ಸೆಬಿಯಿಂದ ಅದಾನಿ-ಹಿಂಡನ್ಬರ್ಗ್ ತನಿಖೆ ಕೊನೆಯ ಹಂತದಲ್ಲಿ; ಅದಾನಿ ಗ್ರೂಪ್​ನಿಂದ ತಪ್ಪಾಗಿದೆಯಾ? ಏನು ಕ್ರಮ ಸಾಧ್ಯತೆ? ಇಲ್ಲಿದೆ ಡೀಟೇಲ್ಸ್

Details of SEBI Probe On Adani Hindenburg Saga: ಅದಾನಿ ಗ್ರೂಪ್ ವಿರುದ್ಧ ಹಿಂಡನ್ಬರ್ಗ್ ರಿಸರ್ಚ್ ಬಿಡುಗಡೆ ಮಾಡಿದ್ದ ತನಿಖಾ ವರದಿಯಲ್ಲಿನ ಅಂಶಗಳ ಬಗ್ಗೆ ಸೆಬಿ ನಡೆಸುತ್ತಿರುವ ತನಿಖೆ ಬಹುತೇಕ ಮುಗಿದಿರುವುದು ತಿಳಿದುಬಂದಿದೆ. ಮೂಲಗಳ ಪ್ರಕಾರ ಅದಾನಿ ಗ್ರೂಪ್​ನಿಂದ ತಾಂತ್ರಿಕ ತಪ್ಪುಗಳಾಗಿದೆ. ಸಂಬಂಧಿತ ಕಂಪನಿಯ ವ್ಯವಹಾರ ನಿಯಮದಲ್ಲಿ ಮತ್ತು ಎಫ್​ಪಿಐ ಹೂಡಿಕೆ ಮಿತಿ ನಿಯಮದಲ್ಲಿ ಉಲ್ಲಂಘನೆ ಆಗಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎನ್ನಲಾಗಿದೆ.

ಸೆಬಿಯಿಂದ ಅದಾನಿ-ಹಿಂಡನ್ಬರ್ಗ್ ತನಿಖೆ ಕೊನೆಯ ಹಂತದಲ್ಲಿ; ಅದಾನಿ ಗ್ರೂಪ್​ನಿಂದ ತಪ್ಪಾಗಿದೆಯಾ? ಏನು ಕ್ರಮ ಸಾಧ್ಯತೆ? ಇಲ್ಲಿದೆ ಡೀಟೇಲ್ಸ್
ಅದಾನಿ ಗ್ರೂಪ್​
Follow us
|

Updated on: Aug 28, 2023 | 6:50 PM

ನವದೆಹಲಿ, ಆಗಸ್ಟ್ 28: ಅದಾನಿ ಗ್ರೂಪ್ ವಿರುದ್ಧ ಹಿಂಡನ್ಬರ್ಗ್ ಸಂಸ್ಥೆ ಮಾಡಿದ ಆರೋಪಗಳ ತನಿಖೆ ನಡೆಸಿರುವ ಸೆಬಿ, ಅದಾನಿ ಕಂಪನಿಗಳಿಂದ ತಪ್ಪುಗಳಾಗಿರುವುದನ್ನು ಪತ್ತೆ ಮಾಡಿದೆ ಎನ್ನುವಂತಹ ಸುದ್ದಿಯೊಂದು ರಾಯ್ಟರ್ಸ್ ಸುದ್ದಿಸಂಸ್ಥೆ (Reuters Report) ವರದಿ ಮಾಡಿದೆ. ಅದಾನಿ ಗ್ರೂಪ್​ನ ಕಂಪನಿಗಳಿಂದ ಎರಡು ರೀತಿಯ ತಪ್ಪುಗಳಾಗಿದೆ. ಲಿಸ್ಟೆಡ್ ಕಂಪನಿಗಳ ವಿವರ ನೀಡುವ ವಿಚಾರದಲ್ಲಿ ನಿಯಮ ಉಲ್ಲಂಘನೆಯಾಗಿದೆ. ಹಾಗೆಯೇ, ಹೊರದೇಶದ ಫಂಡ್​ಗಳಿಂದ ಆಗಿರುವ ಹೂಡಿಕೆಯ ಮಿತಿಯಲ್ಲೂ (FPI Limit) ಉಲ್ಲಂಘನೆ ಆಗಿರುವುದು ಸೆಬಿ ತನಿಖೆಯಿಂದ ಗೊತ್ತಾಗಿದೆ ಎಂದು ರಾಯ್ಟರ್ಸ್ ವರದಿಯಲ್ಲಿ ಹೇಳಲಾಗಿದೆ. ಆ ವರದಿಯಲ್ಲಿ ಎರಡು ಮೂಲಗಳನ್ನು ಉಲ್ಲೇಖಿಸಲಾಗಿದೆ.

ಅದಾನಿ ಗ್ರೂಪ್​ನ ಕಂಪನಿಗಳಿಂದ ಅಕ್ರಮ ಷೇರು ನಿರ್ವಹಣೆಗಳಾಗಿವೆ, ಷೇರುಪೇಟೆ ನಿಯಮಗಳನ್ನು ಮೀರಲಾಗಿದೆ ಎಂಬಿತ್ಯಾದಿ ಗುರುತರ ಆರೋಪಗಳನ್ನು ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಕೆಲ ತಿಂಗಳ ಹಿಂದೆ ತನಿಖಾ ವರದಿ ಪ್ರಕಟಿಸಿತ್ತು. ಅದಾದ ಬಳಿಕ ಅದಾನಿ ಗ್ರೂಪ್​ನ ವಿವಿಧ ಕಂಪನಿಗಳ ಷೇರುಗಳು ಪ್ರಪಾತಕ್ಕೆ ಬಿದ್ದಿದ್ದವು. ವಿಶ್ವದ ಟಾಪ್-3 ಶ್ರೀಮಂತರಲ್ಲಿ ಒಬ್ಬರಾಗಿದ್ದ ಗೌತಮ್ ಅದಾನಿ ಆಸ್ತಿ ಒಮ್ಮಿಂದೊಮ್ಮೆಗೆ ಲಕ್ಷಾಂತರ ಕೋಟಿ ರೂನಷ್ಟು ಕರಗಿ ಹೋಗಿತ್ತು.

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ಷೇರುಪೇಟೆ ನಿಯಂತ್ರಣ ಪ್ರಾಧಿಕಾರ ಸೆಬಿ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಮೂಲಗಳ ಪ್ರಕಾರ ಸೆಬಿ ತನಿಖೆ ಇನ್ನೂ ಪೂರ್ಣಗೊಂಡಿಲ್ಲವಾದರೂ ಬಹುತೇಕ ಅಂತ್ಯದ ಸ್ಥಿತಿಯಲ್ಲಿದೆಯಂತೆ. ಆಗಸ್ಟ್ 29, ಮಂಗಳವಾರದಂದು ಸೆಬಿ ತನಿಖೆ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಿಸಲಿದೆ.

ಇದನ್ನೂ ಓದಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನಲ್ಲಿ ಭಾರತ ಸ್ವಸಾಮರ್ಥ್ಯ ಬೆಳೆಸಿಕೊಳ್ಳಬೇಕು, ರಾಷ್ಟ್ರೀಯ ಎಐ ಲ್ಯಾಬ್ ಸ್ಥಾಪಿಸಬೇಕು: ಐಬಿಎಂ ಸಿಇಒ ಅರವಿಂದ್ ಕೃಷ್ಣ ಸಲಹೆ

ಏನು ತಪ್ಪು ಮಾಡಿದೆ ಅದಾನಿ ಗ್ರೂಪ್?

ಮಿಂಟ್ ಪತ್ರಿಕೆಯಲ್ಲಿ ಬಂದ ರಾಯ್ಟರ್ಸ್ ವರದಿ ಪ್ರಕಾರ ಅದಾನಿ ಗ್ರೂಪ್ ಕಂಪನಿಯಿಂದ ಎರಡು ರೀತಿಯ ಕಾನೂನು ಉಲ್ಲಂಘನೆಗಳಾಗಿವೆ.

  1. ಸಂಬಂಧಿತ ಕಂಪನಿಯೊಂದಿಗಿನ ವಹಿವಾಟುಗಳನ್ನು ಗುರುತಿಸಿ ವರದಿ ಮಾಡಬೇಕು. ಅದನ್ನು ಮಾಡದಿದ್ದರೆ ಲಿಸ್ಟೆಡ್ ಕಂಪನಿಯ ಹಣಕಾಸು ಸ್ಥಿತಿ ಬಗ್ಗೆ ಅಪರಿಪೂರ್ಣ ಚಿತ್ರಣ ಸಿಗುತ್ತದೆ ಎಂದು ಈ ತನಿಖೆಯ ನೇರ ಮಾಹಿತಿ ಇರುವ ಮೂಲವೊಂದು ಹೇಳಿರುವುದು ತಿಳಿದುಬಂದಿದೆ. ಅವರ ಪ್ರಕಾರ ಇಂಥ 13 ನಿದರ್ಶನಗಳಿವೆ.
  2. ಅದಾನಿ ಗ್ರೂಪ್​ನಿಂದ ಆಗಿರುವ ಮತ್ತೊಂದು ಉಲ್ಲಂಘನೆಯು ವಿದೇಶೀ ಹೂಡಿಕೆಯ ನಿಯಮದ್ದಾಗಿದೆ. ಫಾರೀನ್ ಪೋರ್ಟ್​ಫೋಲಿಯೋ ಹೂಡಿಕೆದಾರರು ಭಾರತೀಯ ಕಂಪನಿಯಲ್ಲಿ ಶೇ. 10ಕ್ಕಿಂತ ಹೆಚ್ಚು ಭಾಗದಷ್ಟು ಹೂಡಿಕೆ ಮಾಡುವಂತಿಲ್ಲ. ಅದಕ್ಕಿಂತ ಹೆಚ್ಚು ಹೂಡಿಕೆಯಾದರೆ ಅದು ಎಫ್​​ಡಿಐ ಎನಿಸಿಕೊಳ್ಳುತ್ತದೆ. ಆದರೆ, ಎಫ್​ಪಿಐನ ಹೂಡಿಕೆ ಮಿತಿ ನಿಯಮದಲ್ಲಿ ಉಲ್ಲಂಘನೆ ಆಗಿರುವುದು ಸೆಬಿ ತನಿಖೆಯಲ್ಲಿ ಗೊತ್ತಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಜಿಯೋ ಭಾರತ್, ಏರ್​ಫೈಬರ್, ಸ್ಮಾರ್ಟ್ ಹೋಮ್, ಇನ್ಷೂರೆನ್ಸ್, ಅನಿಲ ಉತ್ಪಾದನೆ; ರಿಲಾಯನ್ಸ್ ಮಹಾಸಭೆಯ ಮುಖ್ಯಾಂಶಗಳು

ಅದಾನಿ ಗ್ರೂಪ್​ಗೆ ಎಷ್ಟು ದಂಡ ಬೀಳಬಹುದು?

ತಪ್ಪುಗಳು ಆಗಿರುವುದು ಸಾಬೀತಾದರೆ ಕಂಪನಿಗೆ ನಿರ್ದಿಷ್ಟ ಹಣದ ದಂಡದಿಂದ ಹಿಡಿದು ಷೇರು ಮಾರುಕಟ್ಟೆಯಿಂದ ನಿಷೇಧಿಸುವವರೆಗೂ ಕ್ರಮಕ್ಕೆ ಸೆಬಿ ಶಿಫಾರಸು ಮಾಡಬಹುದು. ಆದರೆ, ಅದಾನಿ ಗ್ರೂಪ್​ನ ವಹಿವಾಟು ನಿಯಮ ಉಲ್ಲಂಘನೆಯ ಒಂದು ತಪ್ಪಿಗೆ ಗರಿಷ್ಠ 1 ಕೋಟಿ ರೂ ದಂಡ ಬೀಳಬಹುದು. 13 ತಪ್ಪುಗಳು ಸಾಬೀತಾಗಿದ್ದಲ್ಲಿ ಗರಿಷ್ಠ 13 ಕೋಟಿ ರೂನಷ್ಟು ದಂಡ ಬೀಳಬಹುದು.

ಎಫ್​ಪಿಐ ಹೂಡಿಕೆ ಮಿತಿ ನಿಯಮ ಉಲ್ಲಂಘನೆ ಪ್ರಕರಣದಲ್ಲೂ ಅದಾನಿ ಗ್ರೂಪ್ ಅನ್ನು ನಿಷೇಧಿಸುವ ಮಟ್ಟಕ್ಕೆ ಸೆಬಿ ಶಿಫಾರಸು ಮಾಡುವ ಸಾಧ್ಯತೆ ಇಲ್ಲ. ಕೆಲ ಕೋಟಿ ರೂಗಳಷ್ಟು ದಂಡ ವಿಧಿಸಬಹುದು ಎಂದು ಹೇಳಲಾಗುತ್ತಿದೆ.

ಆದರೆ, ಈ ವರದಿಯಲ್ಲಿರುವ ಯಾವುದೇ ಅಂಶವನ್ನೂ ಸೆಬಿಯಿಂದ ಎಲ್ಲಿಯೂ ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ. ರಾಯ್ಟರ್ಸ್ ಸುದ್ದಿಸಂಸ್ಥೆ ತನ್ನ ಎರಡು ಸೆಬಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿರುವುದನ್ನು ಇಲ್ಲಿ ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ