ಕರುನಾಡಿನಲ್ಲಿ ಹಿಜಾಬ್(Hijab) ವಿವಾದ ಹಿಜಾಬ್ V/S ಕೇಸರಿ ಶಾಲುಗಳ(Hijab vs Kesari Shawl) ನಡುವಿನ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ರಾಜ್ಯದ 19 ಜಿಲ್ಲೆಗಳ 55 ಕಾಲೇಜುಗಳಲ್ಲಿ ಪ್ರತಿಭಟನೆ ನಡೆದಿದೆ. 5 ಜಿಲ್ಲೆಗಳ 7 ಕಾಲೇಜುಗಳಲ್ಲಿ ಗಲಾಟೆಗಳು ಕಲ್ಲು ತೂರಾಟವಾಗಿದೆ. ಕೇಸರಿ ಶಾಲು ಧರಿಸಿದವರು ಜೈ ಶ್ರೀ ರಾಮ್ ಘೋಷಣೆ ಕೂಗಿದರೆ, ಹಿಜಾಬ್ ಧರಿಸಿದವರು ಅಲ್ಲಾವು ಅಕ್ಬರ್ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ. ಜಾತಿ, ಧರ್ಮ ಮೀರಿದ್ದ ಜ್ಞಾನ ದೇಗುಲದಲ್ಲಿ ಜಾತಿ, ಧರ್ಮಕ್ಕಾಗಿಯೇ ಸಂಘರ್ಷಗಳಾಗುತ್ತಿವೆ. ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಸಮವಸ್ತ್ರ(Uniform) ಸಂಘರ್ಷ ಎಲ್ಲೆ ದಾಟಿ ದೂರ ದೂರಿಗೆ ವ್ಯಾಪಿಸುತ್ತಿದೆ. ಸರ್ಕಾರ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿದೆ. ನಾಳಿನ ಉಜ್ವಲ ಭವಿಷ್ಯಕ್ಕೆ ನಂದಾದೀಪವಾಗ ಬೇಕಿದ್ದ ವಿದ್ಯಾರ್ಥಿಗಳಲ್ಲಿ ದ್ವೇಷದ ಕಿಚ್ಚು ಕಾಣಿಸುತ್ತಿದೆ. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಬಗ್ಗೆ ಮಾಗಿದ ಮನಸ್ಸು ಎಂಬ ಹೆಸರಿನಲ್ಲಿ ತಮ್ಮ ಅನಿಸಿಕೆ ಬಿಚ್ಚಿಡುವ ಯುವ ಹವ್ಯಾಸಿ ಬರಹಗಾರ್ತಿ ಪವಿತ್ರ ತಮ್ಮ ಅನಿಸಿಕೆಗಳನ್ನು ಸಂದೇಶದ ಮೂಲಕ ಜನರ ಮುಂದಿಡುವ ಪ್ರಯತ್ನ ಮಾಡಿದ್ದಾರೆ.
ಸತ್ಯ ಅಲ್ವಾ?
ಆಗಿರೋ ಅನರ್ಥಗಳಿಗೆ ಪರಿಹಾರ ಕೇಳೋಕೆ ಯಾರಿಗೂ ಪುರುಸೊತ್ತಿಲ್ಲ. ಆದ್ರೆ ಅನಾಹುತಗಳ ಸೃಷ್ಟಿ ಮಾಡ್ಬೇಕಂದ್ರೆ ನೋಡಿ ಸ್ವಾಮೀ ಇಂದೆಂದೂ ಕಾಣದ ದೇಶಭಕ್ತಿ, ಧರ್ಮ ಭಕ್ತಿ, ಸಂಸ್ಕೃತಿ ಮತ್ತೂ ಮುಂದುವರಿದಂತೆ ಇನ್ನಲವು ವಿಚಾರಗಳು ಉಕ್ಕಿ ಬರುವವು. ಇಂದು ಈ ಹೋರಾಟ ಮಾಡಲು ಮುಂದೆಜ್ಜೆ ಇಟ್ಟ ಪರ ಹಾಗೂ ವಿರೋಧವಿರುವ ಎಲ್ಲಾ ಯುವಕರೇ… ನಿಮಗೊಂದಿಷ್ಟು ಪ್ರಶ್ನೆ?
1. ಶಾಲೆ – ಕಾಲೇಜು ಎಂದಾಕ್ಷಣ ಶೌಚಾಲಯ ಮುಖ್ಯವೋ ಅಥವಾ ಹಿಜಾಬ್ ಮತ್ತು ಕೇಸರಿ ಶಾಲು ಮುಖ್ಯವಾ?
2. ಕುಡಿಯುವ ನೀರು, ಪಾಠದ ಕೊಠಡಿ ಮುಖ್ಯವೋ ಅಥವಾ ಹಿಜಾಬ್ ಮತ್ತು ಕೇಸರಿ ಶಾಲು ಮುಖ್ಯವಾ?
3. ಪಾಠಗಳ ಕಲಿಯಲು ಶಿಕ್ಷಕ-ಬೋಧಕರು ಮುಖ್ಯವೋ ಅಥವಾ ಹಿಜಾಬ್ ಮತ್ತು ಕೇಸರಿ ಶಾಲು ಮುಖ್ಯವಾ?
4. ಪರೀಕ್ಷಾ ಸಮಯದಲ್ಲಾಗುವ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಇನ್ನಿತರ ಅನ್ಯಾಯವನ್ನು ತಡೆಯುವುದು ಮುಖ್ಯವೋ ಅಥವಾ ಹಿಜಾಬ್ ಮತ್ತು ಕೇಸರಿ ಶಾಲು ಮುಖ್ಯವಾ?
5. ತಿಂಗಳಲ್ಲಿ ಒಂದಿಲ್ಲೊಂದು ಕಡೆ ಅಪ್ರಾಪ್ತರ ಬಾಲಕಿಯರ ಮೇಲೆ ಅತ್ಯಾಚಾರಗಳನ್ನು ಹೋಗಲಾಡಿಸುವುದು ಮುಖ್ಯವೋ ಅಥವಾ ಹಿಜಾಬ್ ಮತ್ತು ಕೇಸರಿ ಶಾಲು ಮುಖ್ಯವಾ?
6. ಶಾಲಾ-ಕಾಲೇಜುಗಳಲ್ಲಿ ಕೆಲ ಕೀಚಕರಿಂದ ಬಾಲಕಿಯರು ವಿದ್ಯಾಭ್ಯಾಸವನ್ನು ಕಡಿತಗೊಳಿಸುತ್ತಿರುವುದನ್ನು ತಡೆಯುವುದು ಮುಖ್ಯವೋ ಅಥವಾ ಹಿಜಾಬ್ ಮತ್ತು ಕೇಸರಿ ಶಾಲು ಮುಖ್ಯವಾ?
7. ಬಿಸಿಯೂಟದಲ್ಲಿ ಕಣ್ಣೆದುರೇ ಆಗುವ ಕಳಪೆ ಗುಣಮಟ್ಟದ ಆಹಾರ, ಅಕ್ರಮ ಆಹಾರ ಧಾನ್ಯಗಳ ಸಾಗಾಣಿಕೆಯನ್ನು ತಡೆಯುವುದು ಮುಖ್ಯವೋ ಅಥವಾ ಹಿಜಾಬ್ ಮತ್ತು ಕೇಸರಿ ಶಾಲು ಮುಖ್ಯವಾ?
8. ರಾಜಕೀಯ ಹೊಲಸು, ಕೆಸರೆನ್ನುವ ಯುವಶಕ್ತಿಗಳು, ನಾನಾದರೂ ಉತ್ತಮ ನಾಯಕನಾಗುವೆ ಕನಿಷ್ಠ ಉತ್ತಮ ಪ್ರಜೆಯಾಗಿ ಸೂಕ್ತ ನಾಯಕನ್ನು ಆಯ್ಕೆ ಮಾಡುವೆ ಎಂಬ ಭಾವ ಅದೆಷ್ಟು ಮಂದಿಗಿದೆ ಸ್ವಾಮಿ?
9. ಶಾಲಾ-ಕಾಲೇಜುಗಳಲ್ಲಿ ಗ್ರಂಥಾಲಯ ಸೌಲಭ್ಯಕ್ಕಾಗಿ ಪ್ರತಿಭಟಿಸಲು ಸಾವಿರ ಬಾರಿ ಆಲೋಚಿಸಿ ನಂತರ ಪ್ರತಿಭಟನೆ ಬೇಡ ಎನ್ನುವವರಿಂದು ಹಿಜಾಬ್-ಕೇಸರಿ ಶಾಲುಗಳಿಗಾಗಿ ಹೋರಾಟ ಮಾಡುವಂತಾಗಿದೆ…
10. ಹೆಚ್ಚೆಚ್ಚು ಡೊನೇಷನ್ ಕೇಳೋವಾಗ ಬಾರದ ಸದ್ದು ಇಂದು ರಾಜ್ಯವೇ ಕಿವಿಮುಚ್ಚವಂತೆ ಗದ್ದಲ ಹಬ್ಬಿಸುತ್ತಿದೆ.
11. ಶಾಲೆಗೆ ಹೋಗಲು ಬಸ್ ಸೌಲಭ್ಯ ಕಲ್ಪಿಸಬೇಕು ಅನ್ನೋ ಹೋರಾಟಕ್ಕಿಂತ ಹಿಜಾಬ್ – ಕೇಸರಿ ಶಾಲು ಹೋರಾಟ ಮುಖ್ಯವಾಗಿಬಿಟ್ಟಿದೆ.
ಮೇಲಿನೆಲ್ಲಾ ಪ್ರಶ್ನೆಗಳೆಗೆ ಉತ್ತರಿಸುವ ಉತ್ಸಾಹ, ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಸಮಯ ಯಾರ ಬಳಿಯೂ ಇಲ್ಲ, ಯಾರಿಗೂ ಅದು ಬೇಕಿಲ್ಲ. ಒಂದಂತೂ ತಿಳೀತಿಲ್ಲಾ ನನಗೆ. ಹಿಜಾಬ್ಗೆ ವಿರೋಧ ವ್ಯಕ್ತಪಡಿಸುವ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನ ಮೊಟಕುಗೊಳಿಸುವ ಷಡ್ಯಂತ್ರ ನಡೆಯುತ್ತಿದೆ ಅನ್ನೋ ಬುದ್ದಿಜೀವಿಗಳಿಗೆ ಗೊತ್ತಿಲ್ಲವಾ, ಶಾಲೆಗಳಲ್ಲಿ ಶೌಚಾಲಯಗಳಿಲ್ಲದ ಕಾರಣ ಹಿಂದೂ-ಮುಸ್ಲಿಂ ಎನ್ನದೆ ಅದೆಷ್ಟೋ ವಿದ್ಯಾರ್ಥಿನಿಯರು ಶಾಲೆಯಿಂದ ಈಗಾಗಲೆ ವಂಚಿತವಾಗಿರುವುದು. ಮತ್ತು ಇದೇ ಕಾರಣಕ್ಕೆ ಬಾಲ್ಯವಿವಾಹ ಎಂಬ ಮೃತ್ಯುಕೂಪಕ್ಕೆ ಅಪ್ರಾಪ್ತರು ಬಲಿಯಾಗುತ್ತಿರುವ ವಿಚಾರ. ಬಾಲ್ಯವಿವಾಹ.. ಇದು ಆ ಯುವತಿ ಹಾಗೂ ಆಕೆಯ ಮುಂದಿನ ಪೀಳಿಗೆಯೂ ಎದುರಿಸುವ ಸಮಸ್ಯೆಯ ಸುಳಿಯಲ್ಲಿರುವಂತೆ ಮಾಡುತ್ತಿರುವ ಕಣ್ಣೆದುರೇ ಕಂಡರೂ ಅದರ ವಿರುದ್ಧ ತುಟಿಬಿಚ್ಚದ ಜಾಣ ಕುರುಡರು ನಾವು.
ನಮ್ಮ ಗುರುತಿನ ಚೀಟಿ ಸೇರಿದಂತೆ ಹಲವು ದಾಖಲೆಗಳಲ್ಲಿ ನಮ್ಮ ಮುಖ, ಕಿವಿ ಕಾಣುವಂತೆ ಭಾವಚಿತ್ರ ತೆಗೆಯುವಾಗ, ಸಮಾನತೆಯ ಛಾವಣಿಯಾಗಿರುವ ಶಿಕ್ಷಣ ಕೇಂದ್ರಗಳಲ್ಲಿ ಹಿಜಾಬ್ ಬೇಡ ಅಂತೆಯೇ ಅಲ್ಲಿ ಕೇಸರಿ ಶಾಲೂ ಬೇಡ. ಅಷ್ಟಕ್ಕೂ ಒಂದು ವಿಚಾರ ವಿದ್ಯಾಭ್ಯಾಸದ ನಂತರ ಕೆಲಸ ಹುಡುಕುವಾಗ, ಕೆಲಸ ನೀಡೋದು ಹಿಜಾಬ್-ಕೇಸರಿ ಶಾಲು ಹಾಕಿದ್ದೀರಂತಲೋ ಅಥವಾ ಧರ್ಮವನ್ನ ಚಾಚು ತಪ್ಪದೆ ಪಾಲಿಸಿದರಂತಲೋ ಅಲ್ಲ. ಒಂದು ವೇಳೆ ಧರ್ಮವನ್ನ ನೋಡಿ ಕೆಲಸ ಕೊಡೋ ಹಾಗಿದ್ದಲ್ಲಿ 15-20 ವರ್ಷ ವಿದ್ಯಾಭ್ಯಾಸಕ್ಕೆ ಏಕೆ ಸಮಯ, ಹಣವನ್ನು ವ್ಯಯಿಸಬೇಕು?
ಇದೀಗ ಬಹುತೇಕ ಕಂಪೆನಿಗಳಲ್ಲಿ ಕೆಲಸಕ್ಕೆ ಸಂದರ್ಶನ ನೀಡುವಾಗ ಹಿಜಾಬ್ ಹಾಕಿಯೇ ಸಂದರ್ಶನ ನೀಡುವಿರಾ? ಖಂಡಿತಾ ಇಲ್ಲ. Interview Skills, dressing sense ಎಂಬಿತ್ಯಾದಿ ವಿಷಯಗಳ ಕುರಿತು ಅಧ್ಯಯನ ಮಾಡಿ, ಕೆಲಸ ಗಿಟ್ಟಿಸುವ ಸಲುವಾಗಿ ಹಾಗೂ ಕಡ್ಡಾಯವೆಂಬತೆ ಹಿಜಾಬ್ ತೆಗೆಡಿಡುವುದು ಸರಿಯೆಂದಾಗ, ಯಾವುದೇ ಧರ್ಮ-ಜಾತಿ ಭೇದವಿಲ್ಲದೆ ವಿದ್ಯೆಯ ಕಲಿಸೋ ಶಾಲೆಗಳಲ್ಲೇಕೆ ಹಿಜಾಬ್ ಬೇಕು. ದುಡಿಮೆಗೆ ಬೆಲೆಯಿದೆ ಕಲಿಕೆಗೆ ಬೆಲೆಯಿಲ್ಲವಾ?
ಧರ್ಮದ ಪಾಲನೆ ಮುಖ್ಯ ಅದಕ್ಕೆ ಸರ್ವರ ಸಹಮತವಿದೆ ಆದರೆ ಎಲ್ಲದಕ್ಕೂ ಗಡಿಗಳಿವೆ. ಹಾಗಿದ್ದಲ್ಲಿ ಶಾಲಾ-ಕಾಲೇಜುಗಳಲ್ಲಿ ಧರ್ಮ ಪಾಲನೆ ಮಾಡಬಾರದಾ ಎಂಬ ಪ್ರಶ್ನೆ ನಿಮಗೆ ಮೂಡಿದ್ದರೆ ನಾನುತ್ತರಿಸುವೆ. ಸ್ವಾಮಿ! ಶಾಲಾ-ಕಾಲೇಜುಗಳಲ್ಲಿ ಧರ್ಮ ಪಾಲನೆಗಾಗಿಯೇ ತಾನೆ ಎಲ್ಲರಿಗೂ ಪ್ರಾರ್ಥನೆಯ ಅವಕಾಶ ನೀಡಿರುವುದು. ಮುಸ್ಲಿಂಮರ ಪವಿತ್ರ ತಿಂಗಳಾದ ರಂಜಾನ್ ತಿಂಗಳಲ್ಲಿ, ಅವರ ಧರ್ಮಾಚರಣೆಗಳಿಗೆ ಅಡ್ಡಿಯಾಗಬಾರದೆಂದು ಶಾಲೆಯಲ್ಲಿನ ಒಂದೆರಡು ಪ್ರತ್ಯೇಕ ಕೊಠಡಿಗಳನ್ನು ಸ್ವಚ್ಛ ಮಾಡಿ ಆ ಕೊಠಡಿಗಳ ಬಳಿ ಯಾರು ಪಾದರಕ್ಷೆಗಳನ್ನ ಹಾಕಿಕೊಂಡು ಹೋಗೋದಿಲ್ಲಾ ಅಲ್ಲದೆ ನಮಾಜ್ ನ ಸಮಯಕ್ಕೆ ಸರಿಯಾಗಿ ಅದೆಂತದೇ ಸಮಸ್ಯೆಯಿದ್ದರೂ ಅವರಿಗೆ ನೀರಿನ ಸೌಕರ್ಯ ಮಾಡಿಕೊಡುವುದರ ಅರ್ಥ ಧರ್ಮದ ವಿರೋಧಿಸುವುದು ಎಂತಲಾ?
ಸಮವಸ್ತ್ರದ ಅರ್ಥ ಎಲ್ಲರೂ ಶಿಕ್ಷಣದ ಮುಂದೆ ಸಮಾನರು ಎಂಬುದಾಗಿದೆ. ಧರ್ಮದ ವಿರುದ್ಧ ಯಾರೂ ಇಲ್ಲ. ಅಂತೆಯೇ ಹಿಜಾಬ್ ಧಾರಣೆಯ ವಿರುದ್ಧ ಯಾರೂ ಇಲ್ಲ ಬದಲಿಗೆ ಶಾಲೆಯ ಒಳಗೆ ಹಿಜಾಬ್ ಬೇಡ ಎಂಬುದಷ್ಟೇ.
ಅರೆರೆ ಭಾರತಾಂಬೆಯ ಮುದ್ದಿನ ಯುವಶಕ್ತಿಗಳೇ !! ಕೊಂಚ ಹೋರಾಟದ ಹಿನ್ನೆಲೆ, ಅದರ ಮಹತ್ವ ಅರಿತರೆ ಉಚಿತ, ಹೋರಾಟಗಳಿಗೂ ರಾಜಕೀಯ, ಕೋಮುವಾದ ಎಂಬ ಬಣ್ಣ ಹಚ್ಚದಿದ್ದರೆ ಅದುವೆ ನೀವು ದೇಶಕ್ಕೆ ನೀಡುವ ಗೌರವ. ಎಲ್ಲಾ ವಿಚಾರಗಳಲ್ಲಿ ಧರ್ಮ, ರಾಜಕೀಯವೆಂಬ ದಾಳಗಳನ್ನು ಬಳಸಿಕೊಂಡು ಸಮಾಜದಲ್ಲಿ ವಿಷಬೀಜ ಬಿತ್ತುವ ದೇಶದ್ರೋಹಿಗಳನ್ನ ಧರ್ಮಾತೀತವಾಗಿ ದೇಶದಿಂದ ಹೊರ ಹಾಕಲು ಒಗ್ಗಟ್ಟಿನಿಂದ ಹೋರಾಡೋಣ.
ರಾಮ್-ರಹೀಮ್ ಭಾಯೀ ಭಾಯೀ ಅನ್ನೋ ನಾಡಲ್ಲಿ, ಮೂರ್ಖರು ಹಾಕಿದ ಸಣ್ಣ ಕಿಡಿಯನ್ನು ಬೆಂಕಿಯಾಗಿ ಉರಿಸುವ ಮಟ್ಟಿಗೆ ದಾರಿತಪ್ಪಿದವರು ಈಗಲಾದರೂ ಎಚ್ಚೆತ್ತುಕೊಂಡರೆ ಮುಂದೆ ಬೆಂಕಿ ಜ್ವಾಲಾಮುಖಿಯಾಗುವುದನ್ನು ತಪ್ಪಿಸಬಹುದು.
-ಮಾಗಿದ ಮನಸ್ಸು (ಪವಿತ್ರ, ಕೋಲಾರ)
Published On - 3:43 pm, Wed, 9 February 22