ಮಲ್ಟಿ ಅಸೆಟ್ ಫಂಡ್​ಗಳಲ್ಲಿ ಐದಾರು ಪಟ್ಟು ಹೆಚ್ಚಿದ ಹೂಡಿಕೆ; ಈ ಮಾದರಿಯ ಫಂಡ್​ಗಳು ಹೂಡಿಕೆದಾರರನ್ನು ಆಕರ್ಷಿಸಲು ಕಾರಣಗಳಿವು…

ಭಾರತೀಯ ಮ್ಯೂಚುವಲ್ ಫಂಡ್ ಕ್ಷೇತ್ರದಲ್ಲಿ ಮಲ್ಟಿ-ಅಸೆಟ್ ಅಲೋಕೇಶನ್ ಫಂಡ್‌ಗಳು ಅಭೂತಪೂರ್ವ ಬೆಳವಣಿಗೆಯನ್ನು ಕಾಣುತ್ತಿವೆ. ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ (AMFI) ನೀಡಿದ ಅಂಕಿ-ಅಂಶಗಳ ಪ್ರಕಾರ, ಕಳೆದ 3 ವರ್ಷಗಳಲ್ಲಿ ಈ ವರ್ಗದ ನಿರ್ವಹಣೆಯಲ್ಲಿರುವ ಒಟ್ಟು ಆಸ್ತಿ ಮೌಲ್ಯ (AUM) ಸುಮಾರು 487.2% ಹೆಚ್ಚಳವಾಗಿದೆ.

ಮಲ್ಟಿ ಅಸೆಟ್ ಫಂಡ್​ಗಳಲ್ಲಿ ಐದಾರು ಪಟ್ಟು ಹೆಚ್ಚಿದ ಹೂಡಿಕೆ; ಈ ಮಾದರಿಯ ಫಂಡ್​ಗಳು ಹೂಡಿಕೆದಾರರನ್ನು ಆಕರ್ಷಿಸಲು ಕಾರಣಗಳಿವು...
ಮಾರುಕಟ್ಟೆ
Image Credit source: Getty Images

Updated on: Sep 14, 2026 | 7:07 PM

ನವದೆಹಲಿ, ಸೆಪ್ಟೆಂಬರ್ 14: ಹೂಡಿಕೆ ಮಾಡಲು ಮ್ಯೂಚುವಲ್ ಫಂಡ್ ಬಹಳ ಸಮರ್ಪಕವಾದ ಮತ್ತು ಸುಲಭವಾದ ಮಾರ್ಗವೆನಿಸಿದೆ. ಎಸ್​ಐಪಿ ಯೋಜನೆಗಳು ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವುದನ್ನು ಇನ್ನಷ್ಟು ಸುಲಭ ಮತ್ತು ಜನಪ್ರಿಯವಾಗಿಸಿವೆ. ಆದರೆ, ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಲು ಇರುವ ಕೆಲ ದೊಡ್ಡ ಪ್ರಶ್ನೆಗಳಲ್ಲಿ, ಯಾವ ಫಂಡ್​ಗಳನ್ನು ಆಯ್ದುಕೊಳ್ಳುವುದು ಎನ್ನುವುದು ಒಂದು. ಇಂಡೆಕ್ಸ್ ಫಂಡ್​ಗಳು, ಲಾರ್ಜ್ ಕ್ಯಾಪ್ ಫಂಡ್​ಗಳು, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಥೀಮ್ ಆಧಾರಿತ ಫಂಡ್, ಹೈಬ್ರಿಡ್ ಫಂಡ್ ಹೀಗೆ ವಿವಿಧ ವಿಭಾಗಗಳ ಮ್ಯೂಚುವಲ್ ಫಂಡ್​ಗಳಿವೆ.

ಕಳೆದ 3 ವರ್ಷಗಳಲ್ಲಿ (ಆಗಸ್ಟ್ 2023 ರಿಂದ ಆಗಸ್ಟ್ 2026) ಮಲ್ಟಿ-ಅಸೆಟ್ ಫಂಡ್‌ಗಳ ಎಯುಎಂ 35,000 ಕೋಟಿ ರೂಪಾಯಿಗಳಿಂದ 2.07 ಲಕ್ಷ ಕೋಟಿ ರೂಪಾಯಿಗಳಿಗೆ (ರೂ. 2,07,221 ಕೋಟಿ) ಏರಿಕೆಯಾಗಿದೆ. ಕಳೆದ 5 ವರ್ಷಗಳ ಅವಧಿಯಲ್ಲಿ (ಆಗಸ್ಟ್ 2021 ರಿಂದ ಆಗಸ್ಟ್ 2026) ಈ ವಿಭಾಗದ ಎಯುಎಂ 12 ಪಟ್ಟು (1,115%) ಹೆಚ್ಚಾಗಿದೆ.

ಮಲ್ಟಿ ಅಸೆಟ್ ಫಂಡ್​ಗಳೆಂದರೆ ಏನು?

ಮಲ್ಟಿ ಅಸೆಟ್ ಅಲೋಕೇಶನ್ ಫಂಡ್ ಎಂದರೆ, ಸೆಬಿ ನಿಯಮದ ಪ್ರಕಾರ ಒಂದು ಮ್ಯುಚುವಲ್ ಫಂಡ್ ಕನಿಷ್ಠ ಮೂರು ವಿಧದ ಅಸೆಟ್​ಗಳಲ್ಲಿ ಹೂಡಿಕೆ ಮಾಡಬೇಕು. ಈಕ್ವಿಟಿ, ಡೆಟ್, ಚಿನ್ನ ಹೀಗೆ ಬೇರೆ ಬೇರೆ ಅಸೆಟ್​ಗಳಲ್ಲಿ ಹೂಡಿಕೆ ಮಾಡಬೇಕು. ಪ್ರತಿಯೊಂದು ಅಸೆಟ್​ನಲ್ಲೂ ಕನಿಷ್ಠ ಶೇ. 10ರಷ್ಟಾದರೂ ಹೂಡಿಕೆಯಾಗಬೇಕು.

ಇದನ್ನೂ ಓದಿ: ಇಪಿಎಫ್​ಒದಿಂದ ನೂತನ ವಾಟ್ಸಪ್ ಚಾನಲ್; ಶೀಘ್ರದಲ್ಲೇ ಬರಲಿದೆ ಚಾಟ್​ಬಾಟ್; ಇಲ್ಲಿದೆ ಅದರ ಚಾನಲ್ ಲಿಂಕ್

ಹೂಡಿಕೆದಾರರ ಸಂಖ್ಯೆಯಲ್ಲಿ ತೀವ್ರ ಏರಿಕೆ

ಈ ಮಲ್ಟಿ ಅಸೆಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ ಫೋಲಿಯೋಗಳ (Folios) ಸಂಖ್ಯೆ ಆಗಸ್ಟ್ 2021 ರಲ್ಲಿದ್ದ 7.35 ಲಕ್ಷದಿಂದ ಆಗಸ್ಟ್ 2026 ರ ವೇಳೆಗೆ 60.18 ಲಕ್ಷಕ್ಕೆ ಜಿಗಿದಿದೆ (ಸುಮಾರು 8 ಪಟ್ಟು ಹೆಚ್ಚಳ). ಇದು ಸಣ್ಣ ಹಾಗೂ ಚಿಲ್ಲರೆ (Retail) ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದನ್ನು ತೋರಿಸುತ್ತದೆ.

ಮಲ್ಟಿ ಅಸೆಟ್ ಫಂಡ್​ಗಳಲ್ಲಿ ಹೂಡಿಕೆ ಹೆಚ್ಚಲು ಪ್ರಮುಖ ಕಾರಣಗಳು

  • ಚಿನ್ನ ಮತ್ತು ಬೆಳ್ಳಿಯ ಅತ್ಯುತ್ತಮ ಸಾಧನೆ: ಮಲ್ಟಿ-ಅಸೆಟ್ ಫಂಡ್‌ಗಳು ತಮ್ಮ ಶೇ. 25 ರಷ್ಟು ಹಣವನ್ನು ಕಮೋಡಿಟಿಗಳಲ್ಲಿ (ಚಿನ್ನ ಮತ್ತು ಬೆಳ್ಳಿ) ಹೂಡಿಕೆ ಮಾಡುತ್ತವೆ. 2025 ಮತ್ತು 2026 ರ ಆರಂಭದಲ್ಲಿ ಚಿನ್ನ-ಬೆಳ್ಳಿ ನೀಡಿದ ಉತ್ತಮ ರಿಟರ್ನ್ಸ್ ಈ ಫಂಡ್‌ಗಳ ಆಕರ್ಷಣೆಗೆ ಪ್ರಮುಖ ಕಾರಣವಾಗಿದೆ.
  • ನೆಟ್ ಇನ್‌ಫ್ಲೋ (Net Inflows): ಒಟ್ಟು AUM ಏರಿಕೆಯಲ್ಲಿ ಶೇ. 87 ರಷ್ಟು ಬೆಳವಣಿಗೆಯು ಹೂಡಿಕೆದಾರರು ನೇರವಾಗಿ ತೊಡಗಿಸಿದ ಹಣದಿಂದ ಬಂದಿದ್ದರೆ (Inflows), ಉಳಿದ ಭಾಗವು ಮಾರುಕಟ್ಟೆಯ ಮೌಲ್ಯವರ್ಧನೆಯಿಂದ ಬಂದಿದೆ.
  • ಒಂದೇ ಫಂಡ್‌ನಲ್ಲಿ ಬಹು ಆಯ್ಕೆ: ಈ ಫಂಡ್‌ಗಳು ಒಂದೇ ಯೋಜನೆಯಡಿಯಲ್ಲಿ ಈಕ್ವಿಟಿ (ಷೇರು ಮಾರುಕಟ್ಟೆ), ಡೆಟ್ (ಸಾಲ ಪತ್ರಗಳು) ಮತ್ತು ಕಮೋಡಿಟಿ (ಚಿನ್ನ/ಬೆಳ್ಳಿ) ಗಳ ಪ್ರಾತಿನಿಧ್ಯ ನೀಡುತ್ತವೆ. ಇದರಿಂದ ಹೂಡಿಕೆದಾರರು ಸ್ವತಃ ಅಸೆಟ್ ಅಲೋಕೇಶನ್ ಮಾಡುವ ಅಗತ್ಯವಿರುವುದಿಲ್ಲ.

ಇದನ್ನೂ ಓದಿ: ಜುಲೈನಲ್ಲಿ ಶೇ. 9.78ರಷ್ಟಿದ್ದ ಸಗಟು ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ. 9.92ಕ್ಕೆ ಏರಿಕೆ; ಇಂಧನ, ಆಹಾರ ದರ ಹೆಚ್ಚಳ ಪ್ರಮುಖ ಕಾರಣ

ಹೊಸ ಹೂಡಿಕೆದಾರರಿಗೆ ಈ ಫಂಡ್ ಸೂಕ್ತವೇ?

ತಿಂಗಳಿಗೆ 500 ಅಥವಾ 1,000 ರೂಪಾಯಿಗಳ ಸಣ್ಣ ಎಸ್‌ಐಪಿ (SIP) ಮೂಲಕ ಹೂಡಿಕೆ ಪ್ರಾರಂಭಿಸುವ ಹೊಸಬರಿಗೆ, ಮಾರುಕಟ್ಟೆಯ ಏರಿಳಿತದ ರಿಸ್ಕ್ ಕಡಿಮೆ ಮಾಡಲು ಮತ್ತು ವೈವಿಧ್ಯಮಯ (Diversified) ಹೂಡಿಕೆ ಹೊಂದಲು ಮಲ್ಟಿ-ಅಸೆಟ್ ಫಂಡ್‌ಗಳು ಉತ್ತಮ ಆಯ್ಕೆಯಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us