ಸಚಿವರ ಹೇಳಿಕೆಗೆ ಇಡೀ ಸರ್ಕಾರವನ್ನು ಹೊಣೆ ಮಾಡಲಾಗದು; ಸುಪ್ರೀಂ ಕೋರ್ಟ್
ನ್ಯಾಯಮೂರ್ತಿ ಬಿ.ವಿ ನಾಗರತ್ನ ಮಾತ್ರ ಪ್ರತ್ಯೇಕ ತೀರ್ಪು ನೀಡಿದ್ದು, ಸಚಿವರ ಅಭಿಪ್ರಾಯಗಳು ಸರ್ಕಾರದ ನಿಲುವನ್ನು ಪ್ರತಿಬಿಂಬಿಸಿದರೆ ಸಾಮೂಹಿಕ ಜವಾಬ್ದಾರಿಯನ್ನು ಸರ್ಕಾರದ ಮೇಲೆ ಹೊರಿಸಬಹುದು ಎಂದಿದ್ದಾರೆ.
ನವದೆಹಲಿ: ಸಾಮೂಹಿಕ ಹೊಣೆಗಾರಿಕೆಯ ತತ್ವವನ್ನು ಅನ್ವಯಿಸುವ ಮೂಲಕ ಸಚಿವರು ವೈಯಕ್ತಿಕವಾಗಿ ನೀಡಿದ ಹೇಳಿಕೆಗೆ ಇಡೀ ಸರ್ಕಾರವನ್ನು ಜವಾಬ್ದಾರನನ್ನಾಗಿ ಮಾಡಲು ಸಾಧ್ಯವಿಲ್ಲ. ಅದು ಕೇವಲ ಆ ಮಂತ್ರಿಯ ಹೇಳಿಕೆಯಷ್ಟೇ ಆಗಿರುತ್ತದೆ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠದ ಭಾಗವಾಗಿರುವ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರು, “ವಾಕ್ ಸ್ವಾತಂತ್ರ್ಯ, ಜೀವನ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಖಾಸಗಿ ವ್ಯಕ್ತಿಗಳ ವಿರುದ್ಧವೂ ಅನ್ವಯಿಸಬಹುದು” ಎಂದು ಹೇಳಿದ್ದಾರೆ.
ಜಸ್ಟಿಸ್ ಎಸ್.ಎ ನಜೀರ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಇಂದು ಈ ಕುರಿತು ವಿಚಾರಣೆ ನಡೆಸಿದ್ದು, ಸಂವಿಧಾನದ 19 (2)ನೇ ವಿಧಿಯ ಅಡಿಯಲ್ಲಿ ಉಲ್ಲೇಖಿಸಲಾದ ವಾಕ್ ಸ್ವಾತಂತ್ರ್ಯವನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲಾಗುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: Demonetisation Verdict: ನೋಟು ಅಮಾನ್ಯೀಕರಣದ ಬಗ್ಗೆ ಇಂದು ಸುಪ್ರೀಂ ಕೋರ್ಟ್ನಿಂದ ಮಹತ್ವದ ತೀರ್ಪು
ದೇಶದ ಯಾವುದೇ ಪ್ರಕರಣಗಳು, ವಿದ್ಯಮಾನಗಳಿಗೆ ಸಂಬಂಧಪಟ್ಟಂತೆ ಅಥವಾ ಸರ್ಕಾರವನ್ನು ರಕ್ಷಿಸುವ ರೀತಿಯ ಹೇಳಿಕೆಗಳನ್ನು ಸಚಿವರೊಬ್ಬರು ನೀಡಿದ್ದರೂ ಸಹ ಸಾಮೂಹಿಕ ಹೊಣೆಗಾರಿಕೆಯ ತತ್ವವನ್ನು ಅನ್ವಯಿಸುವ ಮೂಲಕ ಇಡೀ ಮಂತ್ರಿ ಮಂಡಲವನ್ನು ಸಚಿವರ ಹೇಳಿಕೆಗೆ ಜವಾಬ್ದಾರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ, ಎ.ಎಸ್ ಬೋಪಣ್ಣ, ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಈ ನ್ಯಾಯಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ಬಿ.ವಿ ನಾಗರತ್ನ ಮಾತ್ರ ಪ್ರತ್ಯೇಕ ತೀರ್ಪು ನೀಡಿದ್ದಾರೆ. ದೇಶದ ನಾಗರಿಕರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಹೆಚ್ಚು ಅಗತ್ಯವಿರುವ ಹಕ್ಕಾಗಿದ್ದು, ಇದರಿಂದ ನಾಗರಿಕರಿಗೆ ಆಡಳಿತದ ಬಗ್ಗೆ ಉತ್ತಮ ತಿಳುವಳಿಕೆ ಮತ್ತು ಶಿಕ್ಷಣ ಸಿಗುತ್ತದೆ. ಸಮಾಜದಲ್ಲಿ ದ್ವೇಷದ ಮಾತುಗಳು ಮತ್ತು ಭಾಷಣಗಳು ಮೂಲಭೂತ ಮೌಲ್ಯಗಳಿಗೆ ಧಕ್ಕೆಯನ್ನು ಉಂಟುಮಾಡಿ ಅಸಮಾನತೆ ಸೃಷ್ಟಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಕೊವಿಡ್ ಲಸಿಕೆಗೆ ಸಂಬಂಧಿಸಿದ ಸಾವಿಗೆ ನಾವು ಜವಾಬ್ದಾರರಲ್ಲ; ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ
“ಸಚಿವರ ಅಭಿಪ್ರಾಯಗಳು ಸರ್ಕಾರದ ದೃಷ್ಟಿಕೋನಗಳನ್ನು ಒಳಗೊಂಡಿದ್ದರೆ ಮತ್ತು ಸರ್ಕಾರದ ನಿಲುವನ್ನು ಪ್ರತಿಬಿಂಬಿಸಿದರೆ ಸಾಮೂಹಿಕ ಜವಾಬ್ದಾರಿಯನ್ನು ಸರ್ಕಾರದ ಮೇಲೆ ಹೊರಿಸಬಹುದು. ವಾಕ್ ಸ್ವಾತಂತ್ರ್ಯದ ಹಕ್ಕಿನಲ್ಲಿ ಹೆಚ್ಚುವರಿ ನಿರ್ಬಂಧಗಳನ್ನು ತರಲು ಸಂಸತ್ತು ಕಾನೂನನ್ನು ರಚಿಸಬೇಕು. ರಾಜಕೀಯ ಪಕ್ಷಗಳು ತಮ್ಮ ಸದಸ್ಯರಿಗೆ ಭಾಷಣ ಮಾಡಲು ನೀತಿ ಸಂಹಿತೆ ರೂಪಿಸಬೇಕು” ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದ್ದಾರೆ.