ದೆಹಲಿ: ಮಕ್ಕಳು ಮತ್ತು ಹದಿಹರೆಯದವರಿಗೆ ಗುಣಮಟ್ಟದ ಪುಸ್ತಕಗಳ ಲಭ್ಯತೆಗಾಗಿ ರಾಷ್ಟ್ರೀಯ ಡಿಜಿಟಲ್ ಲೈಬ್ರರಿಯನ್ನು (National Digital Library) ಸ್ಥಾಪಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)
ತಮ್ಮ ಬಜೆಟ್ ಭಾಷಣದಲ್ಲಿ (Union Budget 2023) ಘೋಷಿಸಿದ್ದಾರೆ.ಡಿಜಿಟಲ್ ಲೈಬ್ರರಿಯು ಭೌಗೋಳಿಕತೆ, ಭಾಷೆಗಳು, ಪ್ರಕಾರಗಳು ಮತ್ತು ಹಂತಗಳಲ್ಲಿ ಗುಣಮಟ್ಟದ ಪುಸ್ತಕಗಳ ಲಭ್ಯತೆ ಮತ್ತು ಸಾಧನಗಳನ ಪ್ರವೇಶವನ್ನು ಸುಲಭಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. “ರಾಜ್ಯಗಳಿಗೆ ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ಭೌತಿಕ ಗ್ರಂಥಾಲಯಗಳನ್ನು ಸ್ಥಾಪಿಸಲು ಮತ್ತು ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸಂಪನ್ಮೂಲಗಳನ್ನು ಪ್ರವೇಶಿಸಲು ಮೂಲಸೌಕರ್ಯಗಳನ್ನು ಒದಗಿಸಲು ಪ್ರೋತ್ಸಾಹಿಸಲಾಗುವುದು ಎಂದು ವಿತ್ತ ಸಚಿವೆ ಹೇಳಿದ್ದಾರೆ.
ಏಕಲವ್ಯ ಮಾದರಿ ವಸತಿ ಶಾಲೆಗಳ ಮೂಲಕ ಎಸ್‌ಟಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸರ್ಕಾರ ಮುಂದಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದಯ ಶಾಲೆಗಳ ಮಾದರಿಯಲ್ಲೇ ಬುಡಕಟ್ಟು ಪ್ರದೇಶಗಳ ಮಕ್ಕಳಿಗಾಗಿ ಏಕಲವ್ಯ ವಸತಿ ಶಾಲೆ ತೆರೆಯಲಾಗುವುದು ಎಂದು ಬಜೆಟ್ನಲ್ಲಿ ಘೋಷಿಸಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ ಗಿರಿಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಏಕಲವ್ಯ ಮಾದರಿ ಶಾಲೆಗಳನ್ನು ಸ್ಥಾಪಿಸಲಾಗುವುದು. ಈ ಶಾಲೆಗಳಿಗಾಗಿ 38,800 ಶಿಕ್ಷಕರು ಹಾಗೂ 740 ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಇದರಿಂದ 3.5 ಲಕ್ಷ ಗಿರಿಜನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.
ಏಕಲವ್ಯನ ಬಿಲ್ಲು ಮತ್ತು ಬಾಣದ ಆಕಾರದಲ್ಲಿ ಆರ್ಕಿಟೈಪ್ ಪೆನ್ನನ್ನು ಹೊಂದಿರುವ ತೆರೆದ ಪುಸ್ತಕವು ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ (EMRSs) ವಿದ್ಯಾರ್ಥಿಗಳ ಅಚಲ ಗಮನವನ್ನು ಪ್ರತಿಬಿಂಬಿಸುತ್ತದೆ. ಹಿಂದೆ ಬುಡಕಟ್ಟು ಜನರನ್ನು ಬಿಲ್ಲು ಮತ್ತು ಬಾಣವು ರಕ್ಷಿಸುತ್ತದೆ ಮತ್ತು ಅಧಿಕಾರ ನೀಡಿತು ಮತ್ತು ಈಗ ಶಿಕ್ಷಣವು ಅವರನ್ನು ಸಬಲೀಕರಣಗೊಳಿಸುವ ಸಾಧನವಾಗಿದೆ.
ವಸತಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ, ಅನುದಾನ ಶೇ 66ರಷ್ಟು ಹೆಚ್ಚಳ ಮಾಡಲಾಗಿದೆ, ವಸತಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯವು ಈ ವರ್ಷದ ಬಜೆಟ್ನಲ್ಲಿ ₹ 79,000 ಕೋಟಿ ಅನುದಾನ ಘೋಷಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವಸತಿ ಕ್ಷೇತ್ರಕ್ಕಾಗಿ ಮೀಸಲಿಟ್ಟಿರುವ ಹಣವು ಶೇ 66ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: Budget 2023: 2024ರವರೆಗೂ ಉಚಿತ ಆಹಾರ ವಿತರಣೆ: ಬಜೆಟ್ನಲ್ಲಿ ಘೋಷಣೆ
ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಸಚಿವರು ಹಲವು ಹೊಸ ಕ್ರಮಗಳನ್ನು ಘೋಷಿಸಿದರು. 2015ರಿಂದ ಆರಂಭವಾಗಿರುವ ಹೊಸ ಮೆಡಿಕಲ್ ಕಾಲೇಜುಗಳಿಗೆ ಹತ್ತಿರದಲ್ಲಿಯೇ ಹೊಸದಾಗಿ 157 ನರ್ಸಿಂಗ್ ಕಾಲೇಜುಗಳನ್ನು ಆರಂಭಿಸಲಾಗುವುದು. ಸಿಕಲ್ ಸೆಲ್ ಅನಿಮಿಯಾ ಕಾಯಿಲೆಯನ್ನು 2047ರ ಒಳಗೆ ನಿರ್ಮೂಲನೆ ಮಾಡಲಾಗುವುದು. ಐಸಿಎಂಆರ್ ಲ್ಯಾಬ್ಗಳನ್ನು ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಸಂಶೋಧನೆಗೆ ಒದಗಿಸಲಾಗುವುದು. ಔಷಧ ವಿಜ್ಞಾನದಲ್ಲಿ ಸಂಶೋಧನೆಗೆ ಉತ್ತೇಜನ ನೀಡಲು ಹೊಸ ಕಾರ್ಯಕ್ರಮ ರೂಪಿಸಲಾಗುವುದು ಎಂದು ಸಚಿವರು ಘೋಷಿಸಿದರು.
2023-24ರ ಬಜೆಟ್ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ 5ನೇ ಬಜೆಟ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2019 ರ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಾಗ ಮತ್ತು ಜುಲೈ 5, 2019 ರಂದು ಹಣಕಾಸು ಸಚಿವೆಯಾಗಿ ನಿರ್ಮಲಾ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು.
2024ರ ಏಪ್ರಿಲ್-ಮೇ ತಿಂಗಳಲ್ಲಿ ಮುಂದಿನ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ ಈ ವರ್ಷದ ಬಜೆಟ್‌ಗೆ ಹೆಚ್ಚಿನ ಮಹತ್ವವಿದೆ.
ವಾಣಿಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Wed, 1 February 23