಿಂದ್ ಕೃಷ್ಣ ಅವರು ಆಗಸ್ಟ್ 28ರಂದು ಮಾಧ್ಯಮ ಪ್ರತಿನಿಧಿಗಳೊಂದಿಗಿನ ಸಂವಾದದಲ್ಲಿ ಮಾತನಾಡುತ್ತಾ, ಎಐನಲ್ಲಿ ಒಂದು ದೇಶ ಸ್ವಾವಲಂಬನೆ ಸಾಧಿಸುವುದು ಎಷ್ಟು ಮಹತ್ವ ಎಂಬುದನ್ನು ವಿವರಿಸಿದ್ದಾರೆ.
‘ಪ್ರತಿಯಂದು ದೇಶವೂ ಕೂಡ ಜನರೇಟಿವ್ ಎಐ, ಲಾರ್ಜ್ ಲ್ಯಾಂಗ್ವೇಜ್ ಮಾಡಲ್ ಸೇರಿದಂತೆ ಕೃತಕ ಬುದ್ಧಿಮತ್ತೆಯಲ್ಲಿ ಸ್ವಾವಲಂಬನೆಯ ಸಾಮರ್ಥ್ಯ ಹೊಂದಿರಬೇಕು ಎಂಬುದು ನನ್ನ ಭಾವನೆ. ಬೇರೆ ಯಾರೂ ಹೂಡಿಕೆ ಮಾಡಲು ಬಯಸದೇ ಇರುವ ಉದ್ದೇಶಗಳಿಗೆ ನೀವು ಅದನ್ನು ಬಳಸಬಹುದು. ಅಥವಾ ಬೇರೆಯವರಿಗೆ ಅರಿವಾಗದಂತಿರಬೇಕಾದ ಉದ್ದೇಶಗಳಿಗೆ ಅದನ್ನು ಬಳಸಬಹುದು. ಇದಕ್ಕೆ ಕಂಪ್ಯೂಟಿಂಗ್ ಇನ್ಫ್ರಾಸ್ಟ್ರಕ್ಚರ್, ಡಾಟಾ ಇನ್ಫ್ರಾಸ್ಟ್ರಕ್ಚರ್ ಅಗತ್ಯ ಇರುತ್ತದೆ. ಭಾರತಕ್ಕೆ ವಿಶೇಷ ಎನಿಸುವ ಒಂದು ಮಾರ್ಗವನ್ನು ರೂಪಿಸಬೇಕಾಗುತ್ತದೆ,’ ಎಂದು ಅರವಿಂದ್ ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಜಿಯೋ ಭಾರತ್, ಏರ್ಫೈಬರ್, ಸ್ಮಾರ್ಟ್ ಹೋಮ್, ಇನ್ಷೂರೆನ್ಸ್, ಅನಿಲ ಉತ್ಪಾದನೆ; ರಿಲಾಯನ್ಸ್ ಮಹಾಸಭೆಯ ಮುಖ್ಯಾಂಶಗಳು
ಎಐ ಸಾರ್ವಭೌಮತೆಗೆ ಹೆಚ್ಚು ವೆಚ್ಚವಾಗಲ್ಲ…
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನಲ್ಲಿ ಸ್ವಾವಲಂಬನೆ ಸಾಧಿಸುವ ವ್ಯವಸ್ಥೆ ರೂಪಿಸಲು 10 ಬಿಲಿಯನ್ ಡಾಲರ್ (80,000 ಕೋಟಿ ರೂ) ವೆಚ್ಚ ಆಗುತ್ತದೆ ಎನ್ನುವ ಮಾತುಗಳನ್ನು ಐಬಿಎಂ ಸಿಇಒ ತಳ್ಳಿಹಾಕಿದ್ದಾರೆ. ಆ ರೀತಿಯ ಮಾತುಗಳನ್ನು ಆಡುತ್ತಿರುವುದು ಭ್ರಮೆಯಲ್ಲಿದ್ದಾರೆ ಅಷ್ಟೇ. ಇದಕ್ಕೆ ಕೆಲವೇ ಸಾವಿರ ಕೋಟಿ ರೂ ಹೂಡಿಕೆ ಬೇಕಾಗುತ್ತದೆ. ಭಾರತಕ್ಕೆ ಆ ಸಾಮರ್ಥ್ಯ ಇದೆ ಎಂದು ಅವರು ಹೇಳಿದ್ದಾರೆ.
ಅಮೆರಿಕ, ಚೀನಾ ಮೊದಲಾದ ದೇಶಗಳು ಎಐ ಅಭಿವೃದ್ಧಿಗೆ ಭಾರೀ ಬಂಡವಾಳ ಹಾಕಿವೆ. ಯಾವುದೇ ಹೊಸ ತಂತ್ರಜ್ಞಾನದಲ್ಲಿ ಮೊದಲು ಸರ್ಕಾರ ಅಡಿ ಇಡುತ್ತದೆ. ಬಳಿಕ ಇತರರು ಅನುಸರಿಸುತ್ತಾರೆ. ಹೀಗಾಗಿ, ಸರ್ಕಾರ ನ್ಯಾಷನಲ್ ಎಐ ಕಂಪ್ಯೂಟಿಂಗ್ ಸೆಂಟರ್ ಅನ್ನು ಸ್ಥಾಪಿಸಬೇಕು ಎಂದು ಐಬಿಎಂ ಛೇರ್ಮನ್ ಆಗಿರುವ ಅರವಿಂದ್ ಕೃಷ್ಣ ಸಲಹೆ ನೀಡಿದ್ದಾರೆ.
ಜಿಯೋದಿಂದ ಭಾರತಕ್ಕೆ ವಿಶೇಷವೆನಿಸುವ ಎಐ ಮಾಡಲ್ಗಳ ಅಭಿವೃದ್ಧಿ
ಅರವಿಂದ್ ಕೃಷ್ಣ ಅವರು ಬಿ20 ಶೃಂಗಸಭೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಗ್ಗೆ ಚರ್ಚೆ ಮಾಡಿದ ಬೆನ್ನಲ್ಲೇ ರಿಲಾಯನ್ಸ್ ವಾರ್ಷಿಕ ಮಹಾಸಭೆಯಲ್ಲಿ ಎಐ ಮಾಡೆಲ್ಗಳ ಅಭಿವೃದ್ಧಿ ಬಗ್ಗೆ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ: ಗಣೇಶ ಹಬ್ಬಕ್ಕೆ ರಿಲಾಯನ್ಸ್ ಜಿಯೋದಿಂದ ಬರಲಿದೆ ಏರ್ಫೈಬರ್ ಸರ್ವಿಸ್; ಏನಿದರ ವಿಶೇಷತೆ?
ಭಾರತದ ಸರ್ಕಾರ, ಉದ್ಯಮ ಮತ್ತು ಗ್ರಾಹಕರಿಗೆ ಅನ್ವಯ ಆಗುವ ಬಹಳ ನಿರ್ದಿಷ್ಟದಾಯವಾಗಿರುವ ಎಐ ಮಾಡೆಲ್ಗಳನ್ನು ಜಿಯೋ ಪ್ಲಾಟ್ಫಾರ್ಮ್ಸ್ ಅಭಿವೃದ್ಧಿಪಡಿಸಲಿದೆ. ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
‘ಭಾರತಕ್ಕೆ ವಿಸ್ತಾರ ಇದೆ. ಡಾಟಾ ಇದೆ. ಪ್ರತಿಭೆ ಇದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ಗೆ ಬೇಕಾದ ಕಂಪ್ಯೂಟಿಂಗ್ ಅಗತ್ಯತೆಗಳನ್ನು ನಿರ್ವಹಿಸುವಂತಹ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಅನ್ನು ನಾವು ಹೊಂದಬೇಕಿದೆ. ಎಐ ಸಿದ್ಧವಿರುವ 2,000 ಎಂಡಬ್ಲ್ಯುನಷ್ಟು ಕಂಪ್ಯೂಟಿಂಗ್ ಕೆಪಾಸಿಟಿ ನಿರ್ಮಿಸಲು ನಾವು ಬದ್ಧರಾಗಿದ್ದೇವೆ’ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ಆದ ಅಂಬಾನಿ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ