BBMP Budget 2023: ಮಾ.2ರಂದು ಬಿಬಿಎಂಪಿ ಬಜೆಟ್, ಹಲವು ಮಹತ್ವದ ಯೋಜನೆಗಳು ಘೋಷಣೆ ಸಾಧ್ಯತೆ

|

Updated on: Mar 01, 2023 | 8:38 AM

ಚುನಾವಣೆ ಹೊಸ್ತಿಲ್ಲಲ್ಲೇ ರಾಜ್ಯ ಬಜೆಟ್‌ ಮಂಡಿಸಿದ ಬೆನ್ನಲ್ಲೇ ಇದೀಗ ಬಿಬಿಎಂಪಿಯು ಮಾರ್ಚ್ 02ರಂದು 2023-24ನೇ ಸಾಲಿನ ಆಯವ್ಯಯ ಮಂಡಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

BBMP Budget 2023: ಮಾ.2ರಂದು ಬಿಬಿಎಂಪಿ ಬಜೆಟ್, ಹಲವು ಮಹತ್ವದ ಯೋಜನೆಗಳು ಘೋಷಣೆ ಸಾಧ್ಯತೆ
ಬಿಬಿಎಂಪಿ
Follow us on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲ್ಲಲ್ಲೇ ರಾಜ್ಯ ಬಜೆಟ್‌ ಮಂಡಿಸಿದ ಬೆನ್ನಲ್ಲೇ ಇದೀಗ ಬಿಬಿಎಂಪಿಯು 2023-24ನೇ ಸಾಲಿನ (BBMP Budget 2023-24) ಆಯವ್ಯಯ ಮಂಡಿಸಲು ಬಿರುಸಿನ ತಯಾರಿ ನಡೆಸಿದೆ. ನಾಳೆ (ಮಾರ್ಚ್ 2) ಬಿಬಿಎಂಪಿ ಬಜೆಟ್ ಮಂಡನೆಯಾಗಲಿದ್ದು, ಏನೆಲ್ಲಾ ಯೋಜನೆಗಳು ಘೋಷಣೆಗಳಾಗಲಿವೆ ಎನ್ನುವ ಕುತೂಹಲ ಸಿಲಿಕಾನ್ ಸಿಟಿ ಜನರಲ್ಲಿದೆ. ಪಾಲಿಕೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಜನಪ್ರತಿನಿಧಿಗಳ ಆಡಳಿತವಿಲ್ಲ. ಹೀಗಾಗಿ, ಎರಡೂ ವರ್ಷಗಳಿಂದಲೂ ಅಧಿಕಾರಿಗಳೇ ಆಯವ್ಯಯ ಮಂಡಿಸಿ, ಸರಕಾರದಿಂದ ಅನುಮೋದನೆ ಪಡೆದುಕೊಳ್ಳುತ್ತಿದ್ದಾರೆ.

2022-23ನೇ ಸಾಲಿನಲ್ಲಿ ಮಾ. 31ರ ರಾತ್ರಿ 10,484.28 ಕೋಟಿ ರೂ. ಗಾತ್ರದ ಬಜೆಟ್‌ ಅನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. ಆನಂತರ ಸರಕಾರ ಆಯವ್ಯಯದ ಗಾತ್ರವನ್ನು 377.5 ಕೋಟಿಗಳಷ್ಟು ಹೆಚ್ಚಿಸಿ ಒಪ್ಪಿಗೆ ನೀಡಿತ್ತು. ಈ ಬಾರಿ ಸಹ ಅಧಿಕಾರಿಗಳೇ ಬಜೆಟ್ ಮಂಡನೆ ಮಾಡಲಿದ್ದು, ಸುಮಾರು 10 ಸಾವಿರ ಕೋಟಿ ರೂ. ಆಯವ್ಯಯ ಮಂಡನೆ ಸಾಧ್ಯತೆ ಇದ್ದು, ಚುನಾವಣೆಗೆ ಪೂರಕವಾದ ಯೋಜನೆಗಳು ಘೋಷಣೆಯಾಗುವ ನಿರೀಕ್ಷೆಗಳಿವೆ.

ಹಲವು ನಿರೀಕ್ಷೆಗಳು

ವೃದ್ಧವರಿಗೆ ಆಶ್ರಯ ನೀಡುವ ಶ್ರವಣ ವಸತಿ ಯೋಜನೆ, ಉದ್ಯೋಗಸ್ಥ ಮಹಿಳೆಯರಿಗೆ ವಸತಿ ಕಲ್ಪಿಸಲಿ ಸಾವಿತ್ರಿಬಾಯಿ ಫುಲೆ ಹೆಸರಲ್ಲಿ ಯೋಜನೆ ಜಾರಿ ಸಾಧ್ಯತೆ ಇದೆ. ಇನ್ನು ಇಂದಿರಾ ಕ್ಯಾಂಟೀನ್​ಗೂ ಅನುದಾನ ಮೀಸಲಿಡುವ ಸಾಧ್ಯತೆಗಳಿವೆ. ಕೇಂದ್ರ ಮತ್ತು ರಾಜ್ಯ ಬಜೆಟ್‌ಗಳನ್ನು ಮಂಡಿಸಿರುವ ಬಿಜೆಪಿ, ಬೆಂಗಳೂರಿಗರನ್ನು ಒಲಿಸಿಕೊಳ್ಳಲು ಬಜೆಟ್‌ನಲ್ಲಿ ಹಲವಾರು ಯೋಜನೆಗಳನ್ನು ಘೋಷಿಸುವ ನಿರೀಕ್ಷೇಯಿದ. ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣ ಕ್ರಮಗಳ ಮೇಲೆ ಬಜೆಟ್ ಒತ್ತು ನೀಡಿದರೆ ಆಸ್ತಿ ತೆರಿಗೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷದ ಕೆಲವು ಯೋಜನೆಗಳನ್ನು ಉಳಿಸಿಕೊಳ್ಳಲು ಬಿಬಿಎಂಪಿ ಚಿಂತನೆ ನಡೆಸಿದೆ ಎನ್ನಲಾಗಿದೆ.

ಸಾರ್ವಜನಿಕರಿಂದ 16,261 ಸಲಹೆಗಳು

ಬಜೆಟ್​ ಬಗ್ಗೆ ಬಿಬಿಎಂಪಿ ವಾರ್ಷಿಕವಾಗಿ ನಗರದಾದ್ಯಂತ ನನ್ನ ನಗರ-ನನ್ನ ಬಜೆಟ್ ಅಭಿಯಾನವನ್ನು ಹಲವಾರು ಸಂಘ-ಸಂಸ್ಥೆಗಳು, ಕ್ಷೇಮಾಭಿವೃದ್ಧಿ ಸಂಘಗಳು, ಬೆಂಗಳೂರು ವಾರ್ಡ್ ಸಮಿತಿ ಬಳಗ ಹಾಗೂ ಜನಾಗ್ರಹ ಸಂಸ್ಥೆಯ ಬೆಂಬಲದೊಂದಿಗೆ ಕೈಗೊಂಡಿದ್ದ ನಾಗರಿಕ ಸಹಭಾಗಿತ್ವದ ಬಜೆಟ್ ಕುರಿತು ಅಭಿಪ್ರಾಯ ಸಂಗ್ರಹಿಸಿದೆ. 2023-24ರ ಬಿಬಿಎಂಪಿ ಬಜೆಟ್ ನಲ್ಲಿ ಸೇರ್ಪಡೆಗೂಳಿಸಲು ನಗರದ 243 ವಾರ್ಡ್ ಗಳಿಂದ ಒಳಚರಂಡಿ, ಫುಟ್ ಪಾತ್, ರಸ್ತೆ, ಬೀದಿ ದೀಪ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು 16,261 ಸಲಹೆಗಳು ಸ್ವೀಕೃತಗೊಂಡಿದೆ.

ನಗರದ ಎಂಟು ವಲಯಗಲ್ಲಿರುವ ಎಲ್ಲಾ 243 ವಾರ್ಡ್ ಗಳಿಂದ ಈಗಾಗಲೇ ನಾಗರಿಕ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಪೈಕಿ ಪಶ್ಚಿಮ ವಲಯ, ಪೂರ್ವ ವಲಯ, ದಕ್ಷಿಣ ವಲಯದ ವಾರ್ಡ್ ಗಳು ಒಳಗೊಂಡಂತೆ 141 ವಾರ್ಡ್ ಗಳಲ್ಲಿ ಶೇ.60ರಷ್ಟು ಹಾಗೂ ಉಳಿದ ವಾರ್ಡ್ ಗಳಲ್ಲಿ ಶೇ.40ರಷ್ಟು ಸಲಹೆಗಳು ಬಂದಿವೆ. ಪ್ರಮುಖವಾಗಿ ಪಾದಚಾರಿ ಮಾರ್ಗದ ದುರಸ್ತಿ ಮತ್ತು ನಿರ್ವಹಣೆ, ರಸ್ತೆ ಹಾಗೂ ಒಳಚರಂಡಿ ನಿರ್ವಹಣೆ, ರಸ್ತೆ, ದುರಸ್ತಿ, ಬೀದಿ ದೀಪಗಳನ್ನು ಅಳವಡಿಸುವುದು, ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಇನ್ನಿತರ ಸಲಹೆಗಳನ್ನು ನೀಡಿರುವ ಬಗ್ಗೆ ಜನಾಗ್ರಹ ಸಂಸ್ಥೆ ವರದಿ ನೀಡಿದೆ.

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ ರಾಯಪುರ ಅವರು ಮಾ.2ರಂದು ಬಜೆಟ್ ಮಂಡಿಸಲಿದ್ದಾರೆ. ಇನ್ನು ಬಜೆಟ್ ಮಂಡನೆ ಆನ್‌ಲೈನ್‌ನಲ್ಲಿ ಸ್ಟ್ರೀಮ್ ಆಗುವುದರಿಂದ ಸಾರ್ವಜನಿಕರು ಕೂಡ ಬಜೆಟ್ ಮಂಡನೆಯನ್ನು ನೇರವಾಗಿ ವೀಕ್ಷಿಸಬಹುದು.

Published On - 8:26 am, Wed, 1 March 23