ನವದೆಹಲಿ, ನವೆಂಬರ್ 24: ಇದೇ ಜನವರಿ ತಿಂಗಳಲ್ಲಿ ಅದಾನಿ ಗ್ರೂಪ್ ವಿರುದ್ಧ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ (Hindenburg Research) ಬಹಿರಂಗಗೊಳಿಸಿದ್ದ ಸ್ಫೋಟಕ ವರದಿ ಸಂಬಂಧ ಸುಪ್ರೀಂ ಕೋರ್ಟ್ ಅಣತಿಯಂತೆ ತನಿಖೆ ನಡೆಸುತ್ತಿರುವ ಸೆಬಿ (SEBI) ತಾನು ತನಿಖೆಗೆ ಹೆಚ್ಚುವರಿ ಕಾಲಾವಕಾಶ ಕೋರುವುದಿಲ್ಲ ಎಂದು ಹೇಳಿದೆ. ಇಂದು ಸರ್ವೋಚ್ಚ ನ್ಯಾಯಪೀಠದಲ್ಲಿ ನಡೆದ ವಿಚಾರಣೆಯಲ್ಲಿ, ಸೆಬಿ ಈ ವಿಚಾರ ಸ್ಪಷ್ಟಪಡಿಸಿದೆ. ನ್ಯಾಯಪೀಠದಲ್ಲಿದ್ದ ಸಿಜೆಐ ಡಿವೈ ಚಂದ್ರಚೂಡ್ ಅವರು, ಹಿಂಡನ್ಬರ್ಗ್ ಪ್ರಕರಣದ ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ಸೆಬಿಯನ್ನು ವಿಚಾರಿಸಿದರು. ಇದಕ್ಕೆ ಉತ್ತರಿಸಿದ ಸೆಬಿ ಸಂಸ್ಥೆಯ ಪರ ವಕೀಲರು, ಅದಾನಿ-ಹಿಂಡನ್ಬರ್ಗ್ ಪ್ರಕರಣದ 24 ಕೇಸ್ಗಳ ಪೈಕಿ 22 ಕೇಸ್ಗಳ ತನಿಖೆ ಪೂರ್ಣಗೊಂಡಿರುವ ಸಂಗತಿಯನ್ನು ತಿಳಿಸಿದರು.
ಇನ್ನುಳಿದ ಎರಡು ಪ್ರಕರಣದಲ್ಲಿ ವಿದೇಶ ಪ್ರಾಧಿಕಾರಗಳಿಂದ (Foreign Regulators) ಮಾಹಿತಿ ಬರಬೇಕಿದೆ. ಎಷ್ಟು ಅವಧಿಗೆ ಆ ಮಾಹಿತಿ ಸಿಗುತ್ತದೆ ಎಂಬುದು ತಮ್ಮ ನಿಯಂತ್ರಣದಲ್ಲಿಲ್ಲ ಎಂದು ಸೆಬಿ ಪರ ವಕಾಲತ್ತು ವಹಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹತಾ ಹೇಳಿದರು.
ಷೇರು ಬೆಲೆಗಳಲ್ಲಿ ಬಹಳ ವ್ಯತ್ಯಯವಾಗುತ್ತಿದ್ದುದು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ಒಂದು ಕಾರಣ ಎಂದು ಸ್ಪಷ್ಟಪಡಿಸಿದ ಸರ್ವೂಚ್ಚ ನ್ಯಾಯಪೀಠ, ‘ಈ ವ್ಯತ್ಯಯಗಳಿಂದ ಹೂಡಿಕೆದಾರರನ್ನು ರಕ್ಷಿಸಲು ಸೆಬಿ ಏನು ಮಾಡುತ್ತಿದೆ? ಹಿಂಡನ್ಬರ್ಗ್ ವರದಿ ಪ್ರಕಟಗೊಂಡ ತರುವಾಯ ಶಾರ್ಟ್ ಸೆಲ್ಲಿಂಗ್ನಲ್ಲಿ ಏನಾದರೂ ಅಕ್ರಮವಾಗಿದೆಯಾ?’ ಎಂದು ಮುಖ್ಯ ನ್ಯಾಯಮೂರ್ತಿಗಳು ಸೆಬಿಯನ್ನು ಕೇಳಿದರು.
ಇದನ್ನೂ ಓದಿ: Supreme Court: ಅದಾನಿ-ಹಿಂಡನ್ಬರ್ಗ್ ಪ್ರಕರಣ: ಸೆಬಿ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲು
ಇದಕ್ಕೆ ಉತ್ತರಿಸಿದ ಸೆಬಿ ಪರ ವಕೀಲರು, ‘ಶಾರ್ಟ್ ಸೆಲ್ಲಿಂಗ್ ನಡೆದ ಸಂದರ್ಭಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.
ಇನ್ನು, ಸುಪ್ರೀಂಕೋರ್ಟ್ ನೇಮಿಸಿದ ತಜ್ಞರ ಸಮಿತಿ ಷೇರುಪೇಟೆ ನಿಯಮ ಬಲಪಡಿಸಲು ಮಾಡಿದ ಸಲಹೆಗಳು ಮತ್ತು ಶಿಫಾರಸುಗಳಿಗೆ ತನ್ನದೇನೂ ಅಭ್ಯಂತರ ಇಲ್ಲ. ಆ ಸಲಹೆಗಳನ್ನು ಪರಿಗಣಿಸಿ ಸ್ವೀಕರಿಸಿದ್ದೇವೆ,’ ಎಂದು ತುಷಾರ್ ಮೆಹ್ತಾ ಮಾಹಿತಿ ನೀಡಿದರು.
ಹಿಂಡನ್ಬರ್ಗ್ ರಿಸರ್ಚ್ ಎಂಬ ಶಾರ್ಟ್ ಸೆಲ್ಲರ್ ಕಂಪನಿಯು ಜನವರಿಯಲ್ಲಿ ಸ್ಫೋಟಕ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಅದಾನಿ ಗ್ರೂಪ್ ತನ್ನ ಕಂಪನಿಗಳ ಷೇರುಬೆಲೆ ಕೃತಕವಾಗಿ ಉಬ್ಬುವ ರೀತಿಯಲ್ಲಿ ಅಕ್ರಮಗಳನ್ನು ಎಸಗಿದ್ದೂ ಸೇರಿದಂತೆ ಹಲವು ಗುರುತರ ಆರೋಪಗಳನ್ನು ಮಾಡಿತ್ತು. ಅದಾದ ಬಳಿಕ ಅದಾನಿ ಗ್ರೂಪ್ ಕಂಪನಿಗಳ ಷೇರುಬೆಲೆ ಗಣನೀಯವಾಗಿ ತಗ್ಗಿತು.
ಇದನ್ನೂ ಓದಿ: ಅದಾನಿ ಹಿಂಡನ್ಬರ್ಗ್ ಪ್ರಕರಣ: ನ. 8ರಷ್ಟರಲ್ಲಿ ಅಂತಿಮ ದಾಖಲೆ ಸಲ್ಲಿಸುವಂತೆ ಎಲ್ಲರಿಗೂ ಸುಪ್ರೀಂಕೋರ್ಟ್ ಆದೇಶ
ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ, ತಜ್ಞರ ಸಮಿತಿಯೊಂದನ್ನು ರಚಿಸಿತು. ಹಾಗೆಯೇ, ಹಿಂಡನ್ಬರ್ಗ್ ವರದಿಯಲ್ಲಿನ ಅಂಶಗಳನ್ನು ತನಿಖೆ ನಡೆಸುವಂತೆ ಷೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿಗೆ ಆದೇಶಿಸಿತು. ಮೂರು ತಿಂಗಳೊಳಗೆ ಅದರ ತನಿಖೆ ಪೂರ್ಣಗೊಳಿಸಬೇಕಾಗಿತ್ತಾದರೂ ಸೆಬಿ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಈಗ ತನಿಖೆಯ ಸ್ಥಿತಿ ಎಲ್ಲಿಗೆ ಬಂದಿದೆ ಎಂದು ಸುಪ್ರೀಂಕೋರ್ಟ್ ವಿಚಾರಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ