ನಮ್ಮ ಜೀವನದಲ್ಲಿ ಹಲವಾರು ಮಂದಿ ಸ್ನೇಹಿತರಾಗಿ ಬರುತ್ತಾರೆ. ಬ್ಯಾಲದಿಂದ ಹಿಡಿದು ವೃದ್ಧಾಪ್ಯದ ತನಕ ಸ್ನೇಹಿತರ ಬಳಗ ಇದ್ದೇ ಇರುತ್ತದೆ. ಇದರಲ್ಲಿ ಕೆಲವು ಮಂದಿ ಪ್ರಾಣ ಸ್ನೇಹಿತರಾದರೆ, ಇನ್ನು ಕೆಲವರು ಸಾಮಾನ್ಯ ಸ್ನೇಹಿತರಾಗಿ ಉಳಿಯುತ್ತಾರೆ. ಸ್ನೇಹವು ಗಡಿ, ಭಾಷೆ, ಜಾತಿ, ಧರ್ಮ ಎಲ್ಲವನ್ನು ಮೀರಿ ನಿಲ್ಲುವಂತಹದ್ದಾಗಿದೆ. ಒಂದು ಒಳ್ಳೆಯ ಪುಸ್ತಕ ಒಬ್ಬ ಒಳ್ಳೆಯ ಗೆಳೆಯನಿದ್ದಂತೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಪ್ರತಿ ವರ್ಷ ಅಗಸ್ಟ್ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತಿದೆ. ಬದುಕಿನಲ್ಲಿ ಸ್ನೇಹದ ಮಹತ್ವವನ್ನು ಅರಿಯುವುದಕ್ಕೆ, ಬದುಕನ್ನು ಸಾರ್ಥಕಗೊಳಿಸಿದ ಎಷ್ಟೋ ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ.
ಹುಟ್ಟಿದಾಗಿನಿಂದ ಇಲ್ಲಿಯವರೆಗೆ ನಮ್ಮ ಸ್ನೇಹ ಪ್ರಪಂಚವನ್ನು ದಿನೇ ದಿನೇ ಶ್ರೀಮಂತಗೊಳಿಸುತ್ತಿರುವ, ಬದುಕಿಗೊಂದು ಅರ್ಥ ನೀಡುತ್ತಿರುವ, ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೂ ಸಾಗುತ್ತಿರುವ ಜೀವನದ ಬಂಡಿ ಹಳಿ ತಪ್ಪಿದಾಗ ಸರಿದಾರಿಗೆ ತರುತ್ತಿರುವ ಸ್ನೇಹಿತರಿಗೆ ಸಾವಿರ ವಂದನೆ.
ಸ್ನೇಹಿತನಲ್ಲಿ ಭೇದ ಭಾವ ಇರುವುದಿಲ್ಲ, ನಿಮ್ಮ ಸ್ನೇಹಿತ ನೀವು ಹೇಗಿದ್ದರೂ ನಿಮ್ಮನ್ನು ಬಿಗಿದಪ್ಪಿ ತನ್ನ ಸ್ನೇಹದ ಆಳವನ್ನು ಪರಿಚಯಿಸುತ್ತಾನೆ. ಒಬ್ಬ ನಿಜವಾದ ಸ್ನೇಹಿತ ನಿಮ್ಮ ಬಗ್ಗೆ ಯಾವುದೇ ತೀರ್ಮಾವನ್ನು ತೆಗೆದುಕೊಳ್ಳುವುದಿಲ್ಲ, ನಿಬಂಧನೆಗಳನ್ನು ಹೇರುವುದಿಲ್ಲ, ನಿಮ್ಮ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾನೆ.
ನಿಮ್ಮ ಸ್ನೇಹಿತನೊಂದಿಗೆ ನೀವು ಏನೂ ಬೇಕಾದರೂ ಹಂಚಿಕೊಳ್ಳಬಹುದಾಗಿದೆ. ಏಕೆಂದರೆ ಪ್ರಾಣ ಸ್ನೇಹಿತನಾದವನು ನಿಮ್ಮಲ್ಲಿನ ಯಾವುದೇ ರಹಸ್ಯಗಳನ್ನು ಎಂದಿಗೂ ಬೇರೊಬ್ಬನ ಕಿವಿಗೆ ಬೀಳದಂತೆ ತನ್ನಲ್ಲೇ ಬಚ್ಚಿಟ್ಟುಕೊಳ್ಳುತ್ತಾನೆ. ನಿಮ್ಮ ಸ್ನೇಹಿತರ ಬಳಿ ಧನ ಸಹಾಯವನ್ನು ಪಡೆದುಕೊಳ್ಳಲು ಎಂದಿಗೂ ಹಿಂಜರಿಯಬೇಕೆಂದೇನಿಲ್ಲ. ಅವರಲ್ಲಿ ಸಂಕೋಚಪಡಬೇಕಾದ ಕಾರಣವೇ ಇಲ್ಲ. ತಲೆನೋವು ಬಂದರೆ ಹೆಡ್ ಮಸಾಜ್ ಕೂಡ ಮಾಡಿ ನೋವು ಶಮನ ಮಾಡುತ್ತಾರೆ. ನೋವಿನಲ್ಲೂ ನಾನು ನಿನ್ನ ಜೊತೆಯಾಗಿರುತ್ತೇನೆ ಎಂಬುದು ಇದರ ಒಳಾರ್ಥವಾಗಿದೆ.
ನಿಜವಾದ ಸ್ನೇಹಿತರು ಸ್ನೇಹಿತನ ಯಶಸ್ಸಿಗೆ ಖುಷಿಪಡುತ್ತಾರೆ, ಒಂದೊಮ್ಮೆ ಜೀವನದಲ್ಲಿ ಸೋಲನ್ನು ಮೆಟ್ಟಿದಾಗ ಗೆಲುವಿನ ಹಾದಿ ತೋರಿಸಲು ಬೆನ್ನು ತಟ್ಟುತ್ತಾರೆ. ಜೀವನದಲ್ಲಿ ಕಷ್ಟದ ಹಾದಿಗಳು ಬಂದಾಗ ಮುಂದೆ ಸಾಗಲು ಕೈಹಿಡಿಯುತ್ತಾರೆ. ನಿಮ್ಮ ಯಶಸ್ಸನ್ನು ನೋಡಿ ನಿಮ್ಮ ಸ್ನೇಹಿತ ನಿಜಕ್ಕೂ ಸಂತಸ ಪಟ್ಟರೆ ಎಂದೆಂದಿಗೂ ಆ ಸ್ನೇಹಿತನನ್ನು ಕಳೆದುಕೊಳ್ಳಬೇಡಿ. ಇಂತಹವರು ಕೋಟಿಗೊಬ್ಬರು. ಇಂತಹ ಸ್ನೇಹ ಬಳಗ ನನ್ನ ಜೀವನದಲ್ಲೂ ಸಿಕ್ಕಿರುವುದು ನನ್ನ ಪುಣ್ಯ. ನನ್ನ ಹೆಮ್ಮೆಯ ಸ್ನೇಹಿತರೆಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು.
ಲೇಖನ: ಮಂಜುನಾಥ ಇಟಗಿ
Published On - 10:16 am, Sun, 7 August 22