ನವದೆಹಲಿ, ಮೇ 12: ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ಬಿಎಫ್ಸಿ) ಸಾಲ ವಿತರಣೆ ವೇಳೆ ಆದಾಯ ತೆರಿಗೆ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ. ಐಐಎಫ್ಎಲ್ ಫೈನಾನ್ಸ್ ಸಂಸ್ಥೆಯ ಗೋಲ್ಡ್ ಲೋನ್ ವಿತರಣೆಯಲ್ಲಿ ನಿಯಮ ಮೀರಿಲಾಗಿರುವುದು ಕಂಡು ಬಂದಿದ್ದು, ಆರ್ಬಿಐ ಕೆಲ ವಾರಗಳ ಹಿಂದೆ ನಿರ್ಬಂಧ ಹೇರಿತ್ತು. ಅದರ ಬೆನ್ನಲ್ಲೇ ಗೋಲ್ಡ್ ಲೋನ್ಗಳನ್ನು ಹೆಚ್ಚಾಗಿ ವಿತರಿಸುವ ಕೆಲ ಎನ್ಬಿಎಫ್ಸಿಗಳಿಗೆ ಮೇ 8ರಂದು ಆರ್ಬಿಐ ಪತ್ರ ಬರೆದು ಎಚ್ಚರಿಸಿದೆ. ಅದರಲ್ಲೂ ಕೇರಳ ಮೂಲದ ಮಣಪ್ಪುರಂ ಫೈನಾನ್ಸ್, ಮುತ್ತೂಟ್ ಫೈನಾನ್ಸ್ ಕಂಪನಿಗಳಿಗೆ ಈ ಪತ್ರ ಬರೆದಿರುವುದು ತಿಳಿದುಬಂದಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269ಟಿ ಮತ್ತು 269 ಎಸ್ಎಸ್ನ ನಿಯಮಗಳನ್ನು (IT act sections) ಪಾಲಿಸುವಂತೆ ಈ ಪತ್ರದಲ್ಲಿ ನಿರ್ದೇಶನ ನೀಡಲಾಗಿದೆ. ಈ ನಿಯಮದ ಪ್ರಕಾರ ಸಾಲ ನೀಡುವಾಗ 20,000 ರೂಗಿಂತ ಹೆಚ್ಚು ನಗದು (cash payouts) ಇರಬಾರದು. ಅಂದರೆ, ಖಾತೆಗೆ ಹಣ ವರ್ಗಾವಣೆ ಮಾಡಬೇಕಾಗುತ್ತದೆ.
ಒಬ್ಬ ವ್ಯಕ್ತಿ ಇನೊಬ್ಬ ವ್ಯಕ್ತಿಯಿಂದ 20,000 ರೂಗಿಂತ ಹೆಚ್ಚಿನ ಹಣದ ಸಾಲ ನೀಡುತ್ತಿದ್ದರೆ ಕ್ಯಾಷ್ ರೂಪದಲ್ಲಿ ಅದನ್ನು ಕೊಡುವಂತಿಲ್ಲ. ಅಕೌಂಟ್ ಪೇಯೀ ಚೆಕ್, ಬ್ಯಾಂಕ್ ಡ್ರಾಫ್ಟ್, ಯುಪಿಐ ಇತ್ಯಾದಿ ಮೂಲಕ ಹಣದ ವಿತರಣೆ ಮಾಡಬೇಕು.
ಟಾಪ್ ಅಪ್ ಲೋನ್ ನೀಡುವಾಗ, ಒಟ್ಟು ಸಾಲದ ಮೊತ್ತ 20,000 ರೂಗಿಂತ ಹೆಚ್ಚಿದ್ದರೆ ಆಗಲೂ ಕೂಡ ಕ್ಯಾಷ್ನಲ್ಲಿ ಹಣ ಕೊಡುವಂತಿಲ್ಲ.
ಇದನ್ನೂ ಓದಿ: ಪರ್ಸನಲ್ ಲೋನ್ನಿಂದ ಲಾಭ ಏನು, ನಷ್ಟ ಏನು? ಇಲ್ಲಿದೆ ನೀವು ತಿಳಿದಿರಬೇಕಾದ ಅಂಶಗಳು
ಉದಾಹರಣೆಗೆ, ಹಣಕಾಸು ಸಂಸ್ಥೆಯೊಂದು ಆಕಾಶ್ ಎಂಬ ವ್ಯಕ್ತಿಗೆ 50,000 ರೂ ಸಾಲ ನೀಡಿರುತ್ತದೆ ಎಂದಿಟ್ಟುಕೊಳ್ಳಿ. ಆಕಾಶ್ 40,000 ರೂ ಸಾಲ ಮರುಪಾವತಿಸಿರುತ್ತಾನೆ. ಇನ್ನೂ 10,000 ರೂ ಮಾತ್ರವೇ ಸಾಲ ಬಾಕಿ ಇರುತ್ತದೆ. ಈ ವೇಳೆ ಮತ್ತೆ ತುರ್ತಾಗಿ ಹಣದ ಅಗತ್ಯ ಬಿದ್ದು 15,000 ರೂ ಟಾಪ್ ಅಪ್ ಲೋನ್ ಬೇಕಾಗುತ್ತದೆ. ಇದು 20,000 ರೂನ ಮಿತಿಯೊಳಗೆ ಬರುತ್ತದೆ ಎಂದು ಹೇಳಿ ಹಣಕಾಸು ಸಂಸ್ಥೆ ಕ್ಯಾಷ್ನಲ್ಲಿ ಹಣ ನೀಡುವಂತಿಲ್ಲ. ಯಾಕೆಂದರೆ ಸಾಲ ಬಾಕಿ 10,000 ರೂ ಸೇರಿದರೆ ಒಟ್ಟು ಸಾಲದ ಮೊತ್ತ 25,000 ರೂ ಆಗುತ್ತದೆ.
ಇದನ್ನೂ ಓದಿ: ನಿಶ್ಚಿತ ಠೇವಣಿಯೋ, ಆವರ್ತಿತ ಠೇವಣಿಯೋ? ಯಾವುದು ನಿಮಗೆ ಸೂಕ್ತ? ಇಲ್ಲಿದೆ ವಿವರ
ಸೆಕ್ಷನ್ 269ಎಸ್ಎಸ್ನಲ್ಲಿ ಕೆಲ ವಿನಾಯಿತಿಗಳಿವೆ. ಬ್ಯಾಂಕ್ಗಳಿಗೆ ನೀವು ಮಾಡುವ ಪಾವತಿಗಳನ್ನು ಕ್ಯಾಷ್ನಲ್ಲಿ ಮಾಡಲಡ್ಡಿ ಇಲ್ಲ. ಪೋಸ್ಟ್ ಆಫೀಸ್, ಸಹಕಾರಿ ಬ್ಯಾಂಕ್ಗಳಲ್ಲೂ 20,000 ರೂಗಿಂತ ಹೆಚ್ಚಿನ ಮೊತ್ತದ ಕ್ಯಾಷ್ ನೀಡಬಹುದು. ಸರ್ಕಾರದಿಂದ ಸ್ಥಾಪಿತವಾದ ಯಾವುದೇ ನಿಗಮಕ್ಕೂ ಈ ವಿನಾಯಿತಿ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ