50 ಸಾವಿರ ಪೇಪರ್​ ಬ್ಯಾಗ್​ ಹಂಚಿ ಪ್ಲಾಸ್ಟಿಕ್​ ಲೆಸ್​​ ಕಡಲೆಕಾಯಿ ಪರಿಷೆಗೆ ಮುನ್ನುಡಿ ಬರೆದ ಯಶಸ್ವಿನಿ

|

Updated on: Nov 17, 2024 | 7:11 AM

ಈ ಬಾರಿಯ ಮಲ್ಲೇಶ್ವರಂ ಕಡಲೆಕಾಯಿ ಪರಿಷೆಯನ್ನು ಪ್ಲಾಸ್ಟಿಕ್​ ಲೆಸ್​ ಮಾಡೋಣ ಅಂತ ವಿಚಾರ ಮಾಡುತ್ತಿದ್ದಾಗ ಯಶಸ್ವಿನಿಯವರಿಗೆ​ ನೆನಪಿಗೆ ಬಂದಿದ್ದೇ ಪೇಪರ್​ ಬ್ಯಾಗ್​. ಹೌದು, ಪ್ಲಾಸ್ಟಿಕ್ ಲೆಸ್​ ಕಡಲೆಕಾಯಿ ಪರಿಷೆ ವಿಚಾರವನ್ನು ಕಾರ್ಯರೂಪಕ್ಕೆ ತರಲು ಯಶಸ್ವಿನಿಯವರು 50 ಸಾವಿರ ಪೇಪರ್​ ಬ್ಯಾಗ್​ ಹಂಚಿ ಯಶಸ್ವಿನಿ ಯಶಸ್ವಿಯಾಗಿದ್ದಾರೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.

50 ಸಾವಿರ ಪೇಪರ್​ ಬ್ಯಾಗ್​ ಹಂಚಿ ಪ್ಲಾಸ್ಟಿಕ್​ ಲೆಸ್​​ ಕಡಲೆಕಾಯಿ ಪರಿಷೆಗೆ ಮುನ್ನುಡಿ ಬರೆದ ಯಶಸ್ವಿನಿ
ಯಶಸ್ವಿನಿ
Follow us on

ಬೆಂಗಳೂರು ಕರಗ ಎಷ್ಟು ಪ್ರಸಿದ್ಧವೋ ಅಷ್ಟೇ ಪ್ರಸಿದ್ಧಿ ಪಡೆದಿರುವುದು ಕಡಲೆಕಾಯಿ ಪರಿಷೆ (ಜಾತ್ರೆ). ಬೆಂಗಳೂರಿನಲ್ಲಿ ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಎರಡು ಕಡಲೆಕಾಯಿ ಪರಿಷೆ ನಡೆಯುತ್ತವೆ. ಒಂದು ಮಲ್ಲೇಶ್ವಂನ ಕಾಡುಮಲ್ಲೇಶ್ವರ ದೇವಸ್ಥಾನದ ಎದುರುಗಡೆ ನಡೆಯುವ ಪರಿಷೆ, ಮತ್ತೊಂದು ಬಸವನಗುಡಿಯ ದೊಡ್ಡ ಬಸವನ ದೇವಸ್ಥಾನದ ಹತ್ತಿರ ನಡೆಯುವ ಪರಿಷೆ. ಎರಡೂ ಪರಿಷೆ ಅದರದ್ದೇಯಾದ ಇತಿಹಾಸವನ್ನು ಹೊಂದಿವೆ. ಈ ಪರಿಷೆಗಳಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಈ ಪರಿಷೆಯಲ್ಲಿ ಪ್ಲಾಸ್ಟಿಕ್​ ಬಳಸದೆ ಪ್ರಕೃತಿಯೊಂದಿಗೆ ಪರಿಷೆ ಆಚರಿಸೋಣ ಎಂಬುವುದು ಪರಿಸರವಾದಿಗಳು ಮತ್ತು ಸರ್ಕಾರದ ಇಚ್ಛೆಯಾಗಿದೆ. ಇದನ್ನು ಕಾರ್ಯರೂಪಕ್ಕೆ ತರಲು ಅನೇಕ ಪ್ರಕೃತಿ ಪ್ರೇಮಿಗಳು ಮುಂದಾಗಿದ್ದಾರೆ.

ತಾನು ಹುಟ್ಟಿ, ಬೆಳದಿರುವ ಮಲ್ಲೇಶ್ವರಂನಲ್ಲಿ ನಡೆಯುವ ಪರಿಷೆಯನ್ನು ಪ್ರಕೃತಿಯೊಂದಿಗೆ ಆಚರಿಸೋಣ, ಪ್ಲಾಸ್ಟಿಕ್​ ಬ್ಯಾಗ್​ ರಹಿತವಾಗಿ ಈ ಬಾರಿಯ ಪರಿಷೆ ನಡೆಯಲಿ ಎಂಬ ಇಚ್ಛೆ ಹೊಂದಿದವರು “ಯಶಸ್ವಿನಿ” ಎಂಬ ತರುಣಿ.

ಕೆಲಸಕ್ಕೆ ಗುಡ್​ ಬೈ ಪ್ರಕೃತಿ ಸೇವೆಗೆ ಹಾಯ್​ ಹಾಯ್​

ಸಾಫ್ಟ್ವೇರ್​ ಇಂಜಿನಿಯರ್​​ ಆದ ಯಶಸ್ವಿನಿ ಅವರಿಗೆ ಈ ಚಿಂತನಾ ಲಹರಿ ಬರುತ್ತಿದ್ದಂತೆ ತಾವು ಮಾಡುತ್ತಿದ್ದ ತಮ್ಮ ಕೆಲಸಕ್ಕೆ ಗುಡ್​​ ಬೈ ಹೇಳಿ, ಧುಮುಕಿದ್ದೇ “ಪ್ರಕೃತಿ ಬಾಗಿನ” ಕೆಲಸಕ್ಕೆ. ಹೌದು, ಪರಿಷೆ ಸಂದರ್ಭದಲ್ಲಿ ವ್ಯಾಪಾರಸ್ತರು ಮತ್ತು ಗ್ರಾಹಕರು ಪ್ಲಾಸ್ಟಿಕ್​ ಚೀಲಗಳನ್ನು ಬಳಸುತ್ತಾರೆ. ಈ ಪ್ಲಾಸ್ಟಿಕ್​ನಿಂದ​ ಪರಿಸರಕ್ಕೆ ಬಹಳಷ್ಟು ಹಾನಿಯಾಗುತ್ತೆ ಎಂಬ ವಿಚಾರ ಮನಗಂಡ ಯಶಸ್ವಿನಿಯವರಿಗೆ ಹೊಳೆದಿದ್ದು “ಪೇಪರ್​ ಬ್ಯಾಗ್​” ತಯಾರಿಕೆ.

ಪ್ಲಾಸ್ಟಿಕ್​ ಬ್ಯಾಗ್​ ರಹಿತ ಪರಿಷೆ

ಪೇಪರ್​ ಬ್ಯಾಗ್​ಗಳನ್ನು ತಯಾರಿಸಿ, ಅವುಗಳನ್ನು ಉಚಿತವಾಗಿ ಕಡಲೆಕಾಯಿ ಮಾರುವ ವ್ಯಾಪಾರಸ್ಥರಿಗೆ ನೀಡಲು ತೀರ್ಮಾನಿಸಿದರು. ತಮಗೆ ತೋಚಿದ ವಿಚಾರವನ್ನು ತಮ್ಮ ಹಿತೈಶಿಗಳಾದ ಶೈಲಾ ಅಯ್ಯಂಗಾರ ಅವರ ಬಳಿ ಹೇಳಿಕೊಂಡಾಗ, ಅವರೂ ಸಮ್ಮತಿ ಸೂಚಿಸಿದರು.

ಪೇಪರ್​ ಬ್ಯಾಗ್​ ತಯಾರಿಕೆಗೆ ಮತ್ತು ಹಂಚಲು ಬೆನ್ನೆಲುಬಾಗಿ ನಿಂತರು. ಮುಂದೆ, ಈ ಬಾರಿಯ 2024ರ ಮಲ್ಲೇಷರಂ ಪರಿಷೆಯಲ್ಲೇ ಪೇಪರ್​ ಬ್ಯಾಗ್​ಗಳನ್ನು ಹಂಚೋಣ ಎಂದು ನಿರ್ಧರಿಸಿದರು. 50 ಸಾವಿರ ಪೇಪರ್​ ಬ್ಯಾಗ್​ಗಳನ್ನು ತಯಾರಿಸಿ ಉಚಿತವಾಗಿ ಹಂಚಲು ತೀರ್ಮಾನಿಸಲಾಯಿತು. ಈ ವಿಚಾರವನ್ನು ಯಶ್ವಸ್ವಿನಿಯವರು ತಮ್ಮ ಹಿತೈಶಿಗಳಾದ ಶ್ರೀದಿವ್ಯ ಅವರ ಬಳಿ ಹಂಚಿಕೊಂಡರು. ಅವರು ಕೂಡ ಕಾರ್ಯರೂಪಕ್ಕೆ ತರಲು ಟೊಂಕಕಟ್ಟಿ ನಿಂತರು. ನಂತರ, ಇವರೊಂದಿಗೆ ಕಾಡುಮಲ್ಲೇಶ್ವರಂ ಗೆಳೆಯರ ಬಳಗ ಕೈ ಜೋಡಿಸಿತು.

ಸವಾಲಾಯ್ತು ಪೇಪರ್​ ಸಂಗ್ರಹ

50 ಸಾವಿರ ಪೇಪರ್​ ಬ್ಯಾಗ್​ಗಳನ್ನು ತಯಾರಿಸಲೇನೋ ತೀರ್ಮಾನಿಸಲಾಯಿತು. ಆದರೆ, ಅಷ್ಟೊಂದು ಪ್ರಮಾಣದಲ್ಲಿ ಪೇಪರ್​ಗಳನ್ನು ಸಂಗ್ರಹಿಸುವುದು ಹೇಗೆ? ಎಂಬ ಪ್ರಶ್ನೆ ಉದ್ಭವಿಸಿತು. ಆಗ, ದೃತಿಗೆಡದ ಯಶಸ್ವಿನಿ ಮತ್ತು ಅವರ ಸ್ನೇಹಿತರು, ಮನೆ ಮನೆಗೆ ತೆರಳಿ ಪೇಪರ್​ಗಳನ್ನು ಸಂಗ್ರಹಿಸಲು ಆರಂಭಿಸಿದರು. ಇದೇ ವರ್ಷ ಸೆಪ್ಟೆಂಬರ್​ ತಿಂಗಳಿಂದ ಪೇಪರ್​ಗಳನ್ನು ಸಂಗ್ರಹಿಸಿ, ಬ್ಯಾಗ್​ಗಳನ್ನು ತಯಾರಿಸಲು ಆರಂಭಿಸಿದರು. ಮೊದ ಮೊದಲಿಗೆ ಸಂಗ್ರಹವಾದಷ್ಟು ಪೇಪರ್​ಗಳಿಂದ ಬ್ಯಾಗ್​ಗಳನ್ನು ತಯಾರಿಸಲು ಆರಂಭಿಸಿದರು.

ನೆರವಾದ ಬ್ಲಾಗರ್​​​

ಈ ಮಹತ್​ ಕಾರ್ಯದ ಬಗ್ಗೆ ತಿಳಿದ, ಈಟ್​ ರಾಜಾ ಎಂಬ ಬ್ಲಾಗರ್​, ಇದನ್ನು ಪ್ರಚಾರಗೊಳಿಸುವ ನಿಟ್ಟಿನಲ್ಲಿ ಒಂದು ವಿಡಿಯೋ ಮಾಡಿ, ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ ಮಾಡಿದರು. ​ಈ ವಿಡಿಯೋವನ್ನು ಒಂದು ಕೋಟಿಗೂ ಅಧಿಕ ಜನರು ನೋಡಿದರು.

ಹರಿದು ಬಂದ ಪೇಪರ್​ಗಳು

ವೀಡಿಯೋ ಹೆಚ್ಚು ಹೆಚ್ಚು ವೈರಲ್​ ಆಗುತ್ತಿದ್ದಂತೆ ರಾಶಿ ರಾಶಿಯಷ್ಟು ಪೇಪರ್​ಗಳು ಬಂದು ಬೀಳಲಾರಂಭಿಸಿದವು. ಅನೇಕರು ಯಶಸ್ವಿನಿಯವರನ್ನು ಸಂಪರ್ಕಿಸಿ ಪೇಪರ್​ಗಳನ್ನು ನೀಡಲು ಆರಂಭಿಸಿದರು. ನಂತರ ಕೆಲ ದಿನಪತ್ರಿಕೆ ಸಂಸ್ಥೆಗಳು ಕೂಡ ಮೂಟೆಗಟ್ಟಲೆ ಪೇಪರ್​ಗಳನ್ನು ನೀಡಲಾರಂಭಿಸಿದರು. ಆದರೆ, ರಾಶಿ ರಾಶಿಯಾಗಿ ಬಿದ್ದ ಪೇಪರ್​ಗಳಿಂದ ಒಬ್ಬರು ಅಥವಾ ಇಬ್ಬರಿಂದ ಬ್ಯಾಗ್​ಗಳನ್ನು ತಯಾರಿಸುವುದು ಕಷ್ಟವಾಯಿತು.

ನೆರವಾದ ಶಾಲೆ- ಕಾಲೇಜು ಮಕ್ಕಳು

ನಂತರ, ಯಶಸ್ವಿನಿ ಮತ್ತು ಅವರ ತಂಡದವರು ಮಲ್ಲೇಶ್ವರಂನಲ್ಲಿರುವ ಶಾಲಾ-ಕಾಲೇಜುಗಳನ್ನು ಸಂಪರ್ಕಿಸಿದರು. ತಾವು ಮಾಡುತ್ತಿರುವ ಕಾರ್ಯದ ಬಗ್ಗೆ ತಿಳಿಸಿದರು. ಹಾಗೇ, ಮಕ್ಕಳಿಗೂ ಕೂಡ ಪೇಪರ್​ ಬ್ಯಾಗ್​ ತಯಾರಿಕೆ ಮತ್ತು ಪ್ಲಾಸ್ಟಿಕ್​ ಬ್ಯಾಗ್​ ಉಪಯೋಗಿಸಿವುದರಿಂದ ಆಗುವ ನಷ್ಟದ ಬಗ್ಗೆ ತಿಳಿಸಿದರು. ನಂತರ, ಸರಿ ಸುಮಾರು 17 ಶಾಲಾ- ಕಾಲೇಜುಗಳ 2 ಸಾವಿರ ಮಕ್ಕಳು ಪೇಪರ್​ ಬ್ಯಾಗ್​ ತಯಾರಿಕೆಗೆ ನೆರವಾದರು.

ಮಕ್ಕಳಿಂದ ಪೇಪರ್ ಬ್ಯಾಗ್​ ತಯಾರಿಕೆ

“ಯಶಸ್ವಿ”ಯಾದ ತರುಣಿ

ಯಶಸ್ವಿನಿ ಮತ್ತು ಅವರ ತಂಡ, ಕಾಲೇಜು ಮಕ್ಕಳ ನೆರವಿನಿಂದ ಬರೊಬ್ಬರಿ 50 ಸಾವಿರ ಪೇಪರ್​ ಬ್ಯಾಗ್​ಗಳು ತಯಾರಾದಾವು. ಒಂದೊಂದು ಬ್ಯಾಗ್​ 650 ಗ್ರಾಂನಿಂದ 680 ಗ್ರಾಂ ತೂಕ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ನ.15 ರಿಂದ ಮೂರು ದಿನಗಳ ಕಾಲ ನಡೆಯುವ ಮಲ್ಲೇಶ್ವರಂ ಕಡಲೆಕಾಯಿ ಪರಿಷೆಯಲ್ಲಿ ಈ ಪೇಪರ್​ ಬ್ಯಾಗ್​ಗಳನ್ನು ಹಂಚಿದರು. ಮತ್ತು ಈ ಪೇಪರ್​ ಬ್ಯಾಗ್​​ಗಳನ್ನು ಕೇವಲ ಕಡಲೆಕಾಯಿ ಮಾರುವ ವ್ಯಾಪಾರಸ್ಥರಿಗೆ ಹಂಚಲಾಗುತ್ತಿದೆ.

ಪೇಪರ್​ ಬ್ಯಾಗ್​ ಹಂಚುತ್ತಿರುವುದು

“ಹುಟ್ಟಿನಿಂದ ಸಾಯುವವರೆಗೆ ನಮಗೆ ಎಲ್ಲವನ್ನೂ ನೀಡುವ ಪ್ರಕೃತಿಗೆ ನಾವೇನಾದರು ಕೊಡೋಣ. ನಮ್ಮ ಪೂರ್ವಜರು ಕೊಟ್ಟು ಹೋಗಿರುವ ಅತಿದೊಡ್ಡ ಪ್ರಕೃತಿ ಬಳುವಳಿಯನ್ನು ನಮ್ಮ ಮುಂದಿನ ಪೀಳಿಗೆಗೂ ನೀಡೋಣ ಎಂಬ ಆಯಶದಿಂದ ಆರಂಭಿಸಿದ ಈ ಪೇಪರ್​ ಬ್ಯಾಗ್​ ಚಿಂತನೆಗೆ ಇನ್ನಷ್ಟು ಜನರು ಕೈ ಜೋಡಿಸಲಿ” ಎಂಬುವುದು ಯಶಸ್ವಿನಿಯವರ ಆಶಯವಾಗಿದೆ.

Published On - 7:07 am, Sun, 17 November 24