ಬೆಂಗಳೂರು, ಚೆನ್ನೈನಲ್ಲಿ ಮೆಗಾಫ್ಯಾಕ್ಟರಿ ನಿರ್ಮಾಣಕ್ಕೆ ಆ್ಯಪಲ್ ಯೋಜನೆ: ವಿ ಅನಂತನಾಗೇಶ್ವರನ್
Apple planning to build 2 mega factories in Bengaluru and Chennai: ಆ್ಯಪಲ್ ಕಂಪನಿ ಭಾರತದಲ್ಲಿ ಮೆಗಾಫ್ಯಾಕ್ಟರಿ ನಿರ್ಮಿಸಲು ಯೋಜಿಸಿದೆ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಘೇಶವರನ್ ಹೇಳಿದ್ದಾರೆ. ಬೆಂಗಳೂರು ಹಾಗೂ ಚೆನ್ನೈನ ಶ್ರೀಪೆರಂಬುದೂರಿನಲ್ಲಿ ಆ್ಯಪಲ್ನ ಮೆಗಾಫ್ಯಾಕ್ಟರಿ ಬರಲಿವೆ ಎಂದಿದ್ದಾರೆ. ಹೂವರ್ ಇನ್ಸ್ಟಿಟ್ಯೂಶನ್ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಬೆಂಗಳೂರು, ಡಿಸೆಂಬರ್ 12: ಆ್ಯಪಲ್ ಕಂಪನಿ ಭಾರತದಲ್ಲಿ ಎರಡು ಬೃಹತ್ ಫ್ಯಾಕ್ಟರಿಗಳನ್ನು ನಿರ್ಮಿಸಲು ಯೋಜಿಸಿದೆ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್ (V Anantha Nageswaran) ಹೇಳಿದ್ದಾರೆ. ಅಮೆರಿಕದ ಸ್ಟಾನ್ಫೋರ್ಡ್ ಯೂನಿವರ್ಸಿಟಿಯ ಸ್ವಾಯತ್ತ ಚಿಂತನ ವೇದಿಕೆ ಎನಿಸಿದ ಹೂವರ್ ಇನ್ಸ್ಟಿಟ್ಯೂಶನ್ನಲ್ಲಿ ನಡೆದ ಚರ್ಚಾಗೋಷ್ಠಿಯಲ್ಲಿ (Fireside chat) ಮಾತನಾಡುತ್ತಿದ್ದ ವಿ ಅನಂತ ನಾಗೇಶ್ವರನ್ ಅವರು ಆ್ಯಪಲ್ ಕಂಪನಿ ಎರಡು ಮೆಗಾ ಫ್ಯಾಕ್ಟರಿ ನಿರ್ಮಿಸುವ ಸಾಧ್ಯತೆ ಇದೆ ಎಂದಿದ್ದಾರೆ.
ಈ ಚರ್ಚಾ ಕಾರ್ಯಕ್ರಮದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರ ಜೊತೆ ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್, ಮತ್ತು ಹೂವರ್ ಇನ್ಸ್ಟಿಟ್ಯೂಶನ್ನ ಹ್ಯಾರೋಲ್ಡ್ ಮೆಕ್ಗ್ರಾ (Harold McGraw) ಅವರೂ ಪಾಲ್ಗೊಂಡಿದ್ದರು. ರಘುರಾಮ್ ರಾಜನ್ ಅವರ ಆ್ಯಪಲ್ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅನಂತ ನಾಗೇಶ್ವರನ್ ಅವರು, ಆ್ಯಪಲ್ ಕಂಪನಿ ಬೆಂಗಳೂರು ಹಾಗೂ ಚೆನ್ನೈನಲ್ಲಿ ಮೆಗಾ ಫ್ಯಾಕ್ಟರಿ ಸ್ಥಾಪಿಸಲು ಯೋಜಿಸಿದೆ ಎನ್ನುವ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಇಂಡಿಗೋ ಬಾಧಿತ ಪ್ರಯಾಣಿಕರಿಗೆ ಸರ್ಕಾರಿ ನಿರ್ದೇಶಿತ ಪರಿಹಾರದ ಜೊತೆಗೆ 10,000 ರೂ ಟ್ರಾವಲ್ ವೋಚರ್
ಈ ಮೆಗಾಫ್ಯಾಕ್ಟರಿಗಳು 1,00,000 ಉದ್ಯೋಗಿಗಳು ಕೆಲಸ ಮಾಡಲು ಅವಕಾಶ ಇರುವಷ್ಟು ಬೃಹತ್ ಆಗಿರಲಿವೆ ಎಂದು ಸಿಇಎ ಹೇಳಿದ್ದಾರೆ. ಬೆಂಗಳೂರಿನಲ್ಲಿ ಒಂದು, ಹಾಗೂ ಚೆನ್ನೈನ ಶ್ರೀಪೆರಂಬದೂರಿನಲ್ಲಿ ಮತ್ತೊಂದು ಐಫೋನ್ ಫ್ಯಾಕ್ಟರಿ ನಿರ್ಮಾಣವಾಗಲಿದೆ ಎಂದಿರುವ ಅವರು, ಕೆಲ ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಭಾರತದಲ್ಲಿ ಫೋನ್ ತಯಾರಿಕಾ ಕ್ಷೇತ್ರ ಅಮೋಘವಾಗಿ ಬೆಳೆದಿರುವುದನ್ನು ವಿವರಿಸಿದ್ದಾರೆ.
ಆ್ಯಪಲ್ ಕಂಪನಿ ಅಮೆರಿಕದ ಹೊರಗೆ ನೇರವಾಗಿ ಮೊಬೈಲ್ ಫೋನ್ ತಯಾರಿಸುವುದಿಲ್ಲ. ವಿವಿಧ ಕಂಪನಿಗಳಿಗೆ ಗುತ್ತಿಗೆ ಕೊಡುತ್ತದೆ. ಬಿಡಿಭಾಗಗಳನ್ನು ಪೂರೈಸಲು ಸಾವಿರಾರು ಕಂಪನಿಗಳಿವೆ. ಅಸೆಂಬ್ಲಿಂಗ್ ಮಾಡಲು ಐದಾರು ಕಂಪನಿಗಳಿವೆ. ಅದರಲ್ಲಿ ಫಾಕ್ಸ್ಕಾನ್, ಪೆಗಾಟ್ರಾನ್, ಟಾಟಾ ಎಲೆಕ್ಟ್ರಾನಿಕ್ಸ್ ಮೊದಲಾದ ಕಂಪನಿಗಳಿವೆ. ಭಾರತದಲ್ಲಿ ಸದ್ಯ ಮೇಲೆ ಹೆಸರಿಸಿದ ಮೂರು ಕಂಪನಿಗಳು ಆ್ಯಪಲ್ನ ಉತ್ಪನ್ನಗಳನ್ನು ಅಸೆಂಬ್ಲಿಂಗ್ ಮಾಡುತ್ತವೆ.
ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ ಕೋಲಾರದಲ್ಲಿ ಐಫೋನ್ ಘಟಕ ಹೊಂದಿದೆ. ಬೆಂಗಳೂರು ಸಮೀಪದ ಹೊಸೂರಿನಲ್ಲಿ ಒಂದು ಫ್ಯಾಕ್ಟರಿ ಹೊಂದಿದೆ. ಫಾಕ್ಸ್ಕಾನ್ ಹಲವು ವರ್ಷಗಳಿಂದ ಭಾರತದಲ್ಲಿ ಐಫೋನ್ ಅಸೆಂಬ್ಲಿಂಗ್ ಮಾಡುತ್ತಿದೆ. ಚೆನ್ನೈನಲ್ಲಿ ಫ್ಯಾಕ್ಟರಿ ಹೊಂದಿದೆ. ಬೆಂಗಳೂರಿನಲ್ಲಿ ಒಂದು ಫ್ಯಾಕ್ಟರಿ ನಿರ್ಮಿಸುತ್ತಿದೆ.
ಇದನ್ನೂ ಓದಿ: ಬರಲಿದೆ ಧ್ರುವ; ಇದು ನಿಮ್ಮ ವಿಳಾಸ ಕರಾರುವಾಕ್ ಹೇಳುವ ಡಿಜಿಟಲ್ ಸಿಸ್ಟಂ
ಕೆಲ ವರ್ಷಗಳ ಹಿಂದಿನವರೆಗೂ ತನ್ನ ಶೇ. 98ಕ್ಕೂ ಹೆಚ್ಚಿನ ಐಫೋನ್ಗಳನ್ನು ಆ್ಯಪಲ್ ಕಂಪನಿ ಚೀನಾದಲ್ಲಿ ತಯಾರಿಸಿ ತರುತ್ತಿತ್ತು. ಕೋವಿಡ್ ಸಂದರ್ಭದಲ್ಲಿ ಅದರ ಪೂರೈಕೆ ಸರಪಳಿಗೆ ಧಕ್ಕೆಯಾದ ಹಿನ್ನೆಲೆಯಲ್ಲಿ ತನ್ನ ಉತ್ಪಾದನೆಯನ್ನು ವಿಸ್ತರಿಸುವ ನಿರ್ಧಾರಕ್ಕೆ ಬಂದಿದೆ. ಅದರ ಪರಿಣಾಮವಾಗಿ ಭಾರತದಲ್ಲಿ ಐಫೋನ್ ತಯಾರಿಕೆಯನ್ನು ಕ್ರಮೇಣವಾಗಿ ಹೆಚ್ಚಿಸುತ್ತಾ ಬರುತ್ತಿದೆ. ಸದ್ಯ ಅಮೆರಿಕಕ್ಕೆ ಬೇಕಾದ ಬಹುತೇಕ ಐಫೋನ್ಗಳು ಭಾರತದಲ್ಲೇ ತಯಾರಾಗುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




