ಕೇರಳ: ಈ ಪೊಲೀಸ್ ಅಧಿಕಾರಿಯ ಸಾಹಸ ರೀಲ್ ಗಾಗಿ ಅಲ್ಲ; ರಿಯಲ್ ಹೀರೊನಂತೆ ಬಡಿದಾಡಿ ಖದೀಮನೊಬ್ಬನನ್ನು ನೆಲಕ್ಕೆ ಕೆಡವಿ ಬಂಧಿಸಿರುವ ಅಧಿಕಾರಿಯ ಸಾಹಸವಿದು. ಕೇರಳದ ಜನನಿಬಿಡ ಸರ್ಕಲ್ ಬಳಿ ಒಬ್ಬ ಖದೀಮ ಪೊಲೀಸ್ ಬರುವುದು ಕಂಡು ಎಸ್ಕೇಪ್ ಆಗಲು ಪ್ರಯತ್ನಪಡ್ತಾನೆ. ಆ ವೇಳೆ ಪೊಲೀಸ್ ಅಧಿಕಾರಿ ತಮ್ಮ ವಾಹನದಿಂದ ಅಲ್ಲಿಗೆ ಬರುತ್ತಿದ್ದಂತೆ ಅಲ್ಲಿನ ಚಲನವಲನ ಕಂಡು ಅನುಮಾನಗೊಳ್ಳುತ್ತಾರೆ. ತಕ್ಷಣ ಜೀಪಿನಿಂದ ಜಿಗಿದ ಅಧಿಕಾರಿ ಆ ಖದೀಮನ ಬಳಿ ಸಾಗುತ್ತಾರೆ. ಇದನ್ನ ನಿರೀಕ್ಷಿಸದ ಭೂಪ, ಪೊಲೀಸ್ ಅಧಿಕಾರಿಯ ಮೇಲೆ ನೇರವಾಗಿ ಮಚ್ಚು ಬೀಸುತ್ತಾನೆ.
ಆದರೆ ಇದರಿಂದ ಧೈರ್ಯಗುಂದದ ಆ ಪೊಲೀಸ್ ಅಧಿಕಾರಿ ಖದೀಮನನ್ನು ಲಾಕ್ ಮಾಡಿಕೊಳ್ಳಲು ಮುಂದಾಗುತ್ತಾರೆ. ಪಟ್ಟುಬಿಡದ ಖದೀಮ ಮತ್ತಷ್ಟು ಫೈಟಿಂಗ್ ಗೆ ಇಳಿಯುತ್ತಾನೆ. ಆದರೆ ಪೊಲೀಸ್ ಅಧಿಕಾರಿ ಅವನನ್ನು ನೆಲಕ್ಕೆ ಕೆಡವಿ, ಮೊದಲು ಅವನ ಕೈಯಲ್ಲಿರುವ ತಲವಾರ್ ಅನ್ನು ಕಿತ್ತು ಕೊಳ್ಳುತ್ತಾರೆ. ಆ ವೇಳೆಗೆ ಜೀಪ್ ಚಾಲಕ ಸಹ ತನ್ನ ಅಧಿಕಾರಿಯ ನೆರವಿಗೆ ಬರುತ್ತಾನೆ. ಆಗ ಸುತ್ತಮುತ್ತ ಜನರೂ ಸೇರುತ್ತಾರೆ. ಕೊನೆಗೆ ಖದೀಮನನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುತ್ತಾರೆ.
ಮೊನ್ನೆ ಜೂನ್ 12 ಭಾನುವಾರ ಕೇರಳ ರಾಜ್ಯದ ಅಲಪುಳಾ ಜಿಲ್ಲೆಯ ಕಾಯಂಕುಳಂಗೆ ಹೋಗುವ ರಸ್ತೆಯಲ್ಲಿ ಕರೀಳಕುಲಂಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Kareelakulangara police station) ಈ ಘಟನೆ ನಡೆದಿದೆ. ಇದರ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
Police Attack: ಪೊಲೀಸ್ ಅಧಿಕಾರಿಯ ಮೇಲೆ ಖದೀಮನಿಂದ ಅಟ್ಯಾಕ್ ವಿಡಿಯೋ:
ಲೈಟರ್ ವಾಪಸ್ ಕೊಡಲಿಲ್ಲ ಅಂದಿದ್ದಕ್ಕೆ ಲಾಂಗ್ ಬೀಸಿದ ಆರೋಪಿ ಅರೆಸ್ಟ್
ಇನ್ನು ನಮ್ಮ ರಾಜಧಾನಿ ಬೆಂಗಳುರಿನ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೈಟರ್ ವಾಪಸ್ ಕೊಡಲಿಲ್ಲ ಅಂದಿದ್ದಕ್ಕೆ ಲಾಂಗ್ ಬೀಸಿದ ಪ್ರಕರಣ ನಡೆದಿದೆ. ಬಸವೇಶ್ವರ ನಗರ ಠಾಣಾ ಪೊಲೀಸರು ಮಹಾದೇವ ಸ್ವಾಮಿ ಎಂಬ ಆ ಆರೋಪಿಯನ್ನು ಬಂಧಿಸಿದ್ದಾರೆ. ಜೂನ್ 5ರಂದು ಬಸವೇಶ್ವರ ನಗರದ ನವ್ಯಾ ಬಾರ್ ಆ್ಯಂಡ್ ರೆಸ್ಟೋರೆಂಟಿನಲ್ಲಿ ಈ ಘಟನೆ ನಡೆದಿತ್ತು.
ಸಿಗರೇಟ್ ಲೈಟರ್ ವಿಚಾರವಾಗಿ ಬಾರಿನೊಳಗೆ ಗಲಾಟೆ ಆರಂಭವಾಗಿತ್ತು. ಆರೋಪಿಯಿಂದ ಲೈಟರ್ ಪಡೆದಿದ್ದ ಜನಾರ್ಧನ್ ಎಂಬಾತ ಲೈಟರ್ ವಾಪಸ್ ಕೊಡದಿದ್ದಾಗ ಗಲಾಟೆಯಾಗಿತ್ತು. ಇಬ್ಬರಿಗೂ ಬೈದು ಆರೋಪಿಯನ್ನ ಅಕ್ಕಪಕ್ಕದ ಅಂಗಡಿಯವರು ದೂರ ಕಳಿಸಿದ್ದರು. ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಲಾಂಗ್ ಹಿಡಿದು ವಾಪಸ್ ಬಂದಿದ್ದ ಆರೋಪಿ ಮಹಾದೇವ, ಲೈಟರ್ ಕೊಡಲ್ಲ ಅಂದವನ ಮೇಲೆ ಲಾಂಗ್ ಬೀಸಿದ್ದಾನೆ. ಆರೋಪಿಯ ಈ ಅಟ್ಟಹಾಸ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಆಧರಿಸಿ ಬಸವೇಶ್ವರ ನಗರ ಪೊಲೀಸರು ಆತನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Published On - 1:58 pm, Sat, 18 June 22