ಇನ್ನೇನು ಕೆಲವೇ ಗಂಟೆಗಳಲ್ಲಿ ದೇಶದಲ್ಲಿ ಅಬ್ಬರದ ಮ್ಯುಸಿಕ್ಕು, ಸೂರ್ಯನನ್ನೇ ನಾಚಿಸುವ ಬೆಳಕು, ಮಿರಿ ಮಿರಿ ಪೋಷಾಕು, ಇವೆಲ್ಲಾ ಹೊಸ ವರ್ಷದ ಝಲಕ್ಕಿನೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ಜನರು ತುದಿಗಾಲಿನಲ್ಲಿ ನಿಂತಿದ್ದಾರೆ. ಹೊಸ ವರ್ಷಾಚರಣೆಗೆ ಅಬ್ಬರವೇನು ಕಡಿಮೆ ಇರಲ್ಲ. ಕೊರೊನಾ ಕಾಲವನ್ನು ಬಿಟ್ಟರೇ ಪ್ರತಿ ವರ್ಷ ಅಬ್ಬರಕ್ಕೆ ಮಿತಿ ಇಲ್ಲದೆ ಬೆಳೆಯುತ್ತಿರುತ್ತದೆ. ಈ ಅಬ್ಬರತೆ ಇತ್ತೀಚಿಗಷ್ಟೆ ಅಂಟಿಕೊಂಡದ್ದು. ಇಲ್ಲಿ ಹಲವಾರು ಗೊಂದಲಗಳಿವೆ, ಹೊಸ ವರ್ಷದ ಆಚರಣೆಯ ಅರ್ಥವೇನು? ಹೊಸ ವರ್ಷದ ಯಾವಾಗ? ಹೊಸ ವರ್ಷದ ಆಚರಣೆಯು ಅನಿವಾರ್ಯವೇ? ಒಂದು ವಿಷಯ ಅಂದಾಕ್ಷಣ ಅಲ್ಲಿ ಪರ ವಿರೋಧ ಚರ್ಚೆಗಳು ಅಗತ್ಯ ಹಾಗೂ ಸಾಮಾನ್ಯ ಇಲ್ಲಿಯೂ ಅದೇ ಚರ್ಚೆ.
ಮಾನವನ ಜಂಜಾಟದ ಈ ಬದುಕಲ್ಲಿ ಸಂಭ್ರಮಗಳಿಗೆ ಹೆಚ್ಚು ಒತ್ತು ನೀಡುತ್ತೇವೆ. ಅದು ಕೆಲ ಸಮಯಕ್ಕಾದರೂ ಸಂತಸದ ದಾಸರಾಗಲು. ಸದಾ ನೂರೆಂಟು ಯೋಚನೆಗಳನ್ನೇ ಚಿಂತಿಸುವುದೂ ಸದಾ ಕಾರ್ಯಮಗ್ನರಾಗಿರುವುದೂ ಹಲವಾರು ರೀತಿಯ ಮಾನಸಿಕ ಅನಾರೋಗ್ಯಕ್ಕೆ ಆಹ್ವಾನವಿತ್ತಂತೆ. ಇದೆ ಕಾರಣಕ್ಕೆ ನಮ್ಮ ಪೂರ್ವಿಕರು ಸಂಭ್ರಮ-ಸಂತೋಷಗಳ ಆಚರಣೆಗೆ ತೊಡಗಿದ್ದೂ ಮತ್ತು ಆ ಸಂಭ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದದ್ದು. ಆದರೆ ಎತ್ತಣ ಸಾಗ್ತಿದೆ ಇತ್ತೀಚಿನ ಚಿತ್ರಣ. ಆಚರಣೆಗಳು ನಮ್ಮ ಪ್ರತಿಷ್ಠೆಗಳ ತೋರ್ಪಡಿಸುವ ಮಾರ್ಗಗಳಾಗುತ್ತಿವೆ.
ಈ ಹೊಸ ವರ್ಷಗಳಲ್ಲಂತೂ ವಿಭಿನ್ನಾಭಿಪ್ರಾಯಗಳು ಮಳೆಗಾಲದ ಅಣಬೆಗಳಂತೆ ಜನನ – ಪುನರ್ಜನನ ಪಡೀತಿರುತ್ತವೆ. ಒಂದು ಹೊಸ ವರ್ಷ ನಮಗಲ್ಲಾ, ನಾವು ಸನಾತನದವರು, ಪ್ರಕೃತಿಯೇ ಬರಮಾಡಿಕೊಳ್ಳುವ ಹೊಸತನವೇ ನಮಗೆ ಹೊಸ ವರ್ಷ ಅನ್ನೋ ಮಂದಿ. ಇನ್ನೊಂದು ಬದಲಾಗುತ್ತಿರುವ ಜಗದ ಜೊತೆ ನಾವು ಹೆಜ್ಜೆಹಾಕಿದರೆ ಮಾತ್ರ ಅಭಿವೃದ್ಧಿ. ಹೊಸವರ್ಷ ಜಗತ್ತಿನೊಂದಿಗೆ ನಮಗೂ ಸಹ ಅನ್ನೋ ಬಹುತೇಕ ಕಾರ್ಪೊರೇಟ್ ಮಂದಿ. ಮತ್ತೊಂದು ಅರೇ ಹೊಸ ವರ್ಷಕ್ಕೆ ಕ್ಯಾಲೆಂಡರ್ ಬದಲಾಗಬಹುದಷ್ಟೇ, ಬದುಕಲ್ಲಾ ಅನ್ನೋ ಜನ. ಇಲ್ಲಿ ನಾವುಗಳು ಯಾವ ಗುಂಪಿಗೆ ಸೇರುತ್ತೇವೆ ಅನ್ನೋದು ಮುಖ್ಯ ಅಲ್ಲ, ಬದಲಿಗೆ ನಮ್ಮ ಆಚರಣೆಗಳು ಎಷ್ಟರ ಮಟ್ಟಿಗೆ ಸರಿ ಅನ್ನೋದು ಮುಖ್ಯ. ಆಚರಣೆ ಕೇವಲ ಸಂತಸವನ್ನು ಹಂಚಬೇಕೆ ಹೊರತು ಗೊಂದಲಗಳನಲ್ಲ.
ಜನವರಿಯಲ್ಲಿ ಹೊಸವರ್ಷದ ಆಚರಣೆ ಮಾಡುವವರ ಕುರಿತು ಒಂದಷ್ಟು ಅವಹೇಳನಕಾರಿ ಪೋಸ್ಟ್ಗಳು, ಅಭಿಯಾನಗಳನ್ನು ಮಾಡಿ ಇತರರ ಕಾಲೆಳೆಯುವವರೇ, ಸ್ವಾತಂತ್ರ್ಯ ಭಾರತದಲ್ಲಿ ನಮ್ಮಿಚ್ಚಿಯಂತೆ ಬದುಕಲು ಸಂವಿಧಾನ ಈಗಾಗಲೇ ಅವಕಾಶ ಕೊಟ್ಟಿದೆ ಅನ್ನೊದು ನೆನಪಿರಲಿ. ಪ್ರಜೆಯಾಗಿ ನಮ್ಮ ಕರ್ತವ್ಯ ಸಂವಿಧಾನದ ಪಾಲನೆ ಹಾಗೂ ಇತರರನ್ನ ಗೌರವಿಸುವುದಾಗಿದೆ.
ಕೊಂಚವೇ ಬದಲಾವಣೆಯ ಗಾಳಿ ಬೀಸುತ್ತಿರಲು ನಾವು ಸಂಪೂರ್ಣ ಪಾಶ್ಚಿಮಾತ್ಯರಾದೆವು ಎಂಬ ಹುಚ್ಚು ಭ್ರಮೆಯಲ್ಲಿರುವ ನಾಗರೀಕರೇ, ಎಷ್ಟೇ ಆಗಲೀ ನೀವು ಈ ನೆಲದ ಕೂಸುಗಳು, ನಿಮ್ಮ ಹೊಸ ವರ್ಷದ ಆಚರಣೆಗೆ ನಮ್ಮ ಅಭ್ಯಂತರವಿಲ್ಲ ಆದರೆ ಈಗೀಗ ಹೊಸ ವರ್ಷದ ಆಚರಣೆಯು ಸಂಭ್ರಮಕ್ಕಿಂತ ಹೆಚ್ಚಾಗಿ ಸಂಕಟಗಳ ಹೊತ್ತು ತರುತಲಿವೆ. ಹೊಸ ವರ್ಷದ ನೆಪದಲ್ಲಿ ಮದ್ಯಪಾನ, ತಡ ರಾತ್ರಿಯ ಪಾರ್ಟಿ, ಇತರರರಿಗೆ ಕರ್ಕಶವೆನಿಸುವ ಅಬ್ಬರದ ಸಂಗೀತ, ಬೇಡವೆನಿಸುವ ಧಿರಿಸು, ಅನಗತ್ಯ ವಿದ್ಯುತ್ ದೀಪಾಲಂಕಾರ ಇವೆಲ್ಲವೂ ಆಡಂಬತೆಯ ತೋರ್ಪಡಿಸುವ ಮಾರ್ಗಗಳಾಗುತ್ತಿವೆ. ಆದರೆ ಹೊಸ ವರ್ಷಾಚರಣೆಗೆ ಸಂಭ್ರಮಿಸಲು ಇವೆಲ್ಲಾ ಕಡ್ಡಾಯ ಎಂಬ ನಿಯಮ ಸದ್ಯಕ್ಕಂತೂ ಭಾರತ ಸಂವಿಧಾನದಲ್ಲಿ ಇಲ್ಲ. Roam like a Roman, when you’re in Rome ಎಂದರೇ ರೋಮ್ ದೇಶದಲ್ಲಿದ್ದಾಗ ನೀ ಸಂಪೂರ್ಣ ರೋಮನ್ನರ ಹಾಗೆ ಬದಲಾಗು ಎಂಬರ್ಥವಲ್ಲ, ರೋಮನ್ನರ ಕೆಲವು ವಿಚಾರಗಳನ್ನು ಅಳವಡಿಸಿಕೊಳ್ಳುವುದು ಎಂದರ್ಥ. ಇದು ನಮ್ಮ ಉಳಿವಿಗೆ ಅಗತ್ಯ. ಆದ್ದರಿಂದ ಈ ಅರ್ಥಗಳೆ ಅಪಾರ್ಥಗಳಾಗಿ ಹೋಗುತ್ತಿವೆ. ಎಷ್ಟೇ ಆಗಲಿ ನಾವು ನಮಗಾಗಿ ಬದುಕುವೆವು, ನಮಗೆ ಬೇಕಾದ ಹಾಗೆ, ನಮ್ಮ ಮೂಗಿನ ನೇರಕ್ಕೆ.
ಇನ್ನೊಂದು ಗುಂಪಿನ ನಿಲುವು ಜಡವಾಗಿ ಧೃಡವಾಗಿದೆ. ಕ್ಯಾಲೆಂಡರ್ ಬದಲಾಗುತ್ತೆ, ಆಯಸ್ಸು ಕಡಿಮೆಯಾಗತ್ತೆ ಅದರಲ್ಲೇನು ವಿಶೇಷ ಎನ್ನುವವರು. ಇವರ ತಕರಾರೇನಿಲ್ಲ. ವಿವಿಧತೆಯಲ್ಲಿ ಏಕತೆ ಎಂಬ ದೇಶವಾಸಿಗಳಾದ ನಾವು ಕೊಂಚವೇ ಆಲೋಚಿಸುವುದಾದರೆ ಜನವರಿಯ ಹೊಸವರ್ಷದ ಆಚರಣೆ ಅನಿವಾರ್ಯವೇ ಸರಿ. ಜಗತ್ತಿನ ಅನೇಕಾನೇಕ ದೇಶಗಳು ಈ ಆಚರಣೆಯ ಪಾಲಿಸುತ್ತಿದೆ. ಇತರ ದೇಶಗಳ ನಡುವೆ ಉತ್ತಮ ಬಾಂಧವ್ಯ ಹೊಂದಿರುವ ನಾವು ಈ ವಿಚಾರವನ್ನು ಒಪ್ಪಲೇಬೇಕಿದೆ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಸಲುವಾಗಿ. ನಮ್ಮ ನಿತ್ಯ ಕರ್ಮಗಳಿಗೆ ನಾವು ಇದೇ ಕ್ಯಾಲೆಂಡರಿನ ಮೊರೆ ಹೋಗುತ್ತೇವೆ ಅಲ್ಲವೆ. ಇದರ ಆಚರಣೆ ಕಾನೂನು ಬಾಹಿರವಂತೂ ಅಲ್ಲ.
ಇನ್ನೊಂದು ಪ್ರಕೃತಿಯೇ ಬರಮಾಡಿಕೊಳ್ಳುವ ಹೊಸತನ. ಇಲ್ಲಿನ ನೆಲದ ಗುಣದೊಂದಿಗೆ ನಮ್ಮ ಉಳಿವಿಗೆ ನಮ್ಮ ಪೂರ್ವಿಕರು ಹಲವಾರು ಆಚರಣೆಗಳನ್ನು ಮಾಡುತ್ತಾ ಬಂದಿದ್ದಾರೆ. ಇಲ್ಲಿವರೆಗೂ ಬಹಳಷ್ಟು ಆಚರಣೆಗಳಿಗೆ ಕಾರಣ ತಿಳಿದುಬಂದಿಲ್ಲ ಅಂದ ಮಾತ್ರಕ್ಕೆ ಅವೆಲ್ಲವೂ ಮೌಢ್ಯ ಅಂತಲೂ ಅಲ್ಲಾ. ಚೈತ್ರ ಮಾಸದ ಎಳೆ ಬಿಸಿಲು ಗಾಢವಾಗಿರುತ್ತದೆ, ಇದು ಕಾಲ ಕಳೆದಂತೆ ಇನ್ನೂ ಗಾಢತೆಯ ಹೊಂದುತ್ತಲಿರುತ್ತದೆ. ಇದಕ್ಕಾಗಿ ಈ ಉಷ್ಣತೆಗೆ ನಮ್ಮ ದೇಹವನ್ನು ಒಗ್ಗಿಸಲೆಂದು ಯುಗಾದಿಯ ಅಭ್ಯಂಜನಕ್ಕೆ ಮಹತ್ವ. ಈ ಒಂದು ದಿನದ ಅಭ್ಯಂಜನದ ಎಣ್ಣೆ ವರ್ಷಪೂರ್ತಿ ನಮ್ಮ ದೇಹವನ್ನು ತಂಪಾಗಿರಿಸಲಿದೆ ಎಂಬ ನಂಬಿಕೆ ಮತ್ತದು ವೈಜ್ಞಾನಿಕವಾಗಿ ಸತ್ಯವೆಂದೂ ತಿಳಿದು ಬಂದಿದೆ.
ಇಲ್ಲಿ ಜನವರಿಯ ಹೊಸವರ್ಷದ ಆಚರಣೆಯೂ ಆಗಲಿ, ಅದರೊಟ್ಟಿಗೆ ಯುಗಾದಿಯ ಪಾರಂಪರಿಕ ಆಚರಣೆಯೂ ಸಾಗಲಿ. ಎರಡೆರಡೂ ಆಚರಣೆಗಳ ಪಾಲನೆ ತಪ್ಪಲ್ಲಾ ಅಲ್ವಾ?
ಅಸಲಿಗೆ ಆಗಬೇಕಾಗಿರುವ ಹೊಸ ವರ್ಷದ ಆಚರಣೆಗಳ ನಿಜಾರ್ಥ ಯಾರು ತಿಳಿಯಲು ಸಿದ್ಧರಿದ್ದಾರೆ? ಈಗ ನಾವು ತಿಳಿಯೋಣ ಬನ್ನಿ
ಅದನ್ನೊರತುಪಡಿಸಿ ನಿಮ್ಮ ಆಚರಣೆ ತಪ್ಪು, ನಿಮ್ಮ ಆಚರಣೆ ಸರಿ ಎಂಬ ದೋಷಾರೋಪಣ ಪಟ್ಟಿಗಳ ಸಿದ್ಧತೆಯಲ್ಲೇ ಕಾಲಹರಣವಾಗುತಿದೆ. ಇಲ್ಲಿ ನಮ್ಮಿಚ್ಛೆಯ ವರ್ಷಾಚರಣೆಗೆ ಅವಕಾಶ ಇರುವುದರಿಂದ, ಆಚರಣೆ ಎಂದಾದರೂ ಆಗಲಿ ಆದರೆ ಆಚರಣೆಯ ಉದ್ದೇಶ ಜೀವಂತವಾಗಿರಲಿ. ಪ್ರಕೃತಿಯ ಆರೋಗ್ಯದ ಕುರಿತು ಅರಿವಿರಲಿ. ಅನಗತ್ಯ ಮಾಲಿನ್ಯಕ್ಕೆ ತಡೆಯಿರಲಿ.
ಮಾಗಿದ ಮನಸ್ಸು (ಪವಿತ್ರಾ)