Joe Biden: ವಿಡಿಯೋ ನೋಡಿ, ಏರ್​ಫೋರ್ಸ್ ವನ್ ವಿಮಾನ ಏರುವ ವೇಳೆ ಎಡವಿಬಿದ್ದರೇ ಜೋ ಬೈಡನ್?

ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಏರ್​ಫೋರ್ಸ್ ವನ್ ವಿಮಾನ ಏರುವ ಸಂದರ್ಭದಲ್ಲಿ ಎಡವಿ ಬಿದ್ದಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Joe Biden: ವಿಡಿಯೋ ನೋಡಿ, ಏರ್​ಫೋರ್ಸ್ ವನ್ ವಿಮಾನ ಏರುವ ವೇಳೆ ಎಡವಿಬಿದ್ದರೇ ಜೋ ಬೈಡನ್?
ಜೋ ಬೈಡನ್ (ಸಂಗ್ರಹ ಚಿತ್ರ)
Follow us
Ganapathi Sharma
|

Updated on: Feb 23, 2023 | 10:06 AM

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ (Joe Biden) ಅವರು ಏರ್​ಫೋರ್ಸ್ ವನ್ ವಿಮಾನ ಏರುವ ಸಂದರ್ಭದಲ್ಲಿ ಎಡವಿ ಬಿದ್ದಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉಕ್ರೆನ್​ ಮತ್ತು ಪೋಲೆಂಡ್​​ ಪ್ರವಾಸ ಮುಗಿಸಿ ಅಮೆರಿಕದ ವಾಷಿಂಗ್ಟನ್ ಡಿಸಿಗೆ ವಾಪಸಾಗಲು ಪೋಲೆಂಡ್​​ನ ವಾರ್ಸಾದಲ್ಲಿ ವಿಮಾನ ಏರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಜೀ ಬೈಡನ್ ಅವರು ಸರಸರನೇ ಮೆಟ್ಟಿಲುಗಳನ್ನೇರಿ ನಡೆಯುತ್ತಿರುತ್ತಾರೆ. ಅಷ್ಟರಲ್ಲಿ ಎಡವಿ ಬೀಳುತ್ತಾರೆ. ನಂತರ ಸುಧಾರಿಸಿಕೊಂಡು ವಿಮಾನ ಏರಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿದೆ. ಆದರೆ, ಈ ವಿಚಾರವಾಗಿ ಶ್ವೇತಭವನ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಎರಡು ವರ್ಷಗಳ ಹಿಂದೆ ಇದೇ ರೀತಿ ಬೈಡನ್ ವಿಮಾನ ಏರುವಾಗ ಎಡವಿ ಬಿದ್ದಿದ್ದರು. ಆ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರ ಸೇರಿದಂತೆ ಅನೇಕರು ಬೈಡನ್ ದೈಹಿಕ ಕ್ಷಮತೆ ಬಗ್ಗೆ ಪ್ರಶ್ನಿಸಿದ್ದರು. ನಂತರ, ಬೈಡನ್ ಅವರು ಶೇ 100ರಷ್ಟು ಫಿಟ್ ಆಗಿದ್ದಾರೆ ಎಂದು ಶ್ವೇತಭವನ ಪ್ರಕಟಣೆ ಹೊರಡಿಸಿತ್ತು.

‘ಹೊರಗಡೆ ವಿಪರೀತ ಗಾಳಿ ಬೀಸುತ್ತಿತ್ತು. ನಾನೇ ಮೆಟ್ಟಿಲುಗಳನ್ನೇರುವಾಗ ಎಡವಿದ್ದೆ. ಅವರು (ಬೈಡನ್) ಚೆನ್ನಾಗಿದ್ದಾರೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ತಿಳಿಸಿದ್ದರು. ವಿಮಾನ ಏರುವಾಗ ಒಂದು ಸ್ಟೆಪ್​ ತಪ್ಪಿಹೋಗಿ ಕಾಲಿಟ್ಟುದರಿಂದ ಹಾಗಾಯಿತೇ ವಿನಃ ಬೇರೇನೂ ಇಲ್ಲ ಎಂದು ಅವರು ಹೇಳಿದ್ದರು.

ಉಕ್ರೇನ್​ಗೆ ಭೇಟಿ ನೀಡಿದ್ದ ಬೈಡನ್

ಜೋ ಬೈಡನ್ ಅವರು ಈ ವಾರ ಆರಂಭದಲ್ಲಿ ಉಕ್ರೇನ್ ಮತ್ತು ಪೋಲೆಂಡ್​ಗೆ ಭೇಟಿ ನೀಡಿದ್ದರು. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅವರನ್ನು ಭೇಟಿಯಾಗಿದ್ದ ಅವರು, ರಷ್ಯಾ ಎದುರಿನ ಯುದ್ಧದಲ್ಲಿ ಬೆಂಬಲ ಘೋಷಿಸಿದ್ದರು. ನಂತರ ಪೋಲೆಂಡ್​​ಗೆ ತೆರಳಿ ಅಲ್ಲಿನ ಅಧ್ಯಕ್ಷ ಆಂಡ್ರೆಜ್ ದುಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ: Joe Biden: ರಷ್ಯಾವನ್ನು ಎಂದೂ ಗೆಲ್ಲಲು ಬಿಡುವುದಿಲ್ಲ, ಉಕ್ರೇನ್​ ಜತೆ ಸದಾ ನಾವಿರುತ್ತೇವೆ: ಜೋ ಬೈಡನ್

ಉಕ್ರೇನ್ ವಿರುದ್ಧದ ಅತಿಕ್ರಮಣದಲ್ಲಿ ರಷ್ಯಾಕ್ಕೆ ಎಂದೂ ಜಯ ಸಿಗದು. ರಷ್ಯಾವನ್ನು ಎಂದಿಗೂ ಗೆಲ್ಲಲು ಬಿಡುವುದಿಲ್ಲ, ಉಕ್ರೇನ್ ಜತೆ ಸದಾ ನಾವಿರುತ್ತೇವೆ ಎಂದು ಬೈಡನ್ ಹೇಳಿದ್ದರು. ಉಕ್ರೇನ್​ಗೆ ಜೋ ಬೈಡನ್ ಭೇಟಿಕೊಟ್ಟ ಬಳಿಕ ಪುಟಿನ್ ಕಣ್ಣು ಕೆಂಪಾಗಿತ್ತು, ನಾವು ಇಷ್ಟಕ್ಕೇ ಬಿಡುವುದಿಲ್ಲ, ಉಕ್ರೇನ್ ಮೇಲೆ ಮತ್ತೆ ಯುದ್ಧ ಸಾರುತ್ತೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ