AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜುಲೈನಲ್ಲಿ ಶೇ. 9.78ರಷ್ಟಿದ್ದ ಸಗಟು ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ. 9.92ಕ್ಕೆ ಏರಿಕೆ; ಇಂಧನ, ಆಹಾರ ದರ ಹೆಚ್ಚಳ ಪ್ರಮುಖ ಕಾರಣ

ಇಂಧನ, ವಿದ್ಯುತ್, ಆಹಾರ ಪದಾರ್ಥಗಳು ಹಾಗೂ ತಯಾರಿಕಾ ವಲಯದ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಭಾರತದ ಸಗಟು ಬೆಲೆ ಆಧರಿತ ಹಣದುಬ್ಬರ (WPI) ಆಗಸ್ಟ್ ತಿಂಗಳಿನಲ್ಲಿ ಶೇಕಡಾ 9.92ಕ್ಕೆ ಏರಿಕೆಯಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ತಾತ್ಕಾಲಿಕ ಅಂಕಿಅಂಶಗಳು ಈ ಏರಿಕೆಯನ್ನು ದೃಢಪಡಿಸಿವೆ. ಖನಿಜ ತೈಲ, ಕಚ್ಚಾ ಪೆಟ್ರೋಲಿಯಂ, ನ್ಯಾಚುರಲ್ ಗ್ಯಾಸ್​ಗಳ ಬೆಲೆ ಸಿಕ್ಕಾಪಟ್ಟೆ ಏರಿರುವುದು ಪ್ರಮುಖ ಕಾರಣಗಳಲ್ಲಿ ಒಂದು.

ಜುಲೈನಲ್ಲಿ ಶೇ. 9.78ರಷ್ಟಿದ್ದ ಸಗಟು ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ. 9.92ಕ್ಕೆ ಏರಿಕೆ; ಇಂಧನ, ಆಹಾರ ದರ ಹೆಚ್ಚಳ ಪ್ರಮುಖ ಕಾರಣ
ಹಣದುಬ್ಬರImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 14, 2026 | 1:40 PM

Share

ನವದೆಹಲಿ, ಸೆಪ್ಟೆಂಬರ್ 14: ಕಳೆದ ಜುಲೈ ತಿಂಗಳಿನಲ್ಲಿ ಶೇ 9.78 ರಷ್ಟಿದ್ದ ಸಗಟು ಹಣದುಬ್ಬರ ದರವು ಆಗಸ್ಟ್‌ನಲ್ಲಿ ಶೇಕಡಾ 9.92ಕ್ಕೆ ಏರಿಕೆಯಾಗಿದೆ. ಇಂಧನ, ಆಹಾರ ಮತ್ತು ತಯಾರಿಕಾ ವಸ್ತುಗಳ ವೆಚ್ಚ ಹೆಚ್ಚಿರುವುದು ಈ ಏರಿಕೆಗೆ ಮುಖ್ಯ ಕಾರಣವಾಗಿದೆ. ಸಗಟು ಮಾರಾಟ ಸೂಚ್ಯಂಕ (WPI Inflation) ಜುಲೈನಲ್ಲಿ 110.0 ಇದ್ದದ್ದು 110.8ಕ್ಕೆ ಏರಿದೆ. ಇಂಧನ ಮತ್ತು ವಿದ್ಯುತ್ ವಲಯದಲ್ಲಿ ಸಗಟು ಹಣದುಬ್ಬರ ದರವು ಜುಲೈನಲ್ಲಿದ್ದ ಶೇ. 20.05 ರಿಂದ ಆಗಸ್ಟ್‌ನಲ್ಲಿ ಶೇ. 22.93ಕ್ಕೆ ಏರಿಕೆ ಕಂಡಿದೆ.

ಇಂಧನ ವಿಭಾಗದಲ್ಲಿ ಖನಿಜ ತೈಲ ಹಣದುಬ್ಬರ ಶೇ 32.40 ಯಿಂದ 38.48ಕ್ಕೆ ಹೆಚ್ಚಾಗಿದೆ. ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಹಣದುಬ್ಬರವು ಜುಲೈನಲ್ಲಿ ಶೇ. 26.99 ಇದ್ದದ್ದು ಆಗಸ್ಟ್​ನಲ್ಲಿ ಶೇ. 34.41ಕ್ಕೆ ಏರಿದೆ.

ಇದನ್ನೂ ಓದಿ: ರೀಟೇಲ್ ಹಣದುಬ್ಬರ ಜುಲೈನಲ್ಲಿ ಶೇ. 4.45ಕ್ಕೆ ಏರಿಕೆ; ಆರ್​ಬಿಐನ ತಾಳಿಕೆ ಮಿತಿಯೊಳಗಿದೆ ಬೆಲೆ ಏರಿಕೆ ದರ

ಆಹಾರ ವಲಯದ ಹಣದುಬ್ಬರ ದರವು ಜುಲೈ ತಿಂಗಳಿನ ಶೇ. 6.65 ರಿಂದ ಆಗಸ್ಟ್‌ನಲ್ಲಿ ಶೇ. 7.06ಕ್ಕೆ ಹೆಚ್ಚಾಗಿದೆ. ತಯಾರಿಕಾ ಉತ್ಪನ್ನಗಳ (Manufactured Products) ಸಗಟು ಹಣದುಬ್ಬರ ಶೇ. 8.37ಕ್ಕೆ ತಲುಪಿದ್ದು, ಇದು ಹೊಸ ಸರಣಿಯ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ಜುಲೈನಲ್ಲಿ ಶೇ. 8.29 ಇತ್ತು. ಪ್ರಾಥಮಿಕ ವಸ್ತುಗಳ (Primary Articles) ಹಣದುಬ್ಬರ ದರವು ಜುಲೈನ ಶೇ. 8.52 ರಿಂದ ಶೇ. 7.76ಕ್ಕೆ ಕೊಂಚ ಇಳಿಕೆಯಾಗಿದೆ.

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಮತ್ತು ರಸಗೊಬ್ಬರಗಳ ವೆಚ್ಚ ಹೆಚ್ಚಿರುವುದು ಸಗಟು ದರಗಳ ಮೇಲೆ ನೇರ ಪರಿಣಾಮ ಬೀರಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಜಪಾನ್​ನಲ್ಲಿ ಮಾರುತಿ ಕಾರುಗಳಿಗೆ ಹೆಚ್ಚಿದ ಬೇಡಿಕೆ; ಮೇಡ್ ಇನ್ ಇಂಡಿಯಾ ಜಿಮ್ನಿ, ಫ್ರಾಂಕ್ಸ್, ಇ-ವಿಟಾರಾ ಕಾರುಗಳ ರಫ್ತು 1 ಲಕ್ಷಕ್ಕಿಂತ ಹೆಚ್ಚು

ಆಗಸ್ಟ್​ನಲ್ಲಿ ರೀಟೇಲ್ ಹಣದುಬ್ಬರ ಎಷ್ಟಿದೆ?

ರೀಟೇಲ್ ಹಣದುಬ್ಬರದ ದತ್ತಾಂಶವನ್ನು ಸಾಮಾನ್ಯವಾಗಿ ಹೋಲ್​ಸೇಲ್ ಹಣದುಬ್ಬರದ ವರದಿಗೆ ಮುನ್ನವೇ ಬಿಡುಗಡೆ ಮಾಡಲಾಗುತ್ತದೆ. ಈ ತಿಂಗಳು ಸಗಟು ಹಣದುಬ್ಬರ ಮೊದಲು ಬಿಡುಗಡೆ ಆಗಿದೆ. ಜುಲೈ ತಿಂಗಳಲ್ಲಿ ರೀಟೇಲ್ ಹಣದುಬ್ಬರ 4.45ಕ್ಕೆ ಏರಿದೆ. ಈ ಕ್ಯಾಲಂಡರ್ ವರ್ಷದಲ್ಲಿ ರೀಟೇಲ್ ಇನ್​ಫ್ಲೇಶನ್ ಸತತವಾಗಿ ಏರುತ್ತಾ ಬಂದಿದೆ. ಲೈವ್​ಮಿಂಟ್ ನಡೆಸಿದ ಪೋಲ್​​ನಲ್ಲಿ, ಆಗಸ್ಟ್​ನಲ್ಲಿ ರೀಟೇಲ್ ಹಣದುಬ್ಬರ ಸರಾಸರಿಯಾಗಿ ಶೇ. 4.9ರಷ್ಟಿರಬಹುದು ಎಂದು ವಿವಿಧ ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us