FM Nirmala Sitharaman Budget 2023-24 Speech Highlights: ಇಂದು (ಫೆ.1) ಸಂಸತ್ನಲ್ಲಿ ಬೆಳಿಗ್ಗೆ 11 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) 5ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರ್ಕಾರದ 2ನೇ ಅವಧಿಯ ಕೊನೆಯ ಪೂರ್ಣ ಬಜೆಟ್ (Union Budget 2023) ಮಂಡನೆಯಾಗಲಿದೆ. ನಿನ್ನೆ (ಜ.31) ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 2022-23 ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡನೆ ಮಾಡಿದರು. ಇನ್ನು ಈ ವರ್ಷ ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆ ಚುನಾವಣಾ ರಾಜ್ಯಗಳಿಗೆ ಹಲವು ಯೋಜನೆ ಘೋಷಣೆ ಮಾಡುವ ಸಾಧ್ಯತೆ ಇದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಇರುವುದರಿಂದ ಹೆಚ್ಚಿನ ನಿರೀಕ್ಷೆ ಇದ್ದು, ಜನತೆ ಕೇಂದ್ರದ ಪೂರ್ಣ ಪ್ರಮಾಣದ ಬಜೆಟ್ ಮೇಲೆ ನಿರೀಕ್ಷೆ ಹೊಂದಿದ್ದಾರೆ. ಎಂದಿನಂತೆ ಮಧ್ಯಮ ವರ್ಗದ ಜನತೆ ತೆರಿಗೆ ವಿನಾಯಿತಿಗೆ ಕಾಯುತ್ತಿದ್ದಾರೆ.
ಯಾವುದೇ ಪೆಟ್ರೋಲಿಯಂ ಉತ್ಪನ್ನದ ಮೇಲೆ ನೇರವಾಗಿ ಸಬ್ಸಿಡಿ ಕೊಡುತ್ತಿಲ್ಲ. ಹೀಗಾಗಿ ಪೆಟ್ರೋಲ್ ಸೇರಿದಂತೆ ಯಾವುದೇ ಇಂಧನದ ಬೆಲೆಯ ಮೇಲೆ ಏನೂ ಪರಿಣಾಮ ಆಗುವುದಿಲ್ಲ. ತೆರಿಗೆ ಪದ್ಧತಿಯಲ್ಲಿ ವ್ಯತ್ಯಯವಾದರೆ ಮಾತ್ರ ಪೆಟ್ರೋಲ್ ದರಗಳಲ್ಲಿ ಏರಿಳಿತವಾಗುತ್ತದೆ. ಈ ಬಾರಿಯ ಬಜೆಟ್ನಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.
ಬಜೆಟ್ ಮೂಲಕ ಡಿಜಿಟಲ್ ಆರ್ಥಿಕತೆಗೆ ಹೊಸ ವೇಗ ಕೊಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ‘ಭವಿಷ್ಯದ ಬೆಳವಣಿಗೆಗಳಿಗೆ ಸ್ಪಂದಿಸಬಲ್ಲ ಹಣಕಾಸು ವಲಯವನ್ನು ರೂಪಿಸಲು ಉದ್ದೇಶಿಸುತ್ತಿದ್ದೇವೆ. ಕೈಗಾರಿಕಾ ಕ್ರಾಂತಿ 4.0 ಮೂಲಕ ಜನರಿಗೆ ತರಬೇತಿ ಸಿಗಲಿದೆ. ಬದುಕಿನ ಎಲ್ಲ ಆಯಾಮಗಳನ್ನು ಡಿಜಿಟಲ್ ಆರ್ಥಿಕತೆ ಒಳಗೊಳ್ಳುವಂತೆ ಮಾಡಲು ಯತ್ನಿಸುತ್ತಿದ್ದೇವೆ ಎಂದರು.
ಆದಾಯ ತೆರಿಗೆ ವಿಧಗಳ ಕುರಿತು ಸ್ಪಷ್ಟನೆ ನೀಡಿದ ನಿರ್ಮಲಾ ಸೀತಾರಾಮನ್, ಹೊಸ ತೆರಿಗೆ ಪದ್ಧತಿಗೆ ಬರಬೇಕು ಎಂದು ಯಾರನ್ನೂ ಒತ್ತಾಯಿಸುತ್ತಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ನೇರ ತೆರಿಗೆ ವ್ಯವಸ್ಥೆ ಸರಳವಾಗಬೇಕು ಎಂದು ದೇಶವು ಹಲವು ವರ್ಷಗಳಿಂದ ಕಾಯುತ್ತಿದೆ. ಹೀಗಾಗಿ ಹೊಸ ತೆರಿಗೆ ಪದ್ಧತಿಯನ್ನು ಕೆಲ ವರ್ಷಗಳ ಹಿಂದೆ ಪರಿಚಯಿಸಿದೆವು. ಈಗ ಹೊಸ ತೆರಿಗೆ ಪದ್ಧತಿಯಲ್ಲಿ ಹಲವು ಆಕರ್ಷಕ ಕೊಡುಗೆಗಳು ಇರುವುದರಿಂದ ಜನರು ಯಾವುದೇ ಯೋಚನೆಯಿಲ್ಲದೆ ಅತ್ತ ಹೊರಳಬಹುದು ಎಂದು ಆಶಾವಾದ ವ್ಯಕ್ತಪಡಿಸಿದರು.
ನಮ್ಮ ಬಜೆಟ್ ನಾಲ್ಕು ಮುಖ್ಯ ಅಂಶಗಳನ್ನು ಆಧರಿಸಿದೆ. ಮಹಿಳಾ ಸಬಲೀಕರಣ, ಪ್ರವಾಸೋದ್ಯಮಕ್ಕೆ ಉತ್ತೇಜನ, ಕೌಶಲಾಭಿವೃದ್ಧಿ, ಪರಿಸರಸ್ನೇಹಿ ಪ್ರಗತಿ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು.
ಈ ಬಾರಿಯ ಬಜೆಟ್ನಲ್ಲಿ ಬಂಡವಾಳ ಹಿಂಪಡೆಯುವುದು ಹಾಗೂ ಸರ್ಕಾರಿ ಉದ್ಯಮಗಳ ಖಾಸಗೀಕರಣದ ಬಗ್ಗೆ ಏಕೆ ಪ್ರಸ್ತಾಪಿಸಿಲ್ಲ ಎಂಬ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪರವಾಗಿ ಉತ್ತರಿಸಿದ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿ, ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ ಈ ಪ್ರಸ್ತಾಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಆದಾಯ ತೆರಿಗೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 5 ಮಹತ್ವದ ಕ್ರಮಗಳನ್ನು ಘೋಷಿಸಿದರು.
1) ವಿನಾಯ್ತಿ: ₹ 7 ಲಕ್ಷದವರೆಗೆ ಆದಾಯ ತೆರಿಗೆ ವಿನಾಯ್ತಿ ನೀಡುವ ಬಗ್ಗೆ ಪ್ರಸ್ತಾಪಿಸಿದರು.
2) ಟ್ಯಾಕ್ಸ್ ಸ್ಲ್ಯಾಬ್ಗಳು: ಹೊಸ ತೆರಿಗೆ ಪದ್ಧತಿಯಲ್ಲಿ ಟ್ಯಾಕ್ಸ್ ಸ್ಲ್ಯಾಬ್ಗಳನ್ನು (ತೆರಿಗೆ ಹಂತಗಳು) 5ಕ್ಕೆ ಮಿತಗೊಳಿಸಲಾಗಿದೆ. ₹ 3 ಲಕ್ಷದಿಂದ ತೆರಿಗೆ ಹಂತ ಆರಂಭವಾಗಲಿದೆ.
3) ಸ್ಟಾಂಡರ್ಡ್ ಡಿಡಕ್ಷನ್: ₹ 15.5 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಆದಾಯವನ್ನು ವೇತನದಿಂದ ಪಡೆಯುವವರಿಗೆ ₹ 52,500 ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ ಸಿಗಲಿದೆ.
4) ಗರಿಷ್ಠ ತೆರಿಗೆ: ಈವರೆಗೆ ಗರಿಷ್ಠ ತೆರಿಗೆಯ ಮೇಲೆ ಶೇ 37ರಷ್ಟು ಸರ್ಚಾರ್ಜ್ ವಿಧಿಸಲಾಗುತ್ತಿತ್ತು. ಈ ಪ್ರಮಾಣವನ್ನು ಹೊಸ ತೆರಿಗೆ ನೀತಿಯಡಿ ಶೇ 25ಕ್ಕೆ ಇಳಿಸಲಾಗಿದೆ. ಈ ಬೆಳವಣಿಗೆಯೊಂದಿಗೆ ದೇಶದಲ್ಲಿರುವ ಗರಿಷ್ಠ ತೆರಿಗೆ ದರವು ಶೇ 39ಕ್ಕೆ ಮಿತಗೊಳ್ಳಲಿದೆ.
5) ಲೀವ್ ಎನ್ಕ್ಯಾಶ್ಮೆಂಟ್ (ರಜೆ ನಗದೀಕರಣ): ನಿವೃತ್ತರಾದಾಗ ಸಿಗುವ ರಜೆ ನಗದೀಕರಣ (ಲೀವ್ ಎನ್ಕ್ಯಾಶ್ಮೆಂಟ್) ಸೌಲಭ್ಯದ ಮೇಲೆ ಈವರೆಗೆ ₹ 3 ಲಕ್ಷಕ್ಕೆ ಮಾತ್ರ ತೆರಿಗೆ ವಿನಾಯ್ತಿ ಇತ್ತು. ಈ ಮೊತ್ತವನ್ನು ₹ 25 ಲಕ್ಷಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಹೊಸ ತೆರಿಗೆ ಪದ್ಧತಿ (New Tax Regime) ಆದಾಯ ತೆರಿಗೆ ವಿನಾಯ್ತಿ ಮೊತ್ತವನ್ನು ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ತೆರಿಗೆ ವಿವರಗಳನ್ನು ನೀಡಿದರು. ವಾರ್ಷಿಕ ₹ 9 ಲಕ್ಷ ವೇತನ ಪಡೆಯುವವರು ₹ 45,000 ತೆರಿಗೆ ಕಟ್ಟುತ್ತಾರೆ ಎಂದು ಸಚಿವರು ಹೇಳಿದರು.
ಹೊಸ ತೆರಿಗೆ ದರಗಳು ಹೀಗಿವೆ…
₹ 3 ಲಕ್ಷದವರೆಗೆ – ಇಲ್ಲ
₹ 3ರಿಂದ 6 ಲಕ್ಷ – ಶೇ 5
₹ 6ರಿಂದ 9 ಲಕ್ಷ – ಶೇ 10
₹ 9ರಿಂದ 12 ಲಕ್ಷ – ಶೇ 15
₹ 12ರಿಂದ 15 ಲಕ್ಷ – ಶೇ 20
₹ 15 ಲಕ್ಷಕ್ಕೂ ಹೆಚ್ಚು – ಶೇ 30
ದೊಡ್ಡಮೊತ್ತದ ವಿಮಾ ಪಾಲಿಸಿಗಳಿಗೆ ಇನ್ನು ಮುಂದೆ ತೆರಿಗೆ ವಿಧಿಸಲಾಗುವುದು. ₹ 10 ಕೋಟಿಗೂ ಅಧಿಕ ಮೊತ್ತದ ಆಸ್ತಿ ಮಾರಾಟದಿಂದ ಸಿಗುವ ಲಾಭದ ಮೇಲೆ (ಕ್ಯಾಪಿಟನ್ ಗೇನ್) ತೆರಿಗೆ ವಿಧಿಸಲಾಗುವುದು.
ಹೊಸ ತೆರಿಗೆ ಪದ್ಧತಿಯೇ ಇನ್ನು ಮುಂದೆ ಡಿಫಾಲ್ಟ್ ತೆರಿಗೆ ಪದ್ಧತಿ ಆಗಿರುತ್ತದೆ. ಆದರೆ ಹಳೆಯ ತೆರಿಗೆ ಪದ್ಧತಿಯೂ ಚಾಲ್ತಿಯಲ್ಲಿರುತ್ತದೆ. ತೆರಿಗೆ ಸ್ಲ್ಯಾಬ್ಗಳನ್ನು 6 ಹಂತಗಳಿಂದ 5 ಹಂತಗಳಿಗೆ ಬದಲಿಸಲಾಗಿದೆ. ಹೊಸ ತೆರಿಗೆ ಪದ್ಧತಿ ಆರಿಸಿಕೊಳ್ಳುವವರಿಗೆ ₹ 7 ಲಕ್ಷದವರೆಗಿನ ತೆರಿಗೆ ವಿನಾಯ್ತಿ ಲಭ್ಯವಾಗಲಿದೆ.
ಸೈಕಲ್, ಟಿವಿ ಪ್ಯಾನಲ್, ಜವಳಿ, ಗ್ಲಿಸರಿನ್
ಹಳೆಯ ಅಥವಾ ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳುವ ಯಾವುದೇ ಭಾರತೀಯ ವರ್ಷಕ್ಕೆ ₹ 7 ಲಕ್ಷ ಆದಾಯ ಪಡೆಯುತ್ತಿದ್ದರೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ.
ಅಂಚೆ ಕಚೇರಿಗಳ ಮೂಲಕ ನಿರ್ವಹಿಸುವ ಮಾಸಿಕ ಆದಾಯ ಯೋಜನೆಯ (Monthly income scheme – MIS) ಹೂಡಿಕೆ ಮಿತಿಯನ್ನು ₹ 9 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು ₹ 4.5 ಲಕ್ಷ ಹೂಡಿಕೆಗೆ ಮಾತ್ರ ಅವಕಾಶವಿತ್ತು.
ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಿರಿಯ ನಾಗರಿಕರ ಹೂಡಿಕೆಗೆ ಇದ್ದ ₹ 15 ಲಕ್ಷದ ಮಿತಿಯನ್ನು ಈ ಬಾರಿಯಿಂದ ₹ 30 ಲಕ್ಷಕ್ಕೆ ಕೇಂದ್ರ ಸರ್ಕಾರವು ವಿಸ್ತರಿಸಿದೆ.
ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆ ಪ್ರಕಟಿಸಿದೆ. 2 ವರ್ಷಗಳ ಅವಧಿಯ ಈ ಯೋಜನೆಗೆ ಶೇ 7.5 ಬಡ್ಡಿ ನಿಗದಿಪಡಿಸಲಾಗಿದೆ.
ಸಿಗರೇಟ್, ಆಮದು ಮಾಡಿಕೊಂಡ ರಬ್ಬರ್, ಚಿನ್ನ, ಬೆಳ್ಳಿ, ಬ್ರಾಂಡೆಡ್ ಬಟ್ಟೆಗಳು, ಪ್ಲಾಟಿನಮ್, ವಜ್ರ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ರೈತರಿಗೆ ₹ 2 ಲಕ್ಷದಷ್ಟು ಸಾಲವನ್ನು ನಗದು ರೂಪದಲ್ಲಿ ನೀಡಲು, ₹ 2 ಲಕ್ಷದಷ್ಟು ಹಣವನ್ನು ನಗದು ರೂಪದಲ್ಲಿ ಕಟ್ಟಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ತೆರಿಗೆ ವಿಚಾರದಲ್ಲಿ ಸಚಿವರು ನೀಡಿದ ಮಾಹಿತಿ ಆಧರಿಸಿ ವಿಶ್ಲೇಷಿಸುತ್ತಿರುವ ಹಲವು ರಾಷ್ಟ್ರೀಯ ಮಾಧ್ಯಮಗಳು ಚಿನ್ನ, ಬೆಳ್ಳಿ, ವಜ್ರದ ಬೆಲೆ ಏರಿಕೆ ಸಾಧ್ಯತೆಯಿದೆ. ಮೊಬೈಲ್ ಫೋನ್, ಕ್ಯಾಮೆರಾ ಲೆನ್ಸ್, ಟಿವಿಗಳ ದರ ಇಳಿಕೆ ಸಾಧ್ಯತೆಯಿದೆ ಎಂದು ವಿಶ್ಲೇಷಿಸಿವೆ. ಬ್ಯಾಟರಿ ತಯಾರಿಕೆ ಕಂಪನಿಗಳಿಗೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ. ಬ್ಯಾಟರಿಗಳು ಅಗ್ಗವಾದರೆ ಎಲೆಕ್ಟ್ರಾನಿಕ್ ವಾಹನಗಳ ಬೆಲೆಯೂ ಇಳಿಯುವ ಸಾಧ್ಯತೆಯಿದೆ.
ನೇರ ತೆರಿಗೆಗಳ ಬಗ್ಗೆ ನಿರ್ಮಲಾ ಸೀತಾರಾಮನ್ ವಿವರಿಸಿದರು. ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಹಲವು ಸುಧಾರಣೆ ಮಾಡಲಾಗಿದೆ. ಒಂದು ದಿನಕ್ಕೆ 74 ಲಕ್ಷ ರಿಟರ್ನ್ಸ್ ಬಂದಿದೆ. ಸರಾಸರಿ ಪ್ರಕ್ರಿಯೆ ಅವಧಿ 16 ದಿನಕ್ಕೆ ಇಳಿದಿದೆ. ಶೇ 45 ರಷ್ಟು ರಿಟರ್ನ್ಸ್ಗಳನ್ನು 24 ಗಂಟೆಯ ಒಳಗೆ ನಿರ್ವಹಿಸಲಾಗಿದೆ.
2026ರ ಹೊತ್ತಿಗೆ ವಿತ್ತೀಯ ಕೊರತೆಯನ್ನು ಶೇ 3.5ಕ್ಕೆ ಇಳಿಸಲು ಅಗತ್ಯ ಕ್ರಮ ಜರುಗಿಸಲಾಗುವುದು. ಪ್ರಸಕ್ತ ವರ್ಷದ (2022-23) ವಿತ್ತೀಯ ಕೊರತೆ ಶೇ 6.4ರಷ್ಟಿದೆ ಎಂದು ಸಚಿವರು ಹೇಳಿದರು. ಮುಂದಿನ ಆರ್ಥಿಕ ವರ್ಷದಲ್ಲಿ (2023-24) ವಿತ್ತೀಯ ಕೊರತೆಯನ್ನು ಶೇ 5.9ಕ್ಕೆ ಮಿತಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಭದ್ರಾ ಮೇಲ್ದಂಡೆಗೆ ಅನುದಾನ ಒದಗಿಸಿದ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಿರಿಯ ನಾಗರಿಕರ ಹೂಡಿಕೆಗೆ ಇದ್ದ ₹ 15 ಲಕ್ಷದ ಮಿತಿಯನ್ನು ಈ ಬಾರಿಯಿಂದ ₹ 30 ಲಕ್ಷಕ್ಕೆ ಕೇಂದ್ರ ಸರ್ಕಾರವು ವಿಸ್ತರಿಸಿದೆ.
ಭಾರತದ ಎಲ್ಲ ನಗರ ಮತ್ತು ಪಟ್ಟಣಗಳು ಸಂಪೂರ್ಣವಾಗಿ ತೆರೆದ ಚರಂಡಿಗಳು (sewers) ಹಾಗೂ ಮಲಗುಂಡಿಗಳಿಂದ (septic tanks) ಮುಕ್ತವಾಗಬೇಕು. ಮ್ಯಾನ್ಹೋಲ್ ಮತ್ತು ಮಿಷನ್ ಹೋಲ್ ಮಾದರಿಗೆ ಬರಬೇಕು. ಇದಕ್ಕಾಗಿ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಸಚಿವರು ಘೋಷಿಸಿದರು.
ರಾಸಾಯನಿಕ ಮುಕ್ತ ಸಹಜ/ಸಾವಯವ ಕೃಷಿಗೆ ಆದ್ಯತೆ ನೀಡುವ ಪರಿಪಾಠವನ್ನು ಈ ವರ್ಷವೂ ಸಚಿವರು ಮುಂದುವರಿಸಿದ್ದಾರೆ. ಈ ಮಾದರಿಯ ಕೃಷಿ ಪದ್ಧತಿಗೆ ಅಗತ್ಯ ಬೆಂಬಲ ಒದಗಿಸಲು ಪರಿಣಿತರ ಸಮಿತಿಯನ್ನು ರೂಪಿಸಲಾಗುವುದು. ಸಹಜ/ಸಾವಯವ ಕೃಷಿಗೆ ಮರಳುವ 1 ಕೋಟಿ ರೈತರಿಗೆ ಸರ್ಕಾರದ ನೆರವು ಸಿಗಲಿದೆ ಎಂದು ಸಚಿವರು ಘೋಷಿಸಿದರು.
ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ ಗಿರಿಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಏಕಲವ್ಯ ಮಾದರಿ ಶಾಲೆಗಳನ್ನು ಸ್ಥಾಪಿಸಲಾಗುವುದು. ಈ ಶಾಲೆಗಳಿಗಾಗಿ 38,800 ಶಿಕ್ಷಕರು ಹಾಗೂ 740 ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಇದರಿಂದ 3.5 ಲಕ್ಷ ಗಿರಿಜನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.
ಹೆಚ್ಚಿನ ಮಾಲಿನ್ಯ ಉಂಟು ಮಾಡುವ ಹಳೇ ಸರ್ಕಾರಿ ವಾಹನಗಳ ಬದಲಾವಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದರು. ರಾಜ್ಯ ಸರ್ಕಾರಗಳ ಸುಪರ್ದಿಯಲ್ಲಿರುವ ಹಳೇ ವಾಹನಗಳು ಮತ್ತು ಆಂಬುಲೆನ್ಸ್ಗಳ ಬದಲಾವಣೆಗೆ ಕೇಂದ್ರ ಸರ್ಕಾರ ನೆರವು ಒದಗಿಸಲಿದೆ ಎಂದು ತಿಳಿಸಿದರು.
ಈ ವೇಳೆ ಸಚಿವರು ಪೊಲ್ಯುಟಿಂಗ್ (Polluting) ಎಂದು ಹೇಳುವ ಬದಲು ಪೊಲಿಟಿಕಲ್ (Political) ಎಂದು ಹೇಳಿದ್ದನ್ನು ಪ್ರತಿಪಕ್ಷಗಳ ಸದಸ್ಯರು ಲೇವಡಿ ಮಾಡಿದರು. ಆದರೆ ಸಚಿವರು ‘ಹಳೇ ಮಾಲಿನ್ಯಕಾರಕಗಳನ್ನು ಬದಲಿಸಬೇಕು, ನಾನು ಹೇಳಿದ್ದ ಸರಿತಾನೆ’ ಎಂದು ತಿರುಗೇಟು ನೀಡಿದರು.
ದೇಶದಲ್ಲಿ ಉದ್ಯಮಸ್ನೇಹಿ ವಾತಾವರಣ ನಿರ್ಮಿಸಲು ಬಜೆಟ್ ಮೂಲಕ ಕೇಂದ್ರ ಸರ್ಕಾರವು ಮತ್ತಷ್ಟು ಕ್ರಮಗಳನ್ನು ಘೋಷಿಸಿದೆ. ಉದ್ಯಮಗಳು ಪ್ರತ್ಯೇಕ ಪ್ಯಾನ್ (PAN) ನಂಬರ್ ಹೊಂದಬೇಕು. ಈ ನಂಬರ್ ಆಧರಿಸಿ ಉದ್ಯಮಿಗಳ ಕುಂದುಕೊರತೆಯನ್ನು ಶೀಘ್ರ ಪರಿಹರಿಸಲಾಗುವುದು. ಹಲವು ನಿಯಮಗಳನ್ನು ಸಡಿಲಿಸಲಾಗಿದೆ ಎಂದು ಹೇಳಿದರು.
ಗ್ರಾಮೀಣ ಆರ್ಥಿಕತೆಯ ಬಗ್ಗೆ ಈ ಬಾರಿಯ ಬಜೆಟ್ ವಿಶೇಷ ಗಮನ ನೀಡಿದೆ. ಪಶುಸಂಗೋಪನೆ, ಡೇರಿ ಮತ್ತು ಮೀನುಗಾರಿಕೆಯನ್ನೂ ಒಳಗೊಂಡಂತೆ ಕೃಷಿಸಾಲಕ್ಕಾಗಿ ₹ 20 ಲಕ್ಷ ಕೋಟಿ ಮೀಸಲಿಡಲಾಗಿದೆ.
ವಸತಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯವು ಈ ವರ್ಷದ ಬಜೆಟ್ನಲ್ಲಿ ₹ 79,000 ಕೋಟಿ ಅನುದಾನ ಘೋಷಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವಸತಿ ಕ್ಷೇತ್ರಕ್ಕಾಗಿ ಮೀಸಲಿಟ್ಟಿರುವ ಹಣವು ಶೇ 66ರಷ್ಟು ಹೆಚ್ಚಾಗಿದೆ.
ಬರಗಾಲ ಪೀಡಿತ ಪ್ರದೇಶಗಳಿಗೆ ನೀರಾವರಿ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ನಿರ್ಮಲಾ ಸೀತಾರಾಮನ್ ₹ 5,300 ಕೋಟಿ ಅನುದಾನ ಘೋಷಿಸಿದರು. ಈ ವೇಳೆ ಪ್ರತಿಪಕ್ಷಗಳಿಂದ ಉದ್ಗಾರ ತೇಲಿಬಂತು.
ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ ಒದಗಿಸುವುದಾಗಿ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ. ರಾಜ್ಯಗಳ ಬಂಡವಾಳ ವೆಚ್ಚದ ಮಿತಿಯನ್ನು (capex) 1.3 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಇದು ಕಳೆದ ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿದ್ದ ಮೊತ್ತಕ್ಕೆ ಹೋಲಿಸಿದರೆ ಶೇ 30ರಷ್ಟು ಹೆಚ್ಚಳವಾಗಿದೆ. ಸಚಿವರು ಈ ಘೋಷಣೆ ಪ್ರಕಟಿಸುತ್ತಿದ್ದಂತೆಯೇ ಷೇರುಪೇಟೆಯಲ್ಲಿ ಸಂಭ್ರಮ ಮನೆಮಾಡಿತು. ನಿಫ್ಟಿ ದಿನದ ಗರಿಷ್ಠ ಮಟ್ಟ ತಲುಪಿತು.
ಪಿಎಂ ಮತ್ಸ್ಯ ಸಂಪದ ಯೋಜನೆಯಡಿ ₹ 6,000 ಕೋಟಿ ಮತ್ತದ ಅನುದಾನವನ್ನು ಮೀನುಗಾರಿಕೆಯ ಉತ್ತೇಜನಕ್ಕೆ ಮೀಸಲಿಡಲಾಗುವುದು. ಪಿಎಂ ವಿಶ್ವಕರ್ಮ ಕೌಶಲ ಸನ್ಮಾನ್ ಯೋಜನೆಯಡಿ ಪಾರಂಪರಿಕ ಕರಕುಶಲಕರ್ಮಿಗಳಿಗೆ ನೆರವಾಗಲು ಕಾರ್ಯಕ್ರಮ ರೂಪಿಸಲಾಗುವುದು. ಸಣ್ಣ ಉದ್ದಿಮೆಗಳ ಅಭಿವೃದ್ಧಿಗೆ ರೂಪಿಸಿರುವ ಕಾರ್ಯಕ್ರಮಗಳೊಂದಿಗೆ ಇವರನ್ನು ಜೋಡಿಸಿ, ಕುಶಲಕರ್ಮಿಗಳ ಅರ್ಥಿಕ ಸ್ಥಿತಿಗತಿ ಸುಧಾರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಸಚಿವರು ಹಲವು ಹೊಸ ಕ್ರಮಗಳನ್ನು ಘೋಷಿಸಿದರು. 2015ರಿಂದ ಆರಂಭವಾಗಿರುವ ಹೊಸ ಮೆಡಿಕಲ್ ಕಾಲೇಜುಗಳಿಗೆ ಹತ್ತಿರದಲ್ಲಿಯೇ ಹೊಸದಾಗಿ 157 ನರ್ಸಿಂಗ್ ಕಾಲೇಜುಗಳನ್ನು ಆರಂಭಿಸಲಾಗುವುದು. ಸಿಕಲ್ ಸೆಲ್ ಅನಿಮಿಯಾ ಕಾಯಿಲೆಯನ್ನು 2047ರ ಒಳಗೆ ನಿರ್ಮೂಲನೆ ಮಾಡಲಾಗುವುದು. ಐಸಿಎಂಆರ್ ಲ್ಯಾಬ್ಗಳನ್ನು ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಸಂಶೋಧನೆಗೆ ಒದಗಿಸಲಾಗುವುದು. ಔಷಧ ವಿಜ್ಞಾನದಲ್ಲಿ ಸಂಶೋಧನೆಗೆ ಉತ್ತೇಜನ ನೀಡಲು ಹೊಸ ಕಾರ್ಯಕ್ರಮ ರೂಪಿಸಲಾಗುವುದು ಎಂದು ಸಚಿವರು ಘೋಷಿಸಿದರು.
ಮಕ್ಕಳು ಮತ್ತು ಹದಿಹರೆಯದವರಿಗೆ ಉತ್ತಮ ಪುಸ್ತಕಗಳು ಸುಲಭವಾಗಿ ಸಿಗುವಂತೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಡಿಜಿಟಲ್ ಲೈಬ್ರೆರಿ (National digital library for children and adolescents) ಯೋಜನೆಯನ್ನು ಸಚಿವರು ಪ್ರಕಟಿಸಿದರು.
ನಿರ್ಮಲಾ ಸೀತಾರಾಮನ್ ಅವರ ಭಾಷಣದ ವೇಳೆ ಆಡಳಿತ ಪಕ್ಷದ ಸದಸ್ಯರು ‘ಮೋದಿ ಮೋದಿ’ ಎಂದು ಕೂಗಿದರು. ಇದನ್ನು ವಿರೋಧಿಸಿ ಪ್ರತಿಪಕ್ಷ ಸದಸ್ಯರು ಮತ್ತೊಮ್ಮೆ ‘ಭಾರತ್ ಜೋಡೋ’ ಎಂದು ತಿರುಗೇಟು ನೀಡಿದರು.
ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಳ ಹಾಗೂ ಬೆಳೆಪದ್ಧತಿ ಸುಧಾರಣೆಗಾಗಿ ‘ಶುದ್ಧ ಸಸಿ ಕಾರ್ಯಕ್ರಮ’ (Clean Plant Programme) ಆರಂಭಿಸುವುದಾಗಿ ಸಚಿವರು ಘೋಷಿಸಿದರು.
ರಾಗಿ ಸೇರಿದಂತೆ ಸಿರಿಧಾನ್ಯಗಳ ಬೆಳೆ ಪದ್ಧತಿ ಸುಧಾರಣೆಗಾಗಿ ಸಂಶೋಧನೆ ನಡೆಸಲು ಹಾಗೂ ಉತ್ತಮ ಬೆಳೆ ಪದ್ಧತಿಯ ದಾಖಲಾತಿಗಾಗಿ ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮಿಲೆಟ್ ರೀಸರ್ಚ್’ ಸಂಸ್ಥೆಗೆ ಅಗತ್ಯ ನೆರವು ಒದಗಿಸಲಾಗುವುದು. ಈ ಸಂಸ್ಥೆಗೆ ‘ಸೆಂಟರ್ ಆಫ್ ಎಕ್ಸೆಲೆನ್ಸ್’ ಉಪಕ್ರಮದ ಮೂಲಕ ಬೆಂಬಲಿಸಲಾಗುವುದು ಎಂದು ಸಚಿವರು ಘೋಷಿಸಿದರು.
ಮಹಿಳಾ ಸ್ವಸಹಾಯ ಸಂಘಗಳಿಗೆ ಹಲವು ರೀತಿಯಲ್ಲಿ ನೆರವಾಗಲು ಕ್ರಮಗಳನ್ನು ರೂಪಿಸಲಾಗುವುದು. ಕಚ್ಚಾವಸ್ತುಗಳ ಪೂರೈಕೆ, ಬ್ರಾಂಡಿಂಗ್ ಮತ್ತು ಸಿದ್ಧವಸ್ತುಗಳಿಗೆ ಮಾರುಕಟ್ಟೆ ರೂಪಿಸಲು ಸರ್ಕಾರ ನೆರವಾಗಲಿದೆ ಎಂದು ಸಚಿವರು ಭರವಸೆ ನೀಡಿದರು.
ಅಮೃತಕಾಲದಲ್ಲಿ ನಾವು ತಂತ್ರಜ್ಞಾನದಿಂದ ಮುನ್ನಡೆಯುವ, ಜ್ಞಾನ ಆಧರಿತ ಆರ್ಥಿಕತೆ ನಿರ್ಮಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಸಾರ್ವಜನಿಕ ಹಣಕಾಸು ನಿರ್ವಹಣೆ ಮತ್ತು ಹಣಕಾಸು ಕ್ಷೇತ್ರದಲ್ಲಿ ಸುಧಾರಣೆಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಹೇಳಿದರು.
ಕೇಂದ್ರ ಬಜೆಟ್ಗೆ 7 ಅದ್ಯತೆಗಳಿವೆ ಎಂದು ಸಚಿವರು ಘೋಷಿಸಿದರು. ಅವೆಂದರೆ
1) ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ
2) ಅಂಚಿನಲ್ಲಿರುವವರಿಗೆ ಸವಲತ್ತು
3) ಮೂಲಸೌಕರ್ಯ
4) ಸಾಮರ್ಥ್ಯದ ಸದ್ಬಳಕೆ
5) ಪರಿಸರ ಸ್ನೇಹಿ ಅಭಿವೃದ್ಧಿ
6) ಯುವಶಕ್ತಿಗೆ ಉತ್ತೇಜನ
7) ಆರ್ಥಿಕ ಸುಧಾರಣೆ
ಕೃಷಿ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಪರಿಚಯ, ಉತ್ಪಾದನೆ ಹೆಚ್ಚಳ, ಹತ್ತಿ ಬೆಳೆಯ ಇಳುವರಿ ವೃದ್ಧಿ ಸೇರಿದಂತೆ ಕೃಷಿ ಜಗತ್ತಿನ ಪ್ರಗತಿಗೆ ಪೂರಕವಾಗಿ ವಿಶೇಷ ಕೃಷಿ ಪ್ರಗತಿನಿಧಿ ಆರಂಭಿಸುವುದಾಗಿ ಸಚಿವರು ಘೋಷಿಸಿದರು.
ನಿರ್ಮಲಾ ಸೀತಾರಾಮನ್ ಅವರ ಬಹುನಿರೀಕ್ಷಿತ ಬಜೆಟ್ ಭಾಷಣವು ಅರಂಭದಲ್ಲಿಯೇ ಗ್ರಾಮೀಣ ಭಾರತದ ಬಗ್ಗೆ ಪ್ರಸ್ತಾಪಿಸಿತು. ಈ ಹಿಂದಿನ ಭಾಷಣಗಳಿಗಿಂತಲೂ ಇದು ಭಿನ್ನ ಎನಿಸಿತು. ಆದರೆ ಬಜೆಟ್ನ ಆದ್ಯತೆಯ ಬಗ್ಗೆ ಸ್ಪಷ್ಟ ಇಣುಕುನೋಟ ನೀಡಿತು
ಕೇಂದ್ರ ಸರ್ಕಾರದ ಅಂತ್ಯೋದಯ ಯೋಜನೆಯಡಿ ಡಿಸೆಂಬರ್ 2023ರವರೆಗೆ ಉಚಿತ ಆಹಾರ ಧಾನ್ಯಗಳ ವಿತರಣೆಯನ್ನು ಮುಂದುವರಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಬಜೆಟ್ ಭಾಷಣದ ಆರಂಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಪ್ರಗತಿಯನ್ನು ವಿವರಿಸಿದರು. ದೀನ್ದಯಾಳ್ ಅಂತ್ಯೋದಯ ಯೋಜನೆ, ಕೌಶಲಾಭಿವೃದ್ಧಿ ಯೋಜನೆ, ಮುದ್ರಾ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ನಿರ್ಮಲಾ ಗಮನ ಸೆಳೆದರು. ಪ್ರಗತಿಯ ಅಂಕಿಅಂಶಗಳನ್ನು ಮಂಡಿಸಿದರು.
ಭಾರತದ ಆರ್ಥಿಕತೆಯು ದೊಡ್ಡಮಟ್ಟದಲ್ಲಿ ಪ್ರಗತಿ ಕಂಡಿದೆ. ನಮ್ಮ ಸ್ಥಾನಮಾನವು ಹೆಚ್ಚಾಗಿದೆ. ಕಳೆದ 9 ವರ್ಷಗಳಲ್ಲಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಮುಟ್ಟಿದ್ದೇವೆ. ಉತ್ತಮ ಆಡಳಿತದ ಪ್ರಗತಿಶೀಲ ದೇಶ ಎಂದು ವಿಶ್ವದಲ್ಲಿ ಭಾರತಕ್ಕೆ ಗೌರವವಿದೆ.
ಜಾಗತಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಭಾರತಕ್ಕೆ ಜಿ-20 ನಾಯಕತ್ವ ಲಭಿಸಿದೆ. ವಸುಧೈವ ಕುಟುಂಬಕಂ ಮಂತ್ರದ ಆಶಯ ಸಾಕಾರಗೊಳಿಸಲು ನಾವು ಶ್ರಮಿಸುತ್ತಿದ್ದೇವೆ.
ಕೊವಿಡ್ ಸಂಕಷ್ಟ ಸಂದರ್ಭದಲ್ಲಿ ಯಾವುದೇ ಭಾರತೀಯರು ಹಸಿವಿನಿಂದ ಬಳಲಲು ಅವಕಾಶ ನೀಡಲಿಲ್ಲ. 80 ಕೋಟಿ ಜನರಿಗೆ ಆಹಾರ ಒದಗಿಸಲಾಯಿತು.
ಸಚಿವ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣಕ್ಕೆ ಪ್ರತಿಪಕ್ಷಗಳ ಸದಸ್ಯರಿಂದ ಅಡ್ಡಿಪಡಿಸುವ ಪ್ರಯತ್ನ ನಡೆಯಿತು. ಭಾರತ್ ಜೋಡೋ ಎಂದು ಕೆಲವರು ಘೋಷಣೆಗಳನ್ನು ಕೂಗಿದರು.
ಕೊವಿಡ್ ಸೇರಿದಂತೆ ಹಲವು ಸವಾಲುಗಳ ನಡುವೆಯೂ ಭಾರತವು ಉಜ್ವಲ ಭವಿಷ್ಯದತ್ತ ಹೆಜ್ಜೆ ಹಾಕುತ್ತಿದೆ. ಇದನ್ನು ವಿಶ್ವಮಟ್ಟದ ಹಲವು ಸಂಸ್ಥೆಗಳು ಗುರುತಿಸಿವೆ.
ಇದು ಅಮೃತಕಾಲದ ಮೊದಲ ಬಜೆಟ್. ಇದು ಹಿಂದಿನ ಬಜೆಟ್ಗಳ ದೃಢವಾದ ಅಡಿಪಾಯಗಳ ಮೇಲೆ ಸಿದ್ಧಗೊಂಡಿದೆ. ನಮ್ಮ ಯುವಕರು, ಮಹಿಳೆಯರು ಮತ್ತು ದಲಿತರ ಅಭಿವೃದ್ಧಿಗೆ ಬದ್ಧತೆ ತೋರುವ ಬಜೆಟ್ ಇದು. -ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಭಾಷಣ ಆರಂಭಿಸಿದರು. ಮುಂಜಾನೆ ರಾಷ್ಟ್ರಪತಿಗೆ ಬಜೆಟ್ ಪ್ರತಿ ನೀಡಿದ ನಂತರ ಸಂಸತ್ ಭವನಕ್ಕೆ ಆಗಮಿಸಿದ ಸಚಿವರು ಬಜೆಟ್ಗೆ ಸಚಿವ ಸಂಪುಟದ ಅನುಮೋದನೆ ಪಡೆದುಕೊಂಡಿದ್ದರು.
ರಕ್ಷಣಾ ವಲಯಕ್ಕೆ ಹೆಚ್ಚಿನ ಅನುದಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಕಂಪನಿಗಳ ಷೇರುಗಳ ಮೌಲ್ಯ ಶೇ 2ರಿಂದ 4ರಷ್ಟು ಹೆಚ್ಚಾಗಿದೆ.
ಈ ಬಾರಿಯ ಬಜೆಟ್ನಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ಸಿಗಬಹುದು ಎಂಬ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯೊಂದಿಗೆ ಸಂಬಂಧ ಹೊಂದಿರುವ ಕಂಪನಿಗಳ ಷೇರು ಮೌಲ್ಯ ಬುಧವಾರದ (ಫೆ 1) ಆರಂಭಿಕ ವಹಿವಾಟಿನಲ್ಲಿ ಹೆಚ್ಚಾಗಿದೆ. ಐಆರ್ಸಿಟಿಸಿ, ಕಂಟೇನರ್ ಕಾರ್ಪೊರೇಶನ್ ಆಫ್ ಇಂಡಿಯಾ, ಐಆರ್ಎಫ್ಸಿ, ರೈಲ್ ವಿಕಾಸ್ ನಿಗಮ್, ಬಿಇಎಂಎಲ್, ತೀತಗಡ್ ವಾಗನ್ಸ್, ಟೆಕ್ಸ್ಮಕೊ ರೈಲ್ ಅಂಡ್ ಎಂಜಿನಿಯರಿಂಗ್, ಇರ್ಕಾನ್ ಇಂಟರ್ನ್ಯಾಷನಲ್ ಕಂಪನಿಗಳ ಷೇರುಗಳ ಮೌಲ್ಯ ಶೇ 1ರಿಂದ 3ರಷ್ಟು ಹೆಚ್ಚಾಗಿವೆ. ರೈಲ್ವೆ ಇಲಾಖೆಯ ಹಲವು ಯೋಜನೆಗಳಿಗೆ ಈ ವರ್ಷ ಚಾಲನೆ ಸಿಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು 2023-24ನೇ ಸಾಲಿನ ಬಜೆಟ್ಗೆ ಅನುಮೋದನೆ ನೀಡಿದೆ. ಶೀಘ್ರದಲ್ಲಿಯೇ ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.
ಪ್ರತಿವರ್ಷದಿಂದ ಈ ವರ್ಷವೂ ಶ್ವಾನಗಳಿಂದ ಬಜೆಟ್ ಭಾಷಣದ ಮುದ್ರಿತ ಪ್ರತಿಗಳಿದ್ದ ಚೀಲಗಳ ಭದ್ರತಾ ತಪಾಸಣೆ ನಡೆಸಲಾಯಿತು. ಶ್ವಾನಗಳು ಮೂಸಿ ನೋಡಿ, ಸಮಸ್ಯೆಯಿಲ್ಲ ಎಂದು ಸಂಕೇತ ನೀಡಿದ ನಂತರವೇ ಚೀಲಗಳನ್ನು ಒಳಕ್ಕೆ ಕೊಂಡೊಯ್ಯುವುದು ವಾಡಿಕೆ.
ವಿತ್ತ ಸಚಿವರು ಟ್ಯಾಬ್ಲೆಟ್ ಮೂಲಕ ಬಜೆಟ್ ಮಂಡಿಸಿದರೂ ಮುದ್ರಿತ ಪ್ರತಿಗಳ ಮೇಲಿನ ಅವಲಂಬನೆ ಹೋಗಿಲ್ಲ. ಸಂಸತ್ ಸದಸ್ಯರಿಗೆ ವಿತರಿಸಲೆಂದು ಬಜೆಟ್ ಭಾಷಣದ ಮುದ್ರಿತ ಪ್ರತಿಗಳನ್ನು ಲಾರಿಯಲ್ಲಿ ಸಂಸತ್ ಭವನಕ್ಕೆ ತರಲಾಯಿತು.
ಬಜೆಟ್ ಎಂದರೆ ಅಂಕಿಸಂಖ್ಯೆಯ ಕಸರತ್ತು. ಈ ವರ್ಷದ ಬಜೆಟ್ ಸಹ ಅದಕ್ಕೆ ಹೊರತಲ್ಲ. ವಿತ್ತೀಯ ಕೊರತೆ, ಬಂಡವಾಳ ಹಿಂತೆಗೆತ/ಖಾಸಗೀಕರಣ, ಬಂಡವಾಳ ವೆಚ್ಚ, ತೆರಿಗೆ ಆದಾಯ, ಸಾಲ, ಜಿಡಿಪಿ ಅಂಕಿಗಳ ಬಗ್ಗೆ ಬಜೆಟ್ನಲ್ಲಿ ವಿತ್ತ ಸಚಿವರು ಏನು ಹೇಳುತ್ತಿದ್ದಾರೆ ಎಂದು ದೇಶ ಕಾತರದಿಂದ ನಿರೀಕ್ಷಿಸುತ್ತಿದೆ.
Union Budget 2023: ಈ ಬಾರಿಯ ಬಜೆಟ್ನಲ್ಲಿ ವಿದೇಶಗಳಿಂದ ಹೆಚ್ಚು ಆಮದು ಆಗುವ ಛತ್ರಿ, ಇಯರ್ಫೋನ್ ಇತ್ಯಾದಿ ವಸ್ತುಗಳ ಆಮದು ಸುಂಕವನ್ನು ಏರಿಸಬಹುದು ಎನ್ನಲಾಗಿದೆ.
ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ಆರಂಭವಾಗಿದೆ. ಸಭೆಯಲ್ಲಿ ಬಜೆಟ್ ದಾಖಲೆಗೆ ಸಂಪುಟದ ಅನುಮೋದನೆ ಪಡೆಯಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಂತರ ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನ ಪ್ರವೇಶಿಸಿದ್ದು, ಶೀಘ್ರದಲ್ಲಿಯೇ ಸಚಿವ ಸಂಪುಟ ಸಭೆ ಆರಂಭವಾಗಲಿದೆ. ಸಚಿವ ಸಂಪುಟ ಸಭೆಯ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನವು ಎರಡು ಹಂತಗಳಲ್ಲಿ ನಡೆಯಲಿದೆ. ನಿನ್ನೆಯಿಂದ (ಜ 31) ಆರಂಭವಾಗಿದ್ದು, ಫೆ.13ಕ್ಕೆ ಮುಕ್ತಾಯವಾಗಲಿದೆ. ಎರಡನೇ ಹಂತದಲ್ಲಿ ಮಾರ್ಚ್ 12ರಿಂದ ಅಧಿವೇಶನ ಆರಂಭವಾಗಲಿದ್ದು, ಏಪ್ರಿಲ್ 6ರಂದು ಮುಕ್ತಾಯವಾಗಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಇದು 5ನೇ ಬಜೆಟ್. ಈ ಸಾಧನೆ ಮಾಡಿದ 6ನೇ ಸಚಿವರು ಎಂಬ ಕೀರ್ತಿಗೆ ಅವರು ಭಾಜನರಾಗಲಿದ್ದಾರೆ. ಈ ಮೊದಲು ಮೊರಾರ್ಜಿ ದೇಸಾಯಿ, ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ.ಚಿದಂಬರಂ, ಯಶವಂತ ಸಿನ್ಹಾ ಈ ಸಾಧನೆ ಮಾಡಿದ್ದರು. 2019 ರಿಂದ ನಿರ್ಮಲಾ ಬಜೆಟ್ ಮಂಡಿಸುತ್ತಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರಪತಿ ಭವನದಿಂದ ಸಂಸತ್ ಭವನಕ್ಕೆ ಆಗಮಿಸಿದರು. ಶೀಘ್ರ ಸಚಿವ ಸಂಪುಟ ಸಭೆ ಆರಂಭವಾಗಲಿದ್ದು, 11 ಗಂಟೆಗೆ ಸಂಸತ್ ಅಧಿವೇಶನದಲ್ಲಿ ಸಚಿವರು ಬಜೆಟ್ ಮಂಡಿಸಲಿದ್ದಾರೆ.
Finance Minister Meets The President: ಬುಧವಾರ ಬೆಳಗ್ಗೆ ಹಣಕಾಸು ಸಚಿವಾಲಯಕ್ಕೆ ಬಂದ ನಿರ್ಮಲಾ ಸೀತಾರಾಮನ್, ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಜೊತೆ ರಾಜ್ಯಖಾತೆ ಸಚಿವರಾದ ಪಂಕಜ್ ಚೌಧರಿ ಮತ್ತು ಭಗವತ್ ಕರಾಡ್ ಹಾಗು ಹಣಕಾಸು ಇಲಾಖೆ ಕಾರ್ಯದರ್ಶಿಗಳು ರಾಷ್ಟ್ರಪತಿಗಳ ಭೇಟಿ ವೇಳೆ ಇದ್ದರು.
ಶಿಷ್ಟಾಚಾರದಂತೆ ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿ ಸಮಾಲೋಚಿಸಿದರು. ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ರಾಜ್ಯ ದರ್ಜೆ ಸಚಿವರು ಈ ವೇಳೆ ಉಪಸ್ಥಿತರಿದ್ದರು. ರಾಷ್ಟ್ರಪತಿ ಭವನದಿಂದ ನಿರ್ಮಲಾ ಸಂಸತ್ತಿಗೆ ತೆರಳಲಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬಜೆಟ್ ಮಂಡನೆಗೆ ಅನುಮೋದನೆ ಪಡೆದುಕೊಳ್ಳಲಿದ್ದಾರೆ.
ಬಜೆಟ್ ಮಂಡನೆಗೆ ಮೊದಲು ಷೇರುಪೇಟೆಯಲ್ಲಿ ಉತ್ಸಾಹದ ವಾತಾವರಣ ಮನೆಮಾಡಿದೆ. ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ (NSE NIFTY) ಆರಂಭಿಕ ವಹಿವಾಟಿನಲ್ಲಿ 133 ಅಂಶಗಳ ಚೇತರಿಕೆ ಕಂಡಿದ್ದು 17,796 ಅಂಶಗಳಲ್ಲಿ ವಹಿವಾಟು ನಡೆಸುತ್ತಿದೆ.
ಬಜೆಟ್ ಮೂಲಕ ನಮ್ಮ ಸರ್ಕಾರವು ದೇಶದ ಎಲ್ಲರ ಮತ್ತು ಎಲ್ಲ ವರ್ಗಗಳ ಆಶೋತ್ತರಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತಿದೆ. ಆರ್ಥಿಕ ಪ್ರಗತಿಯ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ ಪ್ರತಿಕ್ರಿಯಿಸಿದ್ದಾರೆ.
ಬಜೆಟ್ ಮಂಡನೆಯ ದಿನ ಷೇರುಪೇಟೆಯ ವಿದ್ಯಮಾನವನ್ನು ಕುತೂಹಲದಿಂದ ಗಮನಿಸಲಾಗುತ್ತದೆ. ಮುಂಬೈ ಪೇಟೆಯ (BSE) ವಹಿವಾಟು 437.32 ಅಂಶಗಳ ಚೇತರಿಕೆಯೊಂದಿಗೆ ಆರಂಭವಾಗಿದೆ. ಬೆಳಿಗ್ಗೆ 9:20ರಲ್ಲಿ ಬಿಎಸ್ಇ 59,987.22 ಅಂಶಗಳಲ್ಲಿ ವಹಿವಾಟು ನಡೆಸುತ್ತಿತ್ತು. ಹೂಡಿಕೆದಾರರಲ್ಲಿ ಬಜೆಟ್ ಬಗ್ಗೆ ಇರುವ ನಿರೀಕ್ಷೆಗಳು ಈಡೇರಬಹುದು ಎನ್ನುವ ಆಶಾವಾದವನ್ನು ಇದು ಸಂಕೇತಿಸುತ್ತದೆ.
ಲೋಕಸಭೆಗೆ 2024ರಲ್ಲಿ ಚುನಾವಣೆ ನಡೆಯಲಿರುವ ಮುಂದಿನ ವರ್ಷದ ಬಜೆಟ್ ಇಡೀ ಆರ್ಥಿಕ ವರ್ಷಕ್ಕೆ ಊರ್ಜಿತಗೊಳ್ಳುವುದಿಲ್ಲ. ಹೀಗಾಗಿ ಇದು ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಪೂರ್ಣ ಬಜೆಟ್ ಎನಿಸಿಕೊಂಡಿದೆ. 2023ರ ಆರ್ಥಿಕ ವರ್ಷದಲ್ಲಿ ಹಲವು ಪ್ರಮುಖ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಿಗದಿಯಾಗಿರುವುದರಿಂದ ಈ ಬಜೆಟ್ ಬಗ್ಗೆ ಸಹಜವಾಗಿಯೇ ನಿರೀಕ್ಷೆಗಳು ಹೆಚ್ಚಾಗಿವೆ.
ಬಜೆಟ್ ಮಂಡನೆಗೆ ಪೂರ್ವಭಾವಿಯಾಗಿ ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಗೆ ಮೊದಲು ಶಿಷ್ಟಾಚಾರದ ವಾಡಿಕೆಯಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಳಿಗ್ಗೆ 9 ಗಂಟೆಗೆ ಹಣಕಾಸು ಸಚಿವಾಲಯದಿಂದ ಬಜೆಟ್ ದಾಖಲೆಯನ್ನು ಸ್ವೀಕರಿಸಿ ಸಂಸತ್ತಿನತ್ತ ಹೊರಟರು. ಪ್ರತಿವರ್ಷದಂತೆ ಈ ವರ್ಷವೂ ಅವರು ಉಟ್ಟಿರುವ ಸೀರೆ ಮಾಧ್ಯಮಗಳ ಗಮನ ಸೆಳೆದಿದೆ. ಬಜೆಟ್ ದಾಖಲೆ ಇರುವ ಟ್ಯಾಬ್ಲೆಟ್ಗೆ ಸುತ್ತಿರುವ ಕೆಂಪು ಹೊದಿಕೆಗೆ ಹೊಂದಾಣಿಕೆಯಾಗುವ (ಮ್ಯಾಚಿಂಗ್) ಬಣ್ಣದ ಸೀರೆಯನ್ನು ನಿರ್ಮಲಾ ಉಟ್ಟಿದ್ದಾರೆ. ಕೆಂಪು ಬಣ್ಣಕ್ಕೆ ದಕ್ಷಿಣ ಭಾರತದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಜಾಗತಿಕ ಸವಾಲುಗಳು ಹೆಚ್ಚಾಗಿರುವ, ಆರ್ಥಿಕತೆಯಲ್ಲಿ ಆತಂಕ ಮನೆಮಾಡಿರುವ ಹೊತ್ತಿನಲ್ಲಿ ಮಂಡನೆಯಾಗುತ್ತಿರುವ ಭಾರೀ ಸವಾಲಿನ ಬಜೆಟ್ ಇದು. ಹೀಗಾಗಿಯೇ ದೇಶಕ್ಕೆ ಜನಮಾನಸಕ್ಕೆ ಭರವಸೆ ತುಂಬಲೆಂದು ನಿರ್ಮಲಾ ಅವರು ಈ ಬಣ್ಣದ ಸೀರೆ ಆರಿಸಿಕೊಂಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಲೋಕಸಭೆಯಲ್ಲಿ ಇಂದು ಬಜೆಟ್ ಮಂಡಿಸಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮನೆಯಿಂದ ಹೊರಟು ವಿತ್ತ ಸಚಿವಾಲಯ ತಲುಪಿದರು. ಅಧಿಕಾರಿಗಳೊಂದಿಗೆ ಕೊನೆಯ ಕ್ಷಣದ ಸಮಾಲೋಚನೆ ನಡೆಸಲಿದ್ದಾರೆ.
ಸಂಸತ್ತಿನಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ಗೆ ಪೂರ್ವಭಾವಿಯಾಗಿ ಬೆಳಿಗ್ಗೆ 10:15ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ.
Published On - 8:36 am, Wed, 1 February 23