ಬೆಂಗಳೂರು: 2023ರ ಕರ್ನಾಟಕದ ಬಜೆಟ್ ಮಂಡನೆ ಮುಗಿದಿದೆ. ಬಜೆಟ್ ಮುಕ್ತಾಯದ ಬಳಿಕ ವಿಧಾನಸಭೆಯಿಂದ ಹೊರ ತೆರಳುವ ವೇಳೆ ಡಿಕೆ ಶಿವಕುಮಾರ್ ಕಿವಿಯಲ್ಲಿ ಹೂವು ಇರಿಸಿಕೊಂಡೇ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಿವಿಯಲ್ಲಿ ಹೂವು ಇರಿಸಿಕೊಂಡೇ ಸಿಎಂ ಬಳಿ ಹೋಗಿ ಅಭಿನಂದಿಸಿದ್ದಾರೆ. ಈ ವೇಳೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮುಖಾಮುಖಿಯಾಗಿದ್ದು ಡಿಕೆ ಶಿವಕುಮಾರ್ ಕಿವಿಯಲ್ಲಿದ್ದ ಹೂ ತೆಗೆದ್ರು. ಆಗ ತಕ್ಷಣ ಹೂ ವಾಪಸ್ ಪಡೆದುಕೊಂಡು ಡಿಕೆಶಿ ಮತ್ತೆ ಹೂವನ್ನು ಕಿವಿಗೆ ಇರಿಸಿಕೊಂಡರು.
ಇನ್ನು ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಬಜೆಟ್ ಕೇವಲ ಆಶ್ವಾಸನೆಗಳ ಪಟ್ಟಿ ಅಷ್ಟೇ. ಸಿಎಂ ಬೊಮ್ಮಾಯಿ ಮಂಡಿಸಿರುವುದು ಬಿಸಿಲುಕುದುರೆ ಬಜೆಟ್. ರಾಜ್ಯದ ಜನ ಕಿವಿಗೆ ಹೂವು ಇಡುವ ಬಜೆಟ್ ಆಗಿದೆ ಅಷ್ಟೇ ಎಂದರು.
ಬಜೆಟ್ ಜಾತ್ರೆ ಕನ್ನಡಕದಂತೆ, ಈ ಬಜೆಟ್ನಿಂದ ಉಪಯೋಗವಿಲ್ಲ. ಜಾತ್ರೆ ಕನ್ನಡಕ ಹಾಕಿಕೊಂಡರೆ ಏನೂ ಕಾಣಲ್ಲ. ಬಜೆಟ್ ಓದಲು ಸಿಎಂ ಬೊಮ್ಮಾಯಿಗೆ ಸ್ವರವೇ ಇರಲಿಲ್ಲ. ಮಾತೆತ್ತಿದರೆ ಧಮ್, ತಾಕತ್ ಬಗ್ಗೆ ಮಾತನಾಡುವ ಬೊಮ್ಮಾಯಿ, ಬಜೆಟ್ ಓದಲು ಸ್ವರ ಇರಲಿಲ್ಲ. ಡಬಲ್ ಇಂಜಿನ್ ಸರ್ಕಾರ ಎಂದು ಹೇಳುವ ಬಿಜೆಪಿಯವರು, ಡಬಲ್ ಇಂಜಿನ್ ಸೀಜ್ ಆಗಿ ಕೇವಲ ವಾಯ್ಸ್ ಬರುತ್ತಿದೆ. ನಿರುದ್ಯೋಗ, ಆರೋಗ್ಯ, ರೈತರ ಆದಾಯ ಹೆಚ್ಚಳಕ್ಕೆ ಕ್ರಮವಿಲ್ಲ. ಇದು ಬಾಯ್ ಬಾಯ್ ಬಜೆಟ್, ಶೋಕೇಸ್ನಲ್ಲಿ ಇಡಬೇಕಿರುವ ಬಜೆಟ್. ಬೊಮ್ಮಾಯಿ ಬಜೆಟ್ ಮಂಡಿಸಿದ್ದೀನಿ ಎಂದು ಹೇಳಿಕೊಳ್ಳಬೇಕು ಅಷ್ಟೇ. ಬೊಮ್ಮಾಯಿ ಶೋಕೇಸ್ನಲ್ಲಿ ಬಜೆಟ್ ಪ್ರತಿ ಇಟ್ಟುಕೊಳ್ಳಬೇಕು ಅಷ್ಟೇ. ಈ ಬಜೆಟ್ ಜಾರಿಗೆ ಬರುವುದಿಲ್ಲ, ಘೋಷಣೆಗೆ ಮಾತ್ರ ಸೀಮಿತ ಎಂದರು.
ಈ ಹಿಂದೆ ಬಜೆಟ್ ಆರಂಭದ ವೇಳೆ ಸಿಎಂ ಬೊಮ್ಮಾತಿ ಪ್ರಧಾನಿ ಮೋದಿ ಅವರನ್ನ ಅಭಿನಂದಿಸುತ್ತ ಕುವೆಂಪು ಅವರ ಕವನವನ್ನ ಉಲ್ಲೇಖಿಸಿ ಬಜೆಟ್ ಮಂಡನೆ ಶುರು ಮಾಡುತ್ತಿದ್ದಂತೆ ವಿಪಕ್ಷಗಳು ಕ್ಯಾತೆ ತೆಗೆದಿದ್ದವು. ಸಿದ್ದರಾಮಯ್ಯನವರು ಕಿವಿ ಮೇಲೆ ಹೂವು ಇಟ್ಟುಕೊಂಡು ವಾಗ್ದಾಳಿಗೆ ಮುಂದಾದ್ರು. ಆಗ ಸಿದ್ದುಗೆ ಟಾಂಗ್ ಕೊಟ್ಟ ಸಿಎಂ ಬೊಮ್ಮಾಯಿ ಮುಂದಿನ ಸಲವು ನಿಮ್ಮ ಕಿವಿ ಮೇಲೆ ಹೂ ಇಡ್ತೀವಿ ಎಂದರು. ಇದಕ್ಕೆ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ರು. ಬಜೆಟ್ ಮಂಡನೆಗೂ ಮುನ್ನವೇ ವಿಪಕ್ಷ ಸದಸ್ಯರಿಂದ ಕಲಾಪದಲ್ಲಿ ತೀವ್ರ ಗದ್ದಲ, ಘೋಷಣೆ ಭುಗಿಲೆದ್ದಿತ್ತು.
Published On - 1:19 pm, Fri, 17 February 23