Dogecoin ಹಾಗೇ ತಮಾಷೆಗೆ ಸೃಷ್ಟಿಯಾದಂಥದ್ದು. ಆದರೆ ಜಗತ್ತಿನ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ರಿಂದ (Elon Musk) ವಿಪರೀತ ಪ್ರಚಾರ ಸಿಕ್ಕ ಕಾರಣಕ್ಕೆ ಈ ಕ್ರಿಪ್ಟೋಕರೆನ್ಸಿಯ ಮೌಲ್ಯ ಹೆಚ್ಚಾಗಿ, ಆ ನಂತರ ಕುಸಿಯಿತು. ಇದೇ ಕಾರಣಕ್ಕಾಗಿ ಬಿಲಿಯನೇರ್ ಎಲಾನ್ ಮಸ್ಕ್ ಹಾಗೂ ಅವರ ಕಂಪೆನಿಗಳಾದ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ವಿರುದ್ಧ ಗುರುವಾರ 25,800 ಕೋಟಿ ಡಾಲರ್ಗೆ ಮೊಕದ್ದಮೆ ಹೂಡಲಾಗಿದೆ. ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಎಷ್ಟಾಯಿತು ಗೊತ್ತಾ? 20,14,141.50 ಕೋಟಿ. ಹೌದು ನೀವು ಸರಿಯಾಗಿಯೇ ಓದುತ್ತಿದ್ದೀರಿ; 20 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು. ಅಸಲಿಗೆ ಈ ಮೊಕದ್ದಮೆ ಹೂಡಿರುವುದಾದರೂ ಏಕೆ, ಯಾರು ಅಂತ ನೋಡಿದರೆ ಅದು ಕೂಡ ಇಂಟರೆಸ್ಟಿಂಗ್ ಆಗಿದೆ. Dogecoinನಲ್ಲಿ ಹೂಡಿಕೆ ಮಾಡಿದ ನಂತರ ಹಣವನ್ನು ಕಳೆದುಕೊಂಡಿದ್ದೇನೆ ಎಂದು ಹೇಳುವ ಕೀತ್ ಜಾನ್ಸನ್, “Dogecoin ಕ್ರಿಪ್ಟೋ ಪಿರಮಿಡ್ ಸ್ಕೀಮ್” ಎಂದು ಕರೆಯುವ ಮೂಲಕ “ವಂಚನೆಗೊಳಗಾದ ಅಮೇರಿಕನ್ ಪ್ರಜೆ” ಎಂದು ವಿವರಿಸಿದ್ದಾರೆ.
2019ರಿಂದ ಇದರಲ್ಲಿ ಹೂಡಿಕೆ ಮಾಡುವ ಮೂಲಕ ನಷ್ಟವನ್ನು ಅನುಭವಿಸಿದವರ ಪರವಾಗಿ ಕ್ಲಾಸ್ ಆಕ್ಷನ್ ಸೂಟ್ ಎಂದು ವರ್ಗೀಕರಿಸಲು ಅವರು ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಸಲ್ಲಿಸಿದ ತಮ್ಮ ಅರ್ಜಿಯಲ್ಲಿ ಕೇಳುತ್ತಿದ್ದಾರೆ. ಮಸ್ಕ್ ವರ್ಚುವಲ್ ಕರೆನ್ಸಿಯನ್ನು ಪ್ರಚಾರ ಮಾಡಲು ಪ್ರಾರಂಭಿಸಿದ ನಂತರ, ಹೂಡಿಕೆದಾರರು ಸುಮಾರು 86 ಬಿಲಿಯನ್ ಡಾಲರ್ (8600 ಕೋಟಿ ಅಮೆರಿಕನ್ ಡಾಲರ್) ಕಳೆದುಕೊಂಡಿದ್ದಾರೆ ಎಂದು ಜಾನ್ಸನ್ ಅಂದಾಜಿಸಿದ್ದಾರೆ. ಹೂಡಿಕೆದಾರರಿಗೆ ಈ ಮೊತ್ತವನ್ನು ಮಸ್ಕ್ ಮರುಪಾವತಿಸಬೇಕು, ಜೊತೆಗೆ ಅದರ ದುಪ್ಪಟ್ಟು ಹಾನಿಯನ್ನು ಪಾವತಿಸಬೇಕು – ಹೆಚ್ಚುವರಿ 172 ಶತಕೋಟಿ ಡಾಲರ್ ನೀಡಬೇಕು ಎಂದು ಬಯಸುತ್ತಾರೆ.
2013ರಲ್ಲಿ ಶುರುವಾದ Dogecoinನ ರಚನೆಕಾರರು ಇದು ಎರಡು ದೊಡ್ಡ ಇಂಟರ್ನೆಟ್ ವಿದ್ಯಮಾನಗಳಿಗೆ ವ್ಯಂಗ್ಯ ಪ್ರತಿಕ್ರಿಯೆ ಅಷ್ಟೇ ಎಂದು ಹೇಳುತ್ತಾರೆ: ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳು ಮತ್ತು ಶಿಬಾ ಇನು ನಾಯಿಯ ಮೆಮೆ ಚಿತ್ರ. ಡಾಗ್‌ಕಾಯಿನ್‌ನ ಬೆಲೆಯು ಅದರ ಅಸ್ತಿತ್ವದ ಬಹುಪಾಲು ಒಂದು ಸೆಂಟ್‌ನ ಕೇವಲ ಚಿಲ್ಲರೆಯಷ್ಟು ಮಾತ್ರ ವ್ಯಾಪಾರ ಮಾಡಿತು. ಆದರೆ 2021ರ ಆರಂಭದಲ್ಲಿ ಅದರ ಮೌಲ್ಯವು ಏರಿಕೆ ಕಂಡು, ಆ ವರ್ಷದ ಮೇ ತಿಂಗಳಲ್ಲಿ 0.73 ಡಾಲರ್ಗೆ ಏರಿತು. ಇದು ಗೇಮ್‌ಸ್ಟಾಪ್ ಸಾಗಾವನ್ನು ಸುತ್ತುವರೆದಿರುವ ಖರೀದಿಯ ಉನ್ಮಾದದ ನಡುವೆ ಮತ್ತು ಮಸ್ಕ್‌ನಿಂದ ಅದರ ಬಗ್ಗೆ ಹಾಸ್ಯದ ಸಂದೇಶಗಳ ನಂತರ ಆದ ಬೆಳವಣಿಗೆ. ಗುರುವಾರದಂದು ಇದು ಆರು ಸೆಂಟ್ಗಿಂತ ಕಡಿಮೆ ಮೌಲ್ಯದ್ದಾಗಿದೆ. ಒಂದು ಡಾಲರ್ಗೆ 100 ಸೆಂಟ್ಸ್. ಅಂದರೆ ಅದಿನ್ನೆಷ್ಟು ಕಡಿಮೆ ಅಂತ ಲೆಕ್ಕ ಹಾಕಬಹುದು.
ಮಸ್ಕ್ ತನ್ನ ಪ್ರಚಾರದ ಮೂಲಕ ಈ ಕಾಯಿನ್‌ನ ಬೆಲೆ, ಮಾರುಕಟ್ಟೆ ಬಂಡವಾಳ ಮತ್ತು ವ್ಯಾಪಾರದ ಪರಿಮಾಣವನ್ನು ಹೆಚ್ಚಿಸಿದ್ದಾರೆ ಎಂದು ಅವರು ನಂಬುವುದಾಗಿ ಎಂದು ಜಾನ್ಸನ್ ಹೇಳಿದ್ದಾರೆ. ಅವರು ಟ್ವಿಟರ್‌ನಲ್ಲಿ 98 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವಿಶ್ವದ ಶ್ರೀಮಂತ ವ್ಯಕ್ತಿಯಾದ ಮಸ್ಕ್‌ನಿಂದ ಟ್ವೀಟ್‌ಗಳನ್ನು ಸೇರಿಸಿದ್ದು, ಇದರಲ್ಲಿ ಸ್ಪೇಸ್‌ಎಕ್ಸ್ “ಅಕ್ಷರಶಃ ಚಂದ್ರನ ಮೇಲೆ ಡಾಗ್‌ಕಾಯಿನ್ ಅನ್ನು ಹಾಕುತ್ತದೆ” ಎಂದು ಭರವಸೆ ನೀಡಿದ್ದರು. ಜಾನ್ಸನ್ ಅವರು ಮೊಕದ್ದಮೆಯಲ್ಲಿ ಮಸ್ಕ್‌ನ ಟೆಸ್ಲಾ ಎಲೆಕ್ಟ್ರಿಕ್ ಕಾರು ತಯಾರಕ ಎಂದು ಹೆಸರಿಸಿದ್ದಾರೆ. ಏಕೆಂದರೆ ಇದು ಕೆಲವು ಉತ್ಪನ್ನಗಳಿಗೆ ಪಾವತಿಯಾಗಿ ಈ ಕಾಯಿನ್ ಅನ್ನು ಸ್ವೀಕರಿಸುತ್ತದೆ. Dogecoin ನಂತರ ತನ್ನ ಉಪಗ್ರಹಗಳಲ್ಲಿ ಒಂದನ್ನು ಹೆಸರಿಸುವುದಕ್ಕಾಗಿ SpaceX ಅನ್ನು ಸಹ ಸೇರಿಸಲಾಗಿದೆ.
ಡಾಗ್‌ಕಾಯಿನ್ ಅನ್ನು ಜಾನ್ಸನ್ ಪಿರಮಿಡ್ ಸ್ಕೀಮ್‌ಗೆ ಹೋಲಿಸಿದ್ದಾರೆ. ಏಕೆಂದರೆ ವರ್ಚುವಲ್ ಕರೆನ್ಸಿಯು ಯಾವುದೇ ಆಂತರಿಕ ಮೌಲ್ಯವನ್ನು ಹೊಂದಿಲ್ಲ ಅಥವಾ ಅದು ಉತ್ಪನ್ನವಲ್ಲ. ಜತೆಗೆ ಇದು ಸ್ಪಷ್ಟವಾದ ಆಸ್ತಿಯಿಂದ ಬೆಂಬಲಿತವಾಗಿಲ್ಲ ಮತ್ತು “ನಾಣ್ಯಗಳ” ಸಂಖ್ಯೆಯು ಅನಿಯಮಿತವಾಗಿದೆ. ವರ್ಚುವಲ್ ಕರೆನ್ಸಿಯ ಭರವಸೆಗಳಿಂದ ಮೋಸ ಹೋದಂತೆ ಭಾವಿಸುವ ಹೂಡಿಕೆದಾರರ ಮೊಕದ್ದಮೆಗಳು ಅಮೆರಿಕದಲ್ಲಿ ಹೆಚ್ಚುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Elon Musk: ಇನ್ನೆರಡು ವರ್ಷದಲ್ಲಿ ಎಲಾನ್ ಮಸ್ಕ್ ಆಸ್ತಿ 1 ಲಕ್ಷ ಕೋಟಿ ಯುಎಸ್ಡಿ, ಅಂದರೆ 76 ಲಕ್ಷ ಕೋಟಿ ರೂ. ಅಂತಿದೆ ಈ ವರದಿ