ಫೆಬ್ರುವರಿ 1ರಂದು ಮಂಡಿಸಲಾಗುವ ಕೇಂದ್ರ ಬಜೆಟ್ (Union Budget) ಬಗ್ಗೆ ಇಡೀ ದೇಶದ ಗಮನ ನೆಟ್ಟಿರುತ್ತದೆ. ಈ ವರ್ಷ ಚುನಾವಣೆ ಇರುವುದರಿಂದ ಮಧ್ಯಂತರ ಬಜೆಟ್ ಮಾತ್ರವೇ ಮಂಡನೆ ಆಗುತ್ತದೆ. ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ಬಳಿಕ ಹೊಸ ಸರ್ಕಾರದಿಂದ ಪೂರ್ಣ ಪ್ರಮಾಣದ ಬಜೆಟ್ ಪ್ರಸ್ತುತಪಡಿಸಲಾಗುತ್ತದೆ. ಈ ಬಾರಿ ಫೆಬ್ರುವರಿ 1ರದ್ದು ಮಧ್ಯಂತರ ಬಜೆಟ್ ಆದರೂ ಸಾಕಷ್ಟು ಕುತೂಹಲವಂತೂ ಇದೆ.
ಕೇಂದ್ರ ಬಜೆಟ್ ಅನ್ನು ಪ್ರತೀ ವರ್ಷ ಪ್ರಸ್ತುತಪಡಿಸಲಾಗುತ್ತದೆ. ಮುಂದಿನ ಒಂದು ಹಣಕಾಸು ವರ್ಷಕ್ಕೆ ಸರ್ಕಾರದ ಆದಾಯ ಮತ್ತು ಖರ್ಚಿನ ವಿವರ ಇದಾಗಿದೆ. ಹಣಕಾಸು ವರ್ಷ ಏಪ್ರಿಲ್ 1ರಂದು ಆರಂಭವಾಗಿ ಮರುವರ್ಷ ಮಾರ್ಚ್ 31ಕ್ಕೆ ಅಂತ್ಯವಾಗುತ್ತದೆ. ಫೆಬ್ರುವರಿ 1ರಂದು ಪ್ರಸ್ತುತವಾಗುವ ಬಜೆಟ್ 2023ರ ಏಪ್ರಿಲ್ 1ರಿಂದ 2024ರ ಮಾರ್ಚ್ 31ರವರೆಗಿನ ಅವಧಿಗೆ ಅನ್ವಯ ಆಗುತ್ತದೆ.
ಬಜೆಟ್ ರೂಪಿಸುವುದು ಸಣ್ಣ ವಿಚಾರವಲ್ಲ. ಬಹಳ ತಯಾರಿ ಬೇಕಾಗುತ್ತದೆ. ಸಂಸತ್ನಲ್ಲಿ ಬಜೆಟ್ ಮಂಡನೆ ಮಾಡುವ ಆರು ತಿಂಗಳ ಮುಂಚಿನಿಂದಲೇ ಸಿದ್ಧತೆ ನಡೆದಿರುತ್ತದೆ. ವಿವಿಧ ಸರ್ಕಾರಿ ಇಲಾಖೆ, ವಿವಿಧ ಉದ್ಯಮ ಪ್ರತಿನಿಧಿಗಳು ಮೊದಲಾದವರೊಂದಿಗೆ ಹಣಕಾಸು ಸಚಿವಾಲಯ ಸಮಾಲೋಚನೆ ನಡೆಸುತ್ತದೆ. ಯಾವ್ಯಾವ ಕ್ಷೇತ್ರದಿಂದ ಏನೇನು ಬೇಡಿಕೆಗಳಿವೆ, ಯಾವ ಕ್ಷೇತ್ರಗಳಿಗೆ ಆದ್ಯತೆ ಕೊಡಬೇಕು ಇತ್ಯಾದಿ ಎಲ್ಲ ಸಂಗತಿಗಳನ್ನು ಅವಲೋಕಿಸಿ ನಿರ್ಧರಿಸಲಾಗುತ್ತದೆ.
ಯಾವುದಾದರೂ ತೊಡಕು ಬಂದರೆ ಪ್ರಧಾನಿಯವರೋ ಅಥವಾ ಕೇಂದ್ರ ಸಂಪುಟದಲ್ಲೋ ಒಮ್ಮತದ ಮೂಲಕ ಪರಿಹಾರ ಕಂಡುಕೊಳ್ಳಲಾಗುತ್ತದೆ.
ಇದನ್ನೂ ಓದಿ: Union Budget: ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಬಜೆಟ್; ಏನೇನು ನಿರೀಕ್ಷೆಗಳಿವೆ? ಮುಂಗಡಪತ್ರ ಹೇಗಿರಲಿದೆ?
ಹಿಂದೆ ಕೇಂದ್ರ ಬಜೆಟ್ ಅನ್ನು ಫೆಬ್ರುವರಿ ಕೊನೆಯಲ್ಲಿ ಮಾಡಲಾಗುತ್ತಿತ್ತು. 2017ರಿಂದ ಫೆಬ್ರುವರಿ 1ಕ್ಕೆ ಮಾಡಲಾಗುತ್ತಿದೆ. ಹಿಂದೆ ರೈಲ್ವೆ ಬಜೆಟ್ ಪ್ರತ್ಯೇಕವಾಗಿರುತ್ತಿತ್ತು. ಈಗ ಕೇಂದ್ರ ಬಜೆಟ್ನಲ್ಲೇ ರೈಲ್ವೆಯದ್ದೂ ಒಳಗೊಂಡಿರುತ್ತದೆ.
ಫೆಬ್ರುವರಿ 1ರಂದು ಬಜೆಟ್ ಮಂಡನೆಗೆ ಒಂದು ದಿನ ಮುನ್ನ, ಅಂದರೆ ಜನವರಿ 31ರಂದು ಸಂಸತ್ನಲ್ಲಿ ಬಜೆಟ್ ಅಧಿವೇಶನ ಮೊದಲುಗೊಳ್ಳುತ್ತದೆ. ರಾಷ್ಟ್ರಪತಿಯವರು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡುತ್ತಾರೆ.
ಇದನ್ನೂ ಓದಿ: ಶ್ರೀಮಂತಿಕೆಯಲ್ಲಿ ಅಂಬಾನಿ ಫ್ಯಾಮಿಲಿ ಹಿಂದಿಕ್ಕಿದ ಅದಾನಿ ಫ್ಯಾಮಿಲಿ; ಸಂಪತ್ತು ಹೆಚ್ಚಳಕ್ಕೆ ಸುಪ್ರೀಂ ತೀರ್ಪು ಪುಷ್ಟಿ
ಫೆಬ್ರುವರಿ 1ರಂದು ಹಣಕಾಸು ಸಚಿವರು ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡುತ್ತಾರೆ. ಕೆಲವೊಮ್ಮೆ ಹಣಕಾಸು ಸಚಿವರ ಬದಲು ಬೇರೆಯವರೂ ಬಜೆಟ್ ಮಂಡನೆ ಮಾಡಬಹುದು. 2019ರಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯ ಸ್ಥಿತಿಯಲ್ಲಿದ್ದಾಗ, ಪೀಯುಶ್ ಗೋಯಲ್ ಅವರು ಬಜೆಟ್ ಮಂಡನೆ ಮಾಡಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:52 pm, Thu, 4 January 24