ಗಾಂಧಿನಗರ, ಜುಲೈ 28: ಅಮೆರಿಕದ ಚಿಪ್ ತಯಾರಿಕಾ ಸಂಸ್ಥೆ ಎಎಂಡಿ (AMD- Advanced Micro Devices) ಬೆಂಗಳೂರಿನಲ್ಲಿ ತನ್ನ ಅತಿದೊಡ್ಡ ಆರ್ ಅಂಡ್ ಡಿ ಘಟಕ ಸ್ಥಾಪಿಸಲು ಮುಂದಾಗಿದೆ. ಈ ವರ್ಷದೊಳಗೆ ಅದರ ನೂತನ ಚಿಪ್ ಡಿಸೈನ್ ಸೆಂಟರ್ ಬೆಂಗಳೂರಿನಲ್ಲಿ ತಲೆ ಎತ್ತಲಿದೆ. ಮುಂದಿನ 3 ವರ್ಷದಲ್ಲಿ 400 ಮಿಲಿಯನ್ ಡಾಲರ್ (ಸುಮಾರು 3,290 ಕೋಟಿ ರೂ) ಹೂಡಿಕೆ ಮಾಡಲಿದ್ದು, ಸುಮಾರು 3 ಸಾವಿರ ಎಂಜಿನಿಯರುಗಳ ನೇಮಕಾತಿ ಮಾಡಿಕೊಳ್ಳುವ ಆಲೋಚನೆಯಲ್ಲಿ ಎಎಂಡಿ ಇದೆ. ಈ ಬೃಹತ್ ಸೆಮಿಕಂಡಕ್ಟರ್ ಡಿಸೈನ್ ಕೇಂದ್ರ ಬರೋಬ್ಬರಿ 5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿದೆಯಂತೆ.
ಗುಜರಾತ್ನ ಗಾಂಧಿನಗರದಲ್ಲಿ ಇಂದು ಚಾಲನೆಗೊಂಡ ವಾರ್ಷಿಕ ಸೆಮಿಕಂಡಕ್ಟರ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಎಎಂಡಿ ಸಂಸ್ಥೆಯ ಸಿಟಿಒ ಮತ್ತು ಕಾರ್ಯವಾಹಕ ಉಪಾಧ್ಯಕ್ಷ ಮಾರ್ಕ್ ಪೇಪರ್ಮಾಸ್ಟರ್ ಅವರು ಬೆಂಗಳೂರಿನಲ್ಲಿ ಅತಿದೊಡ್ಡ ಡಿಸೈನ್ ಸೆಂಟರ್ ಸ್ಥಾಪನೆಯ ಬಗ್ಗೆ ಸುಳಿವು ನೀಡಿದರು.
ಅಮೆರಿಕದ ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾದಲ್ಲಿ ಮುಖ್ಯಕಚೇರಿ ಹೊಂದಿರುವ ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ ಸಂಸ್ಥೆ ಭಾರತದಲ್ಲಿ ಹೆಜ್ಜೆ ಇಟ್ಟು ಎರಡು ದಶಕಗಳಾಗಿವೆ. ಬೆಂಗಳೂರಿನಲ್ಲಿರುವ ಕಚೇರಿ ಸೇರಿ ಭಾರತದಲ್ಲಿ 9 ಸ್ಥಳಗಳಲ್ಲಿ ಎಎಂಡಿ ನೆಲೆ ಇದೆ. ಇದೀಗ ಬೆಂಗಳೂರಿನಲ್ಲಿ ಡಿಸೈನ್ ಸೆಂಟರ್ ಶುರುವಾದರೆ ಭಾರತದಲ್ಲಿ ಎಎಂಡಿ ಉಪಸ್ಥಿತಿ 10ನೆಯದ್ದಾಗುತ್ತದೆ. ಸದ್ಯ ಎಎಂಡಿಯ ಭಾರತೀಯ ಕಚೇರಿಗಳಲ್ಲಿ ಒಟ್ಟು 6,500 ಮಂದಿ ಉದ್ಯೋಗಿಗಳಿದ್ದು, ಹೊಸ ಡಿಸೈನ್ ಸೆಂಟರ್ ಬಂದ ಬಳಿಕ ಉದ್ಯೋಗಿಗಳ ಸಂಖ್ಯೆ ಹತ್ತಿರಹತ್ತಿರ 10,000ಕ್ಕೆ ಏರುತ್ತದೆ.
ಇದನ್ನೂ ಓದಿ: Semicon India: ಸೆಮಿಕಂಡಕ್ಟರ್ ಉದ್ಯಮ ಸ್ಥಾಪಿಸಬೇಕೆಂದರೆ ಗಂಡೆದೆ ಬೇಕು: ಭಾರತವನ್ನು ಶ್ಲಾಘಿಸಿದ ಫಾಕ್ಸ್‌ಕಾನ್
ಬೆಂಗಳೂರಿನಲ್ಲಿ ಎಎಂಡಿ ಸ್ಥಾಪಿಸಲಿರುವ ಅತ್ಯಾಧುನಿಕ ಚಿಪ್ ಡಿಸೈನ್ ಸೆಂಟರ್ ಈ ವರ್ಷಾಂತ್ಯದೊಳಗೆ ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ. ಈ ಬೆಳವಣಿಗೆಯನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದ್ದಾರೆ.
‘ಭಾರತದಲ್ಲಿ ವಿಶ್ವ ದರ್ಜೆಯ ಸೆಮಿಕಂಡಕ್ಟರ್ ಡಿಸೈನ್ ಮತ್ತು ಇನೋವೇಶನ್ ಇಕೋಸಿಸ್ಟಂ ನಿರ್ಮಿಸಲು ಇದು ಖಂಡಿತವಾಗಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಉನ್ನತ ಕೌಶಲ್ಯದ ಸೆಮಿಕಂಡಕ್ಟರ್ ಎಂಜಿನಿಯರುಗಳು ಮತ್ತು ಸಂಶೋಧಕರಿಗೆ ಇದು ಒಳ್ಳೆಯ ಅವಕಾಶಗಳನ್ನು ಒದಗಿಸುತ್ತದೆ. ಭಾರತವು ಜಾಗತಿಕ ಪ್ರತಿಭಾ ಅಡ್ಡೆಯಾಗಬೇಕೆನ್ನುವ ನರೇಂದ್ರ ಮೋದಿ ಕನಸಿಗೆ ಇದು ಪೂರಕವಾಗಿದೆ’ ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಫಾಕ್ಸ್‌ಕಾನ್, ವೇದಾಂತ ಮೇಕ್ ಇನ್ ಇಂಡಿಯಾ ಯೋಜನೆಗೆ ಬದ್ಧ: ಸಚಿವ ಅಶ್ವಿನಿ ವೈಷ್ಣವ್
ಸೆಮಿಕಂಡಕ್ಟರ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಸೆಮಿಕಂಡಕ್ಟರ್ ಅನ್ನು ಮಾತೃ ಉದ್ಯಮ ಎಂದು ಕರೆದಿದ್ದಾರೆ.
‘ಸೆಮಿಕಂಡಕ್ಟರ್ ಒಂದು ರೀತಿಯ ಮಾತೃ ಉದ್ಯಮವಿದ್ದಂತೆ. ನೀವು ಅದನ್ನು ಪಡೆದಿದ್ದರೆ ಹಲವು ಕ್ಷೇತ್ರಗಳನ್ನು ಹೊಂದಿದಂತೆ. ಫಾರ್ಮ್ ಟ್ರಾಕ್ಟರ್ಗಳಿಂದ ಹಿಡಿದು ಮೊಬೈಲ್ ಫೋನ್ವರೆಗೂ, ಕಾರುಗಳಿಂದ ಫ್ರಿಜ್ನವರೆಗೆ ಸೆಮಿಕಂಡಕ್ಟರ್ಗಳು ಅಗತ್ಯ ಇವೆ’ ಎಂದು ವೈಷ್ಣವ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ