
ನವದೆಹಲಿ, ಜನವರಿ 31: ಸಾಮಾನ್ಯವಾಗಿ ಬಜೆಟ್ಗೆ ಮುಂಚೆ ಆರ್ಥಿಕ ಸಮೀಕ್ಷಾ ವರದಿಯನ್ನು (Economic Survey 2024) ಬಿಡುಗಡೆ ಮಾಡುವುದು ವಾಡಿಕೆ. ಬಜೆಟ್ ಹಿಂದಿನ ದಿನದಂದು ಇದನ್ನು ಬಹಿರಂಗಪಡಿಸಲಾಗುತ್ತದೆ. ಆದರೆ, ಏಪ್ರಿಲ್, ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ಈ ಬಾರಿ ಪೂರ್ಣ ಬಜೆಟ್ ಬದಲು ಮಧ್ಯಂತರ ಬಜೆಟ್ ಮಾತ್ರವೇ ಇರುತ್ತದೆ. ಹಾಗೆಯೇ, ಆರ್ಥಿಕ ಸಮೀಕ್ಷಾ ವರದಿಯನ್ನು ಪ್ರಸ್ತುಪಡಿಸುವಂತಿಲ್ಲ. ಹೀಗಾಗಿ, ಇಂದು ಪ್ರಸ್ತುತಪಡಿಸಬೇಕಿದ್ದ ಆರ್ಥಿಕ ಸಮೀಕ್ಷಾ ವರದಿ ಇರುವುದಿಲ್ಲ. ಅದರ ಬದಲು ಎರಡು ದಿನಗಳ ಹಿಂದೆಯೇ ಬೇರೆಯ ಆರ್ಥಿಕ ಪರಾಮರ್ಶೆ ವರದಿ (Indian Economy – A Review) ಬಿಡುಗಡೆ ಆಗಿದೆ.
ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಎಕನಾಮಿಕ್ ಸರ್ವೆ ರಿಪೋರ್ಟ್ ಅನ್ನು ಬಿಡುಗಡೆ ಮಾಡುತ್ತಾರೆ. ಈಗ ಅವರದೇ ಆರ್ಥಿಕ ವ್ಯವಹಾರಗಳ ಇಲಾಖೆ ಪರ್ಯಾಯ ವರದಿ ತಯಾರಿಸಿದೆ. ದೇಶದ ಆರ್ಥಿಕ ಬೆಳವಣಿಗೆಯ ಶಕ್ತಿ ಮತ್ತು ದಿಕ್ಕುಗಳ ಬಗ್ಗೆ ಬೆಳಕು ಚೆಲ್ಲುವ ‘ದಿ ಇಂಡಿಯನ್ ಎಕನಾಮಿ- ಎ ರಿವ್ಯೂ’ ವರದಿಯನ್ನು ಜನವರಿ 29ರಂದು ಬಿಡುಗಡೆ ಮಾಡಲಾಗಿದೆ. ಹಾಲಿ ಇರುವ ಆರ್ಥಿಕ ಪರಿಸ್ಥಿತಿ ಮತ್ತು ಮುಂದಿನ ದಿನಗಳಲ್ಲಿನ ಸಾಧ್ಯತೆಗಳೇನು ಎಂದು ಈ ವರದಿಯಲ್ಲಿ ಪರಾಮರ್ಶಿಸಲಾಗಿದೆ.
ಆರ್ಥಿಕ ಸಮೀಕ್ಷೆಯಾಗಲೀ, ಈಗ ಪ್ರಕಟವಾಗಿರುವ ಪರ್ಯಾಯ ಆರ್ಥಿಕ ವರದಿಯಾಗಲೀ ಬಜೆಟ್ಗೆ ಸಂಬಂಧಿಸಿದ್ದಲ್ಲ. ಪೂರ್ವಭಾವಿಯಾಗಿ ಮಾತ್ರವೇ ಇದನ್ನು ಪ್ರಸ್ತುಪಡಿಸಲಾಗುತ್ತದೆ. ದೇಶದ ಆರ್ಥಿಕ ಚಿತ್ರಣ ಹೇಗಿದೆ ಎಂದು ಜನಸಾಮಾನ್ಯರ ಕಣ್ಮುಂದೆ ತರಲು ಈ ವರದಿ ಸಹಾಯವಾಗುತ್ತದೆ.
ಇದನ್ನೂ ಓದಿ: Budget 2024 Date: ಕೇಂದ್ರ ಬಜೆಟ್ ದಿನ, ಸಮಯ, ಸೆಷನ್, ದಾಖಲೆ ಮತ್ತಿತರ ವಿವರ
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:51 am, Wed, 31 January 24