ಮಾಸ್ಟರ್‌ಕಾರ್ಡ್‌ನ ಮಾಜಿ ಸಿಇಒ ಅಜಯ್ ಬಾಂಗಾ ಅವರನ್ನು ವಿಶ್ವಬ್ಯಾಂಕ್ನ ಅಧ್ಯಕ್ಷ ಹುದ್ದೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶನ ಮಾಡಿದ್ದಾರೆ. ಇದೀಗ ಅಜಯ್ ಕೂಡ ಅಮೆರಿಕದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಭಾರತೀಯರಲ್ಲಿ ಒಬ್ಬರಾಗಲಿದ್ದಾರೆ. ವಿಶ್ವಬ್ಯಾಂಕ್ ಮುಖ್ಯಸ್ಥ ಡೇವಿಡ್ ಮಾಲ್ಪಾಸ್ ಅವರು ಜೂನ್‌ನಲ್ಲಿ ಹುದ್ದೆಯಿಂದ ಕೆಳಗಿಳಿಯುವುದಾಗಿ ಘೋಷಿಸಿದ ಕೆಲವೇ ದಿನಗಳಲ್ಲಿ ಅಜಯ್ ಬಂಗಾ ಅವರ ನೇಮಕಾತಿಯ ಘೋಷಣೆ ಬಂದಿದೆ. ಅವರ ಐದು ವರ್ಷಗಳ ಅವಧಿಯು ಏಪ್ರಿಲ್ 2024 ರಲ್ಲಿ ಕೊನೆಗೊಳ್ಳಬೇಕಿತ್ತು, ಆದರೆ ಅದಕ್ಕೂ ಮೊದಲು ಅವರು ಕೆಳಗಿಳಿಯಲು ನಿರ್ಧರಿಸಿದ್ದಾರೆ.
ಅವರು ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಜಾಗತಿಕ ಕಂಪನಿಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಇದರಿಂದ ಸಾಕಷ್ಟು ಉದ್ಯೋಗ ಸೃಷ್ಟಿಯಾಗಿದೆ. ಸಾಕಷ್ಟು ಅಭಿವೃದ್ಧಿಶೀಲ ಆರ್ಥಿಕತೆಗಳಿಗೆ ಹೂಡಿಕೆ ಸೃಷ್ಟಿಗೆ ನೆರವಾಗಿದ್ದಾರೆ ಎಂದು ಬೈಡೆನ್ ಹೇಳಿದ್ದಾರೆ.
ಇತಿಹಾಸದ ಈ ನಿರ್ಣಾಯಕ ಸಮಯದಲ್ಲಿ ಜಾಗತಿಕ ಸಂಸ್ಥೆಯಾದ ವರ್ಲ್ಡ್ ಬ್ಯಾಂಕ್ ಅನ್ನು ಮುನ್ನಡೆಸಲು ಅಜಯ್ ಬಾಂಗಾ ಸಜ್ಜುಗೊಂಡಿದ್ದಾರೆ ಎಂದು ಜೋ ಬೈಡೆನ್ ಹೇಳಿದ್ದಾರೆ.
ಇವರ ನೇಮಕವನ್ನು ವಿಶ್ವ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕರು ಒಪ್ಪಿದರೆ, ಅಜಯ್ ಬಾಂಗಾ ಅವರು ವಿಶ್ವ ಬ್ಯಾಂಕ್‌ನ ಮೊದಲ ಭಾರತೀಯ ಅಮೆರಿಕ ವ್ಯಕ್ತಿ, ಮೊದಲ ಸಿಖ್ ಅಮೆರಿಕನ್ ಮುಖ್ಯಸ್ಥರಾಗಲಿದ್ದಾರೆ
63 ವರ್ಷದ ಅಜಯ್ ಬಂಗಾ ಅವರು ಪ್ರಸ್ತುತ ಜನರಲ್ ಅಟ್ಲಾಂಟಿಕ್‌ನ ಉಪಾಧ್ಯಕ್ಷರಾಗಿದ್ದಾರೆ. ಇದಕ್ಕೂ ಮೊದಲು, ಅವರು ಮಾಸ್ಟರ್‌ಕಾರ್ಡ್‌ನ ಅಧ್ಯಕ್ಷ ಮತ್ತು ಸಿಇಒ ಆಗಿದ್ದರು. 2016 ರಲ್ಲಿ ಅಜಯ್ ಬಂಗಾ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ.
ಇತ್ತೀಚೆಗಷ್ಟೇ ಆನ್ಲೈನ್ ವಿಡಿಯೋ ಶೇರಿಂಗ್ ಪ್ಲಾಟ್ಫಾರ್ಮ್ ಯೂಟ್ಯೂಬ್ನ ಸಿಇಒ ಆಗಿ ಭಾರತೀಯ ಅಮೆರಿಕನ್ ನೀಲ್ ಮೋಹನ್ ನೇಮಕಗೊಂಡಿದ್ದರು. ಪ್ರಮುಖ ಜಾಗತಿಕ ಸಂಸ್ಥೆಗಳ ಉನ್ನತ ಹುದ್ದೆಯ ಚುಕ್ಕಾಣಿ ಹಿಡಿದ ಕೆಲ ಭಾರತೀಯ ನಾಯಕರ ಕುರಿತು ಮಾಹಿತಿ ಇಲ್ಲಿದೆ.
ಸುಂದರ್ ಪಿಚ್ಚೈ: ಮದುರೈ ಮೂಲದ ಸುಂದರ್ ಪಿಚ್ಚೈ ಗೂಗಲ್ ಹಾಗೂ ಅದರ ಮಾತೃ ಸಂಸ್ಥೆ ಆಲ್ಫಬೆಟ್ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸತ್ಯಾ ನಾಡೆಲ್ಲಾ: ಮೈಕ್ರೋಸಾಫ್ಟ್ ಸಿಇಒ ಹಾಗೂ ಅಧ್ಯಕ್ಷ ಆಗಿರುವ ನಾಡೆಲ್ಲಾ, ಮೂಲತಃ ಹೈದರಾಬಾದ್ನವರಾಗಿದ್ದು, 1992ರಲ್ಲಿ ಮೈಕ್ರೋಸಾಫ್ಟ್ಗೆ ಸೇರ್ಪಡೆಗೊಂಡರು. 2014ರಲ್ಲಿ ಸಿಇಒ, 2021ರಲ್ಲಿ ಸಂಸ್ಥೆಯ ಅಧ್ಯಕ್ಷಗಾದಿಯನ್ನೇರಿದರು.
ಲಕ್ಷ್ಮಣ್ ನರಸಿಂಹನ್: ಇವರು ವಿಶ್ವಪ್ರಸಿದ್ಧ ಕೆಫೆ ಸ್ಟಾರ್ಬಕ್ಸ್ನ ಸಿಇಒ ಆಗಿ 2021ರಲ್ಲಿ ನೇಮಕಗೊಂಡಿದ್ದರು.
ಅರವಿಂದ್ ಕೃಷ್ಣ: ಅಮೆರಿಕ ಮೂಲದ ತಂತ್ರಜ್ಞಾನ ದೈತ್ಯ ಐಬಿಎಂ ಸಿಇಒ ಆಗಿ ಭಾರತೀಯ ಮೂಲದವರಾದ ಅರವಿಂದ್ ಕೃಷ್ಣ 2020ರಲ್ಲಿ ನೇಮಕಗೊಂಡು ಬಳಿಕ ಒಂದು ವರ್ಷದ ಅವಧಿಯಲ್ಲಿ ಅಧ್ಯಕ್ಷಸ್ಥಾನಕ್ಕೇರಿದರು.
ಸಂದೀಪ್ ಕಟಾರಿಯಾ: ಬಾಟಾ ಸಂಸ್ಥೆಯ ಸಿಇಒ ಆಗಿ 2021ರಲ್ಲಿ ನೇಮಕಗೊಂಡಿರುವ ಕಟಾರಿಯಾ, ಸಂಸ್ಥೆಯ 126 ವರ್ಷಗಳ ಇತಿಹಾಸದಲ್ಲಿ ಅತ್ಯುನ್ನತ ಹುದ್ದೆಗೇರಿದ ಭಾರತೀಯ ಎಂಬ ಖ್ಯಾತಿಗೂ ಪಾತ್ರರಾಗಿದ್ದರು.
5 ಸಂಸ್ಥೆಗಳ ಭಾರತೀಯ ಸಿಇಒಗಳು ಹಾಗೂ ಸಂಸ್ಥೆ ಹೆಸರು
ಅಡೋಬ್-ಶಾಂತನು ನಾರಾಯಣ್
ವಿಎಂವೇರ್-ರಂಗರಾಜನ್ ರಘುರಾಮ್
ಲಕ್ಸುರಿ ಫ್ಯಾಷನ್-ಲೀನಾ ನಾಯರ್
ಪೊಲೋ ಆಲ್ಟೋ-ನಿಕೇಶ್ ಅರೋರಾ
ನೆಟ್ ಆ್ಯಪ್-ಜಾರ್ಜ್ ಕುರಿಯನ್
ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ