Karnataka Budget 2023 Highlights: ಕರ್ನಾಟಕ ಬಜೆಟ್ ಮುಖ್ಯಾಂಶಗಳು
ಕರ್ನಾಟಕ ಬಜೆಟ್ 2023-24 Live: ಬಜೆಟ್‌ನಲ್ಲಿ ಜನ ಸಾಮಾನ್ಯರಿಗೆ, ಕೃಷಿಕರಿಗೆ, ಮಹಿಳೆಯರಿಗೆ, ಯುವಕರಿಗೆ ಭರ್ಜರಿ ಕೊಡುಗೆಗಳನ್ನು ನೀಡಬಹುದು, ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಇದೆ. ಬಜೆಟ್ನ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
Karnataka Budget 2023-24 Live News Updates: ಕರ್ನಾಟಕ ವಿಧಾನ ಸಭಾ ಚುನಾವಣೆ (Karnataka Assembly Elections 2023) ಗಮನದಲ್ಲಿಟ್ಟುಕೊಂಡು ಜನರ ಮನ ಗೆಲ್ಲಲು ಬಜೆಟ್ ಅನ್ನೇ (Karnataka Budget 202) ಅಸ್ತ್ರವಾಗಿ ಪ್ರಯೋಗಿಸಲು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಬಂಪರ್ ಬಜೆಟ್ ಮಂಡನೆಯಾಗುವ ನಿರೀಕ್ಷೆ ಜನರಲ್ಲಿದೆ. ರಾಜ್ಯದ ಹಣಕಾಸು ಸಚಿವರೂ ಆಗಿರುವ ಬೊಮ್ಮಾಯಿ ಇಂದು ಬೆಳಗ್ಗೆ 10.15ಕ್ಕೆ ಬಿಜೆಪಿ ಸರ್ಕಾರದ ಕೊನೇ ಹಾಗೂ 2ನೇ ಬಜೆಟ್ ಮಂಡಿಸಲಿದ್ದಾರೆ. ಇನ್ನೇನು ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಜನರ ಮೇಲೆ ಹೊಸ ತೆರಿಗೆ ಹೊರೆ ಹಾಕದೆ, ಜನರನ್ನು ತಮ್ಮತ್ತ ಸೆಳೆಯುವ ಜನಪ್ರಿಯ ಯೋಜನೆಗಳನ್ನು, ಘೋಷಣೆಗಳನ್ನೊಳಗೊಂಡ ಬಜೆಟ್ ಮಂಡಿಸುವತ್ತ ಸಿಎಂ ಬಸವರಾಜ ಬೊಮ್ಮಾಯಿ ಗಮನ ಹರಿಸಿದ್ದಾರೆ ಎನ್ನಲಾಗಿದೆ.
ಸಾಮಾನ್ಯವಾಗಿ ಚುನಾವಣಾ ವರ್ಷದಲ್ಲಿ ಮಂಡಿಸೋ ಬಜೆಟ್ಗಳು ಜನಪ್ರಿಯ ಬಜೆಟ್ಗಳೇ ಆಗಿರುತ್ತವೆ. ಬಜೆಟ್‌ನಲ್ಲಿ ಸಾಮಾನ್ಯ ಜನರಿಗೆ, ಕೃಷಿಕರಿಗೆ, ಮಹಿಳೆಯರಿಗೆ, ಯುವಕರಿಗೆ ಭರ್ಜರಿ ಕೊಡುಗೆಗಳನ್ನು ನೀಡಲಾಗುತ್ತದೆ. ಹೀಗಾಗಿ, ಇಂದು ಸಿಎಂ ಬೊಮ್ಮಾಯಿ ಮಂಡಿಸೋ ಜನಪರ ಬಜೆಟ್ ಆಗಿರುತ್ತಾ? ಜನಪ್ರಿಯ ಘೋಷಣೆಗಳ ಬಜೆಟ್ ಆಗಿರುತ್ತಾ ಅನ್ನೋ ಕುತೂಹಲವೂ ಇದೆ. ಕಳೆದ ಸಾಲಿನಲ್ಲಿ 2.7 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿತ್ತು. ಈ ಬಾರಿ ಬಜೆಟ್ನ ಮೊತ್ತ 3 ಲಕ್ಷ ಕೋಟಿಗೂ ಅಧಿಕವಾಗಲಿದೆ ಅಂತಾ ಹೇಳಲಾಗುತ್ತಿದೆ.
ಕರ್ನಾಟಕ ಬಜೆಟ್ ಮತ್ತಷ್ಟು ಸುದ್ದಿಗಳು
ಇಂಗ್ಲಿಷ್ನಲ್ಲಿ ಬಜೆಟ್ ಅಪ್ಡೇಟ್ಸ್ಗಾಗಿ ಇಲ್ಲಿ ಕ್ಲಿಕ್ ಮಾಡಿ
LIVE NEWS & UPDATES
-
Karnataka Budget 2023 Live Updates: ಬಜೆಟ್ ಮಂಡನೆ ಮುಕ್ತಾಯ, ಕಲಾಪ ಸೋಮವಾರಕ್ಕೆ ಮುಂದೂಡಿಕೆ
ಬಜೆಟ್ ಮಂಡನೆ ಮುಕ್ತಾಯಗೊಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. 15ನೇ ವಿಧಾನಸಭೆಯ ಕೊನೆಯ ಅಧಿವೇಶನ ಇದಾಗಿದೆ ಎಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದರು. ಸುಮಾರು 2.35 ಗಂಟೆ ಬಜೆಟ್ ಭಾಷಣ ಓದಿದ ಮುಖ್ಯಮಂತ್ರಿ ಬೊಮ್ಮಾಯಿ.
-
Karnataka Budget 2023 Live Updates: ತೆರಿಗೆ ವಿನಾಯಿತಿ ಮಿತಿಯಲ್ಲೇನು ಬದಲಾವಣೆ?
ವೃತ್ತಿ ತೆರಿಗೆ ಅಧಿನಿಯಮವನ್ನು ಸರಳೀಕರಣಗೊಳಿಸಲು ಉದ್ದೇಶಿಸಲಾಗಿದೆ. ಕಡಿಮೆ ವರಮಾನ ಹೊಂದಿರುವ ವರ್ಗದವರಿಗೆ ಪರಿಹಾರ ನೀಡುವುದಕ್ಕಾಗಿ ಸಂಬಳ ಅಥವಾ ಮಜೂರಿ ಪಡೆಯುವ ನೌಕರರ ತೆರಿಗೆ ವಿನಾಯಿತಿ ಮಿತಿಯನ್ನು 15,000 ರೂ.ನಿಂದ 25,000 ರೂ.ಗೆ ವಿಸ್ತರಣೆ ಮಾಡಲು ಪ್ರಸ್ತಾಪಿಸಲಾಗಿದೆ.
-
Karnataka Budget 2023 Live Updates: ಕೆಎಸ್ಆರ್ಟಿಸಿ ಸಿಬ್ಬಂದಿಗೆ 1 ಕೋಟಿ ರೂ. ಅಪಘಾತ ವಿಮೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ 1 ಕೋಟಿ ರೂ. ಮೊತ್ತದ ಅಪಘಾತ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. ಇಷ್ಟೊಂದು ಮೊತ್ತದ ವಿಮಾ ಸೌಲಭ್ಯ ನೀಡುತ್ತಿರುವುದು ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲಾಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
Karnataka Budget 2023 Live Updates: ಅಸಂಘಟಿತ ಕಾರ್ಮಿಕರಿಗೆ 4 ಲಕ್ಷ ರೂ. ವಿಮೆ
ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ನಮ್ಮ ಸರ್ಕಾರದ ಬದ್ಧತೆಯಾಗಿರುತ್ತದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿನ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು. ಮತ್ತು ಲಾರಿ ಚಾಲಕರಿಗೆ ಹಾಗೂ ಇ-ಕಾಮರ್ಸ್ ಡೆಲಿವರಿ ಸೇವೆಯನ್ನು ನೀಡುತ್ತಿರುವವರ ಅವಲಂಬಿತರಿಗೆ ಭದ್ರತೆಯನ್ನು ಒದಗಿಸುವುದಕ್ಕಾಗಿ ಕಾರ್ಮಿಕರು ಮರಣ ಹೊಂದಿದಲ್ಲಿ 2 ಲಕ್ಷ ರೂ, ಹಾಗೂ ಅಪಘಾತದಲ್ಲಿ ಮರಣ ಹೊಂದಿದಲ್ಲಿ 2 ಲಕ್ಷ ರೂ,ಗಳಂತೆ ಒಟ್ಟು 4 ಲಕ್ಷ ರೂ. ಗಳ ವಿಮಾ ಸೌಲಭ್ಯ ಕಲ್ಪಿಸಲು ‘ಮುಖ್ಯಮಂತ್ರಿ ವಿಮಾ ಯೋಜನೆ’ ಆರಂಭಿಸಲಾಗುವುದು. ಇದರಿಂದ ಒಟ್ಟು 16.50 ಲಕ್ಷ ಜನರಿಗೆ ಸಹಾಯವಾಗಲಿದೆ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
Karnataka Budget 2023 Live Updates: ಎರಡನೇ ಹಂತದ ನಗರಗಳಿಗೆ ಮಿನಿ ಥಿಯೇಟರ್
ಕನ್ನಡ ಚಿತ್ರ ರಂಗಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ಎರಡನೇ ಹಂತದ ನಗರಗಳಲ್ಲಿ 100ರಿಂದ 200 ಆಸನಗಳುಳ್ಳ ಮಿನಿ ಥಿಯೇಟರ್ಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಾಗುವುದು.
Karnataka Budget 2023 Live Updates: ಮೊದಲ ಬಾರಿಗೆ ಹಸಿರು ಬಜೆಟ್ ಎಂದ ಬೊಮ್ಮಾಯಿ
ಪ್ರಪ್ರಥಮ ಬಾರಿಗೆ ನಾನು 100 ಕೋಟಿ ರೂ. ಅನುದಾನದಲ್ಲಿ ಹಸಿರು ಬಜೆಟ್ (Eco Buegdt) ಮಂಡಿಸಿದ್ದೇನೆ. ಅದರಂತೆ, ಪರಿಸರದ ಮೇಲೆ ಮಾನವ ನಿರ್ಮಿತ ಒತ್ತಡಗಳಿಂದ ಉಂಟಾದ ದುಷ್ಪರಿಣಾಮವನ್ನು ಸರಿದೂಗಿಸಲು ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಬೋಳುಗುಡ್ಡ ಪ್ರದೇಶಗಳ ಪುನಶ್ಚೇತನ, ಕ್ಷೀಣಿಸಿದ ಅರಣ್ಯ ಪ್ರದೇಶದ ಮರುಸ್ಥಾಪನೆ, ಕರಾವಳಿ ಪ್ರದೇಶದಲ್ಲಿ ಕಾಂಡ್ಲಾ ಅರಣ್ಯೀಕರಣ ಮತ್ತು ಶೆಲ್ಟರ್ ಬೆಲ್ಟ್ ನಿರ್ವಹಣೆ ಅಡಿಯಲ್ಲಿ 3.211 ಹೆಕ್ಟೇರ್ ಪ್ರದೇಶದಲ್ಲಿ ಹಾಗೂ ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ 168 ಕಿ.ಮೀ. ಉದ್ದದ ಅರಣ್ಯೀಕರಣ ಹಾಗೂ 25 ಲಕ್ಷ ಸಸಿಗಳನ್ನು ನೆಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
Karnataka Budget 2023 Live Updates: ವನ್ಯಪ್ರಾಣಿಗಳಿಂದ ಪ್ರಾಣ ಹಾನಿಗೆ 15 ಲಕ್ಷ ರೂ. ಪರಿಹಾರ
ಮಾನವ ಮತ್ತು ವನ್ಯಜೀವಿ ಸಂಘರ್ಷದಿಂದ ಸಂಭವಿಸುವ ಪ್ರಾಣಹಾನಿಗೆ ಈಗ ನೀಡಲಾಗುತ್ತಿರುವ 7.50 ಲಕ್ಷ ರೂ. ಪರಿಹಾರವನ್ನು 15 ಲಕ್ಷ ರೂ.ಗೆ ಹೆಚ್ಚಿಸಲಾಗುವುದು. ಜನವಸತಿ ಪ್ರದೇಶಗಳಿಂದ ಸೆರೆ ಹಿಡಿದ ವನ್ಯ ಪ್ರಾಣಿಗಳನ್ನು ಬಿಡುಗಡೆ ಮಾಡಲು ಭದ್ರಾ ಹಾಗೂ ಬಂಡಿಪುರ ರಾಷ್ಟ್ರೀಯ ಉದ್ಯಾನದಲ್ಲಿ ವ್ಯವಸ್ಥೆ.
Karnataka Budget 2023 Live Updates: ಬೆಂಗಳೂರಿನಲ್ಲಿ ಭುವನೇಶ್ವರಿ ಥೀಮ್ ಪಾರ್ಕ್
ಬೆಂಗಳೂರಿನಲ್ಲಿ ಭುವನೇಶ್ವರಿ ತಾಯಿಯ ಥೀಮ್ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು. ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸುವುದಕ್ಕಾಗಿ 100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ.
Karnataka Budget 2023 Live Updates: ಉದ್ಯೋಗ ಸಿಗದವರಿಗೆ ‘ಯುವಸ್ನೇಹಿ’ ಯೋಜನೆ
ಪದವಿ ಶಿಕ್ಷಣವನ್ನು ಪೂರೈಸಿ ಮೂರು ವರ್ಷಗಳಾದರೂ ಉದ್ಯೋಗ ದೊರೆಯದ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದಕ್ಕಾಗಿ ‘ಯುವಸ್ನೇಹಿ’ ಯೋಜನೆ ಅಡಿ ಒಂದು ಬಾರಿಯ ಆರ್ಥಿಕ ನೆರವಾಗಿ 2,000 ರೂ. ನೀಡಲಾಗುವುದು.
Karnataka Budget 2023 Live Updates: ‘ಬದುಕುವ ದಾರಿ’ಗೆ 1,500 ರೂ; ಏನಿದು ಯೋಜನೆ?
ಶಾಲಾ ಶಿಕ್ಷಣದ ನಂತರ ವಿವಿಧ ಕಾರಣಗಳಿಂದ ವಿಧ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದವರಿಗೆ ಐಐಟಿಯಲ್ಲಿ ಮೂರು ತಿಂಗಳ ವೃತ್ತಿಪರ ತರಬೇತಿ ಪಡೆಯಲು ಮೂರು ತಿಂಗಳ ಕಾಲ ಮಾಸಿಕ 1,500 ರೂ. ಶಿಷ್ಯವೇತನ ನೀಡಲಾಗುವುದು. ತರಬೇತಿ ಪೂರ್ಣಗೊಂಡವರಿಗೆ ಅಪ್ರೈಂಟಿಸ್ಶಿಪ್ ಕಾರ್ಯಕ್ರಮದಡಿ 3 ತಿಂಗಳು 1,500 ರೂ. ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
Karnataka Budget 2023 Live Updates: ಟ್ರಾಫಿಕ್ ನಿಯಂತ್ರಣಕ್ಕೆ ಕೃತಕ ಬುದ್ಧಿಮತ್ತೆ
ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ 150 ಕೋಟಿ ರೂ. ವೆಚ್ಚದಲ್ಲಿ 75 ಜಂಕ್ಷನ್ ಅಭಿವೃದ್ಧಿಪಡಿಸಲಾಗುವುದು. ಕೃತಕ ಬುದ್ಧಿಮತ್ತೆ ಮೂಲಕ ಟ್ರಾಫಿಕ್ ಸಿಗ್ನಲ್‌ಗಳ ನಿರ್ವಹಣೆ ಮಾಡಲಾಗುವುದು. ಸೀಮ್‌ಲೆಸ್ ಸಿಗ್ನಲಿಂಗ್ ಅಳವಡಿಸಿ ಸಂಚಾರ ದಟ್ಟಣೆಗೆ ಕ್ರಮ ಕೈಗೊಳ್ಳಳಾಗುವುದು. ಕೆ.ಆರ್. ಪುರಂ ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿವರೆಗೆ 350 ಕೋಟಿ ರೂ. ವೆಚ್ಚದಲ್ಲಿ 5 ಕಿ.ಮೀ. ಎಲಿವೇಟೆಡ್ ರಸ್ತೆ ನಿರ್ಮಾಣ ಮಾಡಲಾಗುವುದು. 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ 120 ಕಿ.ಮೀ. ರಸ್ತೆಗೆ ವೈಟ್ ಟಾಪಿಂಗ್, ಬೆಂಗಳೂರಿನ 300 ಕಿ.ಮೀ. ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆ ಅಭಿವೃದ್ಧಿಗೆ 450 ಕೋಟಿ ರೂ. ಅನುದಾನ ನೀಡಲಾಗುವುದು. ಬೈಯಪ್ಪನಹಳ್ಳಿ ನಮ್ಮ ಮೆಟ್ರೋ ಸುತ್ತಮುತ್ತ ರಸ್ತೆ ಅಭಿವೃದ್ಧಿ, ಟ್ರಾಫಿಕ್ ಕಂಟ್ರೋಲ್‌ಗೆ 300 ಕೋಟಿ ರೂ. ಅನುದಾನ ನೀಡಲಾಗುವುದು.
Karnataka Budget 2023 Live Updates: ಟ್ರಾಫಿಕ್ ನಿವಾರಣೆಗೆ ಸ್ಯಾಟಲೈಟ್ ಟೌನ್ ರಿಂಗ್ರೋಡ್
ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು 13,139 ಕೋಟಿ ರೂ. ವೆಚ್ಚದಲ್ಲಿ 288 ಕಿ.ಮೀ ಉದ್ದದ ಸ್ಯಾಟಲೈಟ್ ಟೌನ್ ರಿಂಗ್ರೋಡ್ ನಿರ್ಮಿಸಲು ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದೆ. ಈಯೋಜನೆಗೆ ಭೂಸ್ವಾಧೀನದ ಶೇ 30 ವೆಚ್ಚವನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಲು ಒಪ್ಪಿಗೆ ನೀಡಲಾಗಿದೆ. ಬೆಂಗಳೂರಿನ ಸಾರಿಗೆ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಉನ್ನತಾಧಿಕಾರವುಳ್ಳ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ರಚನೆ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
Karnataka Budget 2023 Live Updates: ಬೆಂಗಳೂರು ಉಪನಗರ ರೈಲಿಗೆ ರಾಜ್ಯದಿಂದ ಸಾವಿರ ಕೋಟಿ
15,767 ಕೋಟಿ ರೂ. ವೆಚ್ಚದಲ್ಲಿ ಉಪನಗರ ರೈಲ್ವೆ ಯೋಜನೆ ಅನುಷ್ಠಾನಕ್ಕೆ ರಾಜ್ಯ ಹಾಗೂ ರೈಲ್ವೆ ಸಚಿವಾಲಯ ಹಸಿರು ನಿಶಾನೆ ನೀಡಿದೆ. ಈಗಾಗಲೇ ಮೊದಲನೆ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು ಈ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ 1,350 ಕೋಟಿ, ರಾಜ್ಯ ಸರ್ಕಾರದಿಂದ 1 ಸಾವಿರ ಕೋಟಿ ಅನುದಾನ ದೊರೆಯಲಿದೆ. ಬೆಂಗಳೂರು ಉಪನಗರ ರೈಲು ಯೋಜನೆಯ ಚಿಕ್ಕಬಾಣಾವರ ಮತ್ತು ಬೈಯಪ್ಪನಹಳ್ಳಿ ನಡುವಿನ ಕಾರಿಡಾರ್ 2ರ ಕಾಮಗಾರಿಗಳಿಗೆ 860 ಕೋಟಿ ರೂ. ಮೊತ್ತಕ್ಕೆ ಕಾರ್ಯಾದೇಶ ನೀಡಿದ್ದು ಕಾಮಗಾರಿ ಆರಂಭವಾಗಲಿದೆ.
Karnataka Budget 2023 Live Updates: ಮೈಸೂರು ವಿಮಾನ ನಿಲ್ದಾಣ ಉನ್ನತೀಕರಣಕ್ಕೆ 320 ಕೋಟಿ ರೂ
ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿ, ಹೊಸ ಟಿಂಡರ್ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿ ಸ್ಪರ್ಧಾತ್ಮಕ ಬಿಡ್ ಪಕ್ರಿಯೆ ಮೂಲಕ ಪಿಪಿಪಿ ಮಾದರಿಯಲ್ಲಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು. ಮೈಸೂರು ವಿಮಾನ ನಿಲ್ದಾಣವನ್ನು ಉನ್ನತೀಕರಿಸಲು ಭೂ ಸ್ವಾಧೀನಕ್ಕಾಗಿ ಕ್ರಮ ವಹಿಸಲಾಗಿದ್ದು, ಇದಕ್ಕಾಗಿ 320 ಕೋಟಿ ರೂ. ಗಳಷ್ಟು ಹಂಚಿಕೆ ಮಾಡಲಾಗಿದೆ.
Karnataka Budget 2023 Live Updates: ಶರಾವತಿ ಪಂಪ್ಡ್ ಸ್ಟೋರೇಜ್ ಪವರ್ ಪ್ಲ್ಯಾಂಟ್ಗೆ 7.394 ಕೋಟಿ
ಈಗಾಗಲೇ ಶರಾವತಿ ಪಂಪ್ಡ್ ಸ್ಟೋರೇಜ್ ಪವರ್ ಪ್ಲ್ಯಾಂಟ್‌ನ (50) ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲಾಗಿದ್ದು, ಈ ಯೋಜನೆಯನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 7.394 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕರ್ನಾಟಕ ವಿದ್ಯುತ್ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗುವುದು.
Karnataka Budget 2023 Live Updates: ಗ್ರಾಮ ಪಂಚಾಯಿತಿಗೆ 60 ಲಕ್ಷ ರೂ. ವರೆಗೆ ಅನುದಾನ
ಗ್ರಾಮ ಪಂಚಾಯಿತಿಗೆ 22 ಲಕ್ಷ ರೂ.ನಿಂದ 60 ಲಕ್ಷ ರೂ. ವರೆಗೆ ಅನುದಾನ ನೀಡಲು 780 ಕೋಟಿ ರೂ. ಅನುದಾನ ನೀಡಲಾಗುವುದು. ರಸ್ತೆ ಹಾಗೂ ಮೂಲಸೌಕರ್ಯ ವೃದ್ಧಿಗಾಗಿ ಈ ಅನುದಾನ ನೀಡಲಾಗುತ್ತದೆ.
Karnataka Budget 2023 Live Updates: ಮಠ, ಮಂದಿರಗಳ ಅಭಿವೃದ್ಧಿಗೆ 1,000 ಕೋಟಿ
ಮಠ-ಮಂದಿರಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ 1,000 ಕೋಟಿ ರೂ. ಹಣ ಮೀಸಲಿರಿಸಲಾಗಿದೆ. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 475 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕಿತ್ತೂರು ಭಾಗದ ಅಭಿವೃದ್ಧಿಗೆ ಕಿತ್ತೂರು ಕರ್ನಾಟಕ ಮಂಡಳಿ ಸ್ಥಾಪನೆ ಮಾಡಲಾಗುವುದು ಎಂದೂ ಘೋಷಿಸಲಾಗಿದೆ.
Karnataka Budget 2023 Live Updates: ಕಲಿಕೆಯ ಜತೆಗೆ ಕೌಶಲ ವೃದ್ಧಿ
ಸರ್ಕಾರಿ ಪ್ರಥಮ ದರ್ಜೆ ಎಂಜಿನಿಯರಿಂಗ್ ಮತ್ತು ಐಐಟಿ ಕಾಲೇಜುಗಳ ಮೂಲಕ ವಿಶೇಷ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು.
Karnataka Budget 2023 Live Updates: ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ
ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ. ವೆಚ್ಚದಲ್ಲಿ ಜೀವನ್‌ಜ್ಯೋತಿ ವಿಮಾ ಯೋಜನೆ, ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ. ಮೀನುಗಾರರು, ಟ್ಯಾಕ್ಸಿ ಆಟೋ ಚಾಲಕರ ಮಕ್ಕಳಿಗೂ ಯೋಜನೆಯನ್ನು ವಿಸ್ತಣೆ ಮಾಡಲಾಗಿದೆ. ಇದಕ್ಕಾಗಿ ಹೆಚ್ಚುವರಿ 141 ಕೋಟಿ ರೂ. ಅನುದಾನ ಘೋಷಿಸಲಾಗಿದೆ.
Karnataka Budget 2023 Live Updates: ಸರ್ಕಾರವೇ ಪಾವತಿಸಲಿದೆ ‘ಹಳ್ಳಿ ಮುತ್ತು’ಗಳ ಶುಲ್ಕ
ಗ್ರಾಮೀಣ ಸರ್ಕಾರಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಹಳ್ಳಿ ಮುತ್ತು ಯೋಜನೆ ಘೋಷಿಸಲಾಗಿದೆ. ಕನ್ನಡ ಮಾಧ್ಯಮದಲ್ಲಿ ಶಾಲಾ ಶಿಕ್ಷಣ ಪೂರೈಸಿದ 500 ಅತ್ಯುತ್ತಮ ವಿದ್ಯಾರ್ಥಿಗಳ ಹೆಚ್ಚಿನ ಶಿಕ್ಷಣಕ್ಕೆ ಒತ್ತು. ಸಿಇಟಿ ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆ ಯಾದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೆರವು ನೀಡಲಾಗುವುದು. ವೃತ್ತಪರ ಶಿಕ್ಷಣದ ಸಂಪೂರ್ಣ ಶುಲ್ಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭರಿಸಲಿದೆ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
Karnataka Budget 2023 Live Updates: ಬೊಮ್ಮಾಯಿ ಬಜೆಟ್‌ನಲ್ಲಿ ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ದುಡ್ಡು?
ಶಿಕ್ಷಣ ಕ್ಷೇತ್ರಕ್ಕೆ 37 ಸಾವಿರದ 960 ಕೋಟಿ ರೂಪಾಯಿ ಮೀಸಲು ಜಲಸಂಪನ್ಮೂಲ ಇಲಾಖೆಗೆ ಈ ಸಲ 22 ಸಾವಿರದ 854 ರೂಗಳು ಗ್ರಾಮೀಣಾಭಿವೃದ್ಧಿ,ಪಂಚಾಯತ್ ರಾಜ್‌ಗೆ 20 ಸಾವಿರದ 494 ರೂ ನಗರಾಭಿವೃದ್ಧಿಇಲಾಖೆಗೆ ಈ ಬಾರಿ 17 ಸಾವಿರದ 938 ಕೋಟಿ ರೂ ಕಂದಾಯ ಇಲಾಖೆಗೆ 2023-24ರಲ್ಲಿ 15 ಸಾವಿರದ 943 ಕೋಟಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ 15 ಸಾವಿರದ 151 ಕೋಟಿ ಒಳಾಡಳಿತ ಹಾಗೂ ಸಾರಿಗೆ ಇಲಾಖೆಗೆ 14 ಸಾವಿರದ 509 ಕೋಟಿ ಇಂಧನ ಇಲಾಖೆಗೆ ಈ ಸಾಲಿನಲ್ಲಿ 13 ಸಾವಿರದ 803 ಕೋಟಿ ರೂ ಸಮಾಜಕಲ್ಯಾಣ ಇಲಾಖೆಗೆ ಒಟ್ಟು 11 ಸಾವಿರದ 163 ಕೋಟಿ ರೂ ಲೋಕೋಪಯೋಗಿ ಇಲಾಖೆಗೆ ಈ ಸಲ 10 ಸಾವಿರದ 741 ಕೋಟಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 9 ಸಾವಿರದ 456 ಕೋಟಿ ರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 5 ಸಾವಿರದ 676 ಕೋಟಿ ಆಹಾರ ಇಲಾಖೆಗೆ ಈ ಸಲ 4 ಸಾವಿರದ 600 ಕೋಟಿ ರೂ ಮೀಸಲು ವಸತಿ ಇಲಾಖೆಗೆ ಈ ಬಾರಿ ಒಟ್ಟು 3,787 ಕೋಟಿ ರೂಪಾಯಿ ಹಣ
Karnataka Budget 2023 Live Updates: ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಶೇ 24 ಮೀಸಲಾತಿ
ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಶೇ 24ರವರೆಗೆ ಮೀಸಲಾತಿ ನೀಡಲಾಗುವುದು. 50 ಲಕ್ಷ ಮೊತ್ತದಿಂದ 1 ಕೋಟಿವರೆಗಿನ ಟೆಂಡರ್ನಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ.
Karnataka Budget 2023 Live Updates: ಶಿರಸಿಯಲ್ಲಿ ರಾಜ್ಯದ ಪ್ರಥಮ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಾಜ್ಯದ ಪ್ರಥಮ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಜತೆಗೆ, ಕಾಡಾನೆ ಹಾವಳಿ ತಡೆಗೆ ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗು ಜಿಲ್ಲೆಗಳಲ್ಲಿ ರಚಿಸಿರುವ ಕಾಡಾನೆ ಕಾರ್ಯಪಡೆಯನ್ನು ಮೈಸೂರು ಹಾಗೂ ಮಂಡ್ಯಕ್ಕೂ ವಿಸ್ತರಿಸಿ ಹೊಸದಾಗಿ 199 ಸಿಬ್ಬಂದಿ ನೇಮಕಾತಿಗೆ ನಿರ್ಧರಿಸಲಾಗಿದೆ.
Karnataka Budget 2023 Live Updates: ಸಾರಾಯಿ, ಸೇಂದಿ ಬಾಡಿಗೆ ಬಾಕಿ ಮುಂಚೆಯೆ ಪಾವತಿದಾರರಿಗೆ ಬಡ್ಡಿ ಮತ್ತು ದಂಡ ಪಾವತಿಯಲ್ಲಿ ಪರಿಹಾರ
ಸಾರಾಯಿ, ಸೇಂದಿ ಬಾಡಿಗೆಗಳ ಅಬಕಾರಿ ಬಾಕಿ ಪಾವತಿದಾರರಿಗೆ ಗುಡ್ ನ್ಯೂಸ್. ಬಾಕಿ ಪಾವತಿ 30/06/23 ರ ಮುಂಚೆ ಮಾಡಿದರೆ ಬಡ್ಡಿ ಮತ್ತು ದಂಡ ಪಾವತಿಯಲ್ಲಿ ಪರಿಹಾರ.
Karnataka Budget 2023 Live Updates: ಉತ್ತರ ಕನ್ನಡ ಜಿಲ್ಲೆಗೆ ಕೊನೆಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಪ್ರಸಕ್ತ ವರ್ಷ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು. ಮೈಸೂರು, ಶಿವಮೊಗ್ಗ ಮತ್ತು ಕಲಬುರಗಿಗಳಲ್ಲಿ ಕಿದ್ವಾಯಿ ಸಂಸ್ಥೆಯಡಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಜತೆಗೆ ಪ್ರಸಕ್ತ ವರ್ಷದಲ್ಲಿ ರಾಯಚೂರಿನಲ್ಲಿ ಏಮ್ಸ್ ಮಾದರಿಯ ಆಸ್ಪತ್ರೆ ಸ್ಥಾಪಿಸಲಾಗುವುದು.
Karnataka Budget 2023 Live Updates: ರಾಜ್ಯದಲ್ಲಿ ಹೆಚ್ಚುವರಿಯಾಗಿ 1,230 ಶಾಲಾ ಕೊಠಡಿ ನಿರ್ಮಾಣ
ರಾಜ್ಯದಲ್ಲಿ ಹೆಚ್ಚುವರಿಯಾಗಿ 2022-2023ನೇ ಸಾಲಿನಲ್ಲಿ 1,230 ಶಾಲಾ ಕೊಠಡಿ ನಿರ್ಮಾಣ. ರಾಜ್ಯದಲ್ಲಿ ಹೊಸದಾಗಿ 7 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಹೊಸದಾಗಿ 6 ಇಎಸ್ಐ ಆಸ್ಪತ್ರೆಗಳ ನಿರ್ಮಾಣಕ್ಕೆ ಕ್ರಮ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಹೊಸ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ ಮಾಡಲಾಗುವುದು. ರಾಜ್ಯದ ಶಿಶುಮರಣ ಪ್ರಮಾಣ ತಗ್ಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಘೋಷಿಸಿದ್ದಾರೆ.
Karnataka Budget 2023 Live Updates: ಡಿಜಿಟ್ ಆಗಲಿದೆ ರೋಗಿಗಳ ದಾಖಲೆ
ಆರೋಗ್ಯ ದಾಖಲೆಗಳನ್ನು ಒಂದೆಡೆ ಸುರಕ್ಷಿತವಾಗಿ ಕ್ರೂಢೀಕರಿಸಲು, ರೋಗಿಗಳ ಸಮ್ಮತಿಯೊಂದಿಗೆ ವೈದ್ಯಕೀಯ ದಾಖಲಾತಿಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಇದರಿಂದ ಮುಂದಿನ ಚಿಕಿತ್ಸೆಗೆ ಸಹಾಯವಾಗಲಿದೆ. ಜನಸಾಮಾನ್ಯರ ಮೆದುಳಿನ ಆರೋಗ್ಯ ಕಾಪಾಡಲು ಮತ್ತು ಅದರ ಬಗ್ಗೆ ಅರಿವು ಮೂಡಿಸಲು ನಿಮ್ಹಾನ್ಸ್ ಸಹಯೋಗದೊಂದಿಗೆ ಕರ್ನಾಟಕ ಮೆದುಳು ಆರೋಗ್ಯ ಯೋಜನೆಯನ್ನು 25 ಕೋಟಿ ರೂ ವೆಚ್ಚದಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು. ಎಲ್ಲಾ ಜಿಲ್ಲೆಗಳಲ್ಲಿ ಹ್ಯಾಂಡ್ ಹೋಲ್ಡ್ ಎಕ್ಸ್ರೇ ಯಂತ್ರಗಳ ಸಹಾಯದಿಂದ ಕ್ಷಯ ರೋಗಿಗಳ ಆರಂಭಿಕ ತಪಾಸಣೆ ಮತ್ತು ಚಿಕಿತ್ಸೆಗಾಗಿ ಸಮುದಾಯ ಆಧಾರಿತ ತಪಾಸಣೆ ಚಟುವಟಿಕೆ ನಡೆಸಲು 12.50 ಕೋಟಿ ರೂ. ಅನುದಾನದ ಬಗ್ಗೆ ಪ್ರಸ್ತಾಪಿಸಲಾಗಿದೆ.
Karnataka Budget 2023 Live Updates: ‘ಮನೆ ಮನೆಗೆ ಆರೋಗ್ಯ’ ಆರೋಗ್ಯ ಶಿಬಿರ
‘ಮನೆ ಮನೆಗೆ ಆರೋಗ್ಯ’ ಎಂಬ ಕಾರ್ಯಕ್ರಮದಡಿಯಲ್ಲಿ ರಾಜ್ಯದ ಗ್ರಾಮೀಣ ಜನತೆಗೆ 2023-24ನೇ ಸಾಲಿನಲ್ಲಿ ಎರಡು ಬಾರಿ ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಆಯೋಜಿಸಲಾಗುವುದು. ಇದರಿಂದ ತೀವ್ರವಾದ ಕಾಯಿಲೆಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚಿ ಜನರ ಆರೋಗ್ಯ ಕಾಪಾಡುವ ಗುರಿ ಹೊಂದಲಾಗಿದೆ. ಇದರೊಂದಿಗೆ ಈ ಯೋಜನೆಯಡಿ ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರ ಮನೆ ಬಾಗಿಲಿಗೆ ಔಷಧಿಗಳನ್ನು ಕ್ರಮವಹಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
Karnataka Budget 2023 Live Updates: ಆರೋಗ್ಯ ಕ್ಷೇತ್ರಕ್ಕೆ ಏನೇನು ಸಿಕ್ತು?
ಸಾರ್ವಜನಿಕರಿಗೆ ದ್ವಿತೀಯ ಹಾಗೂ ತೃತೀಯ ಆರೈಕೆ ಸೇವೆಗಳನ್ನು ಒದಗಿಸಲು 2022-23ನೇ ಸಾಲಿನಲ್ಲಿ ಜಯದೇವ ಸಂಸ್ಥೆಯ ಅಡಿಯಲ್ಲಿ 263 ಕೋಟಿ ರೂ. ವೆಚ್ಚದಲ್ಲಿ, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮರ್ಥ್ಯ ಹಾಗೂ ಹುಬ್ಬಳ್ಳಿಯಲ್ಲಿ 430 ಹಾಸಿಗೆ ಸಾಮರ್ಥ್ಯದ ಹೃದ್ರೋಗ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಕಾರವಾರದಲ್ಲಿ ಪ್ರಗತಿಯಲ್ಲಿರುವ 450 ಹಾಸಿಗೆ ಸಾಮರ್ಥ್ಯದ ನಿರ್ಮಾಣವನ್ನು ಪೂರ್ಣಗೊಳಿಸಲಾಗುವುದು. ಬೆಂಗಳೂರಿನ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.
Karnataka Budget 2023 Live Updates: 69,000 ಬೀದಿ ವ್ಯಾಪಾರಿಗಳಿಗೆ 70 ಕೋಟಿ ಸಾಲ ಮಂಜೂರು
ಜಗಳೂರು ಸೇರಿದಂತೆ ವಿವಿಧ ಕೆರೆಗಳನ್ನು ತುಂಬಿಸಲು ಕ್ರಮ. 69,000 ಬೀದಿ ವ್ಯಾಪಾರಿಗಳಿಗೆ 70 ಕೋಟಿ ಸಾಲ ಮಂಜೂರು. ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 49,031 ಕೋಟಿ ಮೀಸಲು. ಎಸ್ಸಿ, ಎಸ್ಟಿ ನಿಗಮಗಳಿಗೆ 795 ಕೋಟಿ ರೂ. ಒದಗಿಸಲಾಗಿದೆ. ಎಸ್ಸಿ, ಎಸ್ಟಿ BPL ಕಾರ್ಡ್ ಹೊಂದಿದವರಿಗೆ ಅಮರ್ ಜ್ಯೋತಿ ಯೋಜನೆಯಡಿ 75 ಯೂನಿಟ್ ಉಚಿತ ವಿದ್ಯುತ್. ಮಾರಣಾಂತಿಕ ಕಾಯಿಲೆ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರಿಗೆ 50,000 ರೂ. ಆರ್ಥಿಕ ಭದ್ರತೆ ಜೊತೆಗೆ ಸ್ವಯಂ ನಿವೃತ್ತಿ ಅವಕಾಶ.
Karnataka Budget 2023 Live Updates: ಸರ್ಕಾರಿ ಮಹಿಳಾ ಕಾಲೇಜುಗಳಲ್ಲಿ ಯೋಗ
ಎಲ್ಲ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಾಗೂ ಮಹಿಳಾ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಯೋಗ ತರಬೇತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
Karnataka Budget 2023 Live Updates: ಬರಲಿದೆ ಮಕ್ಕಳ ಬಸ್; 100 ಕೋಟಿ ಅನುದಾನ
ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆ ಮಕ್ಕಳ ಬಸ್ ಯೋಜನೆ ಆರಂಭಿಸಲಾಗುವುದು. 100 ಕೋಟಿ ವೆಚ್ಚದಲ್ಲಿ ಮಕ್ಕಳ ಬಸ್ ಯೋಜನೆ ಅನುಷ್ಠಾನಗೊಳ್ಳಲಿದ್ದು, 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅಭಿವೃದ್ದಿ ಆಕಾಂಕ್ಷಿ ತಾಲೂಕೂಗಳಲ್ಲಿ ಶಿಕ್ಷಣ ಆರೋಗ್ಯ ಮತ್ತು ಪೌಷ್ಟಿಕತೆಗೆ 3000 ಕೋಟಿ ರೂ. ಅನುದಾನ ನೀಡಲಾಗುವುದು. ರಾಜ್ಯದ ಎಲ್ಲಾ ಪ್ರೌಢ ಶಾಲಾ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ದೃಷ್ಟಿಯಿಂದ ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಆರಂಭಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ
Karnataka Budget 2023 Live Updates: ಆಶಾಕಾರ್ಯಕರ್ತೆಯ ಗೌರವ ಧನ 1000 ರೂ. ಹೆಚ್ಚಳ
ಆಶಾಕಾರ್ಯಕರ್ತೆಯರು, ಬಿಸಿಯೂಟ ತಯಾರಿಕರು, ಗ್ರಂಥ ಪಾಲಕರ ಗೌರವಧನ 1000 ರೂ. ಹೆಚ್ಚಳಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕಾಗಿ 775 ಕೋಟಿ ರೂ. ಅನುದಾನ ಹೆಚ್ಚಳ ಮಾಡಲಾಗಿದೆ.
Karnataka Budget 2023 Live Updates: ‘ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ’ ಕಾರ್ಯಕ್ರಮದಡಿ ಜಾನಪದ ಹಬ್ಬ
ಕರ್ನಾಟಕದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಬಂಜಾರ ಸಂಸ್ಕೃತಿ ಮತ್ತು ಅಕಾಡೆಮಿಯನ್ನು ಹಾಗೂ ಯಕ್ಷರಂಗಾಯಣವನ್ನು ಸ್ಥಾಪಿಸಲಾಗಿದೆ. ಕರ್ನಾಟಕ ರಾಜ್ಯದ ಕನ್ನಡ ಮಾತೆಯಾದ ‘ಶ್ರೀ ಭುವನೇಶ್ವರಿ ತಾಯಿಯ ಬೃಹತ್ ಮೂರ್ತಿ ಹಾಗೂ ಥೀಮ್ ಪಾರ್ಕ್ ಅನ್ನು ಬೆಂಗಳೂರು ನಗರದಲ್ಲಿ ಅಭಿವೃದ್ಧಿಪಡಿಸಲಾಗುವುದು. ‘ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ’ ಎಂಬ ಕಾರ್ಯಕ್ರಮದಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಎಲ್ಲಾ ವರ್ಗದ ಸ್ಥಳೀಯ ಕಲಾವಿದರನ್ನು ಒಳಗೊಂಡಂತೆ ಜಾನಪದ ಹಬ್ಬವನ್ನು ಆಯೋಜನೆ ಮಾಡಲಾಗುವುದು. ಗಡಿನಾಡು ಪ್ರದೇಶದಲ್ಲಿ ಕನ್ನಡ ಭಾಷೆ, ಕಲೆ, ಶಿಕ್ಷಣ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಪ್ರಾಶಸ್ತ್ರವನ್ನು ನೀಡಲಾಗುವುದು. ಹಾಗೆಯೇ ಗಡಿ ಪ್ರದೇಶದ ರಸ್ತೆಗಳ ಹಾಗೂ ಸಮಗ್ರ ವಿವಿಧ ಇಲಾಖೆಗಳ ಮುಖಾಂತರ 150 ಕೋಟಿ ರೂ. ಒದಗಿಸಲಾಗುವುದು.
Karnataka Budget 2023 Live Updates: ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ಸುಸಜ್ಜಿತ ‘She Toilet’ ನಿರ್ಮಾಣ
ಬೆಂಗಳೂರು ಮಹಾನಗರದ ಮಾರುಕಟ್ಟೆಗಳು, ಬೃಹತ್ ವಾಣಿಜ್ಯ ಮಳಿಗೆಗಳು ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ಸುಸಜ್ಜಿತ ‘She Toilet’ ಗಳನ್ನು ನಿರ್ಮಿಸಲಾಗುವುದು. ಈ ಸಂಕೀರ್ಣದಲ್ಲಿ ಶೌಚಾಲಯಗಳು, ಫೀಡಿಂಗ್ ರೂಂಗಳು, ಮೊಬೈಲ್ ಚಾರ್ಜಿಂಗ್, ತುರ್ತು SOS ಸೌಲಭ್ಯಗಳು ಇತ್ಯಾದಿಯನ್ನು ಒಳಗೊಂಡಂತೆ, ಆಧುನಿಕ ವಿನ್ಯಾಸದೊಂದಿಗೆ 50 ಕೋಟಿ ರೂ. ಗಳಲ್ಲಿ ನಿರ್ಮಿಸಲಾಗುವುದು.
Karnataka Budget 2023 Live Updates: 243 ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್ ಮತ್ತು 27 ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್ಗೆ ಅನುಮೋದನೆ
ಬೆಂಗಳೂರಿನಲ್ಲಿ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ದೊರಕಿಸುವುದು ಸರ್ಕಾರದ ಆದ್ಯತೆಯಾಗಿದೆ. ಈ ಉದ್ದೇಶಕ್ಕಾಗಿ 2022-23 ನೇ ಸಾಲಿನಲ್ಲಿ 243 ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್ ಮತ್ತು 27 ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್ (Smart Virtual Clinic ಗಳನ್ನು ಅನುಮೋದಿಸಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ 50 ಡಯಾಲಿಸಿಸ್ ಹಾಸಿಗೆಗಳು ಮತ್ತು 300 ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಮಹಾನಗರದ ಆರೋಗ್ಯ ಆಡಳಿತ ವ್ಯವಸ್ಥೆಯನ್ನು ಬೆಂಗಳೂರು ಹೆಲ್ತ್ ಸಿಸ್ಟಮ್ಸ್ ಎಂದು ಪುನರ್ ರಚನೆ ಮಾಡಲು ಉದ್ದೇಶಿಸಲಾಗಿದೆ.
Karnataka Budget 2023 Live Updates: ಕಳಸಾ ಬಂಡೂರಿ ನಾಲೆ ವಿಸ್ತರಣೆಗೆ 1,000 ಕೋಟಿ ರೂ.
ಕಳಸಾ ಬಂಡೂರಿ ನಾಲೆ ವಿಸ್ತರಣೆ ಯೋಜನೆಗೆ ಡಿಪಿಆರ್ಗೆ ಅನುಮೋದನೆ ಪಡೆಯಲಾಗಿದೆ. ಯೋಜನೆ ಅನುಷ್ಠಾನಕ್ಕೆ 1,000 ಕೋಟಿ ಅನುದಾನ ಘೋಷಿಸಲಾಗುಗತ್ತಿದೆ. ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಭದ್ರಾ ಮೇಲ್ದಂಡನೆ ಯೋಜನೆಗೆ 5,000 ಕೋಟಿ ರೂ. ಅನುದಾನ ಘೋಷಿಸಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇವೆ ಎಂದ ಬೊಮ್ಮಾಯಿ.
Karnataka Budget 2023 Live Updates: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಇರುವ 75 ಜಂಕ್ಷನ್‌ಗಳನ್ನು 150 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ
ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು, ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರಮುಖ 75 ಜಂಕ್ಷನ್‌ಗಳನ್ನು 150 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ಇದಕ್ಕೆ ಸೂರಕವಾಗಿ Artificial Intelligence ನ ಬಳಕೆಯೊಂದಿಗೆ ಟ್ರಾಫಿಕ್ ಸಿಗ್ನಲ್‌ಗಳ ನಿರ್ವಹಣೆ ಮಾಡುವ ಮೂಲಕ Seamless Signalling ಅನ್ನು ಅಳವಡಿಸಿಕೊಂಡು ಸಂಚಾರ ದಟ್ಟಣೆ ಕಡಿಮೆ ಮಾಡಲಾಗುವುದು.
Karnataka Budget 2023 Live Updates: ಬೆಂಗಳೂರು ಸಮಗ್ರ ಅಭಿವೃದ್ಧಿ
ವಿಶ್ವದಲ್ಲಿಯೇ ತಂತ್ರಜ್ಞಾನದ ಕೇಂದ್ರವಾಗಿ ಗುರುತಿಸಿಕೊಂಡಿರುವ ನಗರ ಬೆಂಗಳೂರು. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಸುಗಮ ಸಂಚಾರ, ರಸ್ತೆ, ರಾಜಕಾಲುವೆಗಳ ಅಭಿವೃದ್ಧಿಯ ಮೂಲಕ ಪ್ರವಾಹ ತಡೆಗಟ್ಟುವುದು, ವೈಜ್ಞಾನಿಕ ಹಾಗೂ ದಕ್ಷ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ರೂಪಿಸುವುದರೊಂದಿಗೆ ಜನರ ಬದುಕಿನ ಗುಣಮಟ್ಟ ಹೆಚ್ಚಿಸಲು ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳಿಗೂ ನಮ್ಮ ಸರ್ಕಾರ ಆದ್ಯತೆ ನೀಡಿದೆ.
ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರು ನಗರದಲ್ಲಿ 6,000 ಕೋಟಿ ವೆಚ್ಚದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಹೈ ಡೆನ್ಸಿಟಿ ಯೋಜನೆಯಡಿಯಲ್ಲಿ ಒಟ್ಟು 108 ಕಿ.ಮೀ. ರಸ್ತೆಗಳನ್ನು 273 ಕೋಟಿ ರೂ. ಗಳ ಅಂದಾಜಿನಲ್ಲಿ ತೆಗೆದುಕೊಳ್ಳಲಾಗಿದೆ. ಮಳೆ ನೀರು ಮುಕ್ತವಾಗಿ ಹರಿಯುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರವಾಹವನ್ನು ತಪ್ಪಿಸಲು, ಒಟ್ಟು 195 ಕಿ.ಮೀ. ಉದ್ದದ ಚರಂಡಿ ಮತ್ತು ಕಲ್ವರ್ಟ್‌ಗಳ ಅಭಿವೃದ್ಧಿಗಾಗಿ 1,813 ಕೋಟಿ ರೂ. ಗಳನ್ನು ಒದಗಿಸಲಾಗಿದೆ.
Karnataka Budget 2023 Live Updates: ಮೀನುಗಾರಿಕೆ ಉತ್ತೇಜನಕ್ಕೆ ಸೀ ಫುಡ್ ಪಾರ್ಕ್
ಸೀಮೆ ಎಣ್ಣೆ ಆಧಾರಿತ ದೋಣಿಗಳನ್ನು ಪೆಟ್ರೋಲ್ ದೋಣಿಗಳನ್ನಾಗಿ ಪರಿವರ್ತಿಸಲು 40 ಕೋಟಿ ರೂ. ಮೀಸಲಿಡಲಾಗುವುದು. ಪರಿವರ್ತನೆಯಾಗುವ ವರೆಗೂ ಸೀಮೆಎಣ್ಣೆ ಸಹಾಯಧನ ಮುಂದುವರಿಸಲಾಗುವುದು. ಆಳ ಸಮುದ್ರ ಮೀನುಗಾರಿಕೆಗೆ ಮತ್ಸ್ಯಸಿರಿ ಎಂಬ ಯೋಜನೆ ಆರಂಭಿಸಲಾಗಿದೆ. ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆ ಜತೆ ಸಮನ್ವಯಗೊಳಿಸಿ ಈ ಯೋಜನೆ ಜಾರಿಗೊಳಿಸಲಾಗಿದೆ. ಮೀನುಗಾರಿಕೆ ಉತ್ತೇಜನಕ್ಕೆ ಕಾರವಾರದ ಬಳಿ ಸೀ ಫುಡ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.
Karnataka Budget 2023 Live Updates: ಮೆಗಾ ಡೈರಿ ಸ್ಥಾಪನೆಗೆ 90 ಕೋಟಿ ರೂ.
ಹಾವೇರಿಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆಗೆ ಸರ್ಕಾರದಿಂದ 90 ಕೋಟಿ ರೂ. ಅನುದಾನ ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು, ಬಳ್ಳಾರಿ ಜಿಲ್ಲೆಯಲ್ಲಿ ದಿನಂಪ್ರತಿ 2 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯದ ಮೆಗಾಡೈರಿಯನ್ನು 100 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20,000 ಫಲಾನುಭವಿಗಳಿಗೆ 355 ಕೋಟಿ ರೂ. ವೆಚ್ಚದಲ್ಲಿ ಕುರಿ ಮತ್ತು ಮೇಕೆ ಘಟಕಗಳನ್ನು ಸ್ಥಾಪಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು.
Karnataka Budget 2023 Live Updates: ಚರ್ಮಗಂಟು ರೋಗದಿಂದ ರಾಸು ಕಳೆದುಕೊಂಡ ಮಾಲೀಕರಿಗೆ ಪರಿಹಾರ
ಚರ್ಮಗಂಟು ರೋಗವನ್ನು ತಡೆಗಟ್ಟಲು 1 ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಈ ಸೋಂಕಿನಿಂದ ಮರಣ ಹೊಂದಿದ ರಾಸುಗಳ ಮಾಲೀಕರಿಗೆ ಪರಿಹಾರ ನೀಡಲು 55 ಕೋಟಿ ರೂ. ಮಂಜೂರು ಮಾಡಲಾಗಿದೆ.
Karnataka Budget 2023 Live Updates: 290 ಸಂಚಾರಿ ಪಶುಚಿಕಿತ್ಸಾಲಯಗಳ ಪ್ರಾರಂಭ -ಸಿಎಂ
ಗೋ ಸಂಪತ್ತಿನ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಗೋಶಾಲೆಗಳ ಸ್ಥಾಪನೆ, ಪುಣ್ಯಕೋಟಿ ದತ್ತು ಯೋಜನೆಯ ಅನುಷ್ಠಾನ ಹಾಗೂ 290 ಸಂಚಾರಿ ಪಶುಚಿಕಿತ್ಸಾಲಯಗಳ ಪ್ರಾರಂಭ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ.
Karnataka Budget 2023 Live Updates: ಅಡಿಕೆ ಬೆಳೆ ರೋಗ ನಿರ್ವಹಣೆ ತಂತ್ರಜ್ಞಾನ ಅಭಿವೃದ್ಧಿಗೆ 10 ಲಕ್ಷ ಕೋಟಿ ರೂ. ಅನುದಾನ
ಅಡಿಕೆ ಬೆಳೆಯ ರೋಗ ನಿರ್ವಹಣೆಗೆ ನೂತನ ತಂತ್ರಜ್ಞಾನ ಅಭಿವೃದ್ಧಿಗೆ 10 ಲಕ್ಷ ಕೋಟಿ ರೂ. ಅನುದಾನ ಘೋಷಣೆ. ದ್ರಾಕ್ಷಿ ಬೆಳೆಗಾರರಿಗೆ 100 ಕೋಟಿ ರೂ. ನೆರವು ಯೋಜನೆ ಆರಂಭಿಸಲಾಗುವುದು. ಜತೆಗೆ, ರೇಷ್ಮೆ ಬೆಳೆ 10 ಸಾವಿರ ಹೆಕ್ಟೇರ್ಗೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು.
Karnataka Budget 2023 Live Updates: ಭೂಸಿರಿ, ರೈತ ಸಿರಿ ಯೋಜನೆಯಡಿ ಪ್ರೋತ್ಸಾಹಧನ ಘೋಷಣೆ
ಭೂಸಿರಿ ಎಂಬ ನೂತನ ಯೋಜನೆ ಅಡಿ 10,000 ರೂ. ಸಹಾಯಧನ ನೀಡಲು ಉದ್ದೇಶಿಸಲಾಗಿದೆ. ರೈತ ಸಿರಿ ಯೋಜನೆಯಡಿಯಲ್ಲಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟರ್ಗೆ 10 ಸಾವಿರ ರೂಪಾಯಿ ಪ್ರೋತ್ಸಾಹಧನ ಘೋಷಣೆ. ಸಹ್ಯಾದ್ರಿ ಯೋಜನೆಯಡಿಯಲ್ಲಿ ಕರಾವಳಿ ಮಲೆನಾಡು ಹಾಗೂ ಅರೆಮಲೆನಾಡು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರು ಸಂರಕ್ಷಣೆಗಾಗಿ ಬಾವಿ, ಕಿಂಡಿ ನಾಳ ಅಭಿವೃದ್ಧಿ ಕಾಮಗಾರಿಗೆ 75 ಕೋಟಿ ರೂ. ಅನುದಾನ ಮೀಸಲಿಡಲಾಗುವುದು ಎಂದು ಸಿಎಂ ಘೋಷಣೆ
Karnataka Budget 2023 Live Updates: ರೈತರಿಗೆ ನೀಡುವ ಬಡ್ಡಿ ರಹಿತ ಸಾಲದ ಮೊತ್ತ 3 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಳ
ಈ ಬಾರಿ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ 5 ಲಕ್ಷ ರೂ. ಸಾಲ; 30 ಲಕ್ಷಕ್ಕಿಂತ ಹೆಚ್ಚು ರೈತರಿಗೆ 25 ಸಾವಿರ ಕೋಟಿ ಸಾಲ; ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆ; 2023-24ನೇ ಸಾಲಿನಿಂದ ಹೆಚ್ಚುವರಿಯಾಗಿ 10 ಸಾವಿರ ರೂ ಸಹಾಯಧನ
Karnataka Budget 2023 Live Updates: 14 ಲಕ್ಷಕ್ಕೂ ಹೆಚ್ಚು ರೈತರ ಖಾತೆಗಳಿಗೆ ಪರಿಹಾರದ ಹಣ -ಸಿಎಂ
ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ 10,930 ಕೋಟಿ ರೂ. ನೀಡಿದೆ. ಬಿತ್ತನೆಬೀಜ, ರಸಗೊಬ್ಬರ ಇತ್ಯಾದಿಗಳಿಗಾಗಿ 962 ಕೋಟಿ ರೂ. ವ್ಯಯಿಸಲಾಗಿದೆ. ರಾಜ್ಯದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಪರಿಹಾರ ಹೆಚ್ಚಿಸಿ ದಾಖಲೆ ಅವಧಿಯಲ್ಲಿ ರೈತರ ಖಾತೆಗಳಿಗೆ ನೇರವಾಗಿ ಪರಿಹಾರ ಜಮೆ ಮಾಡಲಾಗಿದೆ. 14 ಲಕ್ಷಕ್ಕೂ ಹೆಚ್ಚು ರೈತರ ಖಾತೆಗಳಿಗೆ ಪರಿಹಾರದ ಹಣ ವರ್ಗಾಯಿಸಲಾಗಿದೆ.
Karnataka Budget 2023 Live Updates: ರೆವೆನ್ಯೂ ಸರ್ಪ್ಲಸ್ ಬಜೆಟ್
ಸರ್ಕಾರ ಕೈಗೊಂಡ ವಿತ್ತೀಯ ಶಿಸ್ತು, ಕ್ರಮಗಳಿಂದಾಗಿ ಕೋವಿಡ್ ಪಿಡುಗಿನಿಂದ ಹೊರಬಂದು ರಾಜಸ್ವ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದೇವೆ. ಎಲ್ಲ ಮಾನದಂಡಗಳನ್ನು ಹೆಚ್ಚಿಸುವ ಮೂಲಕ ರೆವೆನ್ಯೂ ಸರ್ಪ್ಲಸ್ ಬಜೆಟ್ ಮಂಡಿಸುತ್ತಿದ್ದೇನೆ. ಕೆ.ಎಸ್. ನರಸಿಂಹ ಸ್ವಾಮಿ ಕವನದ ಸಾಲು ಉಲ್ಲೇಖಿಸಿ ಕೃಷಿ ಕ್ಷೇತ್ರ ಬಗ್ಗೆ ಉಲ್ಲೇಖಿಸಿದ ಮುಖ್ಯಮಂತ್ರಿ. ಕಳೆದ ನಾಲ್ಕು ವರ್ಷ ಅವಧಿಯಲ್ಲಿ ರೈತರ ಆದಾಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.
Karnataka Budget 2023 Live Updates: ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಫ್ರೀ ಬಸ್ ಪಾಸ್
ರಾಜ್ಯದಲ್ಲಿ ಗೃಹಿಣಿ ಶಕ್ತಿ ಯೋಜನೆ ಜಾರಿಗೆ ಘೋಷಣೆ. ಗೃಹಿಣಿಯರಿಗೆ ತಿಂಗಳಿಗೆ 500 ರೂಗಳ ಸಹಾಯಧನ. ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಫ್ರೀ ಬಸ್ ಪಾಸ್. 350 ಕೋಟಿ ರೂಪಾಯಿ ವೆಚ್ಚದಲ್ಲಿ ಉಚಿತ ಬಸ್ ಪಾಸ್.
Karnataka Budget 2023 Live Updates: ಜಿಎಸ್ಟಿ ಸಂಗ್ರಹ ಶೇ 26ರಷ್ಟು ವೃದ್ಧಿಯಾಗಿದೆ -ಸಿಎಂ
ರಾಜ್ಯದ ಹಣಕಾಸು ಪರಿಸ್ಥಿತಿ ಸದೃಢವಾಗಿದ್ದು ರಾಜಸ್ವ ಸಂಗ್ರಹ ಹೆಚ್ಚಾಗಿದೆ. ಜಿಎಸ್ಟಿ ಸಂಗ್ರಹ ಶೇ 26ರಷ್ಟು ವೃದ್ಧಿಯಾಗಿದೆ. ಮುದ್ರಣ ಹಾಗೂ ನೋಂದಣಿ ಶುಲ್ಕ ಸಂಗ್ರಹವೂ ಹೆಚ್ಚಾಗಿದೆ. ತೆರಿಗೆ ಸಂಗ್ರಹ ಶೇ 20ರಷ್ಟು ಹೆಚ್ಚಾಗಿದೆ. 2023-24ನೇ ಸಾಲಿನಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರವು ರಾಜ್ಯದ ತೆರಿಗೆ ಪಾಲನ್ನು ಹೆಚ್ಚಿಸಿದೆ. ಇದು ಸುಸ್ಥಿರತೆ ಕಂಡುಕೊಳ್ಳಲು ಸಹಕಾರಿಯಾಗಿದೆ.
Karnataka Budget 2023 Live Updates: ಕೇಂದ್ರ ಸರ್ಕಾರದ ನೀತಿಗಳಿಂದ ಹಣದುಬ್ಬರ ನಿಯಂತ್ರಣ ಸಾಧ್ಯವಾಗಿದೆ -ಸಿಎಂ
ಪ್ರಧಾನಿ ಅವರು ಕರೆ ನೀಡಿರುವ ಮುಂದಿನ 25 ವರ್ಷಗಳ ಅಮೃತ ಕಾಲ ಗುರಿಯೊಂದಿಗೆ ಅಭಿವೃದ್ಧಿಪಥದಲ್ಲಿ ನಡೆಯೋಣ. ಆ ಗುರಿಯೊಂದಿಗೆ ಈ ಬಜೆಟ್ ಮಂಡಿಸುತ್ತಿದ್ದೇನೆ. ರಾಜ್ಯದ ಆರ್ಥಿಕತೆ ಕೋವಿಡ್ ಪೂರ್ವ ಮಟ್ಟ ತಲುಪಿದೆ. ಕೇಂದ್ರ ಸರ್ಕಾರದ ನೀತಿಗಳಿಂದ ಹಣದುಬ್ಬರ ನಿಯಂತ್ರಣ ಸಾಧ್ಯವಾಗಿದೆ. ಶೇ 7.9 ಆರ್ಥಿಕ ಬೆಳವಣಿಗೆ ಸಾಧಿಸಲಾಗಿದೆ. ಸೇವೆ ಮತ್ತು ಕೈಗಾರಿಕಾ ವಲಯ ಪ್ರಮುಖ ಪಾತ್ರ ವಹಿಸಿದೆ.
Karnataka Budget 2023 Live Updates: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ಅನುದಾನ -ಸಿಎಂ
ಜಲಸಾರಿಗೆ ಅವಕಾಶಗಳ ಬಳಕೆ ಸಾಧ್ಯತೆ ಮತ್ತು ಬಂದರು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದಲೂ ಸಹಕಾರ ದೊರೆತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ದೊಡ್ಡ ಮೊತ್ತದ ಅನುದಾನ ದೊರೆತಿದೆ.
Karnataka Budget 2023 Live Updates: ಉದ್ಯಮ ಸ್ನೇಹಿ ವಾತಾವರಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ -ಸಿಎಂ
ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆ, ಬೆಂಗಳೂರಿನ ಹೂಡಿಕೆದಾರರ ಸಮಾವೇಶದ ಮೂಲಕ ಹೂಡಿಕೆಯನ್ನು ಸೆಳೆಯಲಾಗಿದೆ. ಉದ್ಯಮ ಸ್ನೇಹಿ ವಾತಾವರಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.
Karnataka Budget 2023 Live Updates: ರೈತರಿಗೆ ಸಮಸ್ಯೆಯಾದಾಗ ನಮ್ಮ ಸರ್ಕಾರ ನೆರವಿಗೆ ಧಾವಿಸಿದೆ
ರೈತರ ಆದಾಯ ದ್ವಿಗುಣಗೊಳಿಸುವ ಗುರಿಯೊಂದಿಗೆ ಕೃಷಿಗೆ ಬೆಂಬಲ ನೀಡಲಾಗಿದೆ. ತೊಗರಿ ಬೇಳೆ, ಅಡಿಕೆ ಬೆಳೆಗೆ ರೋಗ ಸಂಭವಿಸಿದಾಗ ಸರ್ಕಾರ ರೈತರ ನೆರವಿಗೆ ಧಾವಿಸಿದೆ. ಉದ್ಯೋಗಾವಕಾಶ, ಅದಕ್ಕೆ ತಕ್ಕಂತೆ ಕೌಶಲಾಭಿವೃದ್ಧಿ ತರಬೇತಿ ನೀಡಿದ್ದೇವೆ. ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣಕ್ಕೆ ಕ್ರಮ ಕೈಗೊಂಡಿದ್ದೇವೆ. ನಮ್ಮ ಕ್ಲಿನಿಕ್ಗಳ ಮೂಲಕ ಆರೋಗ್ಯ ಕ್ಷೇತ್ರದ ಸುಧಾರಣೆಗೂ ಒತ್ತು ನೀಡಿದ್ದೇವೆ.
Karnataka Budget 2023 Live Updates: ಬಿಜೆಪಿ ನೇರವಾಗಿ ಸವಲತ್ತು ನೀಡುವ ಮೂಲಕ ಪಾರದರ್ಶಕತೆ ಮೆರೆದಿದೆ -ಸಿಎಂ
ಶಿಕ್ಷಣ, ಉದ್ಯೋಗ, ಸಬಲೀಕರಣ ಮಂತ್ರದೊಂದಿಗೆ, ದುರ್ಬಲ ವರ್ಗದವರಿಗೆ, ಎಸ್ಸಿ,ಎಸ್ಟಿಗೆ ಬೆಂಬಲ ನೀಡಿದ್ದೇನೆ. ಫಲಾನುಭವಿಗಳಿಗೆ ನೇರವಾಗಿ ಸವಲತ್ತು ನೀಡುವ ಮೂಲಕ ಪಾರದರ್ಶಕತೆ ಮೆರೆದಿದ್ದೇವೆ. ಶ್ರಮಿಕ ವರ್ಗದವರ ಬಗ್ಗೆಯೂ ಕಾಳಜಿ ವಹಿಸಿದ್ದೇವೆ.
Karnataka Budget 2023 Live Updates: ಮುಂದಿನ 25 ವರ್ಷ ಅಮೃತ ಕಾಲ -ಸಿಎಂ ಬೊಮ್ಮಾಯಿ
ಮತ್ತೆ ಬಜೆಟ್ ಪ್ರತಿ ಓದಲು ಆರಂಭಿಸಿದ ಬೊಮ್ಮಾಯಿ. ಮುಂದಿನ 25 ವರ್ಷಗಳ ಅಮೃತ ಕಾಲದ ಗುರಿಯೊಂದಿಗೆ ಬಜೆಟ್ ಮಂಡಿಸುತ್ತಿದ್ದೇನೆ ಎಂದ ಬೊಮ್ಮಾಯಿ.
Karnataka Budget 2023 Live Updates: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ ನಡುವೆ ವಾಕ್ಸಮರ
ವಿರೋಧ ಪಕ್ಷದ ನಾಯಕರು ಇಷ್ಟು ದಿನ ಜನರ ಕಿವಿ ಮೇಲೆ ಹೂ ಇಟ್ಟಿದ್ದರು. ಈ ಬಾರಿ ಜನ ಅವರ ಕಿವಿ ಮೇಲೆ ಹೂ ಇಡಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದು ಬಜೆಟ್ ಮಂಡನೆ ವೇಳೆ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ವಾಕ್ಸಮರ ಶುರುವಾಗಿದೆ.
Karnataka Budget 2023 Live Updates: ಕುವೆಂಪು ಕವನದ ಸಾಲು ಓದುತ್ತಾ ಬಜೆಟ್ ಭಾಷಣ
ಕುವೆಂಪು ಕವನದ ಸಾಲು ಓದುತ್ತಾ ಸಿಎಂ ಬಜೆಟ್ ಭಾಷಣ ಶುರು ಮಾಡಿದ್ದಾರೆ. ಕುವೆಂಪು ಅವರು ನುಡಿದಂತೆ ಹೋಗುತಿದೆ ಹಳೆ ಕಾಲ, ಹೊಸ ಕಾಲ ಬರುತಲಿದೆ. ಬರುತಲಿದೆ ಹೊಸ ದೃಷ್ಟಿ, ಹಳೆಯ ಬಾಳು ಹೋಗುತಲಿದೆ, ಹೊಸ ಬಾಳು ಬರುತಿದೆ. ಹೊಸ ದೃಷ್ಟಿಕೋನದೊಂದಿಗೆ ಈ ಬಜೆಟ್ ಮಂಡಿಸುತ್ತಿದ್ದೇನೆ. 25 ವರ್ಷಗಳ ದೃಷ್ಟಿಕೋನದೊಂದಿಗೆ ಬಜೆಟ್ ಮಂಡಿಸುತ್ತಿದ್ದೇನೆ ಎಂದ ಬೊಮ್ಮಾಯಿ.
Karnataka Budget 2023 Live Updates: ಬಜೆಟ್ ಮಂಡನೆ ಆರಂಭಿಸಿದ ಬಸವರಾಜ ಬೊಮ್ಮಾಯಿ
ಕೋವಿಡ್ ನಂತರದ ದಿನಗಳಲ್ಲಿ ಭಾರತ ಆರ್ಥಿಕವಾಗಿ ಪುಟಿದೆದ್ದಿದ್ದು, ಕರ್ನಾಟಕವೂ ಅದೇ ಹಾದಿಯಲ್ಲಿ ಸಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿಪಥದಲ್ಲಿ ಸಾಗುತ್ತಿದ್ದೇವೆ. ಕೋವಿಡ್ ನಂತರದ ದಿನಗಳಲ್ಲಿ ಭಾರತ ಆರ್ಥಿಕವಾಗಿ ಪುಟಿದೆದ್ದಿದ್ದು, ಕರ್ನಾಟಕವೂ ಅದೇ ಹಾದಿಯಲ್ಲಿ ಸಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿಪಥದಲ್ಲಿ ಸಾಗುತ್ತಿದ್ದೇವೆ.
Karnataka Budget 2023 Live Updates: ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಬಜೆಟ್ ಮಂಡನೆ
ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಬಜೆಟ್ ಮಂಡನೆ ಆರಂಭಗೊಂಡಿದ್ದು ಬಜೆಟ್ ಆರಂಭದಲ್ಲಿಯೇ ಮೋದಿ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಜಿ20 ಶೃಂಗ ಸಭೆ ರಾಜ್ಯದಲ್ಲಿಯೂ ನಡೆದಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
Karnataka Budget 2023 Live Updates: ವಿಧಾನಸಭೆಗೆ ಆಗಮಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ವಿಧಾನಸಭೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಗಮಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬಜೆಟ್ ಮಂಡಿಸಲಿರುವ ಸಿಎಂ ಬೊಮ್ಮಾಯಿ.
Karnataka Budget 2023 Live Updates: ಸಿಎಂಗೆ ಕಂಬಳಿ ಹೊದಿಸಿ ಸನ್ಮಾನ
ಬೆಳಗ್ಗೆ 10.15ಕ್ಕೆ ಸಿಎಂ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ. ಕ್ಯಾಬಿನೆಟ್ ಹಾಲ್ ಬಳಿಗೆ ಮಹಿಳಾ ಕಾರ್ಯಕರ್ತೆಯರ ಜತೆ ವರ್ತೂರು ಪ್ರಕಾಶ್ ಆಗಮಿಸಿದ್ದು ಸಿಎಂಗೆ ಕಂಬಳಿ ಹೊದಿಸಿ ಸನ್ಮಾನಿಸಲಿದ್ದಾರೆ.
Karnataka Budget 2023 Live Updates: ವಿಧಾನಸೌಧಕ್ಕೆ ಸಿದ್ದರಾಮಯ್ಯ ಆಗಮನ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸೌಧಕ್ಕೆ ಆಗಮಿಸಿದರು. ಈ ಮಧ್ಯೆ, ವಿಧಾನಸಭೆ ಮೊಗಸಾಲೆಯಲ್ಲಿ ಸಚಿವ ನಿರಾಣಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಾಲು ಮುಟ್ಟಿ ನಮಸ್ಕರಿಸಿದ್ದು ಕಂಡುಬಂತು
Karnataka Budget 2023 Live Updates: ಈ ಬಾರಿಯ ರಾಜ್ಯ ಬಜೆಟ್ ಗಾತ್ರ 3 ಲಕ್ಷ 7 ಸಾವಿರ ಕೋಟಿ ರೂ
ರಾಜ್ಯ ಬಜೆಟ್ ಗಾತ್ರ 3 ಲಕ್ಷ 7 ಸಾವಿರ ಕೋಟಿ ಇರುವ ನಿರೀಕ್ಷೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಗಾತ್ರದ ಬಜೆಟ್ ಮಂಡನೆಯಾಗುತ್ತಿದೆ.
Karnataka Budget 2023 Live Updates: ವಿಧಾನಸೌಧದಲ್ಲಿ ವಿಶೇಷ ಸಚಿವ ಸಂಪುಟ ಸಭೆ ಮುಕ್ತಾಯ
ವಿಧಾನಸೌಧದಲ್ಲಿ ವಿಶೇಷ ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದ್ದು ಸಿಎಂ ಬಜೆಟ್ಗೆ ಅನುಮೋದನೆ ಪಡೆದಿದ್ದಾರೆ.
Karnataka Budget 2023 Live: ಜನಸ್ನೇಹಿ ಬಜೆಟ್ ಮಂಡಿಸುವೆ; ಬೊಮ್ಮಾಯಿ
ಜನಸ್ನೇಹಿ ಬಜೆಟ್ ಮಂಡಿಸಲಿದ್ದೇನೆ. ಇಂದು ಮಂಡಿಸುವ ಬಜೆಟ್ ಜನಸ್ನೇಹಿ ಆಗಿರಲಿದೆ ಎಂದು ಸಿಎಂ ಬಸವರಾಜ ಬೊಮ್ಮಯಿ ಹೇಳಿದರು.
Karnataka Budget 2023 Live: ವಿಧಾನಸೌಧಕ್ಕೆ ತಲುಪಿದ ಬಜೆಟ್ ಪುಸ್ತಕ ಪ್ರತಿಗಳು
ಬಜೆಟ್ ಪುಸ್ತಕದ ಪ್ರತಿಗಳು ವಿಧಾನಸೌಧಕ್ಕೆ ತಲುಪಿವೆ. ಪೊಲೀಸ್ ಭದ್ರತೆಯಲ್ಲಿ ಬಜೆಟ್ ಪುಸ್ತಕಗಳನ್ನು ತರಲಾಯಿತು. ಕೆಂಗಲ್ ಗೇಟ್ ಮುಖಾಂತರ ವಿಧಾನಸೌಧದೊಳಗೆ ಪ್ರವೇಶ ಕಲ್ಪಿಸಲಾಯಿತು.
Karnataka Budget 2023 Live: ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಪುಸ್ತಕ ಪ್ರದರ್ಶಿಸಿದದರು. ಕೆಲವೇ ಕ್ಷಣಗಳಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ.
Karnataka Budget 2023 Live: ಮಹಿಳೆಯರಿಗೆ ಸಹಾಯವಾಗುವಂತೆ ಯೋಜನೆ; ಆರ್. ಅಶೋಕ
ವಿಶೇಷವಾಗಿ ಮಹಿಳೆಯರಿಗೆ ಸಹಾಯವಾಗುವಂತೆ ಬಜೆಟ್‌ನಲ್ಲಿ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ನಮ್ಮ ಬಳಿ ಚರ್ಚಿಸಿದ್ದಾರೆ. ರೈತಾಪಿಜನರಿಗೆ, ಮಹಿಳೆಯರಿಗೆ, ದೀನದಲಿತರಿಗೆ, ಸಾಮಾನ್ಯ ಜನರಿಗೆ ಪೂರಕ ಬಜೆಟ್ ಆಗಿರುತ್ತೆ ಎಂದು ಸಚಿವ ಆರ್. ಅಶೋಕ ತಿಳಿಸಿದ್ದಾರೆ.
Karnataka Budget 2023 Live: ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಪರಿಸರ ಸ್ನೇಹಿ ಗ್ರೀನ್ ಬಸ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸೌಧಕ್ಕೆ ಆಗಮಿಸಿದರು.
Karnataka Budget 2023 Live: ಬಸ್ನಲ್ಲಿ ವಿಧಾನಸೌಧಕ್ಕೆ ಬರಲಿರುವ ಬೊಮ್ಮಾಯಿ
ರೇಸ್ಕೋರ್ಸ್ ಬಳಿಯ ಸರ್ಕಾರಿ ನಿವಾಸಕ್ಕೆ ತೆರಳಿದ ಸಿಎಂ ಬೊಮ್ಮಾಯಿ ಅಲ್ಲಿಂದ ಬಜೆಟ್ ಪುಸ್ತಕದೊಂದಿಗೆ ಬಸ್ನಲ್ಲಿ ವಿಧಾನಸೌಧಕ್ಕೆ ಬರಲಿದ್ದಾರೆ.
Karnataka Budget 2023 Live: ಆಯವ್ಯಯ ಪುಸ್ತಕವನ್ನ ಸಿಎಂಗೆ ನೀಡಿದ ಆರ್ಥಿಕ ಇಲಾಖಾಧಿಕಾರಿಗಳು
ಆರ್ ಟಿ ನಗರ ನಿವಾಸದಲ್ಲಿ ಸಿಎಂ ಬೊಮ್ಮಾಯಿಗೆ ಆಯವ್ಯಯ ಪುಸ್ತಕವನ್ನ ಆರ್ಥಿಕ ಇಲಾಖಾಧಿಕಾರಿಗಳು ನೀಡಿದ್ರು.
Karnataka Budget 2023 Live: ಶ್ರೀ ಕಂಠೇಶ್ವರ ದೇವಸ್ಥಾನಕ್ಕೆ ಸಿಎಂ ಬೊಮ್ಮಾಯಿ ಭೇಟಿ
ಸಿಎಂ ಬೊಮ್ಮಾಯಿ ಶ್ರೀ ಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಸಮಸ್ತ ಕರ್ನಾಟಕದ ಮಹಾಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ಸಿಎಂಗೆ ಸಚಿವ ಭೈರತಿ ಬಸವರಾಜ್, ಕೋಟ ಶ್ರೀನಿವಾಸ ಪೂಜಾರಿ ಸಾಥ್ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಮಂಗಳಾರತಿ ತಟ್ಟೆಗೆ 500 ರೂಪಾಯಿಗಳ ಎರಡು ನೋಟುಗಳನ್ನ ಹಾಕಿದ್ದು ಬಾಲಬ್ರೂಹಿ ಬಳಿಯ ಆಂಜನೇಯ ಸ್ವಾಮಿ ಟೆಂಪಲ್ ಗೆ ತೆರಳಿದ್ದಾರೆ.
Karnataka Budget 2023 Live: ಎರಡನೇ ಬಜೆಟ್ ಮಂಡಿಸಲಿರುವ ಬೊಮ್ಮಾಯಿಗೆ ಅಭಿನಂದನೆ
ಎರಡನೇ ಬಾರಿ ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಚಿವರು ಹಾಗೂ ಶಾಸಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಸಚಿವ ಬೈರತಿ ಬಸವರಾಜ ಹಾಗೂ ಶಾಸಕ ರಾಮದಾಸ್ ಸಿಎಂ ಮನೆಗೆ ಭೇಟಿ ನೀಡಿ ಶುಭಾಶಯ ಕೋರಿದರು. ಆರ್ಟಿ ನಗರ ನಿವಾಸಕ್ಕೆ ಶಾಸಕರು, ಅಧಿಕಾರಿಗಳು ಆಗಮಿಸುತ್ತಿದ್ದಾರೆ.
ಸಚಿವ ಸಂಪುಟ ಸಭೆ ನಡೆಸಿ ಬಜೆಟ್ಗೆ ಅನುಮೋದನೆ ಪಡೆಯಲಿರುವ ಸಿಎಂ
ವಿಧಾನಸೌಧದಲ್ಲಿ ಬೆಳಗ್ಗೆ 9.45ಕ್ಕೆ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆ ನಡೆಸಲಿದ್ದಾರೆ. ಬಜೆಟ್ಗೆ ಅನುಮೋದನೆ ಪಡೆಯಲಿದ್ದಾರೆ.
ಕೆಲವೇ ಕ್ಷಣಗಳಲ್ಲಿ ದೇಗುಲಕ್ಕೆ ಭೇಟಿ ನೀಡಲಿರುವ ಮುಖ್ಯಮಂತ್ರಿ
ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿಗಳು ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ಶ್ರೀಕಂಠೇಶ್ವರ ಆಂಜನೇಯ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯಲಿದ್ದಾರೆ. ನಂತರ ವಿಧಾನಸೌಧದತ್ತ ತೆರಳಲಿದ್ದಾರೆ.
ಬೊಮ್ಮಾಯಿ ಬಜೆಟ್ಗೆ ಕ್ಷಣಗಣನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ಗೆ ಸಿದ್ಧತೆ ನಡೆಸಿದ್ದು, ಬೆಳಿಗ್ಗೆ 10.15ಕ್ಕೆ ಮಂಡನೆ ಮಾಡಲಿದ್ದಾರೆ.
ಬೆಂಗಳೂರಿಗೆ ಹೆಚ್ಚಿನ ಕೊಡುಗೆ?
ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಬಂಪರ್ ಕೊಡುಗೆ ನೀಡುವ ಸಾಧ್ಯತೆ ಇದೆ. ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ವಿಶೇಷವಾದ ಒತ್ತು, ಅನುದಾನ ಹಾಗೂ ನೇಕಾರರಿಗೆ ಇನ್ನಷ್ಟು ಬೆಂಬಲ ನೀಡಲು ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆ ಇದೆ. ಕಚ್ಚಾ ವಸ್ತುವಿನಿಂದ ಹಿಡಿದು, ತಂತ್ರಜ್ಞಾನ ಅಭಿವೃದ್ಧಿ ವರೆಗೆ ಹೆಚ್ಚಿನ ನೆರವು ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
Published On - Feb 17,2023 7:42 AM