ಏಕ್ ಪ್ಯಾರ್ ಕ ನಗ್ಮಾ ಹೈ, ಮೋಜೋಂ ಕಿ ರವಾನಿ ಹೈ..ಈ ಹಾಡು ಕೇಳುವಾಗ ರೋಮಾಂಚನವಾಗುತ್ತದೆ, ಕೆಲವೊಮ್ಮೆ ಕಣ್ಣು ಹನಿಗೂಡುತ್ತದೆ. ಅದ್ಯಾಕೆ ಎಂದು ಅರ್ಥವಾಗುತ್ತಿಲ್ಲ. ಹಿಂದಿ ಹಾಡುಗಳನ್ನು ಕೇಳುವ ಕ್ರೇಜ್ ಹುಟ್ಟಿಸಿದ್ದು ನಮ್ಮಪ್ಪ. ಹಿಂದಿ ಸಿನಿಮಾ ಅಥವಾ ಬಾಲಿವುಡ್ ಅಭಿಮಾನಿಯಾಗಿದ್ದ ನಮ್ಮಪ್ಪನಿಗೆ ಮನೋಜ್ ಕುಮಾರ್ ಇಷ್ಟ. ಹಾಗಾಗಿಯೇ ನನ್ನ ತಮ್ಮನಿಗೆ ಮನೋಜ್ ಎಂದು ಹೆಸರಿಟ್ಟಿದ್ದು. “ಏಕ್ ಪ್ಯಾರ್ ಕಾ ನಗ್ಮಾ ಹೈ, ಮೋಜೋಂ ಕಿ ರವಾನಿ ಹೈ, ಜಿಂದಗಿ ಔರ್ ಕುಚ್ ಭಿ ನಹೀ, ತೇರಿ ಮೇರಿ ಕಹಾನಿ ಹೈ …” ಇದು ಮನೋಜ್ ಕುಮಾರ್ ನಟಿಸಿದ ಶೋರ್ (1972) ಸಿನಿಮಾದ ಹಾಡು. 70ರ ದಶಕದಲ್ಲಿ ತೆರೆ ಮೇಲೆ ಬಂದ ಚಿತ್ರದ ಹಾಡುಗಳು ಪುರಾನಾ ಗೀತ್ ಅಥವಾ ಹಳೇ ಹಾಡುಗಳಾಗಿ 90ರದಶಕದಲ್ಲಿ ಹಳೇ ಹಿಂದಿ ಹಾಡುಗಳು ರಂಗೋಲಿಯಲ್ಲಿ ಬಂದಾಗ ನೋಡಿದ ಕೇಳಿದ ಹಾಡಾಗಿತ್ತು ಇದು. ಆಗ ಅದರ ಅರ್ಥವಾಗಲೀ ಸಾಹಿತ್ಯವಾಗಲೀ ನಮಗೆ ಗೊತ್ತಿರಲಿಲ್ಲ. ಸಂತೋಷ್ ಆನಂದ್ ಸಾಹಿತ್ಯಕ್ಕೆ ಲಕ್ಷ್ಮೀಕಾಂತ್ ಪ್ಯಾರೇಲಾಲ್ ಸಂಗೀತ ನೀಡಿ ಲತಾ ಮಂಗೇಶ್ಕರ್ (Lata Mangeshkar) ಮತ್ತು ಮುಕೇಶ್ ಹಾಡಿದ ಹಾಡು ಅದು. ಏಕ್ ಪ್ಯಾರ್ ಕ ನಗ್ಮಾ ಹೈ ಎಂಬುದು ಆಗ ನನಗೆ ಮನೋಜ್ ಕುಮಾರ್ ನಟಿಸಿದ ಸಿನಿಮಾದ ಹಾಡು ಅಷ್ಟೇ ಆಗಿತ್ತು. ವರ್ಷಗಳು ಕಳೆದಂತೆ ಹಿಂದಿ ಭಾಷೆ ಅರ್ಥವಾಗ ತೊಡಗಿತು. ಹಿಂದಿ ಹಾಡುಗಳನ್ನು ಕೇಳುವುದು ನೋಡುವುದು ದಿನಚರಿಯ ಭಾಗವಾಗುತ್ತಿದ್ದಂತೆ ಹಲವಾರು ಹಾಡುಗಳು ಹೆಚ್ಚು ಹೆಚ್ಚು ಅರ್ಥವಾಗತೊಡಗಿತ್ತು. ಲತಾ ದೀದಿ ಎಂಬ ಲತಾ ಮಂಗೇಶ್ಕರ್ ಹಾಡಿದ ಈ ಹಾಡು ಹೃದಯಕ್ಕೆ ಹತ್ತಿರವಾಗಿದ್ದು ಹಾಗೆ.
ಲತಾ ಮತ್ತು ಮುಕೇಶ್ ಅವರ ಮಧುರ ದನಿ ಜತೆಗೆ ಆ ಹಾಡಿನಲ್ಲಿ ಮನಸ್ಸು ಸೆಳೆದದ್ದು ಹಿನ್ನೆಲೆಯಲ್ಲಿ ಪಿಟೀಲು ದನಿ. ಸಂಗೀತ ನಿರ್ದೇಶಕ ಪ್ಯಾರೆಲಾಲ್ ರಾಮ್ ಪ್ರಸಾದ್ ಶರ್ಮಾ ಅಲಿಯಾಸ್ ಪ್ಯಾರೆಲಾಲ್ ಒಬ್ಬ ನಿಪುಣ ಪಿಟೀಲು ವಾದಕರಾಗಿದ್ದರು.ಆದರೆ ಈ ಹಾಡಿನಲ್ಲಿ ಜೆರ್ರಿ ಫರ್ನಾಂಡಿಸ್ ಪಿಟೀಲು ನುಡಿಸಿದ್ದರು ಎಂದು ಸಂದರ್ಶನವೊಂದರಲ್ಲಿ ಪ್ಯಾರೇಲಾಲ್ ಹೇಳಿದ್ದರು. ಹಾಡು ಜೆರ್ರಿಯ ಪಿಟೀಲು ದನಿಯೊಂದಿಗೆ ಆರಂಭ . ಲತಾ ಅವರ ಹಮ್ಮಿಂಗ್, ಪಲ್ಲವಿಯ ನಂತರ ಮಂದ ಮಾರುತದಂತೆ ಲಾ ಲಾ ಲಾ ಲಾ ಲಾ, ಮತ್ತೆ ಜೆರ್ರಿ. ನಂತರ ಮುಕೇಶ್. ಸಂತೋಷ್ ಆನಂದ್ ಅವರ ಬರವಣಿಗೆಯ ಮಾರ್ಮಿಕತೆ, ಲತಾ- ಮುಕೇಶ್ ಹಾಡು, ಸಮುದ್ರ, ಪಿಟೀಲು… ಹಾಡೊಂದು ಹೃದಯಕ್ಕೆ ತಾಕಲು ಮತ್ತೇನು ಬೇಕು? “ಜಿಂದಗೀ ಔರ್ ಕುಛ್ ಭೀ ನಹೀ, ತೇರಿ ಮೇರಿ ಕಹಾನಿ ಹೇ ..ವಾಹ್ ಅದೆಷ್ಟು ಚಂದವಾದ ಸಾಲುಗಳು.
ಈ ಹಾಡು ಮನೋಜ್ ಕುಮಾರ್ ಅವರ ಪ್ರೀತಿಯ ಗೀತರಚನೆಕಾರ ಸಂತೋಷ್ ಆನಂದ್ ಅವರು ರಚಿಸಿದ ಅತ್ಯುತ್ತಮ ಹಾಡು. ಅಂದೊಮ್ಮೆ ಇಂಡಿಯನ್ ಐಡಲ್ ನಲ್ಲಿ ಸಂತೋಷ್ ಜೀ ಬಂದಾಗ ನೇಹಾ ಕಕ್ಕರ್ ಈ ಹಾಡನ್ನು ಅವರ ಮುಂದೆ ಹಾಡಿದ್ದರು. ಕಣ್ಣು ಹನಿಗೂಡಿದ್ದು ನಿಜ, ಆದರೆ ಲತಾ ದೀದಿಯ ದನಿಗೆ ಬೇರೆ ಯಾವುದೂ ಸಮ ಅಲ್ಲವೇ ಅಲ್ಲ. ಹಲವಾರು ಗಾಯಕರು ಈ ಹಾಡನ್ನು ಹಾಡಿದ್ದಾರೆ. ಆದರೆ ಲತಾ ದೀದಿಯ ದನಿಗೆ ಮಾತ್ರ ಈ ಹಾಡಿಗೆ ನ್ಯಾಯ ಒದಗಿಸಲು ಸಾಧ್ಯವಾಗಿದ್ದು ಎಂಬುದು ನನ್ನ ಅನಿಸಿಕೆ.
ಹಾಡುಗಳು ನಮ್ಮ ಬದುಕಿಗೆ ಹೆಚ್ಚು ಹತ್ತಿರವಾಗುವುದು ಅದು ನಮ್ಮ ಜೀವನದ ಯಾವುದಾದರೊಂದು ಸಂಗತಿಯೊಂದಿಗೆ ಬೆರೆತಾಗ. ಕೆಲವೊಂದು ದುಃಖಗಳನ್ನು ಮರೆಯಲು ನಾನು ಹಾಡು ಕೇಳುತ್ತಾ ಇರುತ್ತೇನೆ. ವರ್ಷಗಳ ಹಿಂದೆ ಮನಸ್ಸಿಗೆ ತುಂಬಾ ನೋವಾದ ಘಟನೆಯೊಂದು ನಡೆದಾಗ ಹಾಡು ಕೇಳುತ್ತಾ ಕುಳಿತಿದ್ದೆ . ಕುಚ್ ಪಾಕರ್ ಖೋನಾ ಹೈ..ಕುಚ್ ಖೋಕರ್ ಪಾನಾ ಹೈ ಎಂಬ ಸಾಲು ಬಂದಾಗ ಕಣ್ಣ ಹನಿ ಹರಿಯುತ್ತಲೇ ಇತ್ತು. ಆಪ್ತರೊಬ್ಬರ ಅಗಲಿಕೆ ತುಂಬಾನೇ ಕಾಡಿದ್ದ ಕ್ಷಣವದು. ಇವತ್ತು ಮತ್ತೆ ಹಾಡು ಕೇಳುವಾಗ ಮತ್ತೆ ಕಣ್ಣು ಹನಿಗೂಡಿತು.ಆ ಹಾಡುಗಳನ್ನು ಬದುಕಿನ ಭಾಗವಾಗುವಂತೆ ಮಾಡಿದ ಲತಾ ದೀದಿ ಪಂಚಭೂತಗಳಲ್ಲಿ ಲೀನವಾಗಿದ್ದರು.
ಇದನ್ನೂ ಓದಿ: ಅಪ್ಪ ಅಮ್ಮನಿಗೆ ಕರೆ ಮಾಡಿ ಮಾತು ಮುಗಿಸುವಾಗ ಲವ್ಯೂ ಎಂದು ಹೇಳಿ ಬಿಡಿ