ರಿಸರ್ವ್ ಬ್ಯಾಂಕ್ ಅಫ್ ಇಂಡಿಯಾ (Reserve Bank Of India) ನಿರ್ವಹಣೆ ಮಾಡುವಂಥ ಡಿಜಿಟಲ್ ರುಪೀ ವಿತರಣೆಯ ಪ್ರಸ್ತಾವವನ್ನು ಈ ಬಾರಿಯ ಕೇಂದ್ರ ಬಜೆಟ್ 2022ರಲ್ಲಿ ಮಾಡಲಾಗಿದೆ. ಡಿಜಿಟಲ್ ಕರೆನ್ಸಿಯನ್ನು ಕೇಂದ್ರ ಬ್ಯಾಂಕ್‌ನಿಂದ ಪರಿಚಯಿಸುವುದರಿಂದ ಕರೆನ್ಸಿ ನಿರ್ವಹಣೆ ಅಗ್ಗವಾಗುತ್ತದೆ. ಹಣಕಾಸು ವರ್ಷ 2022-23ಕ್ಕೆ ಆರ್ಬಿಐನಿಂದ ವಿತರಣೆ ಮಾಡುವ ಡಿಜಿಟಲ್ ರುಪೀಗೆ ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸಲಾಗುವುದು ಎಂದು ಹಣಕಾಸು ಸಚಿವೆ ಹೇಳಿದ್ದಾರೆ. ಕಳೆದ ವರ್ಷ ಬಜೆಟ್ ವೇಳೆ ಕೇಂದ್ರ ಸರ್ಕಾರವು ತಿಳಿಸಿದ್ದ ಪ್ರಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಹಂತಹಂತವಾಗಿ ಪರಿಚಯಿಸುವುದಕ್ಕೆ ಅನುಷ್ಠಾನದ ಕಾರ್ಯತಂತ್ರ ಮಾಡುತ್ತಿದೆ ಎಂದಿತ್ತು. ಇನ್ನೂ ಮುಂದುವರಿದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, 1934ಕ್ಕೆ ತಿದ್ದುಪಡಿ ತಂದು, “ಬ್ಯಾಂಕ್ ನೋಟ್” ಎಂಬುದರ ವ್ಯಾಖ್ಯಾನದ ವ್ಯಾಪ್ತಿಯನ್ನು ವಿಸ್ತರಿಸಿ, ಡಿಜಿಟಲ್ ಸ್ವರೂಪದ ಕರೆನ್ಸಿಯನ್ನೂ ಒಳಗೊಳ್ಳುವುದಕ್ಕೆ ಕಳೆದ ಅಕ್ಟೋಬರ್ನಲ್ಲಿ ಪ್ರಸ್ತಾವ ಸಲ್ಲಿಸಿತ್ತು.
“ಡಿಜಿಟಲ್ ಕರೆನ್ಸಿಯನ್ನು ಸೃಷ್ಟಿಸುವ ಉದ್ದೇಶ ಏನೆಂದರೆ ನಗದು ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದು, ಕಡಿಮೆ ವಹಿವಾಟು ವೆಚ್ಚಗಳಿಂದ ಹೆಚ್ಚಿನ ಆದಾಯ ಮತ್ತು ಕಡಿಮೆ ತೀರುವಳಿ ಅಪಾಯದಂತಹ ಗಮನಾರ್ಹ ಪ್ರಯೋಜನಗಳನ್ನು ಒದಗಿಸುವುದು,” ಎಂದು ಹಣಕಾಸು ಖಾತೆ ರಾಜ್ಯ ಸಚಿವರು ಲೋಕಸಭೆಗೆ ತನ್ನ ಉತ್ತರದಲ್ಲಿ ತಿಳಿಸಿದ್ದಾರೆ. ಹೊಸ ಡಿಜಿಟಲ್ ಕರೆನ್ಸಿಯು ಹೆಚ್ಚು ದೃಢವಾದ, ಸಮರ್ಥ, ವಿಶ್ವಾಸಾರ್ಹ, ನಿಯಂತ್ರಿತ ಮತ್ತು ಕಾನೂನು ಮಾನ್ಯತೆ ಆಧಾರಿತ ಪಾವತಿಗಳ ಆಯ್ಕೆಗೆ ಕಾರಣ ಆಗಬಹುದು ಎಂದು ಅವರು ಹೇಳಿದ್ದಾರೆ. ಆದರೂ ಸಂಭವನೀಯ ಪ್ರಯೋಜನಗಳ ಜತೆಗೆ ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕಾದ ಸಂಬಂಧಿತ ಅಪಾಯಗಳು ಸಹ ಇವೆ ಎಂದು ತಿಳಿಸಿದ್ದಾರೆ.
ಸಿಬಿಡಿಸಿ ಎಂಬುದು ಫಿಯೆಟ್ ಕರೆನ್ಸಿಯ ಡಿಜಿಟಲ್ ಆವೃತ್ತಿಯಾಗಿದ್ದು, ಇದನ್ನು ಬ್ಲಾಕ್‌ಚೈನ್ ಆಧಾರಿತ ವ್ಯಾಲೆಟ್‌ಗಳ ಮೂಲಕ ವಿನಿಮಯ ಮಾಡಿಕೊಳ್ಳಬಹುದು ಹಾಗೂ ಕೇಂದ್ರ ಬ್ಯಾಂಕ್‌ನಿಂದ ನಿಯಂತ್ರಿಸಲಾಗುತ್ತದೆ. ಸಿಬಿಡಿಸಿಗಳು ಬಿಟ್‌ಕಾಯಿನ್‌ನಿಂದ ಸ್ಫೂರ್ತಿ ಪಡೆದಿವೆ ಎಂಬ ವಾಸ್ತವದ ಹೊರತಾಗಿಯೂ ಅವು ವಿಕೇಂದ್ರೀಕೃತ ವರ್ಚುವಲ್ ಕರೆನ್ಸಿಗಳು ಮತ್ತು ಕ್ರಿಪ್ಟೋ ಸ್ವತ್ತುಗಳಿಂದ ಭಿನ್ನವಾಗಿವೆ. ಅವುಗಳನ್ನೇನೂ ಸರ್ಕಾರದಿಂದ ನೀಡಿಲ್ಲ ಮತ್ತು “ಕಾನೂನು ಮಾನ್ಯತೆ” ಹೊಂದಿಲ್ಲ.
ತಜ್ಞರ ಪ್ರಕಾರ, ಹೊಸ ಡಿಜಿಟಲ್ ಕರೆನ್ಸಿ ಹೆಚ್ಚು ಸ್ಥಿರ, ಪರಿಣಾಮಕಾರಿ, ವಿಶ್ವಾಸಾರ್ಹ, ನಿಯಂತ್ರಿತ ಮತ್ತು ಕಾನೂನು ಮಾನ್ಯತೆ ಆಧಾರಿತ ಪಾವತಿ ಆಯ್ಕೆಗೆ ಕಾರಣವಾಗಬಹುದು. ಆದರೂ ಸಂಭವನೀಯ ಬೆನಿಫಿಟ್ಗಳ ಜತೆಗೆ ಎಚ್ಚರಿಕೆಯಿಂದ ಪರಿಗಣಿಸಬೇಕಾದ ಅಪಾಯಗಳಿವೆ ಎಂದು ತಿಳಿದಿರಬೇಕು.
ಇದನ್ನೂ ಓದಿ: Cryptocurrencies: ಕ್ರಿಪ್ಟೋವನ್ನು ಕರೆನ್ಸಿ ಎಂಬುದರ ಬದಲಾಗಿ ಚಿನ್ನದಂತೆ ಪರಿಗಣಿಸಲು ಪ್ರಸ್ತಾವ; ಗೊತ್ತಿರಬೇಕಾದ 10 ಅಂಶಗಳು