Jai Ambani: 228 ಕೋಟಿ ರೂ ವಂಚನೆ ಆರೋಪ; ಅನಿಲ್ ಅಂಬಾನಿ ಮಗ ಜೈ ಅನ್ಮೋಲ್ ವಿರುದ್ಧ ಸಿಬಿಐನಿಂದ ಪ್ರಕರಣ ದಾಖಲು
Jai Anmol Ambani facing loan fraud charges: ರಿಲಾಯನ್ಸ್ ಗ್ರೂಪ್ ಮುಖ್ಯಸ್ಥ ಅನಿಲ್ ಅಂಬಾನಿ ಅವರ ಹಿರಿಯ ಮಗ ಜೈ ಅನ್ಮೋಲ್ ಅಂಬಾನಿ ವಿರುದ್ಧ ವಂಚನೆ ಆರೋಪ ದಾಖಲಾಗಿದೆ. ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ನೀಡಲಾದ ದೂರಿನ ಮೇರೆಗೆ ತನಿಖೆ ಕೈಗೊಂಡಿರುವ ಸಿಬಿಐ ಅನ್ಮೋಲ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಿಸಿದೆ. ಯುಬಿಐನಿಂದ ಸಾಲ ಪಡೆದು 228 ಕೋಟಿ ರೂ ವಂಚಿಸಿದ ಆರೋಪ ಇದು.

ನವದೆಹಲಿ, ಡಿಸೆಂಬರ್ 9: ಅನಿಲ್ ಅಂಬಾನಿ ಅವರ ಮಗನ ವಿರುದ್ಧ ಸಿಬಿಐ ಕೇಸ್ ದಾಖಲಿಸಿದೆ. ಆಂಧ್ರ ಬ್ಯಾಂಕ್ಗೆ (ಯೂನಿಯನ್ ಬ್ಯಾಂಕ್) 228.06 ಕೋಟಿ ರೂ ವಂಚನೆ ಎಸಗಿರುವ ಆರೋಪವನ್ನು ಅನಿಲ್ ಅಂಬಾನಿ ಅವರ ಮಗ ಜಯ್ ಅನ್ಮೋಲ್ ಅಂಬಾನಿ (Jai Anmol Ambani) ವಿರುದ್ಧ ದಾಖಲಾಗಿದೆ. ಅನಿಲ್ ಅಂಬಾನಿ ಅವರ ರಿಲಾಯನ್ಸ್ ಗ್ರೂಪ್ಗೆ ಸೇರಿದ ರಿಲಾಯನ್ಸ್ ಹೋಮ್ ಫೈನಾನ್ಸ್ ಕಂಪನಿ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ (ಆಂಧ್ರ ಬ್ಯಾಂಕ್) ಸಲ್ಲಿಕೆಯಾದ ದೂರಿನ ಮೇರೆಗೆ ಸಿಬಿಐ ತನಿಖೆ ನಡೆಸುತ್ತಿದೆ. ಈ ವೇಳೆ, ರಿಲಾಯನ್ಸ್ ಹೋಮ್ ಫೈನಾನ್ಸ್ ಹಾಗೂ ಆ ಕಂಪನಿಯ ನಿರ್ದೇಶಕರಾದ ಜೈ ಅನ್ಮೋಲ್ ಅಂಬಾನಿ ಮತ್ತು ರವೀಂದ್ರ ಶರದ್ ಸುಧಾಕರ್ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.‘
ಇದನ್ನೂ ಓದಿ: ಭಾರತೀಯ ಅಕ್ಕಿ ಮೇಲೆ ಟ್ರಂಪ್ ಕಣ್ಣು; ಟ್ಯಾರಿಫ್ ಹೆಚ್ಚಿಸಿದರೆ ಭಾರತದ ಮೇಲೇನು ಪರಿಣಾಮ?
ಅನಿಲ್ ಅಂಬಾನಿ ಅವರು ಸಾಲು ಸಾಲಾಗಿ ಆರೋಪಗಳು ಮತ್ತು ಪ್ರಕರಣಗಳನ್ನು ಎದುರಿಸುತ್ತಿದ್ಧಾರೆ. ಅವರ ಮಗ ಜೈ ಅನ್ಮೋಲ್ ವಿರುದ್ಧ ಪ್ರಕರಣ ದಾಖಲಾಗಿರುವುದು ಇದೇ ಮೊದಲು. ಅನಿಲ್ ಅಂಬಾನಿ ಅವರ ಇಬ್ಬರು ಮಕ್ಕಳಲ್ಲಿ ಜೈ ಅನ್ಮೋಲ್ ಮೊದಲೆಯವರು. ಜೈ ಅನ್ಶುಲ್ ಎರಡನೇ ಮಗ.
ಅನಿಲ್ ಅಂಬಾನಿ ವಿರುದ್ಧ ಯೆಸ್ ಬ್ಯಾಂಕ್ ವಂಚನೆ ಕೇಸ್ನಲ್ಲಿ ಸಿಬಿಐ ಆರೋಪಪಟ್ಟಿ ದಾಖಲಿಸಿದಾಗ 34 ವರ್ಷದ ಜೈ ಅನ್ಮೋಲ್ ಅವರು ರಿಲಾಯನ್ಸ್ ಕ್ಯಾಪಿಟಲ್ ಮತ್ತು ರಿಲಾಯನ್ಸ್ ನಿಪ್ಪಾನ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದರು.
ರಿಲಾಯನ್ಸ್ ಮತ್ತು ನಿಪ್ಪೋನ್ ಸಂಸ್ಥೆಗಳು ಜಂಟಿಯಾಗಿ ನಡೆಸುವ ರಿಲಾಯನ್ಸ್ ನಿಪ್ಪಾನ್ ಮ್ಯೂಚುವಲ್ ಫಂಡ್ನ ನಿರ್ಧಾರ ಪ್ರಕ್ರಿಯೆಗಳಲ್ಲಿ ಅನಿಲ್ ಅಂಬಾನಿ ಮತ್ತು ಜೈ ಅನ್ಮೋಲ್ ಅಂಬಾನಿ ಪ್ರಭಾವ ಬೀರಲು ಯತ್ನಿಸುತ್ತಿದ್ದರು. ರಿಲಾಯನ್ಸ್ ನಿಪ್ಪಾನ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದ ಜೈ ಅನ್ಮೋಲ್ ಅವರು ಕಂಪನಿಯ ಅಧಿಕಾರಿಗಳೊಂದಿಗೆ ಪರಾಮರ್ಶೆ ಸಭೆಗಳನ್ನು ನಡೆಸುತ್ತಿದ್ದರು ಎಂದು ಸಿಬಿಐ ಆರೋಪಿಸಿದೆ.
ಇದನ್ನೂ ಓದಿ: ನವೆಂಬರ್ನಲ್ಲಿ ವಾಹನಗಳ ಮಾರಾಟ ಹೆಚ್ಚಳ; ಡಿಸೆಂಬರ್ನಲ್ಲೂ ಇದೇ ಟ್ರೆಂಡ್
ಜೈ ಅನ್ಮೋಲ್ ವಿರುದ್ಧದ ವಂಚನೆ ಆರೋಪ ಏನು?
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಂಬೈ ಎಸ್ಸಿಎಫ್ ಬ್ರ್ಯಾಂಚ್ನಿಂದ ರಿಲಾಯನ್ಸ್ ಹೋಮ್ ಫೈನಾನ್ಸ್ ಸಂಸ್ಥೆ ಸುಮಾರು 450 ಕೋಟಿ ರೂನಷ್ಟು ಕ್ರೆಡಿಟ್ ಲಿಮಿಟ್ ಪಡೆದಿತ್ತು. ಸರಿಯಾದ ಸಮಯಕ್ಕೆ ಕಂತುಗಳನ್ನು ಕಟ್ಟುವುದು ಇತ್ಯಾದಿ ಷರತ್ತುಗಳನ್ನು ಇಡಲಾಗಿತ್ತು. ಆದರೆ, ರಿಲಾಯನ್ಸ್ ಹೋಮ್ ಫೈನಾನ್ಸ್ ಸಾಲ ತೀರಿಸುವ ಬದ್ಧತೆ ತೋರಲಿಲ್ಲ. 2019ರ ಸೆಪ್ಟೆಂಬರ್ 30ರಂದು ಈ ಲೋನ್ ಅಕೌಂಟ್ ಅನ್ನು ಎನ್ಪಿಎ ಎಂದು ಘೋಷಿಸಲಾಯಿತು.
ಥರ್ಡ್ ಪಾರ್ಟಿ ಆಡಿಟಿಂಗ್ ವೇಳೆ ವಂಚನೆಯ ವಿಚಾರ ಗೊತ್ತಾಗಿದೆ. 2016ರಿಂದ 2019ರವರೆಗೆ ಅಕೌಂಟ್ಗಳ ಫಾರೆನ್ಸಿಕ್ ಪರೀಕ್ಷೆ ಮಾಡಲಾಯಿತು. ಸಾಲದ ಹಣವನ್ನು ಅಕ್ರಮವಾಗಿ ಬೇರೆಡೆ ವರ್ಗಾಯಿಸಿರುವುದು ಗೊತ್ತಾಗಿದೆ. ಇದು ಪ್ರಕರಣ ಬೆಳಕಿಗೆ ಬರಲು ಕಾರಣವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




