ಐ ಲವ್ ಯೂ.. ಅದೆಷ್ಟು ಸುಲಭದ ವಾಕ್ಯ. ಒಬ್ಬರನ್ನೊಬ್ಬರು ಇಷ್ಟಪಡುವಾಗ ಅದೆಷ್ಟು ಬಾರಿ ಹೀಗೆ ಹೇಳಿಲ್ಲ. ಹುಡುಗಿಗೆ ಪ್ರೊಪೋಸ್ ಮಾಡಿ ಐ ಲವ್ಯೂ ಅನ್ನುವುದಕ್ಕೆ ಪಡುವ ಪಾಡು, ಇಷ್ಟ ಪಟ್ಟಹುಡುಗನ ಮುಂದೆ ಐ ಲವ್ಯೂ (I Love You) ಎನ್ನಲು ನಾಚುವ ಹುಡುಗಿ ಹೀಗೆ ಹಲವಾರು ದೃಶ್ಯಗಳನ್ನು ನಿಜ ಜೀವನದಲ್ಲಿಯೂ ಸಿನಿಮಾದಲ್ಲಿಯೂ ನಾವು ನೋಡಿರುತ್ತೇವೆ. ಗಂಡ ಹೆಂಡತಿಯ ನಡುವೆಯೂ ಗೆಳೆಯ ಗೆಳತಿಯ ನಡುವೆಯೂ ಚಿಕ್ಕ ಪುಟ್ಟ ಮುನಿಸುಗಳೆಲ್ಲವೂ ಈ ಒಂದು ಮಾತಿನಿಂದ ಸರಿ ಹೋಗುತ್ತದೆ. ಆದರೆ ಅಪ್ಪ ಅಮ್ಮನ ಜತೆ? ಅವರ ಜತೆ ಜಗಳವಾಡಿ ಸ್ಸಾರಿ (Sorry) ಎಂದು ಹೇಳಿಬಿಡುತ್ತೇವೆ. ಆದರೆ ಲವ್ಯೂ ಅಮ್ಮ, ಲವ್ಯೂ ಅಪ್ಪ ಎಂದು ಹೇಳುವುದು ತುಂಬಾ ಅಪರೂಪ. ಅಪ್ಪ ಅಮ್ಮನನ್ನು ಬಿಟ್ಟು ದೂರದ ಊರಲ್ಲಿದ್ದರೆ ಅಪ್ಪ-ಅಮ್ಮನ ನೆನಪು ಕಾಡುತ್ತಲೇ ಇರುತ್ತದೆ. ಮಕ್ಕಳು ದೂರ ಇದ್ದಾರೆ. ಅವರು ಹೇಗಿದ್ದಾರೋ ಎಂಬ ಚಿಂತೆ ಊರಲ್ಲಿರುವ ಪೋಷಕರಿಗೆ ಇದ್ದೇ ಇರುತ್ತದೆ. ಫೋನ್ ಕರೆ ಮಾಡಿ ಮಾತನಾಡಬಹುದು, ವಿಡಿಯೊ ಕಾಲ್ ಮಾಡಿ ನೋಡಬಹುದು, ಟೆಕ್ಸ್ಟ್ ,ವಾಯ್ಸ್ ಸಂದೇಶ ಕಳುಹಿಸಬಹುದು. ಸಂಪರ್ಕ ವ್ಯವಸ್ಥೆ ಸುಧಾರಿಸಿದ್ದರೂ ಮಕ್ಕಳು ದೂರ ಇದ್ದಾರೆ. ಅವರು ಹೇಗಿದ್ದಾರೋ ಎಂಬ ಚಿಂತೆ ಅಪ್ಪ-ಅಮ್ಮನ ಮನಸ್ಸಲ್ಲಿ ಇದ್ದೇ ಇರುತ್ತದೆ. ದೂರದಲ್ಲಿದ್ದಾಗ ಗಂಟೆಗಟ್ಟಲೆ ಮಾತನಾಡಬೇಕಿಂದಿಲ್ಲ. ಆದರೆ ಒಮ್ಮೆ ಮಾತನಾಡಿದರೆ ಸಾಕು ಎಂದು ಅವರ ಮನಸ್ಸುಹಂಬಲಿಸುತ್ತಾ ಇರುತ್ತದೆ.
ಪಿಜಿಯಲ್ಲಿರುವಾಗ ನನ್ನ ಗೆಳತಿಯೊಬ್ಬಳು ಅಪರೂಪಕ್ಕೆ ಅವರ ಮನೆಗೆ ಕರೆ ಮಾಡಿ ಮಾತನಾಡುತ್ತಿದ್ದಳು. ಹಳ್ಳಿ ಬಿಟ್ಟು ದೂರದ ಬೆಂಗಳೂರಿಗೆ ಬಂದ ನಮ್ಮಂಥವರಿಗೆ ಇದು ವಿಚಿತ್ರ ಅನಿಸುತ್ತಿತ್ತು. ಮನೆಗೆ ದಿನಾ ಕರೆ ಮಾಡಿ ಹೇಳುವಂಥದ್ದೇನಿದೆ? ಅವರಿಗೂ ಏನೂ ಹೇಳುವಂಥದ್ದಿಲ್ಲ ಎಂದು ಹೇಳುತ್ತಿದ್ದಳು. ಸಹವಾಸ ದೋಷ ಎಂಬಂತೆ ನಮ್ಮ ರೂಂನಲ್ಲಿರುವ ಎಲ್ಲರೂ ಮನೆಗೆದಿನಾ ಕರೆ ಮಾಡಿ ಮಾತನಾಡುತ್ತಿದ್ದುದರಿಂದ ಅವಳೂ ಮನೆಗೆ ದಿನಾ ಕರೆ ಮಾಡತೊಡಗಿದಳು. ಒಂದೆರಡು ನಿಮಿಷದಲ್ಲಿ ಮಾತು ಮುಗಿಯುತ್ತಿತ್ತು. ಅವಳಮ್ಮ ಊಟ ಮಾಡಿದ್ದೀಯಾ ಎಂದು ಕೇಳಿದರೆ ಹೂಂ, ನೀನು?ಎಂದು ಹೇಳುತ್ತಿದ್ದಳು.ಮತ್ತೆಲ್ಲದ್ದಕ್ಕೂ ಹ್ಮ್, ಹೂಂ ಎಂದಷ್ಟೇ ಉತ್ತರ. ಕ್ರಮೇಣ ಈ ಎರಡು ನಿಮಿಷದ ಫೋನ್ ಕರೆ ದೀರ್ಘವಾಯಿತು. ಅಲ್ಲಿಂದ ಅಮ್ಮ ಮಾತನಾಡುತ್ತಲೇ ಇರುತ್ತಿದ್ದರು. ಇವಳು ಕೇಳಿಸಿಕೊಳ್ಳುತ್ತಲೇ ಇರುತ್ತಿದ್ದಳು. ನಾಳೆ ಮಾತಾಡ್ತೀನಿ ಎಂದು ಫೋನ್ ಇಡುತ್ತಿದ್ದಳು. ಕೊನೆಗೊಂದು ದಿನ ಅಮ್ಮನೂ ಅವಳು ಸುಮಾರು ಅರ್ಧ ಗಂಟೆ ಮಾತನಾಡಿದ್ದರು. ಅವಳ ಮುಖ ಗೆಲುವಾಗಿತ್ತು. ಅಮ್ಮ ಅದೇನು ಹೇಳಿದರು ಎಂದು ನಾವು ಕೇಳಲಿಲ್ಲ. ಅಮ್ಮನಲ್ಲಿ ಅದೆಷ್ಟು ಮಾತುಗಳಿತ್ತು ಎಂದು ನಮಗೆ ಅರ್ಥವಾಗಿತ್ತು.
ಆಫೀಸು ಕೆಲಸ ಮುಗಿಸಿ ಪಿಜಿಗೆ ಬಂದ ಕೂಡಲೇ ಮನೆಗೆ ಕರೆ ಮಾಡಿ ವಿಚಾರಿಸುತ್ತಿದ್ದಳು, ಅಮ್ಮ ಫೋನ್ ರಿಸೀವ್ ಮಾಡದಿದ್ದರೆ ಗಾಬರಿ ಆಗುವ ಹುಡುಗಿ. ಬದುಕು ಬದಲಾಗಿತ್ತು. ಒಂದು ದಿನ ಅವಳ ಅಮ್ಮ ಪಿಜಿಗೆ ಬಂದಾಗ, ನಿಮ್ಮ ಬಗ್ಗೆ ಹೇಳ್ತಾ ಇರ್ತಾಳೆ. ನಿಮ್ಮನ್ನು ನೋಡದೇ ಇದ್ರೂ ಹೆಸರು ಗೊತ್ತಿದೆ ಎಂದು ಹೇಳಿ ಮಾತನಾಡಿಸಿದರು.ಹಾಗಾದ್ರೆ ಫೋನಲ್ಲಿ ಎಲ್ಲ ಹೇಳ್ತಿರುತ್ತಿ ಎಂದು ನಾವೂ ಅವಳ ಕಾಲೆಳೆದೆವು.
ಅಪ್ಪ ಅಮ್ಮನ ಜತೆ ಫೋನ್ ಕರೆ ಮಾತನಾಡಿ ಮುಗಿಸುವಾಗ ಅತ್ತ ಕಡೆಯಿಂದ ಕಾಳಜಿ ಮಾತುಗಳೇ ಇರುತ್ತವೆ. ಹೀಗೆ ಫೋನಿಡುವಾಗ ಲವ್ಯೂ ಎಂದು ಹೇಳಿಬಿಡಿ. ಏಕಾಏಕಿ ಹೇಗೆ ಹೇಳೋದು ಎಂಬ ಗೊಂದಲ ಸಹಜ. ಆದರೆ ನಂಬಿ ಅದೊಂದು ಮ್ಯಾಜಿಕ್ ವರ್ಡ್. ಅವರಿಗೂ ತುಂಬಾ ಖುಷಿಯಾಗುತ್ತದೆ. ಅದು ಕೇವಲ ಪದವಲ್ಲ, ಕಾಳಜಿ, ಪ್ರೀತಿ, ಗೌರವ ಎಲ್ಲವೂ ಮಿಳಿತವಾದ ಪದ. ನಮ್ಮ ಆಪ್ತರಲ್ಲಿ ಲವ್ ಯೂ ಎಂದು ಹೇಳುತ್ತೇವೆ ಆದರೆ ಅಪ್ಪ ಅಮ್ಮನ ಜತೆ ಲವ್ಯೂ ಎಂದು ಹೇಳುವುದು ಕಡಿಮೆ. ಕಾಳಜಿಯ ಮಾತುಗಳಿಗಾಗಲೀ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಭಾಷೆಯ ಹಂಗಿಲ್ಲ. ಹಾಗೆ ಹೇಳದಿದ್ದರೂ ಪ್ರೀತಿ ಕಡಿಮೆ ಅಂತೇನಲ್ಲ, ಆದರೆ ಪ್ರೀತಿಯನ್ನು ಅಪ್ಪ ಅಮ್ಮನ ಮುಂದೆಯೂ ವ್ಯಕ್ತಪಡಿಸಬೇಕು. ಯಾಕೆಂದರೆ ಜೀವನ ಖುಷಿ ನಮ್ಮ ಕೈಯೊಳಗಿದೆ. ಬದುಕು ನಾಳೆ ಏನಾಗುತ್ತದೆ ಎಂಬುದನ್ನು ಬಲ್ಲವರಾರು?
ಇದನ್ನೂ ಓದಿ: ಮನೆಯ ಬಾಗಿಲುಗಳಿಗೂ ಬಾಯಿ ಬರುತ್ತಿದ್ದರೆ ಅವು ಸುಮ್ಮನಿರುತ್ತಿದ್ದವೇ?