Adani Group: ಕೊಲಂಬೋ ಬಂದರು ಪಶ್ಚಿಮ ಕಂಟೇನರ್​ ಟರ್ಮಿನಲ್ ಅಭಿವೃದ್ಧಿ, ನಿರ್ವಹಣೆಗೆ ಅದಾನಿ ಸಮೂಹದ ಒಪ್ಪಂದ

| Updated By: Srinivas Mata

Updated on: Sep 30, 2021 | 11:38 PM

ಕೊಲಂಬೊ ಬಂದರಿನ ಅಭಿವೃದ್ಧಿ ಮತ್ತು ನಿರ್ವಹಣೆ ಒಪ್ಪಂದವನ್ನು ಅದಾನಿ ಸಮೂಹವು ಅಂತಿಮಗೊಳಿಸಿದೆ. ಹೀಗೆ ಶ್ರೀಲಂಕಾದಲ್ಲಿ ಬಂದರು ಅಭಿವೃದ್ಧಿ ಒಪ್ಪಂದ ಮಾಡಿಕೊಳ್ಳುತ್ತಿರುವ ಮೊದಲ ಭಾರತೀಯ ಕಂಪೆನಿ ಇದಾಗಿದೆ.

Adani Group: ಕೊಲಂಬೋ ಬಂದರು ಪಶ್ಚಿಮ ಕಂಟೇನರ್​ ಟರ್ಮಿನಲ್ ಅಭಿವೃದ್ಧಿ, ನಿರ್ವಹಣೆಗೆ ಅದಾನಿ ಸಮೂಹದ ಒಪ್ಪಂದ
ಕೊಲಂಬೋದ ಈಸ್ಟ್ ಕೋಸ್ಟ್ ಟರ್ಮಿನಲ್
Follow us on

ಕೊಲಂಬೊ ಬಂದರಿನ ಪಶ್ಚಿಮ ಕಂಟೇನರ್ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಅದಾನಿ ಸಮೂಹವು ಸರ್ಕಾರಿ ಸ್ವಾಮ್ಯದ ಶ್ರೀಲಂಕಾ ಬಂದರು ಪ್ರಾಧಿಕಾರ (ಎಸ್‌ಎಲ್‌ಪಿಎ)ದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಶ್ರೀಲಂಕಾದಲ್ಲಿ ಮೊದಲ ಭಾರತೀಯ ಬಂದರು ಆಪರೇಟರ್ ಆಗಿ, ಅದಾನಿ ಗ್ರೂಪ್ ಬಂದರಿನ ಪಶ್ಚಿಮ ಕಂಟೇನರ್ ಟರ್ಮಿನಲ್ (ಡಬ್ಲ್ಯೂಸಿಟಿ)ನಲ್ಲಿ ಶೇಕಡಾ 51ರಷ್ಟು ಪಾಲನ್ನು ಹೊಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅದಾನಿ ಸಮೂಹವು ತನ್ನ ಸ್ಥಳೀಯ ಪಾಲುದಾರ ಜಾನ್ ಕೀಲ್ಸ್ ಹೋಲ್ಡಿಂಗ್ಸ್ ಮತ್ತು ಎಸ್‌ಎಲ್‌ಪಿಎ ಜೊತೆ ಸೇರಿ, ಕೊಲಂಬೊ ಬಂದರಿನಲ್ಲಿ ಡಬ್ಲ್ಯೂಸಿಟಿಯನ್ನು ಅಭಿವೃದ್ಧಿಪಡಿಸಲು ಬಿಲ್ಡ್-ಆಪರೇಟ್-ಟ್ರಾನ್ಸ್‌ಫರ್ (ಬಿಒಟಿ) ಒಪ್ಪಂದಕ್ಕೆ ಸಹಿ ಹಾಕಿದೆ. ಎರಡು ಸ್ಥಳೀಯ ಸಂಸ್ಥೆಗಳು ವೆಸ್ಟ್ ಕಂಟೇನರ್ ಇಂಟರ್‌ನ್ಯಾಷನಲ್ ಟರ್ಮಿನಲ್ ಹೆಸರಿನಲ್ಲಿ ಹೊಸ ಜಂಟಿ ಕಂಪೆನಿಯ ಶೇ 34 ಮತ್ತು ಶೇ 15ರಷ್ಟು ಪಾಲನ್ನು ಹೊಂದಿರುತ್ತವೆ. ಕೊಲಂಬೊ ಬಂದರು ಭಾರತದ ಕಂಟೇನರ್‌ಗಳು ಮತ್ತು ಮುಖ್ಯ ಹಡಗು ಆಪರೇಟರ್‌ಗಳ ವರ್ಗಾವಣೆಗೆ ಅತ್ಯಂತ ಆದ್ಯತೆಯ ಪ್ರಾದೇಶಿಕ ಕೇಂದ್ರಗಳಲ್ಲಿ ಒಂದಾಗಿದೆ. ಕೊಲೊಂಬೋ ಮೂಲಕ ಸಾಗಿ ಬರುವುದರಲ್ಲಿ ಶೇ 45ರಷ್ಟು ಭಾರತದ ಅದಾನಿ ಪೋರ್ಟ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್​ (ಎಪಿಎಸ್‌ಇಜೆಡ್) ಟರ್ಮಿನಲ್‌ನಿಂದ ತೆರಳುತ್ತವೆ.

ಎಪಿಎಸ್‌ಇಜೆೆಡ್ ಭಾರತದ ಅತಿದೊಡ್ಡ ಬಂದರು ಡೆವಲಪರ್ ಮತ್ತು ಆಪರೇಟರ್ ಆಗಿದ್ದು, ದೇಶದ ಒಟ್ಟು ಬದರು ಸಾಮರ್ಥ್ಯದ ಶೇ 24ರಷ್ಟನ್ನು ಪ್ರತಿನಿಧಿಸುತ್ತದೆ. ಈಸ್ಟರ್ನ್ ಕಂಟೇನರ್ ಟರ್ಮಿನಲ್ (ಇಸಿಟಿ)ನಲ್ಲಿ ಭಾರತ ಮತ್ತು ಜಪಾನ್‌ನೊಂದಿಗೆ 2019ರಲ್ಲಿ ಸಹಿ ಹಾಕಿದ ಹಿಂದಿನ MoU ಅನ್ನು ಹಿಂತೆಗೆದುಕೊಳ್ಳಲು ಶ್ರೀಲಂಕಾ ನಿರ್ಧರಿಸಿದ ನಂತರ ಡಬ್ಲ್ಯೂಸಿಟಿ ಪ್ರಸ್ತಾಪ ಬಂದಿತು. ಸರ್ಕಾರಿ ಸ್ವಾಮ್ಯದ ಎಸ್‌ಎಲ್‌ಪಿಎ ಹಿಂದಿನ ಸಿರಿಸೇನಾ ಸರ್ಕಾರದ ಅವಧಿಯಲ್ಲಿ ಇಸಿಟಿಯನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ಜಪಾನ್‌ನೊಂದಿಗೆ ಮೇ 2019ರಲ್ಲಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿತು. ಕೊಲಂಬೊ ಬಂದರು ಕಾರ್ಮಿಕ ಸಂಘಗಳು ಭಾರತ ಮತ್ತು ಜಪಾನ್‌ನ ಹೂಡಿಕೆದಾರರು ಇಟಿಸಿಯಲ್ಲಿ ಶೇ 49ರಷ್ಟು ಷೇರುಗಳನ್ನು ಖರೀದಿಸುವ ಪ್ರಸ್ತಾಪವನ್ನು ವಿರೋಧಿಸಿದರು. ಶೇಕಡಾ 51ರಷ್ಟನ್ನು ಹೊರತುಪಡಿಸಿ ಎಸ್‌ಎಲ್‌ಪಿಎ ಒಡೆತನದಲ್ಲಿ ಇಸಿಟಿಯನ್ನು ಶೇ 100ರಷ್ಟು ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

ಕಾರ್ಮಿಕ ಒಕ್ಕೂಟಗಳ ಒತ್ತಡದ ಮೇರೆಗೆ ಪ್ರಧಾನಿ ಮಹಿಂದಾ ರಾಜಪಕ್ಸೆ ಒಪ್ಪಂದವನ್ನು ರದ್ದುಗೊಳಿಸಲು ಒಪ್ಪಿಕೊಂಡರು. ಭಾರತ ಮತ್ತು ಜಪಾನ್‌ನೊಂದಿಗಿನ ತ್ರಿಪಕ್ಷೀಯ ಒಪ್ಪಂದಕ್ಕೆ ಬದ್ಧವಾಗಿರಲು ಶ್ರೀಲಂಕಾವನ್ನು ಭಾರತವು ಒತ್ತಾಯಿಸಬೇಕಾಯಿತು. ಅಂತಾರಾಷ್ಟ್ರೀಯ ಒಪ್ಪಂದವನ್ನು ಏಕಪಕ್ಷೀಯವಾಗಿ ತಿರಸ್ಕರಿಸಿದ್ದಕ್ಕಾಗಿ ಭಾರತ ಮತ್ತು ಜಪಾನ್ ಎರಡೂ ಶ್ರೀಲಂಕಾವು ಈ ವಿಷಯದಲ್ಲಿ ತಪ್ಪು ಮಾಡಿರುವುದಾಗಿ ಹೇಳಿದವು. ಜಪಾನ್ ಕೂಡ ಶ್ರೀಲಂಕಾ ಸರ್ಕಾರದ ಜೊತೆ ತನ್ನ ಅಸಮಾಧಾನವನ್ನು ತಿಳಿಸಿತ್ತು. ಭಾರತ ಮತ್ತು ಜಪಾನ್ “ಕ್ವಾಡ್”ನ ಸದಸ್ಯ ರಾಷ್ಟ್ರವಾಗಿವೆ. ಅಥವಾ ನಾಲ್ಕು ಇಂಡೋ-ಪೆಸಿಫಿಕ್ ರಾಷ್ಟ್ರಗಳ ಚತುರ್ಭುಜ ಒಕ್ಕೂಟವು ಯುಎಸ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿದೆ. ನಾಲ್ಕು ದೇಶಗಳು 2017ರಲ್ಲಿ ‘ಕ್ವಾಡ್’ ಅನ್ನು ಸ್ಥಾಪಿಸುವ ದೀರ್ಘಾವಧಿಯ ಬಾಕಿ ಇರುವ ಪ್ರಸ್ತಾವನೆಗೆ ರೂಪ ನೀಡಿವೆ.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ನಡವಳಿಕೆಗೆ ಉತ್ತರ ನೀಡಲು ಈ ಹೆಜ್ಜೆ ಇಡಲಾಗಿದೆ. ತನ್ನ ಮಹತ್ವಾಕಾಂಕ್ಷೆಯ ಬೆಲ್ಟ್ ಮತ್ತು ರಸ್ತೆ ನಿರ್ಮಾಣದ ಭಾಗವಾಗಿ ಶ್ರೀಲಂಕಾದ ವಿವಿಧ ಮೂಲಸೌಕರ್ಯ ಯೋಜನೆಗಳಲ್ಲಿ ಚೀನಾದ ಪ್ರಭಾವವು ಬೆಳೆಯುತ್ತಿದೆ. ಶ್ರೀಲಂಕಾದ ಮೂಲಸೌಕರ್ಯ ಯೋಜನೆಗಳಲ್ಲಿ ಚೀನಾ 8 ಶತಕೋಟಿ ಡಾಲರ್‌ಗಿಂತ ಹೆಚ್ಚು ಹೂಡಿಕೆ ಮಾಡಿದೆ. ಕೊಲಂಬೊ ತನ್ನ ಹಂಬಂತೋಟಾ ಬಂದರನ್ನು 2017ರಲ್ಲಿ ಬೀಜಿಂಗ್‌ಗೆ ಸಾಲದ ವಿನಿಮಯವಾಗಿ ಹಸ್ತಾಂತರಿಸಿತು.

ಇದನ್ನೂ ಓದಿ: Top 10 Richest Indian 2021: ಗೌತಮ್ ಅದಾನಿಯ ಒಂದು ದಿನದ ಗಳಿಕೆಯೇ 1,002 ಕೋಟಿ ರೂಪಾಯಿ!

Published On - 11:36 pm, Thu, 30 September 21