ನವದೆಹಲಿ: ಅದಾನಿ ಸಮೂಹದ (Adani Group) ವಿರುದ್ಧ ಕೇಳಿಬಂದಿರುಬವ ಅಕ್ರಮದ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಲು ತಜ್ಞರ ಸಮಿತಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ಸೂಚನೆ ನೀಡಿದೆ. ಹೂಡಿಕೆದಾರರ ಹಿತ ಕಾಯುವುದಕ್ಕಾಗಿ ಈ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಹೇಳಿದೆ. ಅದಾನಿ ಸಮೂಹದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಬೆನ್ನಲ್ಲೇ ಸರ್ವೋಚ್ಚ ನ್ಯಾಯಾಲಯ ಈ ಸೂಚನೆ ನೀಡಿದೆ. ಅದಾನಿ ಪ್ರಕರಣಕ್ಕೆ ಸಂಬಂಧಿಸಿ ಮಧ್ಯ ಪ್ರವೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನಾವು ಮಧ್ಯ ಪ್ರವೇಶಿಸುವುದು ಹಾಗಿರಲಿ. ಇಂಥ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಲು ಸರಿಯಾದ ವ್ಯವಸ್ಥೆ ನಮ್ಮಲ್ಲಿದೆಯೇ? ನೀತಿ ನಿರೂಪಣೆ ವಿಷಯದಲ್ಲಿ ನಾವು ಮಧ್ಯ ಪ್ರವೇಶಿಸುವುದಿಲ್ಲ. ಅದು ಸರ್ಕಾರಕ್ಕೆ ಸಂಬಂಧಿಸಿದ ವಿಷಯ ಎಂದು ಹೇಳಿದರು.
‘ಒಟ್ಟಾರೆ ಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಲು ಮತ್ತು ಸರ್ಕಾರ ಈ ವಿಚಾರದಲ್ಲಿ ಆಸಕ್ತಿ ತಳೆದಿದೆಯೇ ಎಂಬುದರ ಪರಿಶೀಲನೆಗೆ ತಜ್ಞರ ತಂಡ ರೂಪಿಸುವಂತೆ ನಾವು ಸಲಹೆ ನೀಡುತ್ತಿದ್ದೇವೆ. ಮಾರುಕಟ್ಟೆ ನಿಯಂತ್ರಣ ಪ್ರಕ್ರಿಯೆ ಹಾಗೂ ಭಾರತದ ಹೂಡಿಕೆದಾರರು ಕಳೆದ ಎರಡು ವಾರಗಳಿಂದ ಸುರಕ್ಷಿತರಾಗಿದ್ದಾರೆಯೇ ಎಂಬುದನ್ನು ಖಾತರಿಪಡಸಿಕೊಳ್ಳುವಂತೆ ಸಾಲಿಸಿಟರ್ ಜನರಲ್ ಅವರಿಗೆ ನಾವು ಸೂಚಿಸಿದ್ದೇವೆ’ ಎಂದು ಅವರು ಹೇಳಿದರು.
ಮಾರುಕಟ್ಟೆ ನಿಯಂತ್ರಕ ಸೆಬಿ ಎಲ್ಲವನ್ನೂ ನಿರ್ವಹಿಸುತ್ತಿದೆ. ನಾವು ಅವರ ಚೌಕಟ್ಟನ್ನು ಮೀರುವುದಿಲ್ಲ. ನಾವು ಮಾತುಕತೆ ನಡೆಸುತ್ತೇವಷ್ಟೇ ಎಂಬುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ ಎಂದು ಚಂದ್ರಚೂಡ್ ಹೇಳಿದರು.
ಇದನ್ನೂ ಓದಿ: Adani Row: ಹಿಂಡನ್ಬರ್ಗ್ ವಿರುದ್ಧ ಅಮೆರಿಕದಲ್ಲಿ ಕಾನೂನು ಹೋರಾಟಕ್ಕೆ ಅಣಿಯಾದ ಅದಾನಿ; ಕಾನೂನು ಸಲಹಾ ಸಂಸ್ಥೆಗೆ ಮೊರೆ
ಅದಾನಿ ಸಮೂಹವು ಷೇರು ಮೌಲ್ಯ ತಿರುಚುವುದರ ಜತೆಗೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿತ್ತು ಎಂದು ಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡನ್ಬರ್ಗ್ ರಿಸರ್ಚ್ ಎರಡು ವಾರಗಳ ಹಿಂದೆ ಆರೋಪಿಸಿತ್ತು. ಪರಿಣಾಮವಾಗಿ ಅದಾನಿ ಸಮೂಹದ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿತ್ತು. ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಅದಾನಿ ಕೇವಲ ಒಂದು ವಾರದ ಅವಧಿಯಲ್ಲಿ 20ನೇ ಸ್ಥಾನಕ್ಕಿಂತಲೂ ಹೆಚ್ಚು ಕುಸಿದಿದ್ದರು. ಇದಾಗಿ ಕೆಲವು ದಿನಗಳ ನಂತರ ಕಂಪನಿ ಷೇರು ಮೌಲ್ಯ ಮತ್ತೆ ವೃದ್ಧಿಯಾಗತೊಡಗಿತ್ತು. ಈ ವಾರದ ಆರಂಭದಲ್ಲಿ ಅಪ್ಪರ್ ಸರ್ಕ್ಯೂಟ್ನಲ್ಲಿದ್ದ ಷೇರು ಮೌಲ್ಯ ಈಗ ಮತ್ತೆ ಕುಸಿಯತೊಡಗಿದೆ. ಅದಾನಿ ಸಮೂಹದ ಕಂಪನಿಗಳ ಫ್ರೀ ಫ್ಲೋಟ್ ಸ್ಟೇಟಸ್ ಪರಿಶೀಲನೆ ನಡೆಸುವುದಾಗಿ ಮಾರ್ಗನ್ ಸ್ಟ್ಯಾನ್ಲಿ (MSCI) ಹೇಳಿಕೆ ನೀಡಿದ್ದೇ ಇದಕ್ಕೆ ಕಾರಣವಾಗಿದೆ.
ಈ ಮಧ್ಯೆ, ಹಿಂಡನ್ಬರ್ಗ್ ರಿಸರ್ಚ್ ವಿರುದ್ಧ ಅಮೆರಿಕದಲ್ಲಿ ಕಾನೂನು ಹೋರಾಟ ನಡೆಸಲು ಉದ್ಯಮಿ ಗೌತಮ್ ಅದಾನಿ ಮುಂದಾಗಿದ್ದಾರೆ. ಅದಕ್ಕಾಗಿ ಅಮೆರಿಕದ ದುಬಾರಿ ಕಾನೂನು ಸಲಹಾ ಸಂಸ್ಥೆ ವಾಚೆಲ್ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ