ಮಳೆ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಅತಿವೃಷ್ಟಿ, ಅನಾವೃಷ್ಟಿಯಂತಹ ಸೃಷ್ಟಿಯಾಗೋ ಸಂಕಷ್ಟಗಳನ್ನೆಲ್ಲ ಬದಿಗಿಟ್ರೆ, ಮಳೆಯನ್ನು ಪ್ರೀತಿಸ್ದೆ ಇರೋರಿಲ್ಲ. ಅದರಲ್ಲೂ ಪ್ರವಾಸ ಪ್ರಿಯರಿಗೆ ಮಳೆಯಂದ್ರೆ ಎಲ್ಲಿಲ್ಲದ ಪ್ರೇಮ. ಬಹುತೇಕರು ತಮ್ಮ ಪ್ರವಾಸವನ್ನು ಚಿರಸ್ಮರಣೀಯವಾಗಿಸಲು ಮಳೆಗಾಲದಲ್ಲಿ ಪ್ರವಾಸ ಮಾಡಲು ಬಯಸುತ್ತಾರೆ. ನೀವೇನಾದರೂ ಈ ಮಾನ್ಸೂನ್‌ನಲ್ಲಿ ಪ್ರವಾಸ ಮಾಡಲು ಪ್ಲಾನ್ ಮಾಡಿದ್ದರೆ ಪ್ರತಿಯೊಬ್ಬ ಪ್ರವಾಸಿಗನೂ ಭೇಟಿ ನೀಡಬಹುದಾದ ಕನಾರ್ಟಕದ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
ಕರ್ನಾಟಕದ ಬಯಲು ಪ್ರದೇಶವನ್ನು ಕರಾವಳಿ ಪ್ರದೇಶದೊಂದಿಗೆ ಸಂಪರ್ಕಿಸುವ ಪರ್ವತಗಳ ಹಾದಿಯಲ್ಲಿರುವ ಸುಂದರ ಪಟ್ಟಣ ಆಗುಂಬೆ. ಹಚ್ಚ-ಹಸಿರಾಗಿ ಕಂಗೊಳಿಸೋ ಕಾಡುಗಳು, ತುಂಬಿ ಹರಿಯುತ್ತಾ ಹೊಳೆವ ತೊರೆಗಳು, ಚಿಮ್ಮಿ ಧುಮ್ಮಿಕ್ಕುವ ಸಣ್ಣ ಜಲಪಾತಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಬಿಡದೆ ಸುರಿವ ಜಡಿ ಮಳೆಯಲ್ಲಿ ಕುಂದಾದ್ರಿ ಬೆಟ್ಟಗಲ್ಲಿ ಟ್ರೆಕಿಂಗ್ ಮಾಡುವ ಅನುಭವ ಅವಿಸ್ಮರಣೀಯವಾದದ್ದು.
‘ಆಕಸ್ಮಿಕ’ ಚಿತ್ರದಲ್ಲಿ ಹಂಸಲೇಖ ಸಂಗೀತದಲ್ಲಿ ಬಣ್ಣಿಸಿರುವಂತೆ ಆಗುಂಬೆಯ ಹೊನ್ನಸಂಜೆಯ ಸೂರ್ಯಾಸ್ತವನ್ನು ಸವಿದವರಿಗೆ ಅದರ ಚೆಲುವನ್ನು ಮರೆಯಲು ಸಾಧ್ಯವಾಗುವುದಿಲ್ಲ. ಪ್ರಕೃತಿ ಪ್ರೀಯರಿಗೆ ಸ್ವರ್ಗ ಸದೃಷ್ಯದಂತಿರುವ ಆಗುಂಬೆಯ ಸಮೀಪದಲ್ಲೇ ಭವ್ಯವಾದ ದೈವೀ ಅನುಭವ ನೀಡುವ ಶೃಂಗೇರಿ ಶಾರದಾ ಪೀಠವಿದೆ.
ಬೆಂಗಳೂರಿನಿಂದ ಆಗುಂಬೆಗಿರುವ ದೂರ ಸರಿಸುಮಾರು 377 ಕಿ.ಮೀಟರ್‌ಗಳು. ಆಗುಂಬೆ ಘಾಟಿಯ ಮೂಲಕ ಸಾಗುವ ಈ ಹಾದಿಗೆ ಬೈಕ್ ಸವಾರರಿಗೆ ರೋಚಕ ಅನುಭವವನ್ನು ನೀಡುತ್ತದೆ. ಪ್ರವಾಸಿಗರು ತಂಗಲು ಉತ್ತಮ ಹೋಟೆಲ್ ಮತ್ತು ರೆಸಾರ್ಟ್ಗಳು ಮನಮೋಹಕ ವ್ಯೂ-ಪಾಯಿಂಟ್‌ಗಳ ಮಧ್ಯದಲ್ಲೇ ದೊರಕುತ್ತವೆ.
ಪಶ್ಚಿಮ ಘಟ್ಟಗಳಲ್ಲಡಗಿದ್ದ ಪ್ರಾಚೀನ ಸಣ್ಣ ಪಟ್ಟಣ ದಾಂಡೇಲಿ ಪ್ರವರ್ಧಮಾನಕ್ಕೆ ಬಂದು ಪ್ರಖ್ಯಾತವಾಗಿದ್ದೇ ಪ್ರವಾಸಿಗರಿಂದ ಎನ್ನೋದು ರೋಚಕ ಸಂಗತಿ. ಸಾಹಸಿ ಪ್ರವೃತ್ತಿಯ ಪ್ರವಾಸಿಗರಿಗಿದು ಅತ್ಯುತ್ತಮ ತಾಣ. ಪ್ರತೀ ವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಪ್ರಸಿದ್ಧ ವನ್ಯಜೀವಿ ಆವಾಸಸ್ಥಾನವಾಗಿದೆ. ಕಾಳೀ ನದಿ ಪ್ರಮುಖ ಆಕರ್ಷಣೆಯಾಗಿ ಪಟ್ಟಣವನ್ನು ಪೊರೆಯುತ್ತಾ ಬಂದಿದೆ. ಜಂಗಲ್ ಸಫಾರಿಗಳು, ಟ್ರೆಕಿಂಗ್, ಕ್ಯಾಂಪಿಂಗ್, ವೈಟ್ ವಾಟರ್ ರಾಫ್ಟಿಂಗ್, ಕಯಾಕಿಂಗ್ ಇತ್ಯಾದಿ ಸಾಹಸಮಯ ಮತ್ತು ಮನೋರಂಜನಾತ್ಮಕ ಕ್ರೀಡೆಗಳು ದಾಂಡೇಲಿಯ ಪ್ರಮುಖ ಆಕರ್ಷಣೆಗಳಾಗಿವೆ.
ಬೆಂಗಳೂರಿನಿಂದ ದಾಂಡೇಲಿಗೆ ಪ್ರಯಾಣದ ಅವಧಿಯು 8 ಗಂಟೆ 48 ನಿಮಿಷಗಳು ಮತ್ತು ಬಸ್‌ನ ಸರಾಸರಿ ಬೆಲೆ ರೂ 600. ಹಬ್ಬಗಳು ಮತ್ತು ವಾರಾಂತ್ಯಗಳಲ್ಲಿ ಬೆಲೆಗಳು ಏರಿಕೆಯಾಗುತ್ತವೆ, ಬಸ್‌ನ ಬೆಲೆಯ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯಲು ಆಯಾ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ.
ಕರ್ನಾಟಕದ ಸುಂದರ ಜಿಲ್ಲೆಗಳಲ್ಲೊಂದಾದ ಮಡಿಕೇರಿ ಕೂರ್ಗ್ ಎಂಥಲೇ ಪ್ರಖ್ಯಾತವಾಗಿದೆ. ಕರುನಾಡಿನ ಜೀವನದಿಯಾಗಿರುವ ಕಾವೇರಿಯ ಉಗಮಸ್ಥಾನವಾದ ತಲಕಾವೇರಿ ಕೊಡಗನ್ನ ಪುಣ್ಯಸ್ಥಾನವಾಗಿಸಿದೆ. ವಿಶಾಲವಾದ ಕಾಫೀ, ಏಲಕ್ಕಿ, ಭತ್ತದ ತೋಟಗಳ ಭೂದೃಷ್ಯಗಳು ಮಾನ್ಸೂನ್ ಕಾಲದಲ್ಲಿ ಕೊಡಗಿನ್ನು ಮತ್ತಷ್ಟು ಮನಮೋಹಕವಾಗಿಸುತ್ತದೆ. ಐತಿಹಾಸಿಕ ಪ್ರವಾಸಿ ಸ್ಥಳಗಳಾಗಿರುವ ರಾಜಾಸೀಟ್, ಅರಮನೆಗಳಿಗೆ ಭೇಟಿ ನೀಡುವ ಮೂಲಕ ಕೊಡಗಿನ ಸಂಸ್ಕೃತಿಯನ್ನು ಸವಿಯಬಹುದಗಿದೆ.
ಇದನ್ನೂ ಓದಿ: ಬಾಲಿಗೆ ಹೋಗೋ ಪ್ಲಾನ್ ಇದೆಯಾ?; ನಿಮಗಿಲ್ಲಿದೆ ಖುಷಿ ಸುದ್ದಿ
ಬೆಂಗಳೂರಿನಿಂದ ಮಡಿಕೇರಿ 255ಕಿ.ಮೀ.ಗಳ ಅಂತರದಲ್ಲಿದ್ದು. ಸಾಕಷ್ಟು ಸರ್ಕಾರಿ ಹಾಗೂ ಖಾಸಗೀ ಬಸ್ ವ್ಯವಸ್ಥೆ ಲಭ್ಯವಿರುತ್ತದೆ.
ಮಾನ್ಸೂನ್ ಮಳೆಯ ಚುಮು-ಚುಮು ಚಳಿಯಲ್ಲಿ ಚಿಕ್ಕಮಗಳೂರು ಸ್ವರ್ಗಸದೃಶ್ಯವೇ ಸರಿ. ಕರ್ನಾಟಕದ ಕಾಫೀನಾಡು ಎಂದು ಜನಪ್ರೀಯವಾಗಿರುವ ಈ ಜಿಲ್ಲೆ ಪಶ್ಚಿಮ ಘಟ್ಟಗಳಲ್ಲಿನ ಸುಪ್ರಸಿದ್ದ ಗಿರಿದಾಮಗಳಲ್ಲೊಂದು. ಕಡಿದಾದ ಪರ್ವತ ಹಾದಿಗಳು, ಹಲವಾರು ಬೆಟ್ಟಗಳು, ಕಣಿವಿಗಳು, ಸಿಹಿನೀರಿನ ತೊರೆಗಳು ಮತ್ತು ಕರ್ನಾಟಕದ ಅತೀ ಎತ್ತರದ ಮುಳ್ಳಯ್ಯನಗಿರಿ ಶಿಖರ ಸೇರಿದಂತೆ ಇನ್ನೂ ಹಲವಾರು ಬೆಟ್ಟಗಳಿಗೆ ತವರಾಗಿ ಚಾರಣಿಗರ ನೆಚ್ಚಿನ ತಾಣವಾಗಿದೆ.
ಹಚ್ಚ ಹಸಿರಿನ ದಟ್ಟ ಕಾಡುಗಳು, ಕಾಫೀ ತೋಟಗಳ ಆಹ್ಲಾದಕರ ಸುವಾಸನೆ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತದೆ. ಕುದುರೆ ಮುಖ, ಹಬ್ಬೆ ಜಲಪಾತ, ಭದ್ರಾ ವನ್ಯಜೀವಿ ಅಭಯಾರಣ್ಯಗಳು ಚಿಕ್ಕಮಗಳೂರಿನಲ್ಲಿವೆ.
ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಸರಾಸರಿ 5 ಗಂಟೆಗಳ ಪ್ರಯಾಣ. ಬಸ್ ಸೌಲಭ್ಯಗಳೂ ಉತ್ತಮವಾಗಿವೆ.
ಮಳೆಗಾಲದಲ್ಲಿ ಪ್ರವಾಸಗಳು ಅತ್ಯಂತ ಆಹ್ಲಾದಕರವಾಗಿರುತ್ತವೆ. ಪಶ್ಚಿಮ ಘಟ್ಟಗಳಲ್ಲಿರುವ ಸಾಕಷ್ಟು ತಾಣಗಳು ಅತ್ಯಂತ ರೋಚಕ ಮತ್ತು ಎಂದೂ ಮರೆಯಲಾಗದ ಅನುಭವಗಳನ್ನು ನೀಡುತ್ತವೆ. ಆದರೆ ಪ್ರವಾಸ ಸುರಕ್ಷಿತವಾಗಿರುವಂತೆ ಮುಂಜಾಗೃತೆಯ ಕ್ರಮಗಳನ್ನು ಕೈಗೊಂಡಲ್ಲಿ ಉತ್ತಮ.
ಲೇಖನ: ದರ್ಶಿನಿ ತಿಪ್ಪಾರೆಡ್ಡಿ
ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ
ಎಸ್. ಡಿ. ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರ – ಉಜಿರೆ
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Wed, 17 July 24